
ಪ್ರಸ್ತುತ ನಡೆಯುತ್ತಿರುವ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ 40 ಪಂದ್ಯಗಳು ನಿನ್ನೆಗೆ ( ಏಪ್ರಿಲ್ 30 ) ಮುಕ್ತಾಯಗೊಂಡಿವೆ. 39ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಮುಖಾಮುಖಿಯಾಗಿದ್ದವು ಹಾಗೂ 40ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಕಣಕ್ಕಿಳಿದಿದ್ದವು.
ಈ ಪೈಕಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಗುಜರಾತ್ ಟೈಟನ್ಸ್ 7 ವಿಕೆಟ್‌ಗಳ ಗೆಲುವನ್ನು ಸಾಧಿಸಿದರೆ ಸನ್ ರೈಸರ್ಸ್ ಹೈದರಾಬಾದ್ 9 ರನ್‌ಗಳ ಗೆಲುವನ್ನು ಕಂಡಿತು. ಗುಜರಾತ್ ಟೈಟನ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಕೊಲ್ಕತ್ತಾ ನೈಟ್ ರೈಡರ್ಸ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 179 ರನ್ ಕಲೆಹಾಕಿ ಎದುರಾಳಿ ಗುಜರಾತ್ ಟೈಟನ್ಸ್ ತಂಡಕ್ಕೆ ಗೆಲ್ಲಲು 180 ರನ್‌ಗಳ ಗುರಿಯನ್ನು ನೀಡಿತ್ತು.
ಈ ಗುರಿಯನ್ನು ಬೆನ್ನತ್ತಿದ ಹಾಲಿ ಚಾಂಪಿಯನ್ಸ್ 17.5 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 180 ರನ್ ಕಲೆಹಾಕಿ 7 ವಿಕೆಟ್‌ಗಳ ಗೆಲುವನ್ನು ಕಂಡಿತು. ಈ ಮೂಲಕ ಟೂರ್ನಿಯಲ್ಲಿನ ತನ್ನ ಆರನೇ ಗೆಲುವನ್ನು ಕಂಡ ಗುಜರಾತ್ ಟೈಟನ್ಸ್ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಪರ ಹೆಚ್ಚು ರನ್ ಗಳಿಸಿದ ಆಟಗಾರರ ಪೈಕಿ ಶುಭ್‌ಮನ್ ಗಿಲ್ ಎರಡನೇ ಸ್ಥಾನವನ್ನು ಗಳಿಸಿದರು. 35 ಎಸೆತಗಳನ್ನು ಎದುರಿಸಿದ ಶುಭ್‌ಮನ್ ಗಿಲ್ 8 ಬೌಂಡರಿಗಳ ಸಹಿತ 49 ರನ್ ಗಳಿಸಿ ನರೈನ್ ಎಸೆತದಲ್ಲಿ ಆಂಡ್ರೆ ರಸೆಲ್‌ಗೆ ಕ್ಯಾಚ್ ನೀಡಿ ಔಟ್ ಆದರು.
ಈ ಇನ್ನಿಂಗ್ಸ್ ಮೂಲಕ ಶುಭ್‌ಮನ್ ಗಿಲ್ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ. ಶುಭ್‌ಮನ್ ಗಿಲ್ 8 ಪಂದ್ಯಗಳ ಬಳಿಕ ಗಳಿಸಿರುವ ರನ್ ಕುರಿತ ಅಂಕಿಅಂಶಗಳನ್ನು ನೋಡಿದ ಕ್ರಿಕೆಟ್ ಪ್ರೇಮಿಗಳು ಒಂದು ಕ್ಷಣ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಏಕೆಂದರೆ ವಿರಾಟ್ ಕೊಹ್ಲಿ ಹಾಗೂ ಶುಭ್‌ಮನ್ ಗಿಲ್ ಟೂರ್ನಿಯ 8 ಪಂದ್ಯಗಳನ್ನು ಆಡಿದ್ದು ಇಬ್ಬರ ಬ್ಯಾಟಿಗ್ ಅಂಕಿಅಂಶಗಳು ಬಹುತೇಕ ಸಮಾನವಾಗಿವೆ.
ಹೌದು, ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ಶುಭ್‌ಮನ್ ಗಿಲ್ ಆಡಿರುವ ಪಂದ್ಯ, ಗಳಿಸಿರುವ ರನ್, ಎದುರಿಸಿರುವ ಬಾಲ್ ಹೀಗೆ ಹಲವಾರು ಅಂಶಗಳು ಒಂದೇ ರೀತಿಯಲ್ಲಿದ್ದು, ಇದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕೊಹ್ಲಿ ಹಾಗೂ ಗಿಲ್ 8 ಪಂದ್ಯಗಳ ಬಳಿಕ ಹೊಂದಿರುವ ಅಂಕಿಅಂಶಗಳನ್ನು ಹಂಚಿಕೊಳ್ಳುತ್ತಿರುವ ನೆಟ್ಟಿಗರು 'ವಾಟ್ ಎ ಕೊ ಇನ್ಸಿಡೆನ್ಸ್' ಎಂದು ಬರೆದುಕೊಳ್ಳುತ್ತಿದ್ದಾರೆ.
ಹಾಗಾದರೆ ಕೊಹ್ಲಿ ಹಾಗೂ ಶುಭ್‌ಮನ್ ಗಿಲ್ 8 ಪಂದ್ಯಗಳ ಬಳಿಕ ಹೊಂದಿರುವ ಅಂಕಿಅಂಶಗಳು ಈ ಕೆಳಕಂಡಂತಿವೆ..
ಆಡಿದ ಪಂದ್ಯಗಳು: ವಿರಾಟ್ ಕೊಹ್ಲಿ 8 & ಶುಭ್‌ಮನ್ ಗಿಲ್ 8
ಬ್ಯಾಟಿಂಗ್ ಮಾಡಿದ ಇನ್ನಿಂಗ್ಸ್: ವಿರಾಟ್ ಕೊಹ್ಲಿ 8 & ಶುಭ್‌ಮನ್ ಗಿಲ್ 8
ಡಕ್ ಔಟ್‌ಗಳು: ವಿರಾಟ್ ಕೊಹ್ಲಿ 1 & ಶುಭ್‌ಮನ್ ಗಿಲ್ 1
ಎದುರಿಸಿದ ಬಾಲ್‌ಗಳು: ವಿರಾಟ್ ಕೊಹ್ಲಿ 234 & ಶುಭ್‌ಮನ್ ಗಿಲ್ 234
ಗಳಿಸಿದ ರನ್‌ಗಳು: ವಿರಾಟ್ ಕೊಹ್ಲಿ 333 & ಶುಭ್‌ಮನ್ ಗಿಲ್ 333
ಸ್ಟ್ರೈಕ್ ರೇಟ್: ವಿರಾಟ್ ಕೊಹ್ಲಿ 142.30 & ಶುಭ್‌ಮನ್ ಗಿಲ್ 142.30