ಪಂಜಾಬ್ ಕಿಂಗ್ಸ್ ತಂಡ ಈ ಬಾರಿಯ ಐಪಿಎಲ್‌ನ ಆರಂಭಿಕ ಎರಡು ಪಂದ್ಯಗಳಲ್ಲಿಯೂ ಗೆದ್ದು ಬೀಗಿದೆ. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ರೋಚಕ ಸೆಣೆಸಾಟ ನಡೆಸಿದ ಪಂಜಾಬ್ ಕಿಂಗ್ಸ್ ತಂಡ 5 ರನ್‌ಗಳ ಅಂತರದ ಗೆಲುವು ಸಾಧಿಸಿದೆ. ಈ ಗೆಲುವಿನಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶಿಖರ್ ಧವನ್ ಪ್ರಮುಖ ಪಾತ್ರವಹಿಸಿದ್ದಾರೆ. ಈ ಬಗ್ಗೆ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಕಾಮೆಂಟೇಟರ್ ಆಕಾಶ್ ಚೋಪ್ರ ಪ್ರತಿಕ್ರಿಯಿಸಿದ್ದು ಶಿಖರ್ ಧವನ್ ಬ್ಯಾಟಿಂಗ್ ಬಗ್ಗೆ ವಿಶೇಷ ಮಾತುಗಳನ್ನಾಡಿದ್ದಾರೆ.
ಈ ಪಂದ್ಯದ ಈ ಗೆಲುವಿನಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶಿಖರ್ ಧವನ್ ಪಾತ್ರವು ಮಹತ್ವದ್ದಾಗಿತ್ತು. ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ ಶಿಖರ್ ಧವನ್ ಆರಂಭಿಕನಾಗಿ ಕಣಕ್ಕಿಳಿದು 86 ರನ್‌ಗಳನ್ನು ಗಳಿಸಿದರು. 153.57ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ನಡೆಸಿದ ಶಿಖರ್ ಧವನ್ 9 ಬೌಂಡರಿ ಹಾಗೂ 3 ಸಿಕ್ಸರ್ ಸಿಡಿಸಿದ್ದರು. ಅಲ್ಲದೆ ಯುವ ಆಟಗಾರ ಪ್ರಬ್ಸಿಮ್ರಾನ್ ಸಿಂಗ್ ಜೊತೆಗೂಡಿ ಅದ್ಭುತವಾದ ಆರಂಭವನ್ನು ಕೂಡ ಧವನ್ ನೀಡಿದ್ದು ಮೊದಲ ವಿಕೆಟ್‌ಗೆ ಈ ಜೋಡಿ 90 ರನ್‌ಗಳ ಜೊತೆಯಾಟವನ್ನು ನೀಡಿತು. ಪ್ರಬ್ಸಿಮ್ರಾನ್ 34 ಎಸೆತಗಳನ್ನು ಎದುರಿಸಿ 60 ರನ್ ಬಾರಿಸಿ ಸ್ಪೋಟಕ ಆರಂಭವನ್ನು ಪಡೆಯಲು ಕಾರಣವಾದರು.

ಈ ಪ್ರದರ್ಶನದ ಬಗ್ಗೆ ಸುರೇಶ್ ರೈನಾ "ಶಿಖರ್ ಧವನ್ ಇಂದು ಆಂಕರ್ ಪಾತ್ರವನ್ನು ನಿಭಾಯಿಸಿದರು. ಆತನಿಂದ ಇವತ್ತು ಬಹಳ ಪರಿಣಾಮಕಾರಿಯಾದ ಇನ್ನಿಂಗ್ಸ್ ಬಂದಿದೆ. ಕಳೆದ 7 ಐಪಿಎಲ್ ಆವೃತ್ತಿಗಳಲ್ಲಿ ಆತ ಸತತವಾಗಿ 450ಕ್ಕೂ ಅಧಿಕ ರನ್‌ಗಳನ್ನು ಗಳಿಸಿಕೊಂಡಿ ಬಂದಿದ್ದಾರೆ" ಎಂದು ಶಿಖರ್ ಧವನ್ ಸ್ಥಿರ ಪ್ರದರ್ಶನದ ಬಗ್ಗೆ ಸುರೇಶ್ ರೈನಾ ವಿಶೇಷ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ.
"ಇಬ್ಬನಿ ಬಿದ್ದ ಬಳಿಕ ವೇಗದ ಎಸೆತಗಳನ್ನು ಎದುರಿಸುವುದು ಸುಲಭ ಎಂಬುದು ಆತನಿಗೆ ಅರಿವಿದೆ. ಆತನಿಂದ ಬಹಳ ಜವಾಬ್ಧಾರಿಯುತ ಪ್ರದರ್ಶನ ಬಂದಿದೆ. ಆ ಕಾರಣದಿಂದಾಗಿಯೇ ಪಂಜಾಬ್ ತಂಡ ಈ ಪಂದ್ಯದಲ್ಲಿ ಅದ್ಭುತ ಪ್ರದರ್ಶನದ ಮೂಲಕ ಮೇಲುಗೈ ಸಾಧಿಸಿದೆ. ಈ ಪಂದ್ಯದಲ್ಲಿ ಶಿಖರ್ ಧವನ್ ಪಾತ್ರ ಬಹಳ ಮಹತ್ವದ್ದಾಗಿತ್ತು" ಎಂದಿದ್ದಾರೆ ಸುರೇಶ್ ರೈನಾ.
ಇನ್ನು ಪಂದ್ಯದ ಮುಕ್ತಾಯದ ಬಳಿಕ ನಾಯಕ ಶಿಖರ್ ಧವನ್ ಪ್ರತಿಕ್ರಿಯಿಸಿ ಸಂತಸವನ್ನು ಹಂಚಿಕೊಂಡಿದ್ದಾರೆ. "ಈ ಎರಡು ಪಂದ್ಯಗಳಲ್ಲಿ ನಾವು ಗೆಲುವು ಸಾಧಿಸಿ ಅದ್ಭುತವಾದ ಆರಂಭವನ್ನು ಪಡೆದುಕೊಂಡಿದ್ದೇವೆ. ನಾನು ಕೂಡ ನನ್ನ ಸ್ಟ್ರೈಕ್‌ರೇಟನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನ ನಡೆಸುತ್ತೇನೆ. ಈ ಬಾರಿ ನಾವು ಬ್ಯಾಟಿಂಗ್ ಲೈನಪ್‌ನಲ್ಲಿ ಹೆಚ್ಚಿನ ಆಳವನ್ನು ಹೊಂದಿದ್ದೇವೆ ಹಾಗಾಗಿ ಹೆಚ್ಚಿನ ಬೌಂಡರಿಗಳನ್ನು ಬಾರಿಸಿ ಎದುರಾಳಿಗಳ ಮೇಲೆ ಒತ್ತಡವನ್ನು ಹೇರಬಹುದಾಗಿದೆ" ಎಂದಿದ್ದಾರೆ ಪಂಜಾಬ್ ಕಿಂಗ್ಸ್ ನಾಯಕ ಶಿಖರ್ ಧವನ್.
ಇನ್ನು ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 197 ರನ್‌ಗಳನ್ನು ಗಳಿಸಲು ಯಶಸ್ವಿಯಾಯಿತು. ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ನಡೆಸಿದ ರಾಜಸ್ಥಾನ್ ರಾಯಲ್ಸ್ ತಂಡ ಆರಂಭದಲ್ಲಿಯೇ ಹಿನ್ನಡೆ ಅನುಭವಿಸಿತು. ಉತ್ತಮ ಆರಂಭ ಪಡೆಯುವಲ್ಲಿ ಆರ್ಆರ್ ತಂಡ ವಿಫಲವಾಯಿತು. ಇನ್ನು ಆರ್ ಅಶ್ವಿನ್ ಅವರನ್ನು ಆರಂಭಿಕನಾಗಿ ಕಣಕ್ಕಿಳಿಸುವ ಲೆಕ್ಕಾಚಾರ ಕೂಡ ಯಶಸ್ಸು ಕಾಣಲಿಲ್ಲ.
ನಾಯಕ ಸಂಜು ಸ್ಯಾಮ್ಸನ್, ಶಿಮ್ರಾನ್ ಹೇಟ್ಮೇಯರ್ ಧ್ರುವ್ ಜೋರೆಲ್ ಸಾಕಷ್ಟು ಹೋರಾಟ ನಡೆಸಿದರಾದರೂ ಗೆಲುವಿನ ದಡ ಸೇರಿಸಲು ಅದು ಸಾಧ್ಯವಾಗಲಿಲ್ಲ. ಹೀಗಾಗಿ 5 ರನ್‌ಗಳ ಅಂತರದಿಂದ ಸೋಲು ಅನುಭವಿಸಬೇಕಾಯಿತು. ಈ ಮೂಲಕ ಆರ್‌ಆರ್ ಈ ಆವೃತ್ತಿಯಲ್ಲಿ ಮೊದಲ ಸೋಲು ಕಂಡರೆ ಪಂಜಾಬ್ ಕಿಂಗ್ಸ್ ಸತತ ಎರಡನೇ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಮೇಲುಗೈ ಸಾಧಿಸಿದೆ.