IPL 2023: ಕೊನೆಗೂ ಲಕ್ನೋ ಸೂಪರ್ ಜೈಂಟ್ಸ್ ತಂಡ ಸೇರಿದ ಸ್ಟಾರ್ ಬೌಲರ್ ಮೊಹ್ಸಿನ್ ಖಾನ್
2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 16ನೇ ಸೀಸನ್ ಆರಂಭವಾಗಿ ಎರಡು ವಾರಗಳು ಕಳೆದಿದ್ದು, ಸತತ ಐದು ಪಂದ್ಯಗಳನ್ನು ಸೋತಿರುವ ಡೆಲ್ಲಿ ಕ್ಯಾಪಿಟಲ್ಸ್ ಹೊರತುಪಡಿಸಿ ಉಳಿದೆಲ್ಲ ತಂಡಗಳು ಸಮಾನ ಹೋರಾಟ ನಡೆಸುತ್ತಿವೆ.
ಈ ಪಂದ್ಯಾವಳಿಗೂ ಮುನ್ನ ಕೆಲವು ತಂಡಗಳ ಆಟಗಾರರು ಗಾಯಕ್ಕೆ ತುತ್ತಾಗಿ ಆರಂಭಿಕ ಪಂದ್ಯಗಳನ್ನು ಕಳೆದುಕೊಂಡಿದ್ದರು. ಅದರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವೂ ಒಂದು. ಪ್ರಮುಖ ಆಟಗಾರರ ಗೈರಿನಲ್ಲಿ ಆರಂಭಿಕ ಪಂದ್ಯಗಳನ್ನು ಆಡಬೇಕಾಗಿ ಬಂದಿತು.

ಇದೀಗ ಐಪಿಎಲ್ 2023ರ ಉಳಿದ ಪಂದ್ಯಗಳಿಗೆ ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡದ ವೇಗಿ ಮೊಹ್ಸಿನ್ ಖಾನ್ ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ವಾಪಸ್ಸಾಗಿದ್ದಾರೆ. ಭುಜದ ಗಾಯದ ಕಾರಣ ಆರಂಭಿಕ ಪಂದ್ಯಗಳಿಂದ ಹೊರಬಿದ್ದಿದ್ದ ಮೊಹ್ಸಿನ್ ಖಾನ್ ಮತ್ತೆ ಮರಳಿರುವುದು ಎಲ್‌ಎಸ್‌ಜಿ ತಂಡಕ್ಕೆ ಬಲ ಬಂದಂತಾಗಿದೆ.
ಭುಜದಲ್ಲಿ ರಕ್ತ ಹೆಪ್ಪುಗಟ್ಟುವಿಕೆಯನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ವೇಗಿ ಮೊಹ್ಸಿನ್ ಖಾನ್, 2023ರ ಐಪಿಎಲ್‌ನ ಅಧಿಕ ಪಂದ್ಯಗಳನ್ನು ಕಳೆದುಕೊಳ್ಳುತ್ತಾರೆ ಎಂದು ಊಹಿಸಲಾಗಿತ್ತು. ಹೀಗಾಗಿ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಯು ಡಿಸೆಂಬರ್‌ನಲ್ಲಿ ನಡೆದ ಮಿನಿ ಹರಾಜಿನಲ್ಲಿ ಅನುಭವಿ ಎಡಗೈ ಬೌಲರ್ ಜಯದೇವ್ ಉನದ್ಕತ್ ಅವರನ್ನು ಬ್ಯಾಕ್-ಅಪ್ ಬದಲಿ ಬೌಲರ್ ಆಗಿ ಆಯ್ಕೆ ಮಾಡಿಕೊಂಡಿತ್ತು.
ಇದೀಗ ಮೊಹ್ಸಿನ್ ಖಾನ್ ಅವರನ್ನು ವೈದ್ಯಕೀಯ ಸಿಬ್ಬಂದಿಗಳು ಫಿಟ್ ಎಂದು ಪರಿಗಣಿಸಿದ್ದಾರೆ ಮತ್ತು ಉಳಿದ ಪಂದ್ಯಗಳಿಗಾಗಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಸೇರಲು ಸಿದ್ಧರಾಗಿದ್ದಾರೆ.

ಎಲ್‌ಎಸ್‌ಜಿ ತಂಡವು ಈಗಾಗಲೇ ಮಾರ್ಕ್ ವುಡ್, ಜಯದೇವ್ ಉನಾದ್ಕತ್, ಅವೇಶ್ ಖಾನ್, ನವೀನ್-ಉಲ್-ಹಕ್, ಯಶ್ ಠಾಕೂರ್ ಬೌಲಿಂಗ್ ಲೈನ್-ಅಪ್‌ನಲ್ಲಿ ಇರುವುದರಿಂದ ಮೊಹ್ಸಿನ್ ಖಾನ್ ಸೇರ್ಪಡೆ ಎಲ್‌ಎಸ್‌ಜಿ ತಂಡ ವೇಗದ ಬೌಲಿಂಗ್ ಬಲವನ್ನು ಮತ್ತಷ್ಟು ಹೆಚ್ಚಿಸಿದೆ.
ಲಕ್ನೋ ಸೂಪರ್ ಜೈಂಟ್ಸ್‌ನ ಮುಂದಿನ ಪಂದ್ಯಗಳಲ್ಲಿ ಮೊಹ್ಸಿನ್ ಖಾನ್
2018ರಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಯ್ಕೆಯಾದಾಗ ಬೆಂಚ್ ಕಾಯಿಸಿದ್ದ ಮೊಹ್ಸಿನ್ ಖಾನ್, ನಂತರ 2022ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ 20 ಲಕ್ಷ ರೂ.ಗಳಿಗೆ ಆಯ್ಕೆಯಾಗಿದ್ದರು. 2022ರ ಋತುವಿನಲ್ಲಿ ಹೊಸ ತಂಡವಾಗಿದ್ದ ಲಕ್ನೋ ಸೂಪರ್ ಜೈಂಟ್ಸ್ ಪರ ಪವರ್‌ಪ್ಲೇ ಮತ್ತು ಡೆತ್ ಓವರ್‌ಗಳಲ್ಲಿ ಬೌಲಿಂಗ್ ಮಾಡುವ ಜವಾಬ್ದಾರಿಯನ್ನು ಮೊಹ್ಸಿನ್ ಖಾನ್‌ಗೆ ವಹಿಸಲಾಗುತ್ತು.
ಕಳೆದ ಋತುವಿನಲ್ಲಿ ಮೊಹ್ಸಿನ್ ಖಾನ್ ಆಡಿದ ಒಂಬತ್ತು ಪಂದ್ಯಗಳಲ್ಲಿ 14 ವಿಕೆಟ್‌ಗಳನ್ನು ಪಡೆದರು. ಅದರಲ್ಲಿ 16 ರನ್‌ಗಳಿಗೆ 4 ವಿಕೆಟ್ ಅತ್ಯುತ್ತಮ ಬೌಲಿಂಗ್ ದಾಳಿಯಾಗಿತ್ತು.

ಐಪಿಎಲ್ 2023ರ ಉಳಿದ ಋತುವಿನಲ್ಲಿ ಮೊಹ್ಸಿನ್ ಖಾನ್ ಆಟಕ್ಕೆ ಮರಳಿದಾಗ, ಕಳೆದ ಆವೃತ್ತಿಯಲ್ಲಿನ ಪ್ರದರ್ಶನವನ್ನು ಮುಂದುವರೆಸಲು ಎದುರು ನೋಡುತ್ತಿದ್ದಾರೆ. ಇನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡ ಆಡಿದ 5 ಪಂದ್ಯಗಳಲ್ಲಿ 3 ಗೆಲುವು ಮತ್ತು 2 ಸೋಲಿನೊಂದಿಗೆ 6 ಅಂಕಗಳನ್ನು ಗಳಿಸಿ ಎರಡನೇ ಸ್ಥಾನದಲ್ಲಿದೆ.
ಕೆಎಲ್ ರಾಹುಲ್ ಪಡೆ ತನ್ನ ಮುಂದಿನ ಪಂದ್ಯವನ್ನು ಬುಧವಾರ, ಏಪ್ರಿಲ್ 19ರಂದು ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ ರಾಯಲ್ಸ್ ವಿರುದ್ಧ ಆಡಲಿದೆ. ಈ ಪಂದ್ಯದಲ್ಲಿ ಮೊಹ್ಸಿನ್ ಖಾನ್ ಆಡುವ 11ರ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications