RCB vs RR: ನಂ.1 ಟೀಮ್ ವಿರುದ್ಧ ಗೆದ್ದ ಆರ್‌ಸಿಬಿ; ಜೈಸ್ವಾಲ್, ಪಡಿಕ್ಕಲ್, ಜುರೆಲ್ ಆಟ ವ್ಯರ್ಥ

ಇಂದು ( ಏಪ್ರಿಲ್ 23 ) ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಲೀಗ್ ಹಂತದ 32ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಿದ್ದು, ರಾಜಸ್ಥಾನ್ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 7 ರನ್‌ಗಳ ಗೆಲುವನ್ನು ಕಂಡಿದೆ.
ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿದ್ದು, ಎದುರಾಳಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಗೆಲ್ಲಲು 190 ರನ್‌ಗಳ ಗುರಿಯನ್ನು ನೀಡಿತು.
ಆದರೆ ಈ ಗುರಿಯನ್ನು ಬೆನ್ನತ್ತುವಲ್ಲಿ ರಾಜಸ್ಥಾನ್ ರಾಯಲ್ಸ್ ವಿಫಲವಾಗಿದ್ದು 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 132 ರನ್ ಕಲೆ ಹಾಕಿದೆ.
ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆರಂಭಿಕ ಆಟಗಾರರಾಗಿ ವಿರಾಟ್ ಕೊಹ್ಲಿ ಹಾಗೂ ಫಾಫ್ ಡು ಪ್ಲೆಸಿಸ್ ಕಣಕ್ಕಿಳಿದರು. ಕೊಹ್ಲಿ ಗೋಲ್ಡನ್ ಡಕ್‌ಔಟ್ ಆದರೆ, ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶಹ್ಬಾಜ್ ಅಹ್ಮದ್ 2 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಹೀಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 12 ರನ್‌ಗಳಿಗೆ ತನ್ನ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿಕೊಂಡಿತ್ತು.
ಹೀಗೆ ಆರಂಭದಲ್ಲಿ ಆಘಾತ ಅನುಭವಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಸರೆಯಾದದ್ದು ಫಾಫ್ ಡು ಪ್ಲೆಸಿಸ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್. ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಫಾಫ್ ಡು ಪ್ಲೆಸಿಸ್ ಸೇರಿ 127 ರನ್‌ಗಳ ಜತೆಯಾಟವಾಡಿ ಕುಸಿದಿದ್ದ ತಂಡಕ್ಕೆ ಆಪದ್ಭಾಂದವರಾದರು. ಮ್ಯಾಕ್ಸ್‌ವೆಲ್ 44 ಎಸೆತಗಳಲ್ಲಿ 77 ರನ್ ಚಚ್ಚಿದರೆ, ಡು ಪ್ಲೆಸಿಸ್ 39 ಎಸೆತಗಳಲ್ಲಿ 62 ರನ್ ಬಾರಿಸಿದರು.
ಇನ್ನುಳಿದಂತೆ ಮಹಿಪಾಲ್ ಲೊಮ್ರೊರ್ 8 ರನ್, ಸುಯಶ್ ಪ್ರಭುದೇಸಾಯಿ ಡಕ್ ಔಟ್, ವನಿಂದು ಹಸರಂಗ 6 ರನ್, ದಿನೇಶ್ ಕಾರ್ತಿಕ್ 16 ರನ್, ವಿಜಯ್ ಕುಮಾರ್ ವೈಶಾಖ್ ಡಕ್ ಔಟ್, ಡೇವಿಡ್ ವಿಲ್ಲೆ ಅಜೇಯ 4 ಹಾಗೂ ಮೊಹಮ್ಮದ್ ಸಿರಾಜ್ ಅಜೇಯ 1 ರನ್ ಗಳಿಸಿದರು.
ರಾಜಸ್ಥಾನ್ ರಾಯಲ್ಸ್ ಪರ ಟ್ರೆಂಟ್ ಬೌಲ್ಟ್ ಹಾಗೂ ಸಂದೀಪ್ ಶರ್ಮಾ ತಲಾ ಎರಡು ವಿಕೆಟ್ ಪಡೆದರೆ, ರವಿಚಂದ್ರನ್ ಅಶ್ವಿನ್ ಹಾಗೂ ಯುಜ್ವೇಂದ್ರ ಚಾಹಲ್ ತಲಾ ಒಂದೊಂದು ವಿಕೆಟ್ ಪಡೆದರು.
ರಾಜಸ್ಥಾನ್ ರಾಯಲ್ಸ್ ಪರ ಆರಂಭಿಕರಾಗಿ ಯಶಸ್ವಿ ಜೈಸ್ವಾಲ್ ಹಾಗೂ ಜೋಸ್ ಬಟ್ಲರ್ ಕಣಕ್ಕಿಳಿದರು. ಸಿರಾಜ್ ಎಸೆತಕ್ಕೆ ಕ್ಲೀನ್ ಬೌಲ್ಡ್ ಆದ ಜೋಸ್ ಬಟ್ಲರ್ ಎರಡು ಎಸೆತಗಳಲ್ಲಿ ಯಾವುದೇ ರನ್ ಗಳಿಸದೇ ಡಕ್ಔಟ್ ಆದರು. ಹೀಗೆ ಆರಂಭಿಕ ಆಘಾತಕ್ಕೊಳಗಾದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಎರಡನೇ ವಿಕೆಟ್‌ಗೆ ಜತೆಯಾದ ದೇವದತ್ ಪಡಿಕ್ಕಲ್ ಹಾಗೂ ಯಶಸ್ವಿ ಜೈಸ್ವಾಲ್ ಆಸರೆಯಾದರು. ಈ ಜೋಡಿ 98 ರನ್‌ಗಳ ಜತೆಯಾಟವನ್ನಾಡಿತು.
ಯಶಸ್ವಿ ಜೈಸ್ವಾಲ್ 37 ಎಸೆತಗಳಲ್ಲಿ 47 ರನ್ ಗಳಿಸಿದರೆ, ದೇವದತ್ ಪಡಿಕ್ಕಲ್ 34 ಎಸೆತಗಳಲ್ಲಿ 52 ರನ್ ಗಳಿಸಿದರು. ಇನ್ನುಳಿದಂತೆ ನಾಯಕ ಸಂಜು ಸ್ಯಾಮ್ಸನ್ 22 ರನ್ ಗಳಿಸಿದರೆ, ಶಿಮ್ರಾನ್ ಹೆಟ್ಮಾಯೆರ್ 3 ರನ್, ರವಿಚಂದ್ರನ್ ಅಶ್ವಿನ್ 6, ಅಬ್ದುಲ್ ಬಸಿತ್ ಅಜೇಯ 1 ಹಾಗೂ ಧ್ರುವ್ ಜುರೆಲ್ ಅಜೇಯ 34 ರನ್ ಗಳಿಸಿದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಫಾಫ್ ಡು ಪ್ಲೆಸಿಸ್ ಬದಲಾಗಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದ ಹರ್ಷಲ್ ಪಟೇಲ್ 3 ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್ ಹಾಗೂ ಡೇವಿಡ್ ವಿಲ್ಲಿ ತಲಾ ಒಂದೊಂದು ವಿಕೆಟ್ ಪಡೆದರು. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸೋಲುಣಿಸಿದ್ದು, ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಗೆದ್ದ ಎರಡನೇ ಗೆಲುವು ಇದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications