IPL 2023: ಸೂರ್ಯ ಅಲ್ಲ, ಕಿಶನ್ ಅಲ್ಲ; ಈತ ಮುಂಬೈ ಇಂಡಿಯನ್ಸ್ ಭವಿಷ್ಯದ ನಾಯಕ; ಪಾರ್ಥಿವ್ ಪಟೇಲ್

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಪಂದ್ಯಾವಳಿಯಾಗಿ ಹೊರಹೊಮ್ಮಿದೆ. ಭಾರತದ ಈ ಟಿ20 ಲೀಗ್ ಕ್ರಿಕೆಟ್‌ನ ಎಲ್ಲಾ ಕ್ಷೇತ್ರಗಳಲ್ಲಿ ಅತ್ಯುತ್ತಮ ಪ್ರತಿಭೆಗಳನ್ನು ತಯಾರಿಸಲು ಹೆಸರುವಾಸಿಯಾಗಿದೆ.
ಕಳೆದ ಹಲವು ವರ್ಷಗಳಲ್ಲಿ ಐಪಿಎಲ್ ಪಂದ್ಯಾವಳಿಯು ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ, ಶುಭ್ಮನ್ ಗಿಲ್, ಸೂರ್ಯಕುಮಾರ್ ಯಾದವ್, ಅರ್ಶದೀಪ್ ಸಿಂಗ್ ಸೇರಿದಂತೆ ಇನ್ನೂ ಅನೇಕ ಆಟಗಾರರನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನೀಡಿದೆ. ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್‌ನ 16ನೇ ಆವೃತ್ತಿಗೆ ದಿನಗಣನೆ ಆರಂಭವಾಗಿದ್ದು, ಅಭಿಮಾನಿಗಳಲ್ಲಿ ಉತ್ಸಾಹವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಇತ್ತೀಚೆಗೆ ಜಿಯೋ ಸಿನಿಮಾ ಆಯೋಜಿಸಿದ್ದ ಪ್ಯಾನೆಲ್ ಡಿಸ್ಕಶನ್‌ನಲ್ಲಿ ಕ್ರಿಸ್ ಗೇಲ್, ಅನಿಲ್ ಕುಂಬ್ಳೆ, ಪಾರ್ಥಿವ್ ಪಟೇಲ್, ರಾಬಿನ್ ಉತ್ತಪ್ಪ, ಸ್ಕಾಟ್ ಸ್ಟೈರಿಸ್ ಮತ್ತು ಆಕಾಶ್ ಚೋಪ್ರಾ ಭಾಗವಹಿಸಿದ್ದರು. ಈ ವೇಳೆ ಎಲ್ಲಾ ಮಾಜಿ ಆಟಗಾರರು ಐಪಿಎಲ್ 2023ರ ಉದಯೋನ್ಮುಖ ತಾರೆ ಯಾರಾಗಬಹುದು ಎಂಬುದರ ಕುರಿತು ತಮ್ಮ ತಮ್ಮ ಅಭಿಪ್ರಾಯ ಹೊರಹಾಕಿದರು.
ಮಾಜಿ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರ ಅಭಿಪ್ರಾಯದೊಂದಿಗೆ ಚರ್ಚೆ ಪ್ರಾರಂಭವಾಯಿತು. "ಅರ್ಶ್‌ದೀಪ್ ಸಿಂಗ್ ಅವರಂತಹ ಯುವ ವೇಗಿಯೊಂದಿಗೆ ಕೆಲಸ ಮಾಡಿರುವುದರಿಂದ, ಆತ ಭಾರತ ತಂಡಕ್ಕಾಗಿ ಅದ್ಭುತವಾಗಿ ಆಡುತ್ತಿದ್ದಾನೆ. ಹೀಗಾಗಿ ಅರ್ಶ್‌ದೀಪ್ ಸಿಂಗ್ ಅವರನ್ನು ಮುಂದಿನ ಸೂಪರ್‌ಸ್ಟಾರ್ ಬೌಲರ್ ಆಗಿ ನೋಡಲು ನಾನು ಇಷ್ಟಪಡುತ್ತೇನೆ," ಎಂದರು.
"ಇನ್ನು ಬ್ಯಾಟಿಂಗ್ ದೃಷ್ಟಿಕೋನದಲ್ಲಿ ಇಶಾನ್ ಕಿಶನ್ ಅವರಿಗೆ ಸಿಕ್ಕಿರುವ ಅವಕಾಶಗಳಲ್ಲಿ ಅತ್ಯುತ್ತಮವಾಗಿ ಆಡಿದ್ದಾರೆ. ಆದ್ದರಿಂದ ಇಶಾನ್ ಕಿಶನ್ ಭವಿಷ್ಯದ ಸೂಪರ್ ಸ್ಟಾರ್ ಆಗಬಹುದು ಎಂದು ನಾನು ಭಾವಿಸುತ್ತೇನೆ," ಎಂದು ಅನಿಲ್ ಕುಂಬ್ಳೆ ತಿಳಿಸಿದರು.

2022ರ ಟಿ20 ವಿಶ್ವಕಪ್‌ನಲ್ಲಿ ಆರ್ಶ್‌ದೀಪ್ ಸಿಂಗ್ ಭಾರತ ತಂಡದ ಬೌಲಿಂಗ್ ಆಸ್ತಿ ಎಂದು ಸಾಬೀತುಪಡಿದ್ದಾರೆ. ಏಕೆಂದರೆ ಅವರು ಆಡಿದ ಆರು ಪಂದ್ಯಗಳಲ್ಲಿ 10 ವಿಕೆಟ್‌ಗಳನ್ನು ಕಿತ್ತರು. ಈ ಮೂಲಕ ಭಾರತದ ಪರ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಬೌಲರ್ ಆದರು.
ಜಿಯೋ ಸಿನಿಮಾದಲ್ಲಿನ ಚರ್ಚೆ ಮುಂದುವರೆದಂತೆ, ಭಾರತದ ಮಾಜಿ ವಿಕೆಟ್‌ಕೀಪರ್ ಹಾಗೂ ಬ್ಯಾಟ್ಸ್‌ಮನ್ ಪಾರ್ಥಿವ್ ಪಟೇಲ್ ಮಾತನಾಡಿ, ಯುವ ವೇಗಿ ಉಮ್ರಾನ್ ಮಲಿಕ್ ಮತ್ತು ಮುಂಬೈ ಇಂಡಿಯನ್ಸ್ ಆಲ್‌ರೌಂಡರ್ ತಿಲಕ್ ವರ್ಮಾ ಅವರನ್ನು ಸ್ಟಾರ್ ಆಟಗಾರರನ್ನಾಗಿ ಆಯ್ಕೆ ಮಾಡಿದರು.
"ಉಮ್ರಾನ್ ಮಲಿಕ್ ತಮ್ಮ ವೇಗದ ಬೌಲಿಂಗ್ ಮೂಲಕ ಈಗಾಗಲೇ ಭಾರತ ತಂಡದಲ್ಲಿ ಛಾಪು ಮೂಡಿಸಿದ್ದಾರೆ. ಹೀಗಾಗಿ ಆತ ಭವಿಷ್ಯದ ಸೂಪರ್‌ಸ್ಟಾರ್ ಆಗಬಹುದು ಎಂದು ನಾನು ಭಾವಿಸುತ್ತೇನೆ. ಇನ್ನು ಒಂದೆರಡು ವರ್ಷಗಳಲ್ಲಿ ಬುದ್ಧಿವಂತ ಬ್ಯಾಟ್ಸ್‌ಮನ್ ತಿಲಕ್ ವರ್ಮಾ ಅವರನ್ನು ನೋಡಿದ್ದೇನೆ," ಎಂದು ಪಾರ್ಥಿವ್ ಪಟೇಲ್ ಹೇಳಿದರು.
"ನನಗೆ ತಿಲಕ್ ವರ್ಮಾನೊಂದಿಗೆ ಆಡಲು ಮತ್ತು ಗೈಡ್ ಮಾಡಲು ಅವಕಾಶ ಸಿಕ್ಕಿತು. ತಿಲಕ್ ವರ್ಮಾ ಒಂದು ರೀತಿಯ ಕ್ರಿಕೆಟಿಗರಾಗಿದ್ದಾನೆ. ಆತನಿಗೆ ಭವಿಷ್ಯದಲ್ಲಿ ತಂಡವನ್ನು ಮುನ್ನಡೆಸುವ ಸಾಮರ್ಥ್ಯವನ್ನು ಹೊಂದಿದ್ದಾನೆ. ಆದ್ದರಿಂದ, ತಿಲಕ್ ವರ್ಮಾ ಭವಿಷ್ಯದ ನಾಯಕರಾಗಬಹುದು ಎಂದು ನಾನು ಭಾವಿಸುತ್ತೇನೆ," ಎಂದು ಪಾರ್ಥಿವ್ ಪಟೇಲ್ ಅಭಿಪ್ರಾಯಪಟ್ಟರು.
2023ರ ಐಪಿಎಲ್ ಕುರಿತು ಹೇಳುವುದಾದರೆ, ಶ್ರೀಮಂತ ಲೀಗ್‌ನ 16ನೇ ಆವೃತ್ತಿಯು ಇದೇ ಮಾರ್ಚ್ 31ರಿಂದ ಅಹಮದಾಬಾದ್‌ನಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಮತ್ತು ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಮೊದಲ ಪಂದ್ಯದೊಂದಿಗೆ ಪ್ರಾರಂಭವಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications