IPL 2023: ಸೇಡು ತೀರಿಸಿಕೊಳ್ಳಬೇಕಿತ್ತು! ಗುಜರಾತ್ ಟೈಟಾನ್ಸ್ ವಿರುದ್ಧ ಗೆಲುವಿನ ಬಳಿಕ ಶಿಮ್ರಾನ್ ಹೆಟ್ಮೆಯರ್ ಪ್ರತಿಕ್ರಿಯೆ
ಐಪಿಎಲ್ 2023ರ ಆವೃತ್ತಿಯಲ್ಲಿ ಭಾನುವಾರ ನಡೆದ ರೋಚಕ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ವಿರುದ್ಧ 7 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿದೆ. ಕಳೆದ ಆವೃತ್ತಿಯಲ್ಲಿ ಫೈನಲ್ ಪಂದ್ಯ ಸೇರಿದಂತೆ ಮೂರು ಪಂದ್ಯಗಳಲ್ಲಿ ಎರಡೂ ತಂಡಗಳು ಮುಖಾಮುಖಿಯಾಗಿದ್ದವು, ಮೂರು ಪಂದ್ಯಗಳಲ್ಲಿ ಗುಜರಾತ್ ಟೈಟಾನ್ಸ್ ಗೆಲುವು ಸಾಧಿಸಿತ್ತು.
ಕಳೆದ ಬಾರಿಯ ಫೈನಲ್‌ನಲ್ಲಿ ಸೋಲಿಗೆ ಸೇಡು ತೀರಿಸಿಕೊಳ್ಳುವ ಉತ್ಸಾಹದಲ್ಲಿದ್ದ ರಾಜಸ್ಥಾನ ರಾಯಲ್ಸ್ ದಿಟ್ಟ ಹೋರಾಟ ನೀಡುವ ಮೂಲಕ ಗೆಲುವು ಸಾಧಿಸಿದೆ. ಶಿಮ್ರಾನ್ ಹೆಟ್ಮೆಯರ್ 26 ಎಸೆತಗಳಲ್ಲಿ 2 ಬೌಂಡರಿ 5 ಭರ್ಜರಿ ಸಿಕ್ಸರ್ ಸಹಿತ ಅಜೇಯ 56 ರನ್ ಗಳಿಸುವ ಮೂಲಕ ರಾಜಸ್ಥಾನ ರಾಯಲ್ಸ್ ಗೆಲುವಿಗೆ ಕಾರಣವಾದರು.

ಪಂದ್ಯದ ಬಳಿಕ ಮಾತನಾಡಿದ ಶಿಮ್ರಾನ್ ಹೆಟ್ಮೆಯರ್ ಇಂದಿನ ಗೆಲುವು ಕಳೆದ ಆವೃತ್ತಿಯಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಮೂರು ಸೋಲುಗಳನ್ನು ಸರಿದೂಗಿಸಿದೆ ಎಂದು ಹೇಳಿದರು. ಒಂದು ಹಂತದಲ್ಲಿ ಗುಜರಾತ್ ಜೈಂಟ್ಸ್ ಸುಲಭವಾದ ಗೆಲುವು ಸಾಧಿಸುತ್ತದೆ ಎಂದುಕೊಳ್ಳಲಾಗಿತ್ತು, ಆದರೆ ಸಂಜು ಸ್ಯಾಮ್ಸನ್ ಮತ್ತು ಶಿಮ್ರಾನ್ ಹೆಟ್ಮೆಯರ್ ಅಮೋಘ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ ರಾಯಲ್ಸ್ ಗೆಲುವು ಸಾಧಿಸಿತು.

ಗೆಲುವಿನ ಸಂತಸ ಹಂಚಿಕೊಂಡ ಶಿಮ್ರಾನ್ ಹೆಟ್ಮೆಯರ್
2022ರ ಆವೃತ್ತಿಯಲ್ಲಿ ಗುಜರಾತ್ ಟೈಟಾನ್ಸ್ ಮೂರು ಬಾರಿ ರಾಜಸ್ಥಾನ ರಾಯಲ್ಸ್ ತಂಡವನ್ನು ಸೋಲಿಸಿತ್ತು. ಫೈನಲ್ ಪಂದ್ಯದಲ್ಲಿ ಅವರು 3 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ರಾಜಸ್ಥಾನ ರಾಯಲ್ಸ್ ಚಾಂಪಿಯನ್ ಆಗುವ ಕನಸನ್ನು ಭಗ್ನಗೊಳಿಸಿದ್ದರು. ಈ ಬಾರಿ ಮುಖಾಮುಖಿಯಾದ ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್‌ಗಳಿಗೆ ಸೋಲಿನ ರುಚಿ ತೋರಿಸಿದೆ. ಕೊನೆಯ ಓವರ್ ನಲ್ಲಿ ಸ್ಪಿನ್ನರ್ ನೂರ್ ಅಹ್ಮದ್ ಬೌಲಿಂಗ್ ಮಾಡುವುದನ್ನು ನೋಡಿ ನನಗೆ ಖುಷಿಯಾಯಿತು ಎಂದು ಶಿಮ್ರಾನ್ ಹೆಟ್ಮೆಯರ್ ಹೇಳಿದರು.
"ಅಂತಿಮ ಓವರ್‌ನಲ್ಲಿ ಸ್ಪಿನ್ನರ್ ವಿರುದ್ಧ ಆಡುವುದು ನನಗೆ ತುಂಬಾ ಸಂತೋಷವಾಯಿತು. ಆದರೆ, ಅವರು ಉತ್ತಮವಾಗಿ ಬೌಲ್ ಮಾಡಿದ್ದಾರೆ, ಮೊದಲ ಎಸೆತದಲ್ಲೇ ಎರಡು ರನ್ ಗಳಿಸಬಹುದು ಎಂದು ಯೋಚಿಸುತ್ತಿದ್ದೆ. ನಂತರ ಸಿಕ್ಸರ್ ಸಿಡಿಸುವ ಮೂಲಕ ಪಂದ್ಯವನ್ನು ಮುಗಿಸಿದೆ. ಈ ತಂಡದ ವಿರುದ್ಧ ಗೆಲ್ಲಬೇಕು ಎಂದು ನಾನು ಬಯಸಿದ್ದೆ, ಕಳೆದ ವರ್ಷ ಅವರು ನಮ್ಮನ್ನು ಮೂರು ಬಾರಿ ಸೋಲಿಸಿದ್ದರು, ಹಾಗಾಗಿ ಈ ಬಾರಿ ಸೇಡು ತೀರಿಸಿಕೊಂಡಿದ್ದೇವೆ" ಎಂದು ಹೇಳಿದರು.

ಮುಂದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ
ಕೊನೆಯ ಓವರ್ ಗಳಲ್ಲಿ ಪಂದ್ಯವನ್ನು ಮುಗಿಸುವ ಬಗ್ಗೆ ಶಿಮ್ರಾನ್ ಹೆಟ್ಮೆಯರ್ ಮಾತನಾಡಿ, "ನಾನು ಅದನ್ನು ಅಭ್ಯಾಸ ಮಾಡುತ್ತೇನೆ. ಒಂದೆರಡು ವಿಕೆಟ್ ಕಳೆದುಕೊಂಡರೂ, 8 ಓವರ್ ಗಳಲ್ಲಿ 100 ರನ್‌ಗಳನ್ನು ಗಳಿಸಬೇಕು ಎನ್ನುವ ಮನಸ್ಥಿತಿಯೊಂದಿಗೆ ಅಭ್ಯಾಸ ಮಾಡಲು ಇದು ಸಹಾಯ ಮಾಡುತ್ತದೆ. ಮಾನಸಿಕವಾಗಿ ನಾನು ಅದಕ್ಕೆ ಸಿದ್ಧವಾಗಿದ್ದೇನೆ, ಅದು ನನಗೆ ಉತ್ತಮ ಫಲಿತಾಂಶ ನೀಡಿದೆ" ಎಂದು ಹೇಳಿದರು.
ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯವನ್ನು ಗೆಲ್ಲುವ ಮೂಲಕ ರಾಜಸ್ಥಾನ ರಾಯಲ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಇದುವರೆಗೂ ಆಡಿರುವ 5 ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ 8 ಅಂಕಗಳೊಂದಿಗೆ ಮೊದಲನೇ ಸ್ಥಾನದಲ್ಲಿದೆ. ರಾಜಸ್ಥಾನ ಮುಂದಿನ ಪಂದ್ಯದಲ್ಲಿ ಏಪ್ರಿಲ್ 19ರಂದು ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications