Yashasvi Jaiswal: ಶತಕ ಅಲ್ಲ, ನನ್ನ ತಲೆಯಲ್ಲಿ ಇದ್ದಿದ್ದೇ ಬೇರೆ: ಅಭಿಮಾನಿಗಳ ಹೃದಯ ಗೆದ್ದ ಯಶಸ್ವಿ ಜೈಸ್ವಾಲ್ ಮಾತು!
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಗುರುವಾರ ಐಪಿಎಲ್‌ನ ಹೊಸ ದಾಖಲೆಯೊಂದು ಸೃಷ್ಟಿಯಾಯಿತು. ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದು ಅಬ್ಬರಿಸಿದರು. ಈ ಸಂದರ್ಭದಲ್ಲಿ ಕೇವಲ 13 ಎಸೆತಗಳಲ್ಲಿ ಜೈಸ್ವಾಲ್ ಅರ್ಧ ಶತಕ ಸಿಡಿಸುವ ಮೂಲಕ ಐಪಿಎಲ್ ಇತಿಹಾಸದ ಅತ್ಯಂತ ವೇಗದ ಅರ್ಧ ಶತಕ ಸಿಡಿಸಿದ ದಾಖಲೆ ಬರೆದಿದ್ದಾರೆ. ಈ ಪಂದ್ಯದಲ್ಲಿ ಅಜೇಯ 98 ರನ್‌ಗಳಿಸಿದ ಜೈಸ್ವಾಲ್ 2 ರನ್‌ಗಳಿಂದ ಶತಕ ವಂಚಿತವಾದರು. ಆದರೆ ಪಂದ್ಯದ ಬಳಿಕ ಜೈಸ್ವಾಲ್ ನೀಡಿದ ಹೇಳಿಕೆ ಆರ್‌ಆರ್ ಅಭಿಮಾನಿಗಳ ಹೃದಯ ಗೆದ್ದಿದೆ.
ಈ ಪಂದ್ಯದ ಬಳಿಕ ಯಶಸ್ವಿ ಜೈಸ್ವಾಲ್ ತಮ್ಮ ಪ್ರದರ್ಶನದ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. "ನನ್ನ ತಲೆಯಲ್ಲಿ ಇದ್ದಿದ್ದು ಒಂದೇ ಅಂಗಳಕ್ಕಿಳಿದು ಚೆನ್ನಾಗಿ ಆಡಬೇಕು. ಇಂದಿನ ಅನುಭವ ಬಹಳ ಅದ್ಭುತವಾಗಿದೆ. ನಾನು ಅಂದುಕೊಂಡಂತೆಯೇ ಎಲ್ಲ ನಡೆಯಿತು ಎಂದಲ್ಲ. ಆದರೆ ನಾನು ಸಾಕಷ್ಟು ಉತ್ತಮ ಸಿದ್ಧೆ ನಡೆಸಿದ್ದೆ ಹಾಗೂ ನನ್ನ ಮೇಲೆ ನಂಬಿಕೆ ಹೊಂದಿದ್ದೆ. ಅದರ ಫಲಿತಾಂಶ ದೊರೆಯುತ್ತದೆ ಎಂಬುದರ ಅರಿವು ನನಗಿತ್ತು" ಎಂದಿದ್ದಾರೆ ಜೈಸ್ವಾಲ್.

ಇನ್ನು ಈ ಸಂದರ್ಭದಲ್ಲಿ ಶತಕ ಕೈತಪ್ಪಿದ್ದರ ಬೇಸರವಿದೆಯಾ ಎಂದು ಕೇಳಿದಾಗ ಜೈಸ್ವಾಲ್ ಈ ರೀತಿ ಉತ್ತರ ನೀಡಿ ಗಮನಸೆಳೆದರು. "ನನ್ನ ತಲೆಯಲ್ಲಿ ರನ್‌ರೇಟ್ ಬಗ್ಗೆ ಮಾತ್ರವೇ ಯೋಚನೆಯಿತ್ತು. ನಾನು ಮತ್ತು ಸಂಜು ಅಣ್ಣ ಸಾಧ್ಯವಾದಷ್ಟು ಬೇಗನೆ ಪಂದ್ಯವನ್ನು ಮುಗಿಸುವ ಬಗ್ಗೆ ಮಾತನಾಡಿಕೊಳ್ಳುತ್ತಿದ್ದೆವು"ಎಂದು ಪ್ರತಿಕ್ರಿಯೆ ನೀಡುವ ಮೂಲಕ ಶತಕದ ಬಗ್ಗೆ ತಾನು ಹೆಚ್ಚಿನ ತಲೆಕೆಡಿಸಿಕೊಂಡಿಲ್ಲ ಎಂಬ ಪ್ರತಿಕ್ರಿಯೆ ಹಂಚಿಕೊಂಡಿದ್ದಾರೆ.
ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 148 ರನ್‌ಗಳನ್ನು ಗಳಿಸಿ ಸಾಧಾರಣ ಗುರಿಯನ್ನು ಆರ್‌ಆರ್ ಮುಂದಿಟ್ಟಿತ್ತು. ಕೆಕೆಆರ್ ಪರವಾಗಿ ವೆಂಕಟೇಶ್ ಐಯ್ಯರ್ 57 ರನ್ ಸಿಡಿಸಿ ಏಕಾಂಗಿ ಹೋರಾಟ ನೀಡಿದರು. ಇನ್ನು ಆರ್‌ಆರ್ ಪರವಾಗಿ ಯುಜುವೇಂದ್ರ ಚಾಹಲ್ ಮ್ಯಾಚ್ ವಿನ್ನಿಂಗ್ ಬೌಲಿಂಗ್ ಪ್ರದರ್ಶನ ನೀಡಿದ್ದು ನಾಲ್ಕು ಓವರ್‌ಗಳಲ್ಲಿ 25 ರನ್ ನೀಡಿ 4 ವಿಕೆಟ್ ಪಡೆದುಕೊಂಡಿದ್ದಾರೆ.
13 ಎಸೆತಗಳಲ್ಲಿ ಅರ್ಧ ಶತಕ: ಇನ್ನು ಕೊಲ್ಕತ್ತಾ ನೈಟ್ ರೈಡರ್ಸ್ ನೀಡಿದ 149 ರನ್‌ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸ್ಪೋಟಕ ಆರಂಬ ದೊರೆಯಿತು. ನಿತೀಶ್ ರಾಣಾ ಎಸೆದ ಮೊದಲ ಓವರ್‌ನಲ್ಲಿ ಜೈಸ್ವಾಲ್ ಸಿಕ್ಸರ್ ಬೌಂಡರಿಗಳ ಮಳೆಗರೆದಿದ್ದು ಮೊದಲ ಓವರ್‌ಗಲ್ಲಿಯೇ 26 ರನ್ ಕಲೆಹಾಕಿದರು. ನಂತರ ಕೇವಲ 13 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿ ಐಪಿಎಲ್‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಈ ಪಂದ್ಯದಲ್ಲಿ 47 ಎಸೆತಗಳ್ನನು ಎದುರಿಸಿದ ಜೈಸ್ವಾಲ್ 13 ಬೌಂಡರಿ ಹಾಗೂ 5 ಸಿಕ್ಸರ್ ಸಿಡಿಸಿ ಅಜೇಯ 98 ರನ್‌ಗಳಿಸಿದರು. ಇನ್ನು ನಾಯಕ ಸಂಜು ಸ್ಯಾಮ್ಸನ್ ಕೂಡ ಕೇವಲ 29 ಎಸೆತಗಳಲ್ಲಿ 48 ರನ್ ಬಾರಿಸಿ ಮಿಂಚಿದರು. ಹೀಗಾಗಿ ಆರ್‌ಆರ್ ತಂಡ 13.1 ಓವರ್‌ಗಳಲ್ಲಿ ಕೆಕೆಆರ್ ನೀಡಿದ ಗುರಿ ಬೆನ್ನಟ್ಟುವಲ್ಲಿ ಯಶಸ್ವಿಯಾಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications