IPL 2023: ಈ ಮೂವರು ನಾಯಕರ ಮೇಲಿದೆ ಅತಿಯಾದ ಒತ್ತಡ!

ಇಂಡಿಯನ್ ಪ್ರೀಮಿಯರ್ ಲೀಗ್‌ನ 16ನೇ ಆವೃತ್ತಿಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಮೂಲಕ ವಿಶ್ವದ ಕ್ರಿಕೆಟ್ ಅಭಿಮಾನಿಗಳು ಎರಡು ತಿಂಗಳ ಮಹಾ ಕ್ರಿಕೆಟ್ ಹಬ್ಬಕ್ಕೆ ಸಿದ್ಧವಾಗುತ್ತಿದ್ದಾರೆ. ಈ ಬಾರಿಯ ಟೂರ್ನಿಯಲ್ಲಿ 10 ತಂಡಗಳು ಚಾಂಪಿಯನ್ ಪಟ್ಟಕ್ಕಾಗಿ ಹೋರಾಟ ನಡೆಸಲಿದ್ದು ಎಲ್ಲಾ ತಂಡಗಳ ಆಟಗಾರರು ಹಾಗೂ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.
ಕಳೆದ ಬಾರಿಯ ಆವೃತ್ತಿಯ ಮೂಲಕ ಐಪಿಎಲ್‌ಗೆ ಪದಾರ್ಪಣೆ ಮಾಡಿದ ಗುಜರಾತ್ ಟೈಟನ್ಸ್ ತಂಡ ಚೊಚ್ಚಲ ಆವೃತ್ತಿಯಲ್ಲಿಯೇ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದ್ದು ಹಾಲಿ ಚಾಂಪಿಯನ್ ಆಗಿ ಈ ಬಾರಿಯ ಆವೃತ್ತಿಯಲ್ಲಿ ಕಣಕ್ಕಿಳಿಯಲಿದೆ. ಇನ್ನು ಕಳೆದ ಡಿಸೆಂಬರ್‌ನಲ್ಲಿ ನಡೆದ ಮಿನಿ ಹರಾಜಿನಲ್ಲಿ ತಂಡಗಳು ಕೆಲ ಬದಲಾವಣೆ ಮಾಡಿಕೊಂಡಿದ್ದು ಮತ್ತೊಮ್ಮೆ ಜಿದ್ದಾಜಿದ್ದಿನ ಸ್ಪರ್ಧೆಗೆ ಸಜ್ಜಾಗಿದೆ.
ಆದರೆ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಈ ಮೂರು ಐಪಿಎಲ್ ತಂಡಗಳ ನಾಯಕರು ಒತ್ತಡದಲ್ಲಿದ್ದಾರೆ. ಒತ್ತಡದಲ್ಲಿಯೇ ಈ ಬಾರಿಯ ಐಪಿಎಲ್ ತಂಡಗಳನ್ನು ಮುನ್ನಡೆಸಲಿದ್ದಾರೆ. ಆ ಮೂವರು ನಾಯಕರು ಯಾರು? ಅವರ ಮೇಲಿರುವ ಒತ್ತಡಗಳೇನು? ಮುಂದೆ ಓದಿ..
ಪಂಜಾಬ್ ಕಿಂಗ್ಸ್ ನಾಯಕ ಶಿಖರ್ ಧವನ್
ಪಂಜಾಬ್ ಕಿಂಗ್ಸ್ ತಂಡ ಇತ್ತೀಚಿನ ಆವೃತ್ತಿಗಳಲ್ಲಿ ಅತ್ಯಂತ ಕಳಪೆ ಸಾಧನೆ ಮಾಡಿಕೊಂಡುಬಂದಿದ್ದು ಪ್ಲೇಆಪ್‌ಗೆ ಪ್ರವೇಶಿಸುವುದು ಕೂಡ ಅಸಾಧ್ಯವಾಗುತ್ತಿದೆ. ಕಳೆದ ಆವೃತ್ತಿಯಲ್ಲಿ ನಾಯಕನಾಗಿದ್ದ ಮಯಾಂಕ್ ಅಗರ್ವಾಲ್ ಅವರನ್ನು ಪಂಜಾಬ್ ಕಿಂಗ್ಸ್ ತಂಡ ಹರಾಜಿಗೆ ಬಿಡುಗಡೆಗೊಳಿಸಿದ ಬಳಿಕ ನಾಯಕನ ಜವಾಬ್ಧಾರಿಯನ್ನು ಶಿಖರ್ ಧವನ್‌ಗೆ ನೀಡಲಾಗಿದೆ. ಆದರೆ ಶಿಖರ್ ಧವನ್ ಈ ಬಾರಿ ತಂಡದಲ್ಲಿ ಅನುಬವಿ ಮಯಾಂಕ್ ಅವರ ಸೇವೆಯನ್ನು ಮಾತ್ರವೇ ಕಳೆದುಕೊಳ್ಳುವುದಲ್ಲದೆ ಜಾನಿ ಬೈರ್‌ಸ್ಟೋವ್ ಕೂಡ ಗಾಯದ ಕಾರಣದಿಂದಾಗೊ ಈ ಬಾರಿಯ ಆವೃತ್ತಿಗೆ ಅಲಭ್ಯವಾಗಲಿದ್ದಾರೆ. ಈ ಮಧ್ಯೆ ಅನುಭವಿ ಆಟಗಾರ ಶಿಖರ್ ಧವನ್ ಭಾರತ ತಂಡದಿಂದಲೂ ಹೊರಬಿದ್ದಿದ್ದು ಈ ಎಲ್ಲಾ ಒತ್ತಡಗಳನ್ನು ಧವನ್ ಹೇಗೆ ನಿಭಾಯಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ
ಇತ್ತೀಚಿನ ವರ್ಷಗಳಲ್ಲಿ ರೋಹಿತ್ ಶರ್ಮಾ ಅವರ ಐಪಿಎಲ್ ವೃತ್ತಿ ಜೀವನ ಹೇಳಿಕೊಳ್ಳುವಷ್ಟು ಉತ್ತಮವಾಗಿಲ್ಲ. ನಾಯಕನಾಗಿ ಮುಂಬೈ ಇಂಡಿಯನ್ಸ್ ತಂಡಕ್ಕೆ ರೋಹಿತ್ ಶರ್ಮಾ 5 ಬಾರಿ ಟ್ರೋಫಿ ಗೆಲ್ಲಿಸಿಕೊಟ್ಟು ದಾಖಲೆ ಬರೆದಿದ್ದಾರೆಯಾದರೂ ಕಳೆದ ಆರು ಐಪಿಎಲ್ ಆವೃತ್ತಿಗಳಲ್ಲಿ ರೋಹಿತ್ ಶರ್ಮಾ 400ಕ್ಕೂ ಅಧಿಕ ರನ್‌ಗಳಿಸಿದ್ದು ಕೇವಲ ಒಂದು ಆವೃತ್ತಿಯಲ್ಲಿ ಮಾತ್ರ. 130ಕ್ಕಿಮತ ಹೆಚ್ಚು ಸ್ಟ್ರೈಕ್‌ರೇಟ್ ಕೂಡ ಹೊಂದಿರುವುದು ಕೇವಲ ಒಂದು ಬಾರಿ ಮಾತ್ರ!
ಇನ್ನು ಕಳೆದ ಐಪಿಎಲ್ ಆವೃತ್ತಿಯಲ್ಲಿ ನಾಯಕನಾಗಿ ರೋಹಿತ್ ಶರ್ಮಾ ಅತ್ಯಂತ ಕಳಪೆ ಆವೃತ್ತಿಯನ್ನು ಹೊಂದಿದ್ದರು. ಸೋಲಿನ ಮೇಲೆ ಸೋಲು ಕಂಡ ಮುಂಬೈ ಇಂಡಿಯನ್ಸ್ ಕಳೆದ ವರ್ಷದ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಪಡೆದುಕೊಂಡಿತ್ತು. ಇನ್ನು ವೈಯಕ್ತೊಕವಾಗಿಯೂ ರೋಹಿತ್ ಶರ್ಮಾ 19.14ರ ಸರಾಸರಿಯಲ್ಲಿ 120.18ರ ಸ್ಟ್ರೈಕ್‌ರೇಟ್‌ನೊಂದಿಗೆ 268 ರನ್ ಮಾತ್ರವೇ ಗಳಿಸಿದ್ದರು. ಇನ್ನು ಈ ಬಾರಿಯ ಆವೃತ್ತಿಯಲ್ಲಿ ರೋಹಿತ್ ಮುಂದೆ ಕಠಿಣ ಸವಾಲಿದ್ದು ಜಸ್ಪ್ರೀತ್ ಬೂಮ್ರಾ ಅವರಂತಾ ಪ್ರಮುಖ ಆಟಗಾರನ ಸೇವೆಯಿಂದ ವಂಚಿತವಾಗಲಿದ್ದಾರೆ. ಹೀಗಾಗಿ ಈ ಎಲ್ಲಾ ಒತ್ತಡಗಳು ಕೂಡ ರೋಹಿತ್ ಶರ್ಮಾ ಅವರನ್ನು ಈ ಬಾರಿಯ ಟೂರ್ನಿಯಲ್ಲಿ ಕಾಡಲಿದೆ.
ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್
ಕನ್ನಡಿಗ ಕೆಎಲ್ ರಾಹುಲ್ ಐಪಿಎಲ್‌ನಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ನೀಡಿಕೊಂಡು ಬರುತ್ತಿರುವ ಆಟಗಾರ. ಕಳೆದ ಐದು ಐಪಿಎಲ್ ಆವೃತ್ತಿಗಳಲ್ಲಿಯೂ ಕೆಎಲ್ ರಾಹುಲ್ ಸತತವಾಗಿ 590ಕ್ಕಿಂತ ಅಧಿಕ ರನ್‌ಗಳನ್ನು ಬಾರಿಸಿಕೊಂಡು ಬಂದಿರುವುದು ಅವರ ಸ್ಥಿರ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ. ಆದರೆ ಅವರ ಸ್ಟ್ರೈಕ್‌ರೇಟ್ ಬಗ್ಗೆ ಯಾವಾಗಲೂ ಚರ್ಚೆಗಳು ಕೇಳಿಬರುತ್ತಲೇ ಇದೆ.
ಇನ್ನು ಇತ್ತೀಚೆಗಿನ ದಿನಗಳಲ್ಲಿ ಕೆಎಲ್ ರಾಹುಲ್ ಭಾರತ ತಂಡದಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡುವ ಮೂಲಕ ಟೀಕೆಗೆ ಗುರಿಯಾಗಿದ್ದು ಚುಟುಕು ಮಾದರಿಯಲ್ಲಿ ತಂಡದಿಂದ ಹೊರಬಿದ್ದಿದ್ದಾರೆ. ಸದ್ಯ ಏಕದಿನ ಮಾದರಿಯಲ್ಲಿ ಮಾತ್ರವೇ ರಾಹುಲ್ ಸ್ಥಾನ ಭದ್ರವಾಗಿದ್ದು ಸಾಕಷ್ಟು ಪ್ರಶ್ನೆಗಳು ಎದ್ದಿವೆ. ಹೀಗಾಗಿ ಈ ಬಾರಿಯ ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕನಾಗಿ ಹೇಗೆ ಪ್ರದರ್ಶನ ನೀಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications