
ನಿನ್ನೆ ( ಮೇ 21) ನಡೆದ ಎರಡು ಪಂದ್ಯಗಳ ಫಲಿತಾಂಶಗಳು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಕೊನೆಯ ಪ್ಲೇಆಫ್ ಅರ್ಹತೆ ಗಿಟ್ಟಿಸಿಕೊಂಡ ತಂಡ ಯಾವುದು ಎಂಬುದನ್ನು ನಿರ್ಧರಿಸಿದವು.
ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಮಧ್ಯಾಹ್ನ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗೆದ್ದರೆ, ರಾತ್ರಿ ನಡೆದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋಲನ್ನು ಕಂಡಿತು. ಈ ಮೂಲಕ ಮುಂಬೈ ಇಂಡಿಯನ್ಸ್ ಯಶಸ್ವಿಯಾಗಿ ಪ್ಲೇಆಫ್ ಪ್ರವೇಶಿಸಿದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೊನೆಯ ಹಂತದಲ್ಲಿ ಟೂರ್ನಿಯಿಂದ ಹೊರಬಿದ್ದಿತು.
ತವರು ನೆಲದಲ್ಲಿಯೇ ಬೃಹತ್ ರನ್ ಮೊತ್ತದ ಗುರಿಯನ್ನು ನೀಡಿದರೂ ಸಹ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋತದ್ದು ಅಭಿಮಾನಿಗಳಲ್ಲಿ ಭಾರೀ ನಿರಾಸೆಯನ್ನು ಮೂಡಿಸಿದೆ. ಹೌದು, ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರಾಟ್ ಕೊಹ್ಲಿ ಏಕಾಂಗಿ ಹೋರಾಟ ಹಾಗೂ ಅಬ್ಬರದ ಶತಕದ ನೆರವಿನಿಂದ 20 ಓವರ್‌ಗಳಲ್ಲಿ ವಿಕೆಟ್ 5 ನಷ್ಟಕ್ಕೆ 197 ರನ್ ಕಲೆಹಾಕಿ ಎದುರಾಳಿ ಗುಜರಾತ್ ಟೈಟನ್ಸ ತಂಡಕ್ಕೆ ಗೆಲ್ಲಲು 198 ರನ್‌ಗಳ ಗುರಿಯನ್ನು ನೀಡಿತ್ತು.
ಈ ಗುರಿಯನ್ನು ಗುಜರಾತ್ ಟೈಟನ್ಸ್ ಶುಬ್‌ಮನ್ ಗಿಲ್ ಭರ್ಜರಿ ಶತಕದ ನೆರವಿನಿಂದ ಬೆನ್ನಟ್ಟಿತು. 19.1 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 198 ರನ್ ಕಲೆಹಾಕಿ ಭರ್ಜರಿ ಗೆಲುವು ಸಾಧಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೂರ್ನಿಯಿಂದ ಹೊರಬೀಳುವಂತೆ ಮಾಡಿತು.
ಶುಬ್‌ಮನ್ ಗಿಲ್ ಸತತ ಎರಡನೇ ಶತಕ ಬಾರಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ಲೇಆಫ್ ಆಸೆಯನ್ನು ಛಿದ್ರಗೊಳಿಸಿದರು. ಬಹುಶಃ ಗಿಲ್ ವಿಕೆಟ್ ಅನ್ನು ಬೇಗನೆ ಪಡೆದಿದ್ದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗುಜರಾತ್ ಟೈಟನ್ಸ್ ಮೇಲೆ ಹಿಡಿತ ಸಾಧಿಸಬಹುದಿತ್ತೇನೋ ಹಾಗೂ ಗೆಲ್ಲಲೂ ಬಹುದಿತ್ತೇನೋ.
ಹೀಗೆ ಶುಬ್‌ಮನ್ ಗಿಲ್ ಶತಕ ಬಾರಿಸಿ ತಮ್ಮ ನೆಚ್ಚಿನ ತಂಡ ಸೋಲುವ ಹಾಗೆ ಮಾಡಿದ್ದು ಕೆಲ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳ ಕೋಪಕ್ಕೂ ಸಹ ಕಾರಣವಾಗಿದೆ. ಅಲ್ಲದೇ ಗಿಲ್ ಶತಕ ಬಾರಿಸಿದ್ದರಿಂದ ಮುಂಬೈ ಇಂಡಿಯನ್ಸ್ ಪ್ಲೇಆಫ್ ಪ್ರವೇಶ ಪಡೆದುಕೊಂಡಿದ್ದೂ ಸಹ ಕೆಲ ಆರ್‌ಸಿಬಿ ಅಭಿಮಾನಿಗಳಿಗೆ ಕೋಪ ತರಿಸಿದ್ದು ಸುಳ್ಳಲ್ಲ.
ಹೀಗೆ ಎರಡೆರಡು ನೋವುಗಳಿಂದ ಕಂಗೆಟ್ಟ ಕೆಲ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ತಾಳ್ಮೆ ಕಳೆದುಕೊಂಡು ಅನಗತ್ಯವಾದ ಕೆಲಸಕ್ಕೆ ಕೈಹಾಕಿದ್ದಾರೆ. ಶುಬ್‌ಮನ್ ಗಿಲ್ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ನಿಂದಿಸಿದ್ದಾರೆ. ಅಲ್ಲದೇ ಶುಬ್‌ಮನ್ ಗಿಲ್ ಸಾಮಾಜಿಕ ಜಾಲತಾಣದ ಖಾತೆಯ ಪೋಸ್ಟ್‌ಗಳಲ್ಲಿ ಕಾಮೆಂಟ್ ಮಾಡಿರುವ ಕೆಲ ಕಿಡಿಗೇಡಿಗಳು ಗಿಲ್‌ಗೆ ಜೀವ ಬೆದರಿಕೆ ಹಾಕಿದ್ದಾರೆ.
ಇಷ್ಟಕ್ಕೆ ಸುಮ್ಮನಾಗದೇ ಶುಬ್‌ಮನ್ ಗಿಲ್ ಸೋದರಿ ಶಾನಿಲ್ ಗಿಲ್ ಖಾತೆಯ ಪೋಸ್ಟ್‌ಗಳಿಗೂ ಸಹ ಕಾಮೆಂಟ್ ಹಾಕಿರುವ ಕೆಲ ಆರ್‌ಸಿಬಿ ಫ್ಯಾನ್ಸ್ ಅಶ್ಲೀಲ ಪದಗಳ ಮೂಲಕ ಗಿಲ್ ಸೋದರಿಯನ್ನು ನಿಂದಿಸಿದ್ದಾರೆ. ಸದ್ಯ ಕೆಲವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು ಎಸಗಿದ ಈ ಅನಗತ್ಯ ಕೃತ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕ್ರಿಕೆಟ್ ಪ್ರೇಮಿಗಳು ಈ ನಡೆಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಗಿಲ್ ತನ್ನ ತಂಡಕ್ಕೋಸ್ಕರ ಹೋರಾಡಿದ ಆಟಗಾರ. ನಿಮ್ಮ ನೆಚ್ಚಿನ ತಂಡ ಇದರಿಂದ ಸೋತ ಮಾತ್ರಕ್ಕೆ ಇಷ್ಟು ಕೀಳುಮಟ್ಟದಲ್ಲಿ ವರ್ತಿಸುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಪಾರ ಅಭಿಮಾನಿಗಳೂ ಸಹ ಇದರ ಕುರಿತು ಪ್ರತಿಕ್ರಿಯಿಸಿದ್ದು ಯಾರೋ ಕೆಲ ಅಭಿಮಾನಿಗಳು ಮಾಡಿದ ಕೆಟ್ಟ ಕೆಲಸಕ್ಕೆ ಇಡೀ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿ ಬಳಗದ ಹೆಸರು ಕೆಡುತ್ತಿದೆ. ನಿಜವಾದ ಆರ್‌ಸಿಬಿ ಫ್ಯಾನ್ಸ್ ಇಷ್ಟು ಕೀಳುಮಟ್ಟಕ್ಕೆ ಇಳಿಯುವುದಿಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ.