
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮುಕ್ತಾಯದ ಸನಿಹಕ್ಕೆ ಬಂದು ತಲುಪಿದ್ದು, ಇದೇ ಭಾನುವಾರ ( ಮೇ 28 ) ಗುಜರಾತ್‌ನಲ್ಲಿರುವ ಅಹ್ಮಾದಾಬಾದ್‌ನ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್ ಪಂದ್ಯದ ಮೂಲಕ ಟೂರ್ನಿಗೆ ತೆರೆ ಬೀಳಲಿದೆ.
ಸದ್ಯ ಚೆನ್ನೈ ಸೂಪರ್ ಕಿಂಗ್ಸ್ ಫೈನಲ್ ಪಂದ್ಯಕ್ಕೆ ಲಗ್ಗೆ ಇಟ್ಟಿದ್ದು, ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳ ನಡುವೆ ಫೈನಲ್ ಪ್ರವೇಶಕ್ಕಾಗಿ ಹೋರಾಟ ನಡೆಯುತ್ತಿದೆ. ಇನ್ನು ಲೀಗ್ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿ ಅಂಕಪಟ್ಟಿಯಲ್ಲಿ ಮೂರನೆ ಸ್ಥಾನ ಗಳಿಸಿದ್ದ ಲಕ್ನೋ ಸೂಪರ್ ಜೈಂಟ್ಸ್ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 81 ರನ್‌ಗಳ ಹೀನಾಯ ಸೋಲನ್ನು ಕಂಡು ಟೂರ್ನಿಯಿಂದ ಹೊರಬಿತ್ತು.
ಇನ್ನು ಈ ಪಂದ್ಯದಲ್ಲಿ ಈ ಬಾರಿಯ ಐಪಿಎಲ್ ಟೂರ್ನಿಯ ವಿವಾದದ ಸರದಾರನಾಗಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡದ ವೇಗಿ ನವೀನ್ ಉಲ್ ಹಕ್ ನಾಲ್ಕು ವಿಕೆಟ್ ಪಡೆದುಕೊಳ್ಳುವ ಮೂಲಕ ಗಮನ ಸೆಳೆದರಾದರೂ ತಾವು ಮಾಡಿದ ಸೆಲೆಬ್ರೇಷನ್‌ನಿಂದಾಗಿ ಪಂದ್ಯ ಸೋತ ಬಳಿಕ ಹೀನಾಯವಾಗಿ ಟ್ರೋಲ್ ಆದರು.
ಅಲ್ಲದೆ ವಿರಾಟ್ ಕೊಹ್ಲಿ ಪಂದ್ಯವೊಂದರಲ್ಲಿ ಕಡಿಮೆ ರನ್ ಗಳಿಸಿ ಔಟ್ ಆಗಿದ್ದಾಗ ಮಾವಿನಹಣ್ಣುಗಳ ಚಿತ್ರವನ್ನು ಹಂಚಿಕೊಂಡು ಟ್ರೋಲ್ ಮಾಡಿದ್ದ ನವೀನ್ ಉಲ್ ಹಕ್ ಈ ಪಂದ್ಯದಲ್ಲಿ ಲಕ್ನೋ ಸೋತ ಬಳಿಕ ಟ್ರೆಂಡ್ ಆಗುವ ಮಟ್ಟಕ್ಕೆ ಟ್ರೋಲ್ ಆಗಿದ್ದಾರೆ.
ಹೀಗೆ ವಿರಾಟ್ ಕೊಹ್ಲಿ ಹಾಗೂ ನವೀನ್ ಉಲ್ ಹಕ್ ನಡುವೆ ದ್ವೇಷ ಹುಟ್ಟಿಕೊಳ್ಳಲು ಕಾರಣ ಮೇ 1ರಂದು ನಡೆದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ನಡುವಿನ ಪಂದ್ಯ. ಈ ಪಂದ್ಯದ ವೇಳೆ ಕೊಹ್ಲಿ ಹಾಗೂ ನವೀನ್ ಉಲ್ ಹಕ್ ನಡುವೆ ಮೈದಾನದಲ್ಲಿಯೇ ಜಗಳವಾಗಿತ್ತು.
ಹೀಗೆ ದೊಡ್ಡ ಮಟ್ಟದಲ್ಲಿ ವಿರಾಟ್ ಕೊಹ್ಲಿ ಎಂದರೆ ಕೆಂಡ ಕಾರುತ್ತಿದ್ದ ನವೀನ್ ಉಲ್ ಹಕ್ ಇದೀಗ ಕೊಹ್ಲಿ ನನ್ನ ನೆಚ್ಚಿನ ಕ್ರಿಕೆಟರ್, ನನಗೆ ಕೊಹ್ಲಿ ನಾಯಕತ್ವದಡಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುವ ಆಸೆ ಎಂದು ಹೇಳಿಕೆ ನೀಡಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಹೌದು, ನವೀನ್ ಉಲ್ ಹಕ್ ಇಂತಹ ಟ್ವೀಟ್ ಮಾಡಿದ್ದಾರೆ ಎನ್ನಲಾಗುತ್ತಿದೆ. ನವೀನ್ ಉಲ್ ಹಕ್ ಮಾಡಿದ್ದಾರೆ ಎನ್ನಲಾಗುತ್ತಿರುವ ಈ ಟ್ವೀಟ್‌ನಲ್ಲಿ "ನಾನು ವಿರಾಟ್ ಕೊಹ್ಲಿಯ ದೊಡ್ಡ ಅಭಿಮಾನಿ. ನನ್ನ ಕೋಣೆ ತುಂಬಾ ವಿರಾಟ್ ಕೊಹ್ಲಿ ಪೋಸ್ಟರ್‌ಗಳಿವೆ. ಅವರು ನನಗೆ ಬಾಲ್ಯದಿಂದಲೂ ಸ್ಪೂರ್ತಿ. ಲಕ್ನೋ ಸೂಪರ್ ಜೈಂಟ್ಸ್ ಬಿಟ್ಟು ವಿರಾಟ್ ಸರ್ ಅಡಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಲು ಇಚ್ಛಿಸುತ್ತೇನೆ" ಎಂದು ಬರೆಯಲಾಗಿದೆ.

ಈ ಟ್ವೀಟ್ ಸದ್ಯ ಎಲ್ಲೆಡೆ ಹರಿದಾಡುತ್ತಿದ್ದು ವೈರಲ್ ಆಗಿದೆ. ಅಲ್ಲದೇ ಇದೇ ಖಾತೆಯಿಂದ 'ವಿರಾಟ್ ಕೊಹ್ಲಿ ಅಭಿಮಾನಿಗಳು ಗ್ರೇಟ್. ನಾನು ಕೊಹ್ಲಿ ಸರ್ ಬಳಿ ಕ್ಷಮೆ ಯಾಚಿಸಿದ ಬಳಿಕ ನನಗೆ ಎಲ್ಲೆಡೆ ಪಾಸಿಟಿವ್ ಕಾಮೆಂಟ್ ಬರುತ್ತಿವೆ' ಎಂಬ ಟ್ವೀಟ್ ಸಹ ಬಂದಿದೆ. ಈ ಎರಡು ಟ್ವೀಟ್‌ಗಳು ಮಾತ್ರವಲ್ಲದೇ ಇನ್ನೂ ಹಲವಾರು ಟ್ವೀಟ್‌ಗಳು ಈ ಖಾತೆಯಿಂದ ಬಂದಿದ್ದು, ದೊಡ್ಡ ಮಟ್ಟಕ್ಕೆ ರೀಚ್ ಆಗಿದೆ.
ಆದರೆ ಸತ್ಯಾಂಶವೇನೆಂದರೆ ಇದು ನವೀನ್ ಉಲ್ ಹಕ್ ಹೆಸರಿನಲ್ಲಿ ವಿರಾಟ್ ಕೊಹ್ಲಿ ಅಭಿಮಾನಿಯೊಬ್ಬ ತೆರೆದಿರುವ ನಕಲಿ ಖಾತೆಯಾಗಿದೆ. ಕೆಲವರು ಗೊತ್ತಿದ್ದೂ ಸಹ ಈ ಟ್ವೀಟ್‌ಗಳನ್ನು ಶೇರ್ ಮಾಡುತ್ತಾ ನವೀನ್ ಉಲ್ ಹಕ್ ಅನ್ನು ಪರೋಕ್ಷವಾಗಿ ಟ್ರೋಲ್ ಮಾಡುತ್ತಿದ್ದು, ಇನ್ನೂ ಕೆಲವರು ಸತ್ಯ ಗೊತ್ತಿಲ್ಲದೇ ಈ ಈ ಟ್ವೀಟನ್ನು ಶೇರ್ ಮಾಡಿದ್ದಾರೆ. ಹೀಗೆ ನಕಲಿ ಟ್ವೀಟ್ ಅನ್ನು ಅನೇಕರು ಸತ್ಯ ಎಂದು ನಂಬಿಕೊಂಡಿದ್ದಾರೆ.