ಲಕ್ನೋ ಸೂಪರ್ ಜೈಂಟ್ ಹಾಗೂ ಆರ್‌ಸಿಬಿ ವಿರುದ್ಧದ ಪಂದ್ಯ ಮುಗಿದು ನಾಲ್ಕೈದು ದಿನಗಳು ಕಳೆದರೂ ಪಂದ್ಯ ಮುಗಿದ ಬಳಿಕ ನಡೆದ ಕಾವೇರಿದ ಘಟನೆಯ ಬಗೆಗಿನ ಚರ್ಚೆಗಳು ಮುಗಿದಿಲ್ಲ. ಆರ್‌ಸಿಬಿ ಅನುಭವಿ ಆಟಗಾರ ವಿರಾಟ್ ಕೊಹ್ಲಿ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ಮೆಂಟರ್ ಗೌತಮ್ ಗಂಭೀರ್ ನಡುವಿನ ಮಾತಿನ ಚಕಮಕಿ ಬಗ್ಗೆ ಸಾಕಷ್ಟು ಚರ್ಚೆಗಳು ಇನ್ನು ಕೂಡ ನಡೆಯುತ್ತಿದೆ.
ಈ ಘಟನೆಯ ಬಿಸಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಕೋಚ್ ಗೌತಮ್ ಗಂಭೀರ್‌ಗೆ ಇನ್ನೂ ತಟ್ಟುತ್ತಿದೆ. ಲಕ್ನೋ ಸೂಪರ್ ಜೈಂಟ್ಸ್ ತಂಡ ಆರ್‌ಸಿಬಿ ವಿರುದ್ಧದ ಪಂದ್ಯದ ಬಳಿಕ ಬುಧವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧವೂ ಕಣಕ್ಕಿಳಿದಿತ್ತು. ಈ ಪಂದ್ಯದ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಅಭಿಮಾನಿಗಳು ಗೌತಮ್ ಗಂಭೀರ್ ಅವರನ್ನು ಟ್ರೋಲ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ಕೆರಳಿದ ಗಂಭೀರ್ ಕ್ರಿಕೆಟ್ ಅಭಿಮಾನಿಗಳತ್ತ ಕಣ್ಣು ಬಿಟ್ಟು ಗುರಾಯಿಸಿದ್ದಾರೆ.

ಬುಧವಾರ ಮಧ್ಯಾಹ್ನ ನಡೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ತನ್ನ ತವರಿನ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಣೆಸಾಟ ನಡೆಸಿತು. ಈ ಪಂದ್ಯದಲ್ಲಿ ಮಳೆಯ ಕಾರಣದಿಂದಾಗಿ ಫಲಿತಾಂಶ ಕಾಣದೆ ರದ್ದಾಗಿದೆ. ಮೊದಲಿಗೆ ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್‌ಜೈಂಟ್ಸ್ ತಂಡ 19.2 ಓವರ್‌ಗಳಲ್ಲಿ 125 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡಿದ್ದಾಗ ಮಳೆ ಸುರಿಯಲು ಆರಂಬಿಸಿತು. ಈ ಮಳೆ ಬಳಿಕ ಪಂದ್ಯ ನಡೆಯಲು ಅವಕಾಶವನ್ನೇ ನೀಡಲಿಲ್ಲ. ಹೀಗಾಗಿ ಪಂದ್ಯ ಫಲಿತಾಂಶವಿಲ್ಲದೆ ರದ್ದಾಯಿತು.
ಈ ಅವಧಿಯಲ್ಲಿ ಮಳೆ ಸಣ್ಣ ಪ್ರಮಾಣದಲ್ಲಿ ಕಡಿಮೆಯಾಗಿದ್ದಾಗ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಗೌತಮ್ ಗಂಭೀರ್ ಮೈದಾನ ಪರೀಕ್ಷಿಸಿ ತಂಡದ ಕೆಲ ಸದಸ್ಯರ ಜೊತೆಗೆ ಡ್ರೆಸ್ಸಿಂಗ್‌ರೂಮ್‌ಗೆ ವಾಪಾಸಾಗುತ್ತಿದ್ದರು. ಈ ಸಂದರ್ಭದಲ್ಲಿ ಪಂದ್ಯ ವೀಕ್ಷಿಸಲು ಆಗಮಿಸಿದ್ದ ಪ್ರೇಕ್ಷಕರು ಗಂಭೀರ್ ಮುಂದೆಯೇ 'ಕೊಹ್ಲಿ ಕೊಹ್ಲಿ' ಎಂದು ಗಂಭೀರ್ ಕಾಲೆಳೆಯಲು ಆರಂಭಿಸಿದ್ದರು. ಈ ಸಂದರ್ಭದಲ್ಲಿ ಗಂಭೀರ್ ತಾಳ್ಮೆ ಕಳೆದುಕೊಂಡಿದ್ದು ಕೆಲ ಸೆಕೆಂಡ್‌ಗಳ ಕಾಲ ಅಭಿಮಾನಿಗಳತ್ತ ಗುರಾಯಿಸಿ ಬಳಿಕ ಡ್ರೆಸ್ಸಿಂಗ್‌ರೂಮ್‌ಗೆ ನಡೆದರು.
ಬೆಂಗಳೂರಿನಲ್ಲಿ ನಡೆದ ಘಟನೆಯಿಂದ ಹೊತ್ತಿದ್ದ ಕಿಡಿ
ಅಂದಹಾಗೆ ಈ ಘಟನೆಗೆ ಕಾರಣವಾಗಿದ್ದು ಬೆಂಗಳೂರಿನಲ್ಲಿ ನಡೆದ ಆರ್‌ಸಿಬಿ ಹಾಗೂ ಎಲ್‌ಎಸ್‌ಜಿ ವಿರುದ್ಧದ ಪಂದ್ಯದ ಸಂದರ್ಭದಲ್ಲಿ ಗಂಭೀರ್ ಅವರ ವರ್ತನೆ. ಈ ಹಿಂದೆ ಲಕ್ನೋ ಸೂಪರ್ ಜೈಂಟ್ಸ್ ತಂಡ ಆರ್‌ಸಿಬಿ ತಂಡವನ್ನು ಬೆಂಗಳೂರಿನಲ್ಲಿ ಎದುರಿಸಿದ್ದಾಗ ಕೊನೆಯ ಎಸೆತದಲ್ಲಿ ಆರ್‌ಸಿಬಿ ತಂಡವನ್ನು ಎಲ್‌ಎಸ್‌ಜಿ ಮಣಿಸಿತ್ತು. ಆ ಪಂದ್ಯದ ಬಳಿಕ ಎಲ್‌ಎಸ್‌ಜಿ ಮೆಂಟರ್ ಗೌತಮ್ ಗಂಭೀರ್ ಆರ್‌ಸಿಬಿ ಅಭಿಮಾನಿಗಳನ್ನು ಗುಟಿಯಾಗಿಟ್ಟುಕೊಂಡು ಸುಮ್ಮನಿಸುವಂತೆ ಸನ್ನೆಯ ಮೂಲಕ ಸೂಚಿಸಿದ್ದರು. ಈ ವರ್ತನೆ ಸಹಜವಾಗಿಯೇ ವಿರಾಟ್ ಕೊಹ್ಲಿಯನ್ನು ಕೆಣಕುವಂತೆ ಮಾಡಿತ್ತು. ಹಾಗಾಗಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಅದರ ತವರಿನಲ್ಲಿಯೇ ನಡೆದ ಪಂದ್ಯದಲ್ಲಿ ಕೊಹ್ಲಿ ತುಸು ಹೆಚ್ಚೇ ಆಕ್ರಮಣಕಾರಿಯಾಗಿ ಕಂಡಿದ್ದರು.
ವಿರಾಟ್ ಕೊಹ್ಲಿ ಆಕ್ರಮಣಕಾರಿ ಮನೋಭಾವದ ಆಟಗಾರ ಎಂಬುದು ಅಭಿಮಾನಿಗಳಿಗೆ ತಿಳಿದೇ ಇದೆ. ಆದರೆ ಪಂದ್ಯದ ಮುಕ್ತಾಯದ ಬಳಿಕ ಗಂಭೀರ್ ಅವರ ಬಾಲಿಶತನದ ವರ್ತನೆ ಅಭಿಮಾನಿಗಳಲ್ಲಿ ಅಚ್ಚರಿಯನ್ನುಂಟು ಮಾಡಿತ್ತು. ಪಂದ್ಯ ಮುಕ್ತಾಯದ ಬಳಿಕ ವಿರಾಟ್ ಕೊಹ್ಲಿ ಎದುರಾಳಿ ತಂಡದ ಆಟಗಾರ ಕೇಲ್ ಮೇಯರ್ಸ್ ಜೊತೆಗೆ ಮಾತನಾಡುತ್ತ ಮೈದಾನದಿಂದ ಹೊರಗಡೆಗೆ ಧಾವಿಸುತ್ತಿದ್ದರೆ ಆಗ ಕೇಲ್ ಮೇಯರ್ಸ್ ಸನಿಹಕ್ಕೆ ಬಂದ ಎಲ್‌ಎಸ್‌ಜಿ ಮೇಂಟರ್ ಗೌತಮ್ ಗಂಭೀರ್ ಕೊಹ್ಲಿಯ ಜೊತೆಗೆ ಮಾತು ಮುಂದುವರಿಸದಂತೆ ತಡೆದು ಮೇಯರ್ಸ್ ಅವರನ್ನು ದೂರಕ್ಕೆ ಎಳೆದೊಯ್ದರು. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ವಾಗ್ವಾದ ಜೋರಾಯಿತು. ಇಬ್ಬರು ಕೂಡ ಪರಸ್ಪರ ಏರುದ್ವನಿಯಲ್ಲಿ ಮಾತನಾಡುತ್ತಿರುವುದು ಸ್ಪಷ್ಟವಾಗಿತ್ತು.