ಇಂದಿನಿಂದ ಐಪಿಎಲ್ 2024ಗೆ ಚಾಲನೆ ಸಿಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಚೆನ್ನೈನ ಎಂ ಚಿದಂಬರಂ ಅಂಗಳದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯದಲ್ಲಿ ಆರ್‌ಸಿಬಿ ಗೆಲುವಿನ ನಗೆ ಬೀರ ಬೇಕೆಂದರೆ ಐದು ಆಟಗಾರರು ಅಬ್ಬರದ ಪ್ರದರ್ಶನ ನೀಡುವುದು ಅವಶ್ಯಕ.. ಆರ್‌ಸಿಬಿ ಆ ಐದು ಪ್ಲೇಯರ್‌ಗಳ ಬಗ್ಗೆ ಮಾಹಿತಿ ಇಲ್ಲಿದೆ.
2019 ರಲ್ಲಿ, RCB ಮತ್ತು CSK ನಡುವೆ IPL ನ ಉದ್ಘಾಟನಾ ಪಂದ್ಯವು ಸಹ ಇದೇ ಅಂಗಳದಲ್ಲಿ ನಡೆದಿತ್ತು. ಈ ಪಂದ್ಯವನ್ನು ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗೆದ್ದುಕೊಂಡಿತ್ತು. ಆ ಸೋಲಿಗೆ ಈ ಬಾರಿ ಸೇಡು ತೀರಿಸಿಕೊಳ್ಳಲು ಆರ್‌ಸಿಬಿ ತಂಡ ಪ್ಲ್ಯಾನ್ ಮಾಡಿಕೊಂಡಿದ್ದು, ಅಬ್ಬರದ ಆಟವನ್ನು ಆಡುವ ಅವಶ್ಯಕತೆ ಇದೆ. ಅಂಕಿ ಅಂಶಗಳು ಆರ್‌ಸಿಬಿ ಪರವಾಗಿಲ್ಲ. ಐಪಿಎಲ್ ಇತಿಹಾಸದಲ್ಲಿ ಇದುವರೆಗೆ ಸಿಎಸ್‌ಕೆ ಮತ್ತು ಆರ್‌ಸಿಬಿ ನಡುವೆ ಒಟ್ಟು 31 ಪಂದ್ಯಗಳು ನಡೆದಿದ್ದು, ಈ ಪೈಕಿ ಸಿಎಸ್‌ಕೆ 20 ಪಂದ್ಯಗಳನ್ನು ಗೆದ್ದಿದೆ ಮತ್ತು ಆರ್‌ಸಿಬಿ ಕೇವಲ 10 ಪಂದ್ಯಗಳನ್ನು ಗೆದ್ದಿದೆ. ಒಂದು ಪಂದ್ಯದ ಫಲಿತಾಂಶ ಬಂದಿಲ್ಲ. ಚೆನ್ನೈನ ಎಂಎ ಚಿದಂಬರಂ ಅಂಗಳದಲ್ಲಿ 8 ಬಾರಿ ಮುಖಾಮುಖಿಯಾಗಿದ್ದು, ಅದರಲ್ಲಿ ಚೆನ್ನೈ 7 ಪಂದ್ಯಗಳನ್ನು ಗೆದ್ದಿದೆ ಮತ್ತು ಬೆಂಗಳೂರು ಕೇವಲ ಒಂದು ಪಂದ್ಯದಲ್ಲಿ ಗೆಲುವು ಸಾಧಿಸಿದೆ. 2008ರಲ್ಲಿ ಆರ್‌ಸಿಬಿ ಈ ಅಂಗಳದಲ್ಲಿ ಜಯ ದಾಖಲಿಸಿತ್ತು. ಮತ್ತೆ ಆರ್‌ಸಿಬಿ ಈ ಸಾಧನೆ ಮಾಡಬೇಕಾದಲ್ಲಿ ಈ ಐವರು ಆಟಗಾರರು ಅಬ್ಬರಿಸಿವುದು ಅನಿವಾರ್ಯ.

ಚೆನ್ನೈ ತಂಡದಲ್ಲಿ ಆಡಿರುವ ಅನುಭವ ಹೊಂದಿರುವ ಫಾಫ್ ಡುಪ್ಲೇಸಿಸ್, ಈಗ ಆರ್‌ಸಿಬಿ ತಂಡದ ನಾಯಕ. ಇವರು ಅಬ್ಬರದ ಬ್ಯಾಟಿಂಗ್ ನಡೆಸಲು ಹೆಸರುವಾಸಿ. ಬಿಗ್ ಹಿಟ್ ಬಾರಿಸುವಲ್ಲಿ ಫಾಫ್ ಖ್ಯಾತನಾಮರು. ಇವರು ಅಂಗಳದಲ್ಲಿ ನೆಲಕ್ಕೂರಿ ನಿಂತಲ್ಲಿ ಬಿಗ್ ಸ್ಕೋರ್ ಫಿಕ್ಸ್. ಇವರು ಪವರ್ ಪ್ಲೇನಲ್ಲಿ ಪವರ್ ಫುಲ್ ಆಟವನ್ನು ಆಡಬೇಕಿದೆ. ಅಂದಾಗ ಮಾತ್ರ ಚೆನ್ನೈ ತಂಡದ ಬೌಲರ್‌ಗಳ ಮೇಲೆ ಪ್ರಭಾವ ಬೀರಬಹುದು. ಫಾಫ್ ಐಪಿಎಲ್‌ನಲ್ಲಿ 130 ಪಂದ್ಯಗಳನ್ನು ಆಡಿದ್ದು, 4138 ರನ್ ಸಿಡಿಸಿದ್ದಾರೆ.
ಟೀಮ್ ಇಂಡಿಯಾ ಹಾಗೂ ಆರ್‌ಸಿಬಿ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಮೇಲೆ ಅಪಾರ ನಿರೀಕ್ಷೆ ಇದೆ. ಈ ಐಪಿಎಲ್‌ನಲ್ಲಿ ವಿರಾಟ್ ಅಬ್ಬರದ ಬ್ಯಾಟಿಂಗ್ ಮೂಲಕ ಗಮನ ಸೆಳೆಯುವುದು ಅನಿವಾರ್ಯ. ವಿರಾಟ್ ಎದುರಾಳಿ ಬೌಲರ್‌ಗಳ ರಣತಂತ್ರವನ್ನು ಬುಡಮೇಲು ಮಾಡಿ ಆರ್ಭಟ ನಡೆಸಬೇಕಿದೆ. ಅಂದಾಗ ಮಾತ್ರ ಗೆಲುವಿನ ಆಸೆ ಈಡೇರುತ್ತದೆ. ಐಪಿಎಲ್‌ನಲ್ಲಿ ವಿರಾಟ್ ಅತಿ ಹೆಚ್ಚು ಶತಕ ಬಾರಿಸಿದ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ. ಇವರು ಇಂದಿನ ಪಂದ್ಯದಲ್ಲಿ ಬಿಗ್ ಇನ್ನಿಂಗ್ಸ್ ಆಡಿದರೆ, ಗೆಲುವು ಫಿಕ್ಸ್..

ಭರ್ಜರಿ ಫಾರ್ಮ್‌ನಲ್ಲಿರುವ ಸ್ಟಾರ್ ಆಟಗಾರ ಗ್ಲೇನ್ ಮ್ಯಾಕ್ಸ್‌ವೆಲ್ ಆರ್ಭಟಿಸುವುದು ಅನಿವಾರ್ಯ.. ಏಕದಿನ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್‌ಮನ್, ಅಫ್ಘಾನಿಸ್ತಾನ ವಿರುದ್ಧ ಏಕಾಂಗಿ ಹೋರಾಟ ನಡೆಸಿ ಘರ್ಜಿಸಿದ್ದರು. ಐಪಿಎಲ್‌ನಲ್ಲಿ ಇದುವರೆಗೆ 124 ಪಂದ್ಯಗಳನ್ನು ಆಡಿರುವ ಗ್ಲೆನ್ ಮ್ಯಾಕ್ಸ್‌ವೆಲ್ 2719 ರನ್ ಗಳಿಸಿದ್ದು, ಇದರಲ್ಲಿ 18 ಅರ್ಧ ಶತಕ ಸೇರಿವೆ.

ಪವರ್ ಪ್ಲೇ ಹಾಗೂ ಡೆತ್ ಓವರ್‌ನಲ್ಲಿ ಬಿಗುವಿನ ದಾಳಿ ನಡೆಸಿ ಅಬ್ಬರಿಸಲು ಮೊಹಮ್ಮದ್ ಸಿರಾಜ್ ರೆಡಿ. ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ 79 ಪಂದ್ಯಗಳನ್ನು ಆಡಿರುವ ಸಿರಾಜ್ ಇದುವರೆಗೆ 78 ವಿಕೆಟ್ ಪಡೆದಿದ್ದಾರೆ. ಅಂತಾರಾಷ್ಟ್ರೀಯ ಟಿ20ಯಲ್ಲಿ ಹತ್ತು ಪಂದ್ಯಗಳನ್ನು ಆಡಿರುವ ಅವರು 12 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ಸ್ಟಾರ್ ಪ್ಲೇಯರ್ ಮೊದಲ ಪಂದ್ಯದಲ್ಲಿ ಅಬ್ಬರದ ಪ್ರದರ್ಶನ ನೀಡಿದಲ್ಲಿ ಗೆಲುವ ಸಾಧ್ಯ.
ಕ್ಯಾಮರೂನ್ ಗ್ರೀನ್ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡಲಿದ್ದಾರೆ. ಆಲ್‌ರೌಂಡರ್ ರೂಪದಲ್ಲಿ ಕಾಣಿಸಿಕೊಳ್ಳುವ ಇವರು ಅಬ್ಬರದ ಪ್ರದರ್ಶನ ನೀಡುವುದು ಅನಿವಾರ್ಯ. ಈ ಹಿಂದೆ ಅವರು ಮುಂಬೈ ಇಂಡಿಯನ್ಸ್‌ಗಾಗಿ ಆಡುತ್ತಿದ್ದು, ಭರವಸೆ ಮೂಡಿಸಿದ್ದಾರೆ. ಇವರು 16 ಐಪಿಎಲ್ ಪಂದ್ಯಗಳಲ್ಲಿ 282 ರನ್ ಗಳಿಸಿದ್ದಾರೆ. ಅಲ್ಲದೆ 6 ವಿಕೆಟ್ ಪಡೆದಿದ್ದಾರೆ.
ಆರ್‌ಸಿಬಿ ಸಂಭಾವ್ಯ ತಂಡ: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮೆರಾನ್ ಗ್ರೀನ್, ಮಹಿಪಾಲ್ ಲೊಮ್ರೊರ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಅಲ್ಜಾರಿ ಜೋಸೆಫ್, ಕರ್ಣ್ ಶರ್ಮಾ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್.