ಸೂರ್ಯಕುಮಾರ್ ಕೇವಲ ಕ್ರಿಕೆಟ್ ಮಾತ್ರವಲ್ಲ, ಆತ ಗಣಿತಶಾಸ್ತ್ರಜ್ಞ ಎಂದ ಶ್ರೀಶಾಂತ್: ಕಾರಣ ಇಲ್ಲಿದೆ!
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಬುಧವಾರ ಮತ್ತೊಂದು ಅದ್ಭುತ ಪಂದ್ಯಕ್ಕೆ ಅಭಿಮಾನಿಗಳು ಸಾಕ್ಷಿಯಾಗಿದ್ದಾರೆ. ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳ ನಡುವಿನ ಈ ಪಂದ್ಯ ಹೈಸ್ಕೋರಿಂಗ್ ಪಂದ್ಯವಾಗಿದ್ದು ಸಾಕಷ್ಟು ರೋಮಾಂಚನ ಕ್ಷಣಗಳಿಗೆ ಸಾಕ್ಷಿಯಾಯಿತು. ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ 214 ರನ್ ಗಳಿಸಿ ಬೃಹತ್ ಗುರಿ ಮುಂದಿಟ್ಟಿದ್ದರೂ ಮುಂಬೈ ಇಂಡಿಯನ್ಸ್ ಈ ಪಂದ್ಯವನ್ನು ಇನ್ನೂ ಇನ್ನೂ 7 ಎಸೆತಗಳು ಬಾಕಿಯಿರುವಂತೆಯೇ ಗೆದ್ದುಕೊಂಡಿತು.
ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ನೀಡಿದ ಬೃಹತ್ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಅಮೋಘ ಪ್ರದರ್ಶನ ನೀಡಿದ್ದು ಇಶಾನ್ ಕಿಶನ್ ಹಾಗೂ ಸೂರ್ಯಕುಮಾರ್ ಯಾದವ್. ಈ ಆಟಗಾರರ ಅದ್ಭುತ ಜೊತೆಯಾಟದಿಂದಾಗಿ ತಂಡ ಅಮೋಘ ಗೆಲುವು ಸಾಧಿಸಿದೆ. ಈ ಪೈಕಿ ಸೂರ್ಯಕುಮಾರ್ ಯಾದವ್ ಅವರ ಸಮಯೋಚಿತ ಪ್ರದರ್ಶನದ ಬಗ್ಗೆ ಸಾಕಷ್ಟು ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ. ಮಾಜಿ ಕ್ರಿಕೆಟಿಗ ಎಸ್ ಶ್ರೀಶಾಂತ್ ಸೂರ್ಯಕುಮಾರ್ ಯಾದವ್ ಇನ್ನಿಂಗ್ಸ್ ಉಲ್ಲೇಖಿಸಿ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದು ಅವರನ್ನು ಗಣಿತಶಾಸ್ತ್ರಜ್ಞ ಎಂದು ಕೊಂಡಾಡಿದ್ದಾರೆ!

215 ರನ್‌ಗಳ ಗುರಿಯನ್ನು ಬೆನ್ನಟ್ಟುವ ಸಂದರ್ಭದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಇಶಾನ್ ಕಿಶನ್ ಹಾಗೂ ಸೂರ್ಯಕುಮಾರ್ ಯಾದವ್ 116 ರನ್‌ಗಳ ಮಹತ್ವದ ಜೊತೆಯಾಟವನ್ನು ನೀಡಿದ್ದಾರೆ. ಈ ಆವೃತ್ತಿಯಲ್ಲಿ ಆರಂಭಿಕ ಕೆಲ ಪಂದ್ಯಗಳಲ್ಲಿ ಮಂಕಾಗಿದ್ದ ಸೂರ್ಯಕುಮಾರ್ ಯಾದವ್ ಮತ್ತೊಮ್ಮೆ ಮಿಂಚಿದ್ದು ಕೇವಲ 31 ಎಸೆತಗಳಲ್ಲಿ 66 ರನ್ ಬಾರಿಸಿದ್ದಾರೆ. ಅವರ ಈ ಇನ್ನಿಂಗ್ಸ್‌ನಲ್ಲಿ 8 ಬೌಂಡರಿಗಳು ಹಾಗೂ 2 ಸಿಕ್ಸರ್‌ಗಳು ಒಳಗೊಂಡಿತ್ತು.
ಈ ಪಂದ್ಯದ ಬಳಿಕ ಮಾತನಾಡಿದ ಶ್ರೀಶಾಂತ್ "ಆಕಾಶಕ್ಕೆ ಮಿತಿಗಳಿಲ್ಲ" ಎಂದು ಸೂರ್ಯಕುಮಾರ್ ಅವರನ್ನು ಉದ್ದೇಶಿಸಿ ಪ್ರತಿಕ್ರಿಯಿಸಿದರು. ಮುಂದಿವರಿದು ಅವರು "ಸೂರ್ಯಕುಮಾರ್ ಕೇವಲ ಬ್ಯಾಟರ್ ಅಲ್ಲ, ಆತನೋರ್ವ ಗಣಿತಶಾಸ್ತ್ರಜ್ಞ. ಆತ ಪಂದ್ಯವನ್ನು ಮುಂದಕ್ಕೆ ತೆಗೆದುಕೊಂಡು ಹೋಗುವ ರೀತಿ ಅದ್ಭುತ. ಒಬ್ಬ ಗಣಿತಜ್ಞ ದಿಕ್ಸೂಚಿ ಮತ್ತು ಕೋನಮಾಪಕವನ್ನು ಬಳಸಿಕೊಂಡು ಕಾಗದವನ್ನು ವಿಭಾಗಿಸುವಂತೆ ಸೂರ್ಯ ಫೀಲ್ಡನ್ನು ವಿಭಜಿಸುತ್ತಾರೆ" ಎಂದಿದ್ದಾರೆ ಎಸ್ ಶ್ರೀಶಾಂತ್.
"ಮೈದಾನದ ಆಕಾರ, ಬೌಲರ್‌ನ ಎಸೆತದ ವೇಗ ಎಲ್ಲವನ್ನು ನೋಡಿಕೊಂಡು ಆತ ಲೆಕ್ಕಾಚಾರಗಳನ್ನು ತನ್ನ ತೀಕ್ಷ್ಣ ಮನಸ್ಸಿನೊಳಗೆ ಅದ್ಭುತವಾಗಿ ಮಾಡಿಕೊಳ್ಳುತ್ತಾರೆ. ಆತನಿಗೆ ಎಲ್ಲಿ ಫೀಲ್ಡರ್ ಇದ್ದಾರೆ, ಎಲ್ಲಿ ಗ್ಯಾಪ್ ಇದೆ ಎಂಬುದರ ಸ್ಪಷ್ಟವಾದ ಅರಿವಿರುತ್ತದೆ. ಹಾಗಾಗಿಯೇ ಆತ ವಿಶೇಷ ಆಟಗಾರ. ಆಕಾಶಕ್ಕೂ ಮಿತಿಯಿದೆ ಎಂಬ ಮಾತಿದೆ. ಆದರೆ ಇಲ್ಲಿ SKYಗೆ ಮಿತಿಯಿಲ್ಲ" ಎಂದು ಬಣ್ಣಿಸಿದ್ದಾರೆ ಶ್ರೀಶಾಂತ್.
ಇಶಾನ್ ಕಿಶನ್ ಹಾಗೂ ಸೂರ್ಯಕುಮಾರ್ ಯಾದವ್ ವಿಕೆಟ್ ಕಳೆದುಕೊಂಡ ಬಳಿಕ ಟಿಮ್ ಡೇವಿಡ್ ಹಾಗೂ ತಿಲಕ್ ವರ್ಮಾ ಮುಂಬೈ ತಂಡದ ಗೆಲುವಿನ ಜವಾಭ್ಧಾರಿ ವಹಿಸಿಕೊಂಡರು. ಮುಂಬೈ ಇಂಡಿಯನ್ಸ್ ತಂಡಕ್ಕೆ ಹಿನ್ನಡೆಯಾಗದಂತೆ ನೋಡಿಕೊಂಡ ಈ ಆಟಗಾರರು 18.5 ಓವರ್‌ಗಳಲ್ಲಿ ಮುಂಬೈ ಇಂಡಿಯನ್ಸ್‌ಗೆ ಗೆಲುವು ಸಾರಿದರು. ಈ ಮೂಲಕ ಮುಂಬೈ ಇಂಡಿಯನ್ಸ್ ಐದು ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ 10 ಅಂಕಗಳನ್ನು ಹೊಂದಿದ್ದು 6ನೇ ಸ್ಥಾನಕ್ಕೆ ಜಿಗಿದಿದೆ.
ಇನ್ನು ಈ ಸಂದರ್ಭದಲ್ಲಿ ಮುಂಬೈ ಇಂಡಿಯನ್ಸ್ ತಂಡ ಗೆಲುವಿನ ಲಯಕ್ಕೆ ಮರಳಿರುವುದು ಇತರ ತಂಡಗಳಿಗೆ ಅಪಾಯಕಾರಿ ಎಂದಿದ್ದಾರೆ ಶ್ರೀಶಾಂತ್. "ಮುಂಬೈ ಇಂಡಿಯನ್ಸ್ ತಂಡ ಗೆಲುವಿನ ರುಚಿ ಕಂಡಿರುವುದರಿಂದ ಅದನ್ನು ಇನ್ನು ತಡೆಯುವುದು ಕಷ್ಟ. ಯಶಸ್ಸಿನ ಸುದೀರ್ಘ ಇತಿಹಾಸ ಅವರಲ್ಲಿದೆ. ಈ ಹಿಂದೆಯೂ ಅದನ್ನು ಅವರು ಸಾಧಿಸಿದ್ದು ಮತ್ತೊಮ್ಮೆ ಇತಿಹಾಸವನ್ನು ಮರುಕಳಿಸುವ ವಿಶ್ವಾಸದಲ್ಲಿದ್ದಾರೆ" ಎಂದಿದ್ದಾರೆ ಶ್ರೀಶಾಂತ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications