16ನೇ ಆವೃತ್ತಿಯ ಐಪಿಎಲ್ ಟೂರ್ನಿ ಮಧ್ಯಂತರ ದಾಟಿದ್ದು ಭರ್ಜರಿಯಾಗಿ ಮುನ್ನುಗ್ಗುತ್ತಿದೆ. ಪ್ರತಿ ದಿನವೂ ರೋಚಕ ಪಂದ್ಯಗಳು ಅಭಿಮಾನಿಗಳನ್ನು ರಂಜಿಸುವಲ್ಲಿ ಯಶಸ್ವಿಯಾಗುತ್ತಿದೆ. ಪ್ರತಿ ತಂಡಗಳು ಕೂಡ ತೀವ್ರ ಪೈಪೋಟಿಯನ್ನು ಎದುರಿಸುತ್ತಿದ್ದು ಬಹುತೇಕ ತಂಡಗಳು ಸಮಬಲದ ಪ್ರದರ್ಶನ ನೀಡುತ್ತಿದೆ. ಒಂದು ದಿನ ಬ್ಯಾಟರ್‌ಗಳು ಮೇಲುಗೈ ಸಾಧಿಸಿದರೆ ಮತ್ತೊಂದು ಪಂದ್ಯದಲ್ಲಿ ಬೌಲಿಂಗ್ ವಿಭಾಗ ಯಶಸ್ಸು ಸಾಧಿಸುತ್ತಿದೆ. ಹೀಗಾಗಿ ಭರಪೂರ ಮನರಂಜನೆ ಅಭಿಮಾನಿಗಳಿಗೆ ದೊರೆಯುತ್ತಿರುವುದರಲ್ಲಿ ಅನುಮಾನವಿಲ್ಲ.
ಇನ್ನು ಐಪಿಎಲ್ ಅಂದರೆ ಅಲ್ಲಿ ಸಿಕ್ಸರ್‌ಗಳ ಮಳೆ ಇದ್ದೇ ಇದೆ. ಬ್ಯಾಟರ್‌ಗಳು ಸಿಕ್ಸರ್ ಬಾರಿಸಿ ಹೋರೋ ಎನಿಸಿಕೊಂಡರೆ ಸಿಕ್ಸರ್ ಬಿಟ್ಟುಕೊಟ್ಟ ಬೌಲರ್‌ಗಳು ಅಭಿಮಾನಿಗಳ ಪಾಲಿಗೆ ವಿಲನ್‌ಗಳು ಎನಿಸಿಕೊಳ್ಳುತ್ತಾರೆ. ಹಾಗಂತ ಹೆಚ್ಚಾಗಿ ಸಿಕ್ಸರ್‌ಗಳನ್ನು ಬಿಟ್ಟುಕೊಟ್ಟ ಬೌಲರ್‌ಗಳು ಕಳಪೆ ಎಂಬುದು ಅರ್ಥವಲ್ಲ. ಅದಕ್ಕೆ ಕಾರಣಗಳು ಕೂಡ ಇದೆ. ಅದರಲ್ಲೂ ವಿಶೇಷವಾಗಿ ಪಂದ್ಯದ ಅಂತಿಮ ನಾಲ್ಕು ಅಥವಾ ಐದು ಓವರ್‌ಗಳಲ್ಲಿ ಬೌಲಿಂಗ್ ದಾಳಿ ನಡೆಸುವ ಬೌಲರ್‌ಗಳು ಸಹಜವಾಗಿಯೇ ಹೆಚ್ಚು ದಂಡನೆಗೆ ಒಳಗಾಗುವ ಸಾಧ್ಯತೆಗಳು ಇದೆ. ಹಾಗಾಗಿ ಮಧ್ಯ ಭಾಗದಲ್ಲಿ ಬೌಲಿಂಗ್ ದಾಳಿ ನಡೆಸುವ ಬೌಲರ್‌ಗಳಿಗಿಂತ ಸಹಜವಾಗಿಯೇ ಹೆಚ್ಚಿನ ರನ್, ಹೆಚ್ಚು ಸಿಕ್ಸರ್‌ಗಳನ್ನು ಬಿಟ್ಟುಕೊಡುವ ಸಾಧ್ಯತೆಯಿರುತ್ತದೆ.

ಹಾಗಿದ್ದರೂ ಕ್ರಿಕೆಟ್ ಅಭಿಮಾನಿಗಳ ಕುತೂಹಲಕ್ಕಾಗಿ ಕುತೂಹಲಕಾರಿ ಅಂಕಿಅಂಶದ ಮಾಹಿತಿ ಇಲ್ಲಿದೆ. ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಈವರೆಗೆ ನಡೆದರುವ ಪಂದ್ಯಗಳ ಲೆಕ್ಕಾಚಾರದಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಿಟ್ಟುಕೊಟ್ಟ ಬೌಲರ್‌ಗಳು ಯಾರು? ಅಂಥಾ ನಾಲ್ವರು ಬೌಲರ್‌ಗಳ ವಿವರ ಇಲ್ಲಿದೆ. ಮುಂದೆ ಓದಿ..
ಈ ಬಾರಿಯ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಬೌಲರ್ ಹರ್ಷಲ್ ಪಟೇಲ್ ನಿರೀಕ್ಷಿತ ಯಶಸ್ಸು ಸಾಧಿಸಲು ವಿಫಲವಾಗಿದ್ದಾರೆ. ಕಳೆದ ಎರಡು ಆವೃತ್ತಿಗಳಲ್ಲಿ ಡೆತ್ ಓವರ್‌ಗಳಲ್ಲಿ ಆರ್‌ಸಿಬಿ ಪಾಲಿಗೆ ಆಪತ್ಭಾಂಧವನಾಗಿದ್ದ ಹರ್ಷಲ್ ಆಟ ಈ ಬಾರಿ ನಡೆಯುತ್ತಿಲ್ಲ. ಹಾಗಾಗಿಯೇ ಡೆತ್ ಓವರ್‌ನಲ್ಲಿ ಹರ್ಷಲ್ ದುಬಾರಿಯಾಗುತ್ತಿದ್ದಾರೆ. ಇನ್ನು ಅತಿ ಹೆಚ್ಚು ಸಿಕ್ಸರ್ ಬಾರಿಸಿಕೊಂಡ ಬೌಲರ್‌ಗಳ ಪಟ್ಟಿಯಲ್ಲಿ ಹರ್ಷಲ್ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ. ಈವರೆಗಿನ ಪಂದ್ಯಗಳಲ್ಲಿ ಹರ್ಷಲ್ 15 ಸಿಕ್ಸರ್‌ಗಳನ್ನು ಎದುರಾಳಿಗೆ ಬಿಟ್ಟುಕೊಟ್ಟಿದ್ದಾರೆ.
ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಮಿಸ್ಟ್ರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಎರಡು ಪಂದ್ಯದಲ್ಲಿಯೂ ಆರ್‌ಸಿಬಿ ತಂಡದ ವಿರುದ್ಧ ಅದ್ಭುತ ಯಶಸ್ಸು ಸಾಧಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದ್ದರು. ಆದರೆಉಳಿದ ಪಂದ್ಯಗಳಲ್ಲಿ ವರುಣ್ ಆಟ ಪರಿಣಾಮಕಾರಿಯಾಗಿ ನಡೆದಿಲ್ಲ. ಈ ಐಪಿಎಲ್ಆವೃತ್ತಿಯಲ್ಲಿ ವರುಣ್ ಚಕ್ರವರ್ತಿ ಈವರೆಗೆ 16 ಸಿಕ್ಸರ್ ಬಿಟ್ಟುಕೊಟ್ಟಿದ್ದಾರೆ.
ರಶೀದ್ ಖಾನ್ ಹೆಸರು ಈ ಬಾರಿಯ ಐಪಿಎಲ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಿಟ್ಟುಕೊಟ್ಟ ಬೌಲರ್‌ಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವುದು ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸುವುದರಲ್ಲಿ ಅನುಮಾನವಿಲ್ಲ. ಯಾಎಂದರೆ ಚುಟುಕು ಮಾದರಿಯಲ್ಲಿ ರನ್ ನಿಯಂತ್ರಣ ಮಾಡುವುದರಲ್ಲಿ ರಶೀದ್ ಮೇಲುಗೈ. ಹಾಗಾಗಿಯೇ ವಿಶ್ವ ಕ್ರಿಕೆಟ್‌ನ ಎಲ್ಲಾ ಲೀಗ್ ಮಾದರಿಯಲ್ಲಿಯೂ ಅತ್ಯಂತ ಬೇಡಿಕೆಯ ಆಟಗಾರ ಎನಿಸಿಕೊಂಡಿದ್ದಾರೆ ರಶೀದ್. ಆದರೆ ಐಪಿಎಲ್‌ನಲ್ಲಿ ಈ ಬಾರಿ ರಶೀದ್ ನಿರೀಕ್ಷಿತ ಯಶಸ್ಸು ಸಾಧಿಸಿಲ್ಲ. ಈವರೆಗಿನ ಪಂದ್ಯಗಳಲ್ಲಿ ರಶೀದ್ ಖಾನ್ ಒಟ್ಟು 19 ಸಿಕ್ಸರ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯುವ ವೇಗದ ಬೌಲರ್ ತುಷಾರ್ ದೇಶ್‌ಪಾಂಡೆ ಈ ಬಾರಿಯ ಟೂರ್ನಿಯ ಯಶಸ್ವಿ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆಟಗಾರ. ಪರ್ಪಲ್‌ಕ್ಯಾಪ್ ರೇಸ್‌ನಲ್ಲಿರುವ ತುಷಾರ್ ದೇಶ್‌ಪಾಂಡೆ ಅತಿ ಹೆಚ್ಚು ಸಿಕ್ಸರ್ ಬಿಟ್ಟುಕೊಟ್ಟ ಬೌಲರ್‌ಗಳ ಪಟ್ಟಿಯಲ್ಲಿಯೂ ಮೊದಲ ಸ್ಥಾನದಲ್ಲಿರುವುದು ವಿಪರ್ಯಾಸ. ಈ ಬಾರಿಯ ಐಪಿಎಲ್‌ನಲ್ಲಿ ಈವರೆಗೆ 21 ಸಿಕ್ಸರ್‌ಗಳನ್ನು ಬಿಟ್ಟುಕೊಟ್ಟಿದ್ದು ಈ ಬೇಡದ ದಾಖಲೆಯ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.