RCB vs DC IPL 2023: ವಿರಾಟ್ ಕೊಹ್ಲಿ, ವೈಶಾಖ್ ಮಿಂಚಿನ ಪ್ರದರ್ಶನ; ಡೆಲ್ಲಿ ಕ್ಯಾಪಿಟಲ್ಸ್ ಮಣಿಸಿದ ಆರ್‌ಸಿಬಿ
ಶನಿವಾರ, ಏಪ್ರಿಲ್ 15ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ 2023ರ ಐಪಿಎಲ್‌ನ 20ನೇ ಪಂದ್ಯದಲ್ಲಿ ಫಾಫ್ ಡು ಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಿರ್ಣಾಯಕ ಗೆಲುವು ಸಾಧಿಸುವಲ್ಲಿ ಸಫಲವಾಯಿತು.
ಆರ್‌ಸಿಬಿ ನೀಡಿದ್ದ 175 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 151 ರನ್ ಗಳಿಸಲಷ್ಟೇ ಶಕ್ತವಾಯಿತು. ಹೀಗಾಗಿ ಆರ್‌ಸಿಬಿ ತಂಡ ತವರಿನ ಮೈದಾನದಲ್ಲಿ 23 ರನ್‌ಗಳ ಅಮೋಘ ಜಯ ಸಾಧಿಸಿತು.

ಐಪಿಎಲ್ 2023ರಲ್ಲಿ ಫಾಫ್ ಡು ಪ್ಲೆಸಿಸ್ ನಾಯಕತ್ವದ ಆರ್‌ಸಿಬಿ ತನ್ನ ಎರಡನೇ ಗೆಲುವು ದಾಖಲಿಸಿ ಅಮೂಲ್ಯ 2 ಅಂಕ ಸಂಪಾದಿಸದರೆ, ಡೇವಿಡ್ ವಾರ್ನರ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಸತತ ಐದನೇ ಸೋಲಿನ ಮುಖಭಂಗ ಅನುಭವಿಸಿತು.
ಡೆಲ್ಲಿ ಕ್ಯಾಪಿಟಲ್ಸ್ ಪರ ಇನ್ನಿಂಗ್ಸ್ ಅರಂಭಿಸಿದ ನಾಯಕ ಡೇವಿಡ್ ವಾರ್ನರ್ ಮತ್ತು ಇಂಪ್ಯಾಕ್ಟ್ ಪ್ಲೇಯರ್ ಪೃಥ್ವಿ ಶಾ ದೊಡ್ಡ ಜೊತೆಯಾಟ ನೀಡುವಲ್ಲಿ ವಿಫಲರಾದರು. ಮೊದಲ ಓವರ್‌ನಲ್ಲಿಯೇ ಪೃಥ್ವಿ ಶಾ ಇಲ್ಲದ ರನ್ ಕದಿಯಲು ಹೋಗಿ ರನೌಟ್‌ಗೆ ಬಲಿಯಾದರು. ಪವರ್ ಪ್ಲೇ ಓವರ್‌ಗಳಲ್ಲಿ ಆರ್‌ಸಿಬಿ ಸಂಪೂರ್ಣ ಹಿಡಿತ ಸಾಧಿಸಿತು.

ನಂತರ ಬಂದ ಮಿಚೆಲ್ ಮಾರ್ಷ್ ಕೂಡ ಯಾವುದೇ ರನ್ ಗಳಿಸಲು ವಿಫಲವಾಗಿ ವಿರಾಟ್ ಕೊಹ್ಲಿಗೆ ಕ್ಯಾಚ್ ನೀಡಿ ಮರಳಿದರು. ಯಶ್ ಧುಲ್ 1 ರನ್ ಗಳಿಸಿ ಮೊಹಮ್ಮದ್ ಸಿರಾಜ್ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯೂ ಆದರು. ಈ ವೇಳೆ ತಂಡದ ಮೊತ್ತ 2.2 ಓವರ್‌ಗಳಲ್ಲಿ 2 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತು.
ಇದಾದ ನಂತರ ಕನ್ನಡಿಗ ಮನೀಶ್ ಪಾಂಡೆ ಬ್ಯಾಟಿಂಗ್‌ಗೆ ಆಗಮಿಸಿ ಆರ್‌ಸಿಬಿ ಬೌಲರ್‌ಗಳಿಗೆ ಕಾಟ ನೀಡಿದರು. ಇದೇ ವೇಳೆ ನಾಯಕ ಡೇವಿಡ್ ವಾರ್ನರ್ ದೊಡ್ಡ ಹೊಡೆತಕ್ಕೆ ಮುಂದಾಗಿ ಆರ್‌ಸಿಬಿ ತಂಡದ ಕನ್ನಡಿಗ ವಿಜಯಕುಮಾರ್ ವೈಶಾಖ್ ಅವರ ಬೌಲಿಂಗ್‌ನಲ್ಲಿ ವಿರಾಟ್ ಕೊಹ್ಲಿ ಕ್ಯಾಚ್ ನೀಡಿದರು. ವಾರ್ನರ್ 13 ಎಸೆತಗಳಲ್ಲಿ 4 ಬೌಂಡರಿ ಸಮೇತ 19 ರನ್ ಗಳಿಸಿದರು.
ಇನ್ನು ಮನೀಶ್ ಪಾಂಡೆ 38 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 50 ರನ್ ಬಾರಿಸಿ ವನಿಂದು ಹಸರಂಗ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ವಿಕೆಟ್ ಕೀಪರ್ ಅಭಿಷೇಕ್ ಪೊರೆಲ್ 5 ರನ್ ಗಳಿಸಿ ಔಟಾದರು.

ಆಲ್‌ರೌಂಡರ್ ಅಕ್ಷರ್ ಪಟೇಲ್ 14 ಎಸೆತಗಳಲ್ಲಿ 21 ರನ್, ಅಮನ್ ಹಕೀಮ್ ಖಾನ್ 10 ಎಸೆತಗಳಲ್ಲಿ 18 ರನ್, ಲಲಿತ್ ಯಾದವ್ 4 ರನ್, ಅನ್ರಿಚ್ ನಾರ್ಟ್ಜೆ 14 ಎಸೆತಗಳಲ್ಲಿ 23 ರನ್ ಮತ್ತು ಕುಲದೀಪ್ ಯಾದವ್ 7 ರನ್ ಗಳಿಸಿದರು.
ಇನ್ನು ಬೌಲಿಂಗ್‌ನಲ್ಲಿ ಆರ್‌ಸಿಬಿ ತಂಡದ ಪರ ವಿಜಯಕುಮಾರ್ ವೈಶಾಖ್ 4 ಓವರ್‌ಗಳಲ್ಲಿ 20 ರನ್ ನೀಡಿ 3 ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್ 4 ಓವರ್‌ಗಳಲ್ಲಿ 23 ರನ್ ನೀಡಿ 2 ವಿಕೆಟ್ ಪಡೆದರು. ಉಳಿದಂತೆ ವೇಯ್ನ್ ಪಾರ್ನೆಲ್, ವನಿಂದು ಹಸರಂಗ ಮತ್ತು ಹರ್ಷಲ್ ಪಟೇಲ್ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.
ಇನ್ನು ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿತ್ತು. ಆರ್‌ಸಿಬಿ ಪರ ಆರಂಭಿಕರಾದ ವಿರಾಟ್ ಕೊಹ್ಲಿ ಮತ್ತು ನಾಯಕ ಫಾಫ್ ಡು ಪ್ಲೆಸಿಸ್ ಮೊದಲ ವಿಕೆಟ್‌ಗೆ 4.4 ಓವರ್‌ಗಳಲ್ಲಿ 42 ರನ್ ಜೊತೆಯಾಟ ನೀಡಿದರು.
ಈ ವೇಳೆ 16 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 22 ರನ್ ಗಳಿಸಿದ್ದ ಫಾಫ್ ಡು ಪ್ಲೆಸಿಸ್ ವಿಕೆಟ್ ಒಪ್ಪಿಸಿದರು. ನಂತರ ಬಂದ ಮಹಿಪಾಲ್ ಲೊಮ್ರೊರ್ 18 ಎಸೆತಗಳಲ್ಲಿ 2 ಸಿಕ್ಸರ್ ಸಮೇತ 26 ರನ್ ಗಳಿಸಿ ಔಟಾದರು. ಆ ಬಳಿಕ ವಿರಾಟ್ ಕೊಹ್ಲಿ 34 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 50 ರನ್ ಗಳಿಸಿ ಆಡುತ್ತಿದ್ದಾಗ ದೊಡ್ಡ ಹೊಡೆತಕ್ಕೆ ಮುಂದಾಗಿ ಬೌಂಡರಿ ಲೈನ್ ಬಳಿ ಕ್ಯಾಚ್ ನೀಡಿದರು.
ವಿರಾಟ್ ಕೊಹ್ಲಿ ವಿಕೆಟ್ ಬಳಿಕ ಕ್ರೀಸ್‌ಗೆ ಬಂದ ಗ್ಲೆನ್ ಮ್ಯಾಕ್ಸ್‌ವೆಲ್ ಆರಂಭದಿಂದಲೂ ಅಬ್ಬರದ ಬ್ಯಾಟಿಂಗ್‌ಗೆ ಇಳಿದರು. 14 ಎಸೆತಗಳಲ್ಲಿ 3 ಸಿಕ್ಸರ್ ಸಮೇತ 24 ರನ್ ಬಾರಿಸಿ ವಿಕೆಟ್ ಒಪ್ಪಿಸಿದಾಗ ಇಡೀ ಕ್ರೀಡಾಂಗಣ ಸ್ತಬ್ದವಾಗಿತ್ತು. ಹರ್ಷಲ್ ಪಟೇಲ್ 1 ಸಿಕ್ಸರ್ ಬಾರಿಸಿ ಔಟಾದರೆ, ಇದೇ ವೇಳೆ ದಿನೇಶ್ ಕಾರ್ತಿಕ್ ಕೂಡ ಎದುರಿಸಿದ ಮೊದಲ ಎಸೆತದಲ್ಲಿಯೇ ವಿಕೆಟ್ ನೀಡಿ ನಿರಾಸೆ ಮೂಡಿಸಿದರು.
ನಂತರ ಜೊತೆಗೂಡಿದ ಶಹಬಾಜ್ ಅಹ್ಮದ್ ಮತ್ತು ಇಂಪ್ಯಾಕ್ಟ್ ಪ್ಲೇಯರ್ ಅನುಜ್ ರಾವತ್ ಮುರಿಯದ 7ನೇ ವಿಕೆಟ್‌ಗೆ 34 ಎಸೆತಗಳಲ್ಲಿ 42 ರನ್‌ಗಳ ಜೊತೆಯಾಟ ನೀಡಿ ತಂಡದ ಮೊತ್ತ 170ರ ಗಡಿ ದಾಟಿಸಿದರು. ಶಹಬಾಜ್ ಅಹ್ಮದ್ 12 ಎಸೆತಗಳಲ್ಲಿ 3 ಬೌಂಡರಿ ಸಮೇತ 20 ರನ್ ಗಳಿಸಿದರೆ, ಅನುಜ್ ರಾವತ್ 22 ಎಸೆತಗಳಲ್ಲಿ 15 ರನ್ ಗಳಿಸಿದರು.
ಇನ್ನು ಬೌಲಿಂಗ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಮಿಚೆಲ್ ಮಾರ್ಷ್ 4 ಓವರ್‌ಗಳಲ್ಲಿ 18 ರನ್ ನೀಡಿ 2 ವಿಕೆಟ್ ಪಡೆದು ಮಿಂಚಿದರೆ, ಕುಲದೀಪ್ ಯಾದವ್ 4 ಓವರ್‌ಗಳಲ್ಲಿ 23 ರನ್ ನೀಡಿ 2 ವಿಕೆಟ್ ಪಡೆದರು. ಉಳಿದಂತೆ ಅಕ್ಷರ್ ಪಟೇಲ್ ಮತ್ತು ಲಲಿತ್ ಯಾದವ್ ತಲಾ ಒಂದೊಂದು ವಿಕೆಟ್ ಕಬಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications