MI vs RCB: ಮುಖಾಮುಖಿ ಪಂದ್ಯಗಳಲ್ಲಿ ಹೆಚ್ಚು ಗೆದ್ದಿರುವ ಬಲಿಷ್ಠ ತಂಡ ಯಾವುದು?

ಸದ್ಯ ನಡೆಯುತ್ತಿರುವ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ 54ನೇ ಪಂದ್ಯ ನಾಳೆ ( ಮೇ 9 ) ನಡೆಯಲಿದ್ದು, ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ.
ಈ ಪಂದ್ಯ ಮುಂಬೈನ ವಾಂಖೆಡೆ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಎರಡೂ ತಂಡಗಳಿಗೂ ಈ ಪಂದ್ಯ ಬಹುಮುಖ್ಯದ್ದಾಗಿದೆ. ಟೂರ್ನಿಯಲ್ಲಿ ಇಲ್ಲಿಯವರೆಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ಸಮಬಲ ಸಾಧಿಸಿವೆ.
ಹೌದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಲ್ಲಿಯವರೆಗೂ ಒಟ್ಟು 10 ಪಂದ್ಯಗಳನ್ನಾಡಿದ್ದು, 5 ಪಂದ್ಯಗಳಲ್ಲಿ ಗೆದ್ದು, 5 ಪಂದ್ಯಗಳಲ್ಲಿ ಸೋತು 10 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಅತ್ತ ಮುಂಬೈ ಇಂಡಿಯನ್ಸ್ ಸಹ 10 ಪಂದ್ಯಗಳನ್ನಾಡಿದ್ದು, 5 ಪಂದ್ಯಗಳಲ್ಲಿ ಗೆದ್ದು, 5 ಪಂದ್ಯಗಳಲ್ಲಿ ಸೋತು 10 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಅಂಕಪಟ್ಟಿಯಲ್ಲಿ ಆರನೇ ಸ್ಥಾನ ಪಡೆದುಕೊಂಡಿದೆ.
ಮುಂಬೈ ಇಂಡಿಯನ್ಸ್ ತಂಡಕ್ಕಿಂತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನೆಟ್ ರನ್ ರೇಟ್ ಚೆನ್ನಾಗಿರುವ ಕಾರಣ ಸಮನಾದ ಅಂಕಗಳನ್ನು ಪಡೆದುಕೊಂಡರೂ ಸಹ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಂಕಪಟ್ಟಿಯಲ್ಲಿ ತುಸು ಉತ್ತಮ ಸ್ಥಾನವನ್ನು ಪಡೆದುಕೊಂಡಿದೆ.
ಇನ್ನು ಎರಡೂ ತಂಡಗಳಿಗೂ ಸಹ ತಲಾ ನಾಲ್ಕು ಪಂದ್ಯಗಳು ಬಾಕಿ ಉಳಿದಿದ್ದು ಪ್ಲೇಆಫ್ ಸುತ್ತಿಗೆ ಅರ್ಹತೆ ಗಿಟ್ಟಿಸಿಕೊಳ್ಳಬೇಕೆಂದರೆ ಈಗಿರುವ ಪೈಪೋಟಿಯಲ್ಲಿ ಉಳಿದ ಎಲ್ಲಾ ಪಂದ್ಯಗಳನ್ನೂ ಸಹ ಇತ್ತಂಡಗಳು ಗೆಲ್ಲಬೇಕಿದೆ. ಹೀಗಾಗಿ ನಾಳಿನ ಪಂದ್ಯ ಎರಡೂ ತಂಡಗಳಿಗೂ ಮಖ್ಯವಾಗಿದ್ದು, ಇತ್ತಂಡಗಳ ಮುಖಾಮುಖಿಯಲ್ಲಿ ಯಾವ ತಂಡ ಹೆಚ್ಚು ಪಂದ್ಯಗಳನ್ನು ಗೆದ್ದಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ..
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ಇಲ್ಲಿಯವರೆಗೂ ಒಟ್ಟು 31 ಪಂದ್ಯಗಳಲ್ಲಿ ಪರಸ್ಪರ ಮುಖಾಮುಖಿಯಾಗಿದ್ದು, ಈ ಪೈಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 14 ಪಂದ್ಯಗಳಲ್ಲಿ ಗೆದ್ದಿದ್ದು, ಮುಂಬೈ ಇಂಡಿಯನ್ಸ್ ತಂಡ 17 ಪಂದ್ಯಗಳಲ್ಲಿ ಗೆದ್ದಿದೆ.
ಈ ಮೂಲಕ ಇತ್ತಂಡಗಳ ಮುಖಾಮುಖಿಯಲ್ಲಿ ಮುಂಬೈ ಇಂಡಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕಿಂತ ಹೆಚ್ಚು ಪಂದ್ಯಗಳಲ್ಲಿ ಗೆದ್ದು ಮೇಲುಗೈ ಸಾಧಿಸಿದೆ. ಇನ್ನು ಈ ಪಂದ್ಯ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿರುವ ಎರಡನೇ ಪಂದ್ಯವಾಗಿದೆ.
ಹೌದು, ಏಪ್ರಿಲ್ 2ರಂದು ನಡೆದಿದ್ದ ಈ ಬಾರಿಯ ಐಪಿಎಲ್ ಟೂರ್ನಿಯ ಐದನೇ ಪಂದ್ಯದಲ್ಲಿ ಮೊದಲಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 8 ವಿಕೆಟ್‌ಗಳ ಭರ್ಜರಿ ಗೆಲುವು ಕಂಡಿತ್ತು.
ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 171 ರನ್ ಕಲೆಹಾಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಗೆಲ್ಲಲು 172 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನತ್ತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರಾಟ್ ಕೊಹ್ಲಿ ಹಾಗೂ ಫಾಫ್ ಡು ಪ್ಲೆಸಿಸ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ 16.2 ಓವರ್‌ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 172 ರನ್ ಚಚ್ಚಿ 8 ವಿಕೆಟ್‌ಗಳ ಭರ್ಜರಿ ಜಯವನ್ನು ಸಾಧಿಸಿತ್ತು. ಹೀಗೆ ಮೊದಲ ಪಂದ್ಯದ ಸೋಲಿನ ಸೇಡನ್ನು ಈ ಬಹುಮುಖ್ಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತೀರಿಸಿಕೊಳ್ಳಲಿದೆಯಾ ಅಥವಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತೊಮ್ಮೆ ಗೆಲ್ಲಲಿದೆಯಾ ಕಾದು ನೋಡಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications