GT vs SRH: ಪೂರ್ವದಲ್ಲಿ ರೈಸ್ ಆಗದ ಹೈದರಾಬಾದ್ ಸನ್; ತವರಿನಲ್ಲಿ ಗುಜರಾತ್ ಟೈಟನ್ಸ್ ವಿನ್
ಭಾನುವಾರ, ಮಾರ್ಚ್ 31ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 12ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಗುಜರಾತ್ ಟೈಟನ್ಸ್ ಭರ್ಜರಿ ಗೆಲುವು ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡ ಯಾವುದೇ ಅರ್ಧಶತಕ ಬರದಿದ್ದರೂ, ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿತ್ತು.

163 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ಗುಜರಾತ್ ಟೈಟನ್ಸ್ ತಂಡ ಸಾಯಿ ಸುದರ್ಶನ್, ಡೇವಿಡ್ ಮಿಲ್ಲರ್ ಮತ್ತು ಶುಭ್ಮನ್ ಗಿಲ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 168 ರನ್ ಗಳಿಸಿ 7 ವಿಕೆಟ್‌ಗಳ ನಿರ್ಣಾಯಕ ಗೆಲುವು ದಾಖಲಿಸಿತು.
ಗಮನಾರ್ಹವಾಗಿ, ಐಪಿಎಲ್ 2024ರಲ್ಲಿ ಈವರೆಗೆ ಆಡಿದ 12 ಪಂದ್ಯಗಳಲ್ಲಿ 11 ಪಂದ್ಯಗಳನ್ನು ತವರಿನಲ್ಲಿ ಆಡಿದ ತಂಡಗಳು ಗೆದ್ದುಬೀಗಿವೆ. ಆರ್‌ಸಿಬಿ ತಂಡ ಮಾತ್ರ ತವರಿನಲ್ಲಿ ಸೋತಿದ್ದು, ಕೆಕೆಆರ್ ತವರಿನ ಹೊರಗೆ ಗೆದ್ದಿದೆ.
ಗುಜರಾತ್ ಟೈಟನ್ಸ್ ಇನ್ನಿಂಗ್ಸ್ ಆರಂಭಿಸಿದ ನಾಯಕ ಶುಭ್ಮನ್ ಗಿಲ್ ಮತ್ತು ವೃದ್ಧಿಮಾನ್ ಸಹಾ ಉತ್ತಮ ಆರಂಭ ಒದಗಿಸಿಕೊಟ್ಟರು. ಈ ಜೋಡಿ ಮೊದಲ ವಿಕೆಟ್‌ಗೆ 4.1 ಓವರ್‌ಗಳಲ್ಲಿ 36 ರನ್‌ಗಳ ಜೊತೆಯಾಟ ನೀಡಿತು. ಅದರೆ ಈ ವೇಳೆ 13 ಎಸೆತಗಳಲ್ಲಿ 1 ಬೌಂಡರಿ ಹಾಗೂ 2 ಸಿಕ್ಸರ್ ಮೂಲಕ 25 ರನ್ ಗಳಿಸಿದ್ದ ವೃದ್ಧಿಮಾನ್ ಸಹಾ ಔಟಾದರು.

ಇನ್ನು ನಾಯಕ ಶುಭ್ಮನ್ ಗಿಲ್ 28 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ಸಮೇತ 36 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಸಾಯಿ ಸುದರ್ಶನ್ 36 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 45 ರನ್ ಗಳಿಸಿ ವಿಕೆಟ್ ನೀಡಿದರು.
ಉಳಿದಂತೆ ಡೇವಿಡ್ ಮಿಲ್ಲರ್ 27 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ಸಮೇತ ಅಜೇಯ 44 ರನ್ ಬಾರಿಸಿದರೆ, ವಿಜಯ್ ಶಂಕರ್ 11 ಎಸೆತಗಳಲ್ಲಿ 2 ಬೌಂಡರಿ ಮೂಲಕ ಅಜೇಯ 14 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಬೌಲಿಂಗ್‌ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಶಹಬಾಜ್ ಅಹ್ಮದ್, ಮಯಾಂಕ್ ಮಾರ್ಕಂಡೆ ಮತ್ತು ಪ್ಯಾಟ್ ಕಮ್ಮಿನ್ಸ್ ತಲಾ ಒಂದೊಂದು ವಿಕೆಟ್ ಪಡೆದರೆ, ಉಳಿದವರು ವಿಕೆಟ್ ರಹಿತರಾದರು.

ಇದಕ್ಕೂ ಮುನ್ನ ಸನ್ ರೈಸರ್ಸ್ ಹೈದರಾಬಾದ್ ಇನ್ನಿಂಗ್ಸ್ ತೆರೆದ ಟ್ರಾವಿಸ್ ಹೆಡ್ ಮತ್ತು ಮಯಾಂಕ್ ಜೋಡಿ ಮೊದಲ ವಿಕೆಟ್‌ಗೆ 4.2 ಓವರ್‌ಗಳಲ್ಲಿ 34 ರನ್‌ಗಳ ಜೊತೆಯಾಟ ನೀಡಿತು. 17 ಎಸೆತಗಳಲ್ಲಿ 2 ಬೌಂಡರಿ ಮೂಲಕ 16 ರನ್ ಗಳಿಸಿದ್ದ ಮಯಾಂಕ್ ಅಗರ್ವಾಲ್ ಔಟಾದರು.
ಇನ್ನು ಆಕ್ರಮಣಕಾರಿಯಾಗಿ ಆಡುತ್ತಿದ್ದ ಟ್ರಾವಿಸ್ ಹೆಡ್ 14 ಎಸೆತಗಳಲ್ಲಿ 3 ಬೌಂಡರಿ ಸಮೇತ 19 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ನಂತರ ಬಂದ ಅಭಿಷೇಕ್ ಶರ್ಮಾ 20 ಎಸೆತಗಳಲ್ಲಿ 2 ಬೌಂಡರಿ ಮತ್ತು 2 ಸಿಕ್ಸರ್ ಸಮೇತ 29 ರನ್ ಬಾರಿಸಿ ಔಟಾದರು.
ಬಳಿಕ ಏಡೆನ್ ಮಾರ್ಕ್ರಾಮ್ 19 ಎಸೆತಗಳಲ್ಲಿ 17 ರನ್ ಮಾತ್ರ ಗಳಿಸಿದರೆ, ಸ್ಫೋಟಕ ಬ್ಯಾಟರ್ ಹೆನ್ರಿಚ್ ಕ್ಲಾಸೆನ್ 13 ಎಸೆತಗಳಲ್ಲಿ 1 ಬೌಂಡರಿ ಹಾಗೂ 2 ಸಿಕ್ಸರ್ ಮೂಲಕ 24 ರನ್ ಗಳಿಸಿದರು. ಕೊನೆಯಲ್ಲಿ ಶಹಬಾಜ್ ಅಹ್ಮದ್ 20 ಎಸೆತಗಳಲ್ಲಿ 22 ರನ್ ಗಳಿಸಿದರೆ, ಅಬ್ದುಲ್ ಸಮದ್ 14 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 1 ಸಿಕ್ಸರ್ ಸಮೇತ 29 ರನ್ ಬಾರಿಸಿದರು.
ಬೌಲಿಂಗ್‌ನಲ್ಲಿ ಗುಜರಾತ್ ಟೈಟನ್ಸ್ ತಂಡದ ಪರ ಮೋಹಿತ್ ಶರ್ಮಾ 4 ಓವರ್‌ಗಳಲ್ಲಿ 25 ರನ್ ನೀಡಿ 3 ವಿಕೆಟ್ ಕಬಳಿಸಿದರು. ಉಳಿದಂತೆ ಅಜ್ಮತುಲ್ಲಾ ಒಮರ್ಜಾಯ್, ಉಮೇಶ್ ಯಾದವ್ ಮತ್ತು ರಶೀದ್ ಖಾನ್ ತಲಾ ಒಂದೊಂದು ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications