
2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 16ನೇ ಋತುವಿನ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಇದೇ ಮಾರ್ಚ್ 31ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಮತ್ತು ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದೊಂದಿಗೆ ಅದ್ಧೂರಿ ಚಾಲನೆ ಸಿಗಲಿದೆ.
ಇದೀಗ ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅವರು 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭಕ್ಕೂ ಮೊದಲು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಬೌಲಿಂಗ್ ಘಟಕವನ್ನು ಮೌಲ್ಯಮಾಪನ ಮಾಡಿದ್ದಾರೆ.
ಬದಲಿ ಆಟಗಾರ (ಇಂಪ್ಯಾಕ್ಟ್ ಪ್ಲೇಯರ್) ಆಯ್ಕೆಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಆಕಾಶ್ ಚೋಪ್ರಾ, ಕೆಕೆಆರ್ ತಂಡವು ವರುಣ್ ಚಕ್ರವರ್ತಿಯನ್ನು ಟರ್ನಿಂಗ್ ಪಿಚ್‌ನಲ್ಲಿ ಅತ್ಯುತ್ತಮ ಬದಲಿ ಆಟಗಾರನಾಗಿ ಬಳಸಬಹುದು ಎಂದು ಹೇಳಿದರು.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಮುಂಬರುವ ಆವೃತ್ತಿಯಲ್ಲಿ ವಿದೇಶಿ ಮತ್ತು ದೇಶೀಯ ಯುವ ಪ್ರತಿಭೆಗಳ ಮಿಶ್ರಣವನ್ನು ಹೊಂದಿದೆ. ಕೆಕೆಆರ್ ತಂಡದ ಬೌಲಿಂಗ್ ವಿಭಾಗದಲ್ಲಿ ಇತರ ಆಯ್ಕೆಗಳನ್ನು ಹೊಂದಿದ್ದರೂ, ಖಾಯಂ ನಾಯಕ ಶ್ರೇಯಸ್ ಅಯ್ಯರ್ ಅನುಪಸ್ಥಿತಿಯಲ್ಲಿ ಸ್ವಲ್ಪ ಹಿನ್ನಡೆ ಅನುಭವಿಸಬಹುದು.

ಈ ವೇಳೆ ಹೊಸ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಸೇರಿಸಿದ ಕ್ರಿಕೆಟಿಗ ಕಂ ಕಾಮೆಂಟೇಟರ್ ಆಕಾಶ್ ಚೋಪ್ರಾ, ಕೆಕೆಆರ್ ತಂಡದ ವರುಣ್ ಚಕ್ರವರ್ತಿಯನ್ನು ಸಂಭಾವ್ಯ ಬದಲಿಯಾಗಿ ಬಳಸಬಹುದು ಎಂದು ಸಲಹೆ ನೀಡಿದರು.
"ಕೆಕೆಆರ್ ತಂಡಕ್ಕೆ ಬೌಲಿಂಗ್‌ನಲ್ಲಿ ಬೇರೆ ಬೇರೆ ಆಯ್ಕೆಗಳಿವೆ. ವೈಭವ್ ಅರೋರಾ ಅಥವಾ ಕುಲ್ವಂತ್ ಖೆಜ್ರೋಲಿಯಾ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಳಸಬಹುದು. ಬಾಲ್ ಸ್ಪಿನ್ ಆಗುತ್ತಿದ್ದರೆ, ಸ್ಪಿನ್ನರ್ ವರುಣ್ ಚಕ್ರವರ್ತಿ ಅವರನ್ನು ನೀವು ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಳಸಬಹುದು ಎಂದು ನಾನು ಭಾವಿಸುತ್ತೇನೆ," ಎಂದು ಆಕಾಶ್ ಚೋಪ್ರಾ ತಿಳಿಸಿದರು.
IPL 2023: ಈವರೆಗಿನ ಐಪಿಎಲ್‌ನಲ್ಲಿ ಹೆಚ್ಚು ರನ್, ಹೆಚ್ಚು ವಿಕೆಟ್ ಗಳಿಸಿದವರು; ಇತರೆ ಅಂಕಿಅಂಶಗಳ ಮಾಹಿತಿ
ಗಮನಾರ್ಹ ಅಂಶವೆಂದರೆ, 31 ವರ್ಷದ ಸ್ಪಿನ್ನರ್ ವರುಣ್ ಚಕ್ರವರ್ತಿ ಅವರು 2022ರಲ್ಲಿ ಕಡಿಮೆ ವಿಕೆಟ್ ಗಳಿಸಿದ್ದರು. ಆಡಿದ 11 ಪಂದ್ಯಗಳಲ್ಲಿ ಕೇವಲ ಆರು ವಿಕೆಟ್‌ಗಳನ್ನು ಮಾತ್ರ ಪಡೆಯಲು ಸಾಧ್ಯವಾಯಿತು. ಇದಲ್ಲದೆ, ಅವರು 8.51ರ ಎಕಾನಮಿಯೊಂದಿಗೆ ರನ್ ನೀಡಿ ಸ್ವಲ್ಪ ದುಬಾರಿಯಾಗಿದ್ದರು.
ಕೆಕೆಆರ್ ತಂಡಕ್ಕೆ ನಿತೀಶ್ ರಾಣಾ ನಾಯಕ
2023ರ ಐಪಿಎಲ್ ಪಂದ್ಯಾವಳಿಗೂ ಮುನ್ನ ಶ್ರೇಯಸ್ ಅಯ್ಯರ್ ಗಾಯಗೊಂಡು ಚಿಕಿತ್ಸೆಗಾಗಿ ಸಂಪೂರ್ಣ ಟೂರ್ನಿಯಿಂದ ಹೊರಗುಳಿದ ನಂತರ, ಆಲ್‌ರೌಂಡರ್ ನಿತೀಶ್ ರಾಣಾ ಅವರನ್ನು ಕೆಕೆಆರ್ ತಂಡದ ನಾಯಕನಾಗಿ ನೇಮಿಸಲಾಗಿದೆ.
2022ರಲ್ಲಿ ನಿತೀಶ್ ರಾಣಾ 14 ಪಂದ್ಯಗಳಲ್ಲಿ 361 ರನ್‌ಗಳೊಂದಿಗೆ ಕೆಕೆಆರ್ ಫ್ರಾಂಚೈಸಿಗೆ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದರು. ಇದೀಗ ನಾಯಕನ ಜವಾಬ್ದಾರಿ ಸಿಕ್ಕಿರುವುದು ವೈಯಕ್ತಿಕ ಪ್ರದರ್ಶನದ ಜೊತೆಗೆ ತಂಡವನ್ನು ಗೆಲ್ಲಿಸುವ ಹೊಣೆಗಾರಿಕೆ ಇದೆ.
ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ಶಿಖರ್ ಧವನ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ ನಿತೀಶ್ ರಾಣಾ ನಯಕತ್ವದ ಕೆಕೆಆರ್ ಶನಿವಾರ, ಏಪ್ರಿಲ್ 1ರಂದು 2023ರ ಐಪಿಎಲ್ ಅಭಿಯಾನವನ್ನು ಆರಂಭಿಸಲಿದೆ.