2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಗಾಗಿ ಹರಾಜು ಪ್ರಕ್ರಿಯೆ ಡಿಸೆಂಬರ್ ಅಂತ್ಯದಲ್ಲಿ ನಡೆಯುವ ಸಾಧ್ಯತೆಯಿದ್ದು, ಫ್ರಾಂಚೈಸಿಗಳ ಪರ್ಸ್‌ಗೆ ಸಂಬಂಧಿಸಿದಂತೆ ಕೆಲವು ಬದಲಾವಣೆ ಕಾಣಬಹುದಾಗಿದೆ.
ಮುಂಬರುವ ಐಪಿಎಲ್ ಪಂದ್ಯಾವಳಿಯ ಮಿನಿ ಹರಾಜಿಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪರ್ಸ್ ಮೊತ್ತವನ್ನು 100 ಕೋಟಿ ರೂಪಾಯಿಗೆ ಹೆಚ್ಚಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ಇದರ ಜೊತೆಗೆ, ಫ್ರಾಂಚೈಸಿಗಳು ಇಷ್ಟಟ್ಟಷ್ಟು ಹೆಚ್ಚು ಆಟಗಾರರನ್ನು ಉಳಿಸಿಕೊಳ್ಳಲು ಅನುಮತಿಸಲಾಗುವುದು ಮತ್ತು ಉಳಿದ ಆಟಗಾರರು ಹರಾಜು ಪ್ರಕ್ರಿಯೆಗೆ ಹೋಗುತ್ತಾರೆ.
ಅಲ್ಲದೆ, ಕ್ರಿಸ್‌ಮಸ್ ರಜಾ ದಿನಗಳೊಂದಿಗೆ ಘರ್ಷಣೆಯನ್ನು ತಪ್ಪಿಸಲು ಡಿಸೆಂಬರ್ ಅಂತ್ಯದಲ್ಲಿ ಮಿನಿ ಹರಾಜನ್ನು ನಡೆಸುವ ಆಲೋಚನೆಯ ಬಗ್ಗೆ ಬಿಸಿಸಿಐ ಯೋಚಿಸುತ್ತಿದೆ.
ಹೀಗಾಗಿ ಅಕ್ಟೋಬರ್-ನವೆಂಬರ್‌ನಲ್ಲಿ ಭಾರತದಲ್ಲಿ ನಡೆಯಲಿರುವ 2023ರ ಐಸಿಸಿ ಏಕದಿನ ವಿಶ್ವಕಪ್ ಮುಕ್ತಾಯದ ನಂತರ ಹರಾಜಿನ ದಿನಾಂಕವನ್ನು ನಿರ್ಧರಿಸಲಾಗುತ್ತದೆ.
"ಎಲ್ಲರ ಗಮನ ಇದೀಗ ವಿಶ್ವಕಪ್‌ನತ್ತ ನೆಟ್ಟಿದೆ ಮತ್ತು ಅದರ ನಂತರ, ನಾವು ಐಪಿಎಲ್‌ನತ್ತ ಸಾಗುತ್ತೇವೆ. 2023ರ ವಿಶ್ವಕಪ್ ನಂತರ ದಿನಾಂಕವನ್ನು ನಿರ್ಧರಿಸುತ್ತೇವೆ. ಇದು ಡಿಸೆಂಬರ್ ಮೂರನೇ ಅಥವಾ ನಾಲ್ಕನೇ ವಾರದಲ್ಲಿ ನಡೆಯಲಿದೆ," ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
"ಐಪಿಎಲ್ ಹರಾಜು ಪ್ರಕ್ರಿಯೆ ಖಚಿತವಾಗಿ ಕ್ರಿಸ್‌ಮಸ್ ರಜಾ ದಿನಗಳಲ್ಲಿ ಇರುವುದಿಲ್ಲ. ಎಲ್ಲರಿಗೂ ಅನುಕೂಲಕರವಾದ ದಿನಾಂಕವನ್ನು ನೋಡಲು ನಾವು ಪ್ರಯತ್ನಿಸುತ್ತೇವೆ," ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಐಪಿಎಲ್ 2024ರ ಮಿನಿ ಹರಾಜಿನ ಆತಿಥ್ಯಕ್ಕೆ ಮುಂಬೈ, ಜೈಪುರ, ಕೋಲ್ಕತ್ತಾ ಸ್ಪರ್ಧೆಯಲ್ಲಿವೆ
ಮುಂಬೈ, ಜೈಪುರ, ಅಹಮದಾಬಾದ್, ಕೊಚ್ಚಿ ಮತ್ತು ಕೋಲ್ಕತ್ತಾ ಸ್ಥಳಗಳನ್ನು 2024ರ ಮಿನಿ ಹರಾಜಿಗೆ ಆತಿಥ್ಯ ವಹಿಸಲು ಬಿಸಿಸಿಐ ಶಾರ್ಟ್‌ಲಿಸ್ಟ್ ಮಾಡಿದೆ ಎಂದು ವರದಿ ತಿಳಿಸಿದೆ.
2023ರ ಐಪಿಎಲ್ ಆವೃತ್ತಿಗಾಗಿ ಕೊಚ್ಚಿಯಲ್ಲಿ ನಡೆದ 2022ರ ಹರಾಜಿನಲ್ಲಿ ಎಲ್ಲಾ 10 ಫ್ರಾಂಚೈಸಿಗಳಿಗೆ 80 ಆಟಗಾರರು 167 ಕೋಟಿ ರೂಪಾಯಿಗೆ ಖರೀದಿಯಾಗಿದ್ದರು.
ಇನ್ನು 2023ರ ಐಪಿಎಲ್ ಹರಾಜಿನಲ್ಲಿ ಸ್ಯಾಮ್ ಕುರ್ರಾನ್, ಬೆನ್ ಸ್ಟೋಕ್ಸ್, ಹ್ಯಾರಿ ಬ್ರೂಕ್, ನಿಕೋಲಸ್ ಪೂರನ್ ಮತ್ತು ಕ್ಯಾಮರೂನ್ ಗ್ರೀನ್ ಸೇರಿದಂತೆ ಹಲವಾರು ಆಟಗಾರರನ್ನು ದಾಖಲೆಯ ಮೊತ್ತಕ್ಕೆ ಫ್ರಾಂಚೈಸಿಗಳು ಖರೀದಿಸಿ ಹಿಂದಿನ ದಾಖಲೆಯನ್ನು ಮುರಿದರು.
ಪಂಜಾಬ್ ಕಿಂಗ್ಸ್ ಫ್ರಾಂಚೈಸಿ 18.5 ಕೋಟಿ ರೂಪಾಯಿಗೆ ಖರೀದಿಸಿದ್ದರಿಂದ ಸ್ಯಾಮ್ ಕುರ್ರಾನ್ ಹರಾಜಿನಲ್ಲಿ ಅತ್ಯಂತ ದುಬಾರಿ ಆಟಗಾರನಾದರು. ಮುಂಬರುವ ಆವೃತ್ತಿಗಾಗಿ ಫ್ರಾಂಚೈಸಿಗಳು ತಮ್ಮ ತಂಡಗಳನ್ನು ಬಲಪಡಿಸುವ ಸಲುವಾಗಿ ಅಗ್ರ ಕ್ರಿಕೆಟಿಗರನ್ನು ಖರೀದಿಸಲು ದೊಡ್ಡ ಮೊತ್ತವನ್ನು ಚೆಲ್ಲಲು ಸಜ್ಜಾಗಿವೆ.