
ಪ್ರಸ್ತುತ ನಡೆಯುತ್ತಿರುವ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ 35ನೇ ಪಂದ್ಯದಲ್ಲಿ ಇಂದು ( ಏಪ್ರಿಲ್ 25 ) ಮುಂಬೈ ಇಂಡಿಯನ್ಸ್ ಹಾಗೂ ಹಾಲಿ ಚಾಂಪಿಯನ್ಸ್ ಗುಜರಾತ್ ಟೈಟನ್ಸ್ ತಂಡಗಳು ಮುಖಾಮುಖಿಯಾಗಿದ್ದವು.
ಈ ಪಂದ್ಯದಲ್ಲಿ ಮೊದಲು ಟಾಸ್ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಫೀಲ್ಡಿಂಗ್ ಆಯ್ದುಕೊಂಡಿದ್ದು, ಎದುರಾಳಿ ಗುಜರಾತ್ ಟೈಟನ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು.
ಅದರಂತೆ ಮೊದಲು ಬ್ಯಾಟಿಂಗ್ ಮಾಡಿರುವ ಗುಜರಾತ್ ಟೈಟನ್ಸ್ ಶುಭ್‌ಮನ್ ಗಿಲ್, ಅಭಿನವ್ ಮನೋಹರ್ ಹಾಗೂ ಡೇವಿಡ್ ಮಿಲ್ಲರ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 207 ರನ್ ಕಲೆಹಾಕಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಗೆಲ್ಲಲು 208 ರನ್‌ಗಳ ಕಠಿಣ ಗುರಿಯನ್ನು ನೀಡಿತು. ಆದರೆ ಈ ಗುರಿಯನ್ನು ಬೆನ್ನತ್ತುವಲ್ಲಿ ವಿಫಲವಾದ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿ 55 ರನ್‌ಗಳ ಅಂತರದ ಸೋಲನ್ನು ಕಂಡಿದೆ.
ಗುಜರಾತ್ ಟೈಟನ್ಸ್ ಪರ ಆರಂಭಿಕ ಆಟಗಾರರಾಗಿ ಶುಭ್‌ಮನ್ ಗಿಲ್ ಹಾಗೂ ವೃದ್ಧಿಮಾನ್ ಸಹಾ ಕಣಕ್ಕಿಳಿದಿದ್ದರು. ಇನ್ನು ಮುಂಬೈ ಇಂಡಿಯನ್ಸ್ ಪರ ಮೊದಲ ಓವರ್ ಅನ್ನು ಅರ್ಜುನ್ ತೆಂಡೂಲ್ಕರ್ ಎಸೆದರು. ಮೊದಲ ಓವರ್‌ನಲ್ಲಿ ಕೇವಲ 4 ರನ್ ಮಾತ್ರ ಬಂತು. ಮತ್ತೆ ಮೂರನೇ ಓವರ್ ಎಸೆದ ಅರ್ಜುನ್ ತೆಂಡೂಲ್ಕರ್ ಮೊದಲ ಎಸೆತದಲ್ಲಿಯೇ ವೃದ್ಧಿಮಾನ್ ಸಹಾ ಅವರ ವಿಕೆಟ್ ಪಡೆದರು.
ಅರ್ಜುನ್ ತೆಂಡೂಲ್ಕರ್ ಎಸೆದ ಸ್ಲೋ ಬಾಲ್‌ಗೆ ಸರಿಯಾದ ಉತ್ತರ ನೀಡಲಾಗದ ವೃದ್ಧಿಮಾನ್ ಸಹಾ ಔಟ್ ಆಗಿದ್ದರು. ವೃದ್ಧಿಮಾನ್ ಸಹಾ ಬ್ಯಾಟ್‌ಗೆ ತಗುಲಿದ್ದ ಚೆಂಡು ವಿಕೆಟ್ ಕೀಪರ್ ಇಶಾನ್ ಕಿಶನ್ ಕೈಸೇರಿತ್ತು. ಔಟ್ ಪಕ್ಕಾ ಎಂದು ಖಾತರಿಯಿದ್ದ ಮುಂಬೈ ಇಂಡಿಯನ್ಸ್ ತಂಡದ ಆಟಗಾರರು ಅಂಪೈರ್ ಬಳಿ ಗಟ್ಟಿಯಾಗಿಯೇ ಅಪೀಲ್ ಮಾಡಿದ್ದರು. ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದರು.
ಆದರೆ ಈ ತೀರ್ಪನ್ನು ಒಪ್ಪದ ವೃದ್ಧಿಮಾನ್ ಸಹ ತನ್ನ ಸಹ ಆಟಗಾರ ಶುಭ್‌ಮನ್ ಗಿಲ್ ಬಳಿ ಚರ್ಚಿಸಿ ಡಿಆರ್‌ಎಸ್ ರಿವ್ಯೂಗೆ ಮನವೊಲಿಸಿದರು. ಬಳಿಕ ರಿವ್ಯೂಗಾಗಿ ಅಂಪೈರ್‌ನತ್ತ ಸಿಗ್ನಲ್ ಮಾಡಿದರು. ಅಷ್ಟರಲ್ಲಾಗೇ ಡಿಆರ್‌ಎಸ್‌ಗೆ ನಿಗದಿಪಡಿಸಿದ್ದ ಸಮಯ ಮುಗಿದು ಎರಡರಿಂದ ಮೂರು ಸೆಕೆಂಡುಗಳು ಆಗಿದ್ದವು. ಹೀಗಿದ್ದರೂ ಸಹ ಅಂಪೈರ್ ಡಿಆರ್ಎಸ್ ರಿವ್ಯೂ ಅನುಮತಿಯನ್ನು ನೀಡಿದರು.
ಡಿಆರ್‌ಎಸ್‌ನಲ್ಲಿಯೂ ಔಟ್ ಎಂದು ತೀರ್ಪು ಬಂದರೂ ಸಹ ಅಂಪೈರ್ ಈ ನಡೆ ಕಂಡು ಮುಂಬೈ ಇಂಡಿಯನ್ಸ್ ಆಟಗಾರರು, ಮೈದಾನದಲ್ಲಿ ನೆರೆದಿದ್ದವರು ಹಾಗೂ ಆನ್‌ಲೈನ್ ಮೂಲಕ ಪಂದ್ಯ ವೀಕ್ಷಿಸುತ್ತಿದ್ದವರೆಲ್ಲರೂ ಇದೇನಿದು ಎಂದು ಒಬ್ಬರ ಮುಖ ಇನ್ನೊಬ್ಬರು ನೋಡಿಕೊಳ್ಳಲಾರಂಭಿಸಿದರು. ಡಿಆರ್‌ಎಸ್ ಟೈಮರ್ ಮುಗಿದ ಮೇಲೂ ರಿವ್ಯೂ ಕೇಳಿದ ಸಹಾ ಮನವಿಯನ್ನು ಒಪ್ಪಿದ್ದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮೆಟೀರಿಯಲ್ ಆಗಿದೆ.
ಟ್ವಿಟರ್‌ನಲ್ಲಿ ಅಂಪೈರ್‌ನ ಈ ನಡೆಯನ್ನು ಬಹುತೇಕರು ಟೀಕಿಸುತ್ತಿದ್ದು, ಈ ಖುಷಿಗೆ ಡಿಆರ್ಎಸ್ ಟೈಮರ್ ಯಾಕೆ, ನಿಮಗೆ ಯಾವಾಗ ಔಟ್ ಅಲ್ಲ ಎನಿಸುತ್ತೋ ಆಗ ಬಂದು ಡಿಆರ್ಎಸ್ ತೆಗೆದುಕೊಳ್ಳಿ ಎಂದು ಹೇಳಿಬಿಡಿ ಎಂದು ಟ್ರೋಲ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ಇದು ಮೋಸ, ಇದಕ್ಕೆ ತಕ್ಕನಾದ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಕಾಮೆಂಟ್ ಮಾಡುತ್ತಿದ್ದಾರೆ.