IPL 2024: ಪ್ಲೇಆಫ್ ಪ್ರವೇಶಿಸಿದ ಆರ್‌ಸಿಬಿ ಹುಡುಗರಿಗೆ ದೂರದಿಂದಲೇ ವಿಶೇಷ ಸಂದೇಶ ಕಳಿಸಿದ ಮಾಜಿ ಬಾಸ್!
ಶನಿವಾರ, ಮೇ 18ರಂದು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡವನ್ನು 27 ರನ್‌ಗಳಿಂದ ಸೋಲಿಸಿದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಕಳೆದ ಐದು ಆವೃತ್ತಿಗಳಲ್ಲಿ ನಾಲ್ಕನೇ ಬಾರಿಗೆ ಪ್ಲೇಆಫ್ ತಲುಪಿತು.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ರ ಎಲಿಮಿನೇಟರ್‌ನಲ್ಲಿ ಸ್ಥಾನ ಪಡೆಯಲು ಫಾಫ್ ಡು ಪ್ಲೆಸಿಸ್ ನಾಯಕತ್ವದ ಆರ್‌ಸಿಬಿ ತಂಡ ಸತತ ಆರನೇ ಪಂದ್ಯವನ್ನು ಗೆದ್ದ ನಂತರ, ಆರ್‌ಸಿಬಿ ಮಾಜಿ ಸಹ-ಮಾಲೀಕ ವಿಜಯ್ ಮಲ್ಯ ಅಭಿನಂದನೆಯ ಸಂದೇಶವನ್ನು ರವಾನಿಸಿದ್ದಾರೆ.
ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯನ್ನು ಹುಟ್ಟುಹಾಕಿದ ಮಾಜಿ ಮದ್ಯದ ದೊರೆ, ದೂರದ ದೇಶದಲ್ಲಿದ್ದರೂ ತಂಡದ ಮೇಲಿನ ಪ್ರೀತಿ ಒಂಚೂರು ಕಡಿಮೆಯಾಗಿಲ್ಲ. ತಂಡದ ಪ್ರತಿ ಪಂದ್ಯವನ್ನು ವೀಕ್ಷಿಸುತ್ತಿದ್ದಾರೆ ಎನ್ನುವುದಕ್ಕೆ ಈ ಸಂದೇಶ ಸಾಕ್ಷಿಯಾಗಿದೆ.

ಆರ್‌ಸಿಬಿ ಪ್ರಸಕ್ತ ಐಪಿಎಲ್ ಆವೃತ್ತಿಯಲ್ಲಿ ತನ್ನ ಮೊದಲ ಎಂಟು ಪಂದ್ಯಗಳಲ್ಲಿ ಏಳರಲ್ಲಿ ಸೋಲು ಅನುಭವಿಸಿದಾಗ ತೀವ್ರ ಸಂಕಷ್ಟದಲ್ಲಿತ್ತು ಮತ್ತು ಪ್ಲೇಆಫ್ ರೇಸ್‌ನಿಂದ ಹೊರಬೀಳುವ ಮೊದಲ ತಂಡವೆನಿಸಿತ್ತು.
ಆದಾಗ್ಯೂ, ಆರ್‌ಸಿಬಿ ಹುಡುಗರು ಪ್ರತಿಕೂಲ ಸಮಯದಲ್ಲಿ ಪ್ರಚಂಡ ನಂಬಿಕೆ ಮತ್ತು ಒಗ್ಗಟ್ಟನ್ನು ತೋರಿಸಿದರು ಮತ್ತು ಸೋಲಿನ ವಿಮೋಚನೆಯ ಕಥೆಯನ್ನು ಬರೆದರು. ಶನಿವಾರದಂದು ಹಾಲಿ ಚಾಂಪಿಯನ್ ಸಿಎಸ್‌ಕೆ ತಂಡವನ್ನು ಪ್ಲೇಆಫ್ ಸ್ಪರ್ಧೆಯಿಂದ ಹೊರಹಾಕಿದ ಆರ್‌ಸಿಬಿ, ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದ ತಂಡವಾಗಿ ಪ್ಲೇಆಫ್‌ಗೆ ಪ್ರವೇಶಿಸಿದೆ.
ಐತಿಹಾಸಿಕ ಫಲಿತಾಂಶದ ನಂತರ, ವಿಜಯ್ ಮಲ್ಯ ಅವರು ಆಟಗಾರರ ಪ್ರದರ್ಶನ ಮತ್ತು ಕೌಶಲ್ಯವನ್ನು ಶ್ಲಾಘಿಸಿದರು. ಅಲ್ಲದೆ ಪಂದ್ಯಾವಳಿಯ ಮುಂದಿನ ನಿರ್ಣಾಯಕ ಪಂದ್ಯಗಳಿಗೆ ಹಾಗೂ ಐಪಿಎಲ್ ಟ್ರೋಫಿ ಗೆಲ್ಲುವುದಕ್ಕೆ ಶುಭ ಹಾರೈಸಿದರು.

"ಟಾಪ್ 4ರಲ್ಲಿ ಅರ್ಹತೆ ಗಳಿಸಿದ್ದಕ್ಕಾಗಿ ಮತ್ತು ಐಪಿಎಲ್ ಪ್ಲೇಆಫ್ ತಲುಪಿದ್ದಕ್ಕಾಗಿ ಆರ್‌ಸಿಬಿ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ನಿರಾಶಾದಾಯಕ ಆರಂಭದ ನಂತರ ಉತ್ತಮ ಪ್ರದರ್ಶನ ಮತ್ತು ಕೌಶಲ್ಯವು ಗೆಲುವಿನ ಆವೇಗವನ್ನು ಸೃಷ್ಟಿಸಿದೆ. ಮುಂದಿನ ಪಂದ್ಯಗಳಿಗೆ ಮತ್ತು ಟ್ರೋಫಿ ಮೇಲೆತ್ತಲು ಶುಭ ಹಾರೈಕೆಗಳು," ಎಂದು ವಿಜಯ್ ಮಲ್ಯ ತಮ್ಮ ಅಧಿಕೃತ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ನಾಯಕ ಫಾಫ್ ಡು ಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ಮುಂಭಾಗದಿಂದ ತಂಡವನ್ನು ಮುನ್ನಡೆಸಿದರೆ, ಬೌಲರ್‌ಗಳು ಆರ್‌ಸಿಬಿ ಯೋಜನೆಗಳಿಗೆ ಅಂಟಿಕೊಂಡು ಬೌಲಿಂಗ್ ಮಾಡುವ ಮೂಲಕ ಗೆಲುವಿನ ನಗೆ ಬೀರುತ್ತಿದ್ದಾರೆ.
ಸಿಎಸ್‌ಕೆ ನಾಯಕ ರುತುರಾಜ್ ಗಾಯಕ್ವಾಡ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿದ ನಂತರ, ಫಾಫ್ ಡು ಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ಆರ್‌ಸಿಬಿ ತಂಡಕ್ಕೆ ಉತ್ತಮ ಆರಂಭವನ್ನು ಒದಗಿಸಲು 78 ರನ್‌ಗಳ ಆರಂಭಿಕ ಜೊತೆಯಾಟ ನಿರ್ಮಿಸಿದರು.
ವಿರಾಟ್ ಕೊಹ್ಲಿ 29 ಎಸೆತಗಳಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್‌ಗಳ ಸಮೇತ 47 ರನ್ ಗಳಿಸಿದರೆ, ಫಾಫ್ ಡು ಪ್ಲೆಸಿಸ್ 39 ಎಸೆತಗಳಲ್ಲಿ 3 ಬೌಂಡರಿ ಹಾಗೂ 3 ಸಿಕ್ಸರ್ ಮೂಲಕ 54 ರನ್ ಗಳಿಸಿ ಔಟಾದರು. ಇನ್ ಫಾರ್ಮ್ ಬ್ಯಾಟರ್ ರಜತ್ ಪಾಟಿದಾರ್ 23 ಎಸೆತಗಳಲ್ಲಿ 2 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ 41 ರನ್ ಗಳಿಸಿ ಮಧ್ಯಮ ಓವರ್‌ಗಳಲ್ಲಿ ಆವೇಗವನ್ನು ಮುಂದುವರಿಸಿದರು.
ಕ್ಯಾಮೆರಾನ್ ಗ್ರೀನ್ 17 ಎಸೆತಗಳಲ್ಲಿ 38 ರನ್ ಗಳಿಸಿ ಅಜೇಯರಾಗುಳಿದರು ಮತ್ತು ದಿನೇಶ್ ಕಾರ್ತಿಕ್ 6 ಎಸೆತಗಳಲ್ಲಿ 14 ರನ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ 5 ಎಸೆತಗಳಲ್ಲಿ 16 ರನ್‌ಗಳ ಸಾಥ್ ಪಡೆದರು. ಅಂತಿಮವಾಗಿ ಆತಿಥೇಯ ಆರ್‌ಸಿಬಿ ತಂಡವನ್ನು 20 ಓವರ್‌ಗಳಲ್ಲಿ 5 ವಿಕೆಟ್‌ಗೆ 218 ರನ್‌ಗಳಿಗೆ ಕೊಂಡೊಯ್ದರು.
ಆರ್‌ಸಿಬಿ ಪ್ಲೇಆಫ್ ತಲುಪಲು ಸಿಎಸ್‌ಕೆ ತಂಡವನ್ನು 201 ಅಥವಾ ಅದಕ್ಕಿಂತ ಕಡಿಮೆ ಮೊತ್ತಕ್ಕೆ ನಿರ್ಬಂಧಿಸುವ ಅಗತ್ಯವಿತ್ತು. ರಚಿನ್ ರವೀಂದ್ರ 37 ಎಸೆತಗಳಲ್ಲಿ 61 ರನ್ ಮತ್ತು ರವೀಂದ್ರ ಜಡೇಜಾ 22 ಎಸೆತಗಳಲ್ಲಿ ಅಜೇಯ 42 ರನ್ ಗಳಿಸಿ ಕೊನೆಯವರೆಗೂ ಹೋರಾಟ ನೀಡಲು ಪ್ರಯತ್ನಿಸಿದರು.
ಎಂಎಸ್ ಧೋನಿ ಕೂಡ 13 ಎಸೆತಗಳಲ್ಲಿ 25 ರನ್ ಗಳಿಸಿ ಭರ್ಜರಿ ಪ್ರದರ್ಶನ ನೀಡಿದರು. ಆದರೂ ಅಂತಿಮವಾಗಿ ಆರ್‌ಸಿಬಿ ಪ್ಲೇಆಫ್‌ಗೆ ಪ್ರವೇಶಿಸಿದ ಕಾರಣ, ಸಿಎಸ್‌ಕೆ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 191 ರನ್‌ಗಳನ್ನು ಮಾತ್ರ ಗಳಿಸಿ ಸೋತರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications