IPL 2023: ರೋಹಿತ್ 4 ವರ್ಷಗಳಲ್ಲಿ ಬಾರಿಸಿದ ಅರ್ಧಶತಕಗಳನ್ನು ಕೇವಲ 27 ದಿನಗಳಲ್ಲಿ ಬಾರಿಸಿದ ಕೊಹ್ಲಿ!

ಪ್ರಸ್ತುತ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಜರುಗುತ್ತಿದ್ದು, ವಿರಾಟ್ ಕೊಹ್ಲಿ ಈ ಬಾರಿ ಬ್ಯಾಟ್ಸ್‌ಮನ್ ಆಗಿ ಹಾಗೂ ನಾಯಕನಾಗಿಯೂ ಸಹ ಯಶಸ್ಸು ಕಂಡಿದ್ದಾರೆ. ಪ್ರತಿಯೊಬ್ಬ ಆಟಗಾರನೂ ಸಹ ಕನಸು ಕಾಣುವಂತಹ ದಾಖಲೆಗಳನ್ನು ಮಾಡಿ, ಬೃಹತ್ ಇನ್ನಿಂಗ್ಸ್‌ಗಳನ್ನು ಕಟ್ಟಿದ ವಿರಾಟ್ ಕೊಹ್ಲಿ ಕೆಲ ವರ್ಷಗಳ ಕಾಲ ಕಷ್ಟದ ದಿನಗಳನ್ನು ಎದುರಿಸಿದ್ದರು. ಬ್ಯಾಡ್ ಫಾರ್ಮ್ ಎಂಬ ಭೂತ ಕೊಹ್ಲಿ ಬೆನ್ನೇರಿತ್ತು.
ಆದರೀಗ ಎಲ್ಲವೂ ಮೊದಲಿನಂತಾಗಿದೆ. ಟೆಸ್ಟ್, ಏಕದಿನ ಹಾಗೂ ಟಿ ಟ್ವೆಂಟಿ ಹೀಗೆ ಎಲ್ಲಾ ಮಾದರಿಯಲ್ಲಿಯೂ ಸಹ ಕಿಂಗ್ ಕೊಹ್ಲಿ ಅಬ್ಬರಿಸುತ್ತಿದ್ದಾರೆ. ಅದೇ ಫಾರ್ಮ್ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಯೂ ಸಹ ಮುಂದುವರಿದಿದೆ. ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಿತ್ತು.
ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಂಬೈ ಇಂಡಿಯನ್ಸ್ ನೀಡಿದ್ದ 172 ರನ್‌ಗಳ ಗುರಿಯನ್ನು ಕೇವಲ 16.2 ಓವರ್‌ಗಳಲ್ಲಿಯೇ ಮುಟ್ಟಿತ್ತು. ವಿರಾಟ್ ಕೊಹ್ಲಿ ಹಾಗೂ ಫಾಫ್ ಡು ಪ್ಲೆಸಿಸ್ ಅಬ್ಬರಕ್ಕೆ ಮುಂಬೈ ಇಂಡಿಯನ್ಸ್ ಹೀನಾಯ ಸೋಲು ಕಂಡಿತ್ತು. ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ 49 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 6 ಬೌಂಡರಿಗಳ ಸಹಿತ ಅಜೇಯ 82 ರನ್‌ಗಳನ್ನು ಚಚ್ಚಿದ್ದರು.
ಹೀಗೆ ಮೊದಲ ಪಂದ್ಯದಲ್ಲಿಯೇ ಅರ್ಧಶತಕ ಬಾರಿಸಿ ಅಬ್ಬರಿಸಿದ್ದ ವಿರಾಟ್ ಕೊಹ್ಲಿ ನಂತರದ ಪಂದ್ಯಗಳಲ್ಲಿಯೂ ಸಹ ತಮ್ಮ ಭರ್ಜರಿ ಬ್ಯಾಟಿಂಗ್ ಮುಂದುವರಿಸಿದ್ದಾರೆ. ಇಂದು ( ಏಪ್ರಿಲ್ 26 ) ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿಯೂ ಸಹ ವಿರಾಟ್ ಕೊಹ್ಲಿ ಅರ್ಧಶತಕ ಬಾರಿಸಿದ್ದಾರೆ. 37 ಎಸೆತಗಳನ್ನು ಎದುರಿಸಿದ ವಿರಾಟ್ ಕೊಹ್ಲಿ 6 ಬೌಂಡರಿ ಸಹಿತ 54 ರನ್ ಬಾರಿಸಿದ್ದಾರೆ.
ಈ ಮೂಲಕ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಐದನೇ ಅರ್ಧಶತಕವನ್ನು ಬಾರಿಸಿದ್ದಾರೆ. ಇತ್ತ ವಿರಾಟ್ ಕೊಹ್ಲಿ ಈ ಬಾರಿಯ ಟೂರ್ನಿಯಲ್ಲಿ ಕಣಕ್ಕಿಳಿದ 8 ಪಂದ್ಯಗಳಲ್ಲಿ 5 ಅರ್ಧಶತಕಗಳನ್ನು ಪೂರೈಸುತ್ತಿದ್ದಂತೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಹೋಲಿಕೆ ಶುರುವಾಗಿದೆ. ದಾಖಲೆಗಳಲ್ಲಿ ಕೊಹ್ಲಿ ರೇಂಜ್ ಬೇರೆ ರೋಹಿತ್ ಶರ್ಮಾ ಬೇರೆ ಎನ್ನುವವರು ಈ ಹೋಲಿಕೆಯನ್ನು ಮಾಡಿ ಕೊಹ್ಲಿ ಜತೆ ರೋಹಿತ್ ಹೋಲಿಕೆ ಬೇಡ ಎನ್ನುತ್ತಿದ್ದಾರೆ.
ಹೌದು, ರೋಹಿತ್ ಶರ್ಮಾ ಕಳೆದ 4 ಐಪಿಎಲ್‌ಗಳಲ್ಲಿ ( 2020, 2021, 2022 ಹಾಗೂ 2023) ಒಟ್ಟು 5 ಅರ್ಧಶತಕಗಳನ್ನು ಬಾರಿಸಿದ್ದಾರೆ. ಆದರೆ ಕೊಹ್ಲಿ ಈ ಬಾರಿಯ ಟೂರ್ನಿಯಲ್ಲಿಯೇ ಕೇವಲ 27 ದಿನಗಳಲ್ಲಿ 5 ಅರ್ಧಶತಕಗಳನ್ನು ಬಾರಿಸಿದ್ದಾರೆ ಎಂದು ಟ್ವೀಟ್ ಮಾಡುತ್ತಿದ್ದಾರೆ. 2020ರ ಐಪಿಎಲ್‌ನಲ್ಲಿ 3 ಅರ್ಧಶತಕಗಳನ್ನು ಬಾರಿಸಿದ್ದ ರೋಹಿತ್ ಶರ್ಮಾ 2021ರಲ್ಲಿ ಒಂದು ಅರ್ಧಶತಕ, 2022ರಲ್ಲಿ ಶೂನ್ಯ ಹಾಗೂ ಈ ಬಾರಿ ಒಂದು ಅರ್ಧಶತಕವನ್ನು ಬಾರಿಸಿದ್ದಾರೆ.
ವಿರಾಟ್ ಕೊಹ್ಲಿ ಈ ಬಾರಿಯ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಅಜೇಯ 82, ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 61, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 50, ಪಂಜಾಬ್ ಕಿಂಗ್ಸ್ ವಿರುದ್ಧ 59 ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 54 ರನ್‌ಗಳನ್ನು ಬಾರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications