IPL 2023: ಅರ್ಜುನ್ ತೆಂಡೂಲ್ಕರ್ ಮೊದಲ ವಿಕೆಟ್ ಬಗ್ಗೆ ಸಚಿನ್ ಸಂತಸ; ರೋಹಿತ್ ಶರ್ಮಾ ಹೇಳಿದ್ದಿಷ್ಟು

ಸದ್ಯ ನಡೆಯುತ್ತಿರುವ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ 25 ಪಂದ್ಯಗಳು ನಿನ್ನೆ ( ಏಪ್ರಿಲ್ 18 ) ನಡೆದ ಮುಂಬೈ ಇಂಡಿಯನ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವಿನ ಪಂದ್ಯದ ಮೂಲಕ ಮುಕ್ತಾಯಗೊಂಡಿವೆ.
ಇಲ್ಲಿಯವರೆಗೆ ಇಂಡಿಯನ್ ಪ್ರೀಮಿಯರ್ ಲೀಗ್‌ನ ಅತಿ ಯಶಸ್ವಿ ತಂಡ ಎನಿಸಿಕೊಂಡಿರುವ ಮುಂಬೈ ಇಂಡಿಯನ್ಸ್ ಈ ಬಾರಿಯ ಟೂರ್ನಿಯಲ್ಲಿ ಒಟ್ಟು 5 ಪಂದ್ಯಗಳನ್ನಾಡಿದ್ದು, ಈ ಪೈಕಿ 3 ಪಂದ್ಯಗಳಲ್ಲಿ ಗೆದ್ದು, 2 ಪಂದ್ಯಗಳಲ್ಲಿ ಸೋತು 6 ಅಂಕಗಳನ್ನು ಪಡೆದುಕೊಂಡು ಅಂಕಪಟ್ಟಿಯಲ್ಲಿ ಆರನೇ ಸ್ಥಾನವನ್ನು ಗಿಟ್ಟಿಸಿಕೊಂಡಿದೆ.
ಮೊದಲಿಗೆ ನಡೆದ ಎರಡು ಪಂದ್ಯಗಳನ್ನು ಸೋತು ಕಹಿ ಆರಂಭವನ್ನು ಪಡೆದುಕೊಂಡಿದ್ದ ಮುಂಬೈ ಇಂಡಿಯನ್ಸ್ ತಂಡ ನಂತರದ ಮೂರು ಪಂದ್ಯಗಳನ್ನು ಸತತವಾಗಿ ಗೆದ್ದು ಹ್ಯಾಟ್ರಿಕ್ ಗೆಲುವು ಸಾಧಿಸಿದೆ. ಹೌದು, ನಿನ್ನೆ ( ಏಪ್ರಿಲ್ 18 ) ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಸನ್ ರೈಸರ್ಸ್ ವಿರುದ್ಧ ಗೆದ್ದ ಮುಂಬೈ ಇಂಡಿಯನ್ಸ್ ಹ್ಯಾಟ್ರಿಕ್ ಗೆಲುವಿನ ನಗೆ ಬೀರಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಸನ್ ರೈಸರ್ಸ್ ಹೈದರಾಬಾದ್ ತಂಡ ಫೀಲ್ಡಿಂಗ್ ಆಯ್ದುಕೊಂಡು ಎದುರಾಳಿ ಮುಂಬೈ ಇಂಡಿಯನ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಮುಂಬೈ ಇಂಡಿಯನ್ಸ್ ಇಶಾನ್ ಕಿಶನ್, ಕೆಮರೂನ್ ಗ್ರೀನ್ ಹಾಗೂ ತಿಲಕ್ ವರ್ಮಾ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ192 ರನ್ ಕಲೆಹಾಕಿ ಎದುರಾಳಿ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಗೆಲ್ಲಲು 193 ರನ್‌ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನತ್ತುವ ಭರವಸೆಯನ್ನು ಹುಟ್ಟುಹಾಕಿದ್ದ ಸನ್ ರೈಸರ್ಸ್ ಹೈದರಾಬಾದ್ ಅಂತಿಮ ಹಂತದಲ್ಲಿ ವಿಫಲವಾಗಿ 19.5 ಓವರ್‌ಗಳಲ್ಲಿ 178 ರನ್‌ಗಳಿಗೆ ಆಲ್ ಔಟ್ ಆಯಿತು.
ಈ ಮೂಲಕ ಮುಂಬೈ ಇಂಡಿಯನ್ಸ್ 14 ರನ್‌ಗಳ ಗೆಲುವನ್ನು ಕಂಡಿದೆ. ಇನ್ನು ಮುಂಬೈ ಇಂಡಿಯನ್ಸ್ ತಂಡ ನೀಡಿದ್ದ ಗುರಿಯನ್ನು ಸನ್ ರೈಸರ್ಸ್ ತಂಡ ಮುಟ್ಟುವ ಭರವಸೆ ಹುಟ್ಟುಹಾಕಿತ್ತು. ಆದರೆ ಅಂತಿಮ ಹಂತದಲ್ಲಿ ವಿಕೆಟ್ ಕಳೆದುಕೊಂಡ ಸನ್ ರೈಸರ್ಸ್ ಹೈದರಾಬಾದ್ ಗೆಲ್ಲಬಹುದಿದ್ದ ಪಂದ್ಯವನ್ನು ಕೈಚೆಲ್ಲಿತು. ಇನ್ನು ಅಂತಿಮ ಓವರ್‌ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಗೆಲ್ಲಲು 20 ರನ್‌ಗಳ ಅಗತ್ಯವಿತ್ತು ಹಾಗೂ ಕೈನಲ್ಲಿ ಎರಡು ವಿಕೆಟ್‌ಗಳಿತ್ತು.
ಈ ಸಂದರ್ಭದಲ್ಲಿ ನಾಯಕ ರೋಹಿತ್ ಶರ್ಮಾ ಚೆಂಡನ್ನು ಅರ್ಜುನ್ ತೆಂಡೂಲ್ಕರ್ ಕೈಗೆ ನೀಡಿದ್ದರು. ಮೊದಲ ಎಸೆತವನ್ನು ಯಾವುದೇ ರನ್ ನೀಡದೆ ಅಚ್ಚುಕಟ್ಟಾಗಿ ಬೌಲ್ ಮಾಡಿದ ಅರ್ಜುನ್ ತೆಂಡೂಲ್ಕರ್ ಎರಡನೇ ಎಸೆತದಲ್ಲಿ ಒಂದು ರನ್ ನೀಡಿದರು ಹಾಗೂ ಇದೇ ಎಸೆತದಲ್ಲಿ ಎರಡನೇ ರನ್ ಕದಿಯಲು ಹೋಗಿ ಅಬ್ದುಲ್ ಸಮದ್ ರನ್ ಔಟ್ ಆದರು. ಬಳಿಕ ಮೂರನೇ ಎಸೆತದಲ್ಲಿ ವೈಡ್ ಎಸೆದ ಅರ್ಜುನ್ ತೆಂಡೂಲ್ಕರ್ ಎರಡು ರನ್‌ಗಳನ್ನೂ ಸಹ ನೀಡಿದರು. ನಾಲ್ಕನೇ ಎಸೆತದಲ್ಲಿ ಒಂದು ರನ್ ಬಿಟ್ಟುಕೊಟ್ಟ ಅರ್ಜುನ್ ತೆಂಡೂಲ್ಕರ್ ಐದನೆ ಎಸೆತದಲ್ಲಿ ಭುವನೇಶ್ವರ್ ಕುಮಾರ್ ಅವರ ವಿಕೆಟ್ ಪಡೆದರು.
ಈ ಮೂಲಕ ಅರ್ಜುನ್ ತೆಂಡೂಲ್ಕರ್ ತಮ್ಮ ಎರಡನೇ ಐಪಿಎಲ್ ಪಂದ್ಯದಲ್ಲಿ ತಮ್ಮ ಮೊದಲ ವಿಕೆಟ್ ಪಡೆದರು. ಹೀಗೆ ಕ್ರಿಕೆಟ್ ದಿಗ್ಗಜ ತಮ್ಮ ಮಗ ಮೊದಲ ಇಂಡಿಯನ್ ಪ್ರೀಮಿಯರ್ ಲೀಗ್ ವಿಕೆಟ್ ಪಡೆದುಕೊಂಡಿದ್ದರ ಬಗ್ಗೆ ಪಂದ್ಯ ಮುಗಿದ ಬಳಿಕ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಮೊದಲಿಗೆ ಮುಂಬೈ ಇಂಡಿಯನ್ಸ್ ತಂಡ ಸೂಪರ್ ಆಲ್‌ರೌಂಡರ್ ಆಟವನ್ನು ಆಡಿತು ಎಂದು ಬರೆದುಕೊಂಡಿರುವ ಸಚಿನ್ ತೆಂಡೂಲ್ಕರ್ ಕೆಮರೂನ್ ಗ್ರೀನ್ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲಿಯೂ ಮಿಂಚಿದರು ಎಂದು ಹೊಗಳಿದ್ದಾರೆ ಹಾಗೂ ಇಶಾನ್ ಕಿಶನ್ ಹಾಗೂ ತಿಲಕ್ ಶರ್ಮಾ ಬ್ಯಾಟಿಂಗ್ ಅನ್ನು ಪ್ರಶಂಸಿದ್ದಾರೆ. ಅಲ್ಲದೇ ದಿನದಿಂದ ದಿನಕ್ಕೆ ಐಪಿಲ್ ಕುತೂಹಲ ಹೆಚ್ಚಿಸುತ್ತಿದೆ ಎಂದು ಸಚಿನ್ ಟ್ವೀಟ್ ಮಾಡಿದ್ದು, ಮುಂಬೈ ಇಂಡಿಯನ್ಸ್ ಆಟಗಾರರನ್ನು ಹೊಗಳಿದ್ದಾರೆ. ಅಂತಿಮವಾಗಿ ಕೊನೆಗೂ ತೆಂಡೂಲ್ಕರ್ ಐಪಿಲ್ ವಿಕೆಟ್ ಪಡೆದರು ಎಂದು ತಮ್ಮ ಮಗ ವಿಕೆಟ್ ಪಡೆದದ್ದರ ಬಗ್ಗೆ ಸಚಿನ್ ಮೆಚ್ಚುಗೆ ವ್ಯಕ್ತಪಡಿಸಿದರು.
ಇನ್ನು ಪಂದ್ಯ ಮುಗಿದ ಬಳಿಕ ಮಾತನಾಡಿದ ನಾಯಕ ರೋಹಿತ್ ಶರ್ಮಾ ಅರ್ಜುನ್ ಕಳೆದ ಮೂರು ವರ್ಷಗಳಿಂದ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದು, ಆತನಿಗೆ ತಾನೇನು ಮಾಡಬೇಕೆಂಬುದು ಚೆನ್ನಾಗಿ ತಿಳಿದಿದೆ ಹಾಗೂ ಆತ ವಿಶ್ವಾಸದಿಂದಲೂ ಸಹ ಇದ್ದಾನೆ ಎಂದರು. ಅಲ್ಲದೇ ಆತನಿಗೆ ತನ್ನ ಯೋಜನೆಗಳ ಬಗ್ಗೆ ಸ್ಪಷ್ಟನೆ ಇತ್ತು ಮತ್ತು ಹೊಸ ಬಾಲ್ ಸಿಕ್ಕಾಗ ಸ್ವಿಂಗ್ ಮಾಡಲು ಯತ್ನಿಸುತ್ತಿದ್ದ ಹಾಗೂ ಅಂತಿಮ ಓವರ್‌ನಲ್ಲಿ ಯಾರ್ಕರ್ ಹಾಕಲು ಪ್ರಯತ್ನಿಸುತ್ತಿದ್ದ ಎಂದು ಹೇಳಿಕೆ ನೀಡಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications