IPL 2023: ಪಂಜಾಬ್ ಕಿಂಗ್ಸ್ ವಿರುದ್ಧದ ಶುಭ್ಮನ್ ಗಿಲ್ ಬ್ಯಾಟಿಂಗ್‌ಗೆ ಕಿಡಿಕಾರಿದ ವೀರೇಂದ್ರ ಸೆಹ್ವಾಗ್!
ಗುರುವಾರ, ಏಪ್ರಿಲ್ 13ರಂದು ಮೊಹಾಲಿಯಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಗೆಲುವಿನ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಆರಂಭಿಕ ಬ್ಯಾಟ್ಸ್‌ಮನ್ ಶುಭ್ಮನ್ ಗಿಲ್ ಅರ್ಧಶತಕ ಬಾರಿಸಿದರು. ಆದರೆ, ಇದು ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರ ಕೆಂಗಣ್ಣಿಗೆ ಗುರಿಯಾಗಿದೆ.
ಗುಜರಾತ್ ಟೈಟನ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಶುಭ್ಮನ್ ಗಿಲ್ ಅವರ ಸ್ಟ್ರೈಕ್ ರೇಟ್ ಅನ್ನು ಟೀಕಿಸಿದರು, ಬ್ಯಾಟರ್ ವೈಯಕ್ತಿಕ ಮೈಲಿಗಲ್ಲುಗಳಿಗಾಗಿ ಆಡುವ ಬದಲು ತಂಡದ ಬಗ್ಗೆ ಯೋಚಿಸಬೇಕು ಎಂದು ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಹೇಳಿದರು.

ಶುಭ್ಮನ್ ಗಿಲ್ 40 ಎಸೆತಗಳಲ್ಲಿ ಅರ್ಧಶತಕವನ್ನು ಪೂರ್ಣಗೊಳಿಸಿದರು. ನಂತರದ 17 ರನ್ ಗಳಿಸಲು 9 ಎಸೆತಗಳನ್ನು ತೆಗೆದುಕೊಂಡರು. ಆರ್ಧಶತಕ ಗಳಿಸಿದ ನಂತರ ಬ್ಯಾಟಿಂಗ್ ವೇಗವನ್ನು ಹೆಚ್ಚಿಸಿದರು. ಶುಭ್ಮನ್ ಗಿಲ್ ಮೊದಲೇ ಆಕ್ರಮಣಕಾರಿ ಉದ್ದೇಶವನ್ನು ತೋರಿಸಿದ್ದರೆ, ಪಂದ್ಯವು ಅಂತಿಮ ಓವರ್‌ನವರೆಗೆ ಹೋಗುತ್ತಿರಲಿಲ್ಲ ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಗಮನಸೆಳೆದರು.
"ಶುಭ್ಮನ್ ಗಿಲ್ 49 ಎಸೆತಗಳಲ್ಲಿ 67 ರನ್ ಗಳಿಸಿದರು. ಆದರೆ ತಮ್ಮ ಅರ್ಧಶತಕವನ್ನು ತಲುಪಲು 41-42 ಎಸೆತಗಳನ್ನು ತೆಗೆದುಕೊಂಡರು. ನಂತರದ 7-8 ಎಸೆತಗಳಲ್ಲಿ ಅವರು 17 ರನ್ ಗಳಿಸಿದರು. ಅರ್ಧಶತಕ ಮೈಲುಗಲ್ಲು ತಲುಪಿದ ನಂತರ ಬ್ಯಾಟಿಂಗ್‌ನಲ್ಲಿ ವೇಗ ಕಂಡುಬಂತು. ಅದು ಕೂಡ ಆಗದಿದ್ದಿದ್ದರೆ ಕೊನೆಯ ಓವರ್‌ನಲ್ಲಿ ಗುಜರಾತ್ ಟೈಟನ್ಸ್‌ಗೆ 7 ರನ್‌ಗಳ ಬದಲಿಗೆ 17 ರನ್‌ಗಳ ಅವಶ್ಯಕತೆ ಇರುತ್ತಿತ್ತು," ಎಂದು ವೀರೇಂದ್ರ ಸೆಹ್ವಾಗ್ ಕ್ರಿಕ್‌ಬಜ್‌ನಲ್ಲಿ ತಿಳಿಸಿದರು.
"ನಾನು ಮೊದಲು ಅರ್ಧಶತಕ ಗಳಿಸುತ್ತೇನೆ. ನಂತರ ಹೇಗಾದರೂ ಪಂದ್ಯ ಗೆದ್ದರಾಯಿತು ಎಂದು ನೀವು ಯೋಚಿಸಬಾರದು, ಇದು ಕ್ರಿಕೆಟ್. ತಂಡದ ಬದಲಿಗೆ ನಿಮ್ಮ ಸ್ವಂತ ಪ್ರದರ್ಶನದ ಬಗ್ಗೆ ಯೋಚಿಸಿದರೆ ನೀವು ಕ್ರಿಕೆಟ್‌ನಿಂದ ದೊಡ್ಡ ಹೊಡೆತವನ್ನು ಪಡೆಯುತ್ತೀರಿ".

"ಗಿಲ್ ಅರ್ಧಶತಕದ ಸಮೀಪವಿರುವಾಗ ಆಕ್ರಮಣಕಾರಿ ಉದ್ದೇಶವನ್ನು ತೋರಿಸಿದ್ದರೆ ಮತ್ತು 200ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ್ದರೆ, ತಮ್ಮ ಮೈಲಿಗಲ್ಲನ್ನು ಬೇಗ ತಲುಪಬಹುದಿತ್ತು. ಅಲ್ಲದೇ ತಂಡವನ್ನು ಬೇಗನೆ ಗೆಲ್ಲಿಸಬಹುದಿತ್ತು," ಎಂದು ವೀರೇಂದ್ರ ಸೆಹ್ವಾಗ್ ಅಭಿಪ್ರಾಯಪಟ್ಟರು.
ವೈಯಕ್ತಿಕ ಮೈಲುಗಲ್ಲುಗಳ ಬಗ್ಗೆ ಯೋಚನೆ ಮಾಡುವುದನ್ನು ಮೊದಲು ಬಿಡಿ. ನಿಮ್ಮ ಉದ್ದೇಶ ತಂಡವನ್ನು ಗೆಲ್ಲಿಸುವುದಾಗಿರಬೇಕು ಎಂದು ಶುಭ್ಮನ್ ಗಿಲ್ ಅವರ ನಿಧಾನಗತಿ ಬ್ಯಾಟಿಂಗ್‌ಗೆ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಕಿಡಿಕಾರಿದರು.
ಪಂಜಾಬ್ ಕಿಂಗ್ಸ್ ವಿರುದ್ಧ ಗುಜರಾತ್ ಟೈಟನ್ಸ್ ತಂಡಕ್ಕೆ ಕೊನೆಯ ಮೂರು ಎಸೆತಗಳಲ್ಲಿ ಇನ್ನೂ ಐದು ರನ್‌ಗಳ ಅಗತ್ಯದ್ದಾಗ, ಶುಭ್ಮನ್ ಗಿಲ್ ವಿಕೆಟ್ ಒಪ್ಪಿಸಿದರು. ನಂತರ ಆಲ್‌ರೌಂಡರ್ ರಾಹುಲ್ ತೆವಾಟಿಯಾ ಐದನೇ ಎಸೆತವನ್ನು ಬೌಂಡರಿಗಟ್ಟಿ ತಂಡವನ್ನು ಗೆಲ್ಲಿಸಿದರು. ವೇಗಿ ಮೋಹಿತ್ ಶರ್ಮಾ 4 ಓವರ್‌ಗಳಲ್ಲಿ 18 ರನ್ ನೀಡಿ 2 ವಿಕೆಟ್ ಪಡೆದಿದ್ದಕ್ಕಾಗಿ ಪಂದ್ಯ ಶ್ರೇಷ್ಠ ಆಟಗಾರ ಪ್ರಶಸ್ತಿಗೆ ಭಾಜನರಾದರು.
ಪಂದ್ಯದ ನಂತರ ಮಾತನಾಡಿದ ಶುಭ್ಮನ್ ಗಿಲ್, ಈ ಪಿಚ್‌ನಲ್ಲಿ ಬೌಂಡರಿಗಳನ್ನು ಬಾರಿಸುವುದು ಕಷ್ಟಕರವಾಗಿತ್ತು. ಇನ್ನು ಪಂದ್ಯವನ್ನು ಬೇಗನೆ ಮುಗಿಸಲು ಸಾಧ್ಯವಾಗದಿದ್ದಕ್ಕಾಗಿ ನಿರಾಶೆ ವ್ಯಕ್ತಪಡಿಸಿದರು.
ಗುಜರಾತ್ ಟೈಟನ್ಸ್ ತಂಡ ತನ್ನ ಮುಂದಿನ ಪಂದ್ಯವನ್ನು ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ಭಾನುವಾರ, ಏಪ್ರಿಲ್ 16ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸೆಣಸಾಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications