ಭಾನುವಾರ, ಏಪ್ರಿಲ್ 21ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಅನುಭವಿ ವಿಕೆಟ್‌ಕೀಪರ್-ಬ್ಯಾಟರ್ ದಿನೇಶ್ ಕಾರ್ತಿಕ್ ತಮ್ಮ 250ನೇ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದಲ್ಲಿ ಕಾಣಿಸಿಕೊಳ್ಳುವ ಮೂಲಕ ಅದ್ಭುತ ಸಾಧನೆ ಮಾಡಿದರು.
ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ತಮ್ಮ ಹಿಂದಿನ ಫ್ರಾಂಚೈಸಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಮೈದಾಕ್ಕಿಳಿಯುವ ಮೂಲಕ ತಮ್ಮ 250ನೇ ಐಪಿಎಲ್ ಪಂದ್ಯವನ್ನು ಆಡಿದರು.

ಭಾರತದ ವಿಕೆಟ್‌ಕೀಪರ್-ಬ್ಯಾಟರ್ ಸದ್ಯ ನಡೆಯುತ್ತಿರುವ ಐಪಿಎಲ್ 2024ರ ಋತುವಿನಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ ಮತ್ತು ಆಡುವ 11ರ ಬಳಗದಲ್ಲಿ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿದ್ದಾರೆ.
ದಿನೇಶ್ ಕಾರ್ತಿಕ್ ಈ ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ. ಆದರೆ ನಂತರ ಸ್ಫೋಟಕ ಬ್ಯಾಟಿಂಗ್ ಮೂಲಕ ಸುಧಾರಿಸಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ 250 ಪಂದ್ಯಗಳನ್ನು ಆಡಿದವರ ಪಟ್ಟಿಯಲ್ಲಿ ಅನುಭವಿ ವಿಕೆಟ್ ಕೀಪರ್-ಬ್ಯಾಟರ್ ದಿನೇಶ್ ಕಾರ್ತಿಕ್ ತಮ್ಮ ಆಪ್ತ ಸ್ನೇಹಿತ ರೋಹಿತ್ ಶರ್ಮಾ ಮತ್ತು ಭಾರತದ ಮಾಜಿ ನಾಯಕ ಎಂಎಸ್ ಧೋನಿ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
ಐಪಿಎಲ್‌ನ 2024ರ ಋತುವಿನಲ್ಲೇ ರೋಹಿತ್ ಶರ್ಮಾ 250 ಪಂದ್ಯಗಳ ಸಾಧನೆಯನ್ನು ತಲುಪಿದ್ದರು. ಗುರುವಾರ, ಏಪ್ರಿಲ್ 18ರಂದು ಮುಲ್ಲನ್‌ಪುರ ಕ್ರೀಡಾಂಗಣದಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಲು ಆಯ್ಕೆಯಾದಾಗ ರೋಹಿತ್ ಶರ್ಮಾ ಅವರು ಎಂಎಸ್ ಧೋನಿಯ ಗಣ್ಯ ಸಾಧನೆಯನ್ನು ಸರಿಗಟ್ಟಿದರು.

ಎಂಎಸ್ ಧೋನಿ, ರೋಹಿತ್ ಶರ್ಮಾ ಮತ್ತು ದಿನೇಶ್ ಕಾರ್ತಿಕ್ ನಂತರ, ವಿರಾಟ್ ಕೊಹ್ಲಿ 245 ಪಂದ್ಯಗಳೊಂದಿಗೆ ಅತಿ ಹೆಚ್ಚು ಐಪಿಎಲ್ ಪಂದ್ಯಗಳನ್ನು ಆಡಿದ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಐಪಿಎಲ್‌ನಲ್ಲಿ ಕೇವಲ 10 ಆಟಗಾರರು ಮಾತ್ರ 200 ಪಂದ್ಯಗಳ ಮೈಲಿಗಲ್ಲನ್ನು ದಾಟಿದ್ದಾರೆ ಮತ್ತು ಅವರೆಲ್ಲರೂ ಇದುವರೆಗೆ ಭಾರತೀಯ ಆಟಗಾರರಾಗಿದ್ದಾರೆ ಎನ್ನುವುದು ಗಮನಾರ್ಹ.
ಐಪಿಎಲ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ವಿದೇಶಿ ಆಟಗಾರನ ದಾಖಲೆಯು ಈ ಸಮಯದಲ್ಲಿ 189 ಪಂದ್ಯಗಳನ್ನು ಆಡಿರುವ ವೆಸ್ಟ್ ಇಂಡೀಸ್‌ನ ಕೀರಾನ್ ಪೊಲಾರ್ಡ್ ಅವರ ಹೆಸರಿನಲ್ಲಿದೆ.
ದಕ್ಷಿಣ ಆಫ್ರಿಕಾದ ಲೆಜೆಂಡ್ ಎಬಿ ಡಿವಿಲಿಯರ್ಸ್ ತಮ್ಮ ಹೆಸರಿಗೆ 184 ಪಂದ್ಯಗಳೊಂದಿಗೆ ಪಟ್ಟಿಯಲ್ಲಿ ಅವರನ್ನು ನಿಕಟವಾಗಿ ಅನುಸರಿಸಿದ್ದಾರೆ. ಈ ಇಬ್ಬರು ದಿಗ್ಗಜರು ಈಗಾಗಲೇ ಐಪಿಎಲ್‌ಗೆ ನಿವೃತ್ತಿ ಘೋಷಿಸಿದ್ದಾರೆ.
ಐಪಿಎಲ್ 2024ರಲ್ಲಿ ದಿನೇಶ್ ಕಾರ್ತಿಕ್ ಅವರ ಅದ್ಭುತ ಪ್ರದರ್ಶನವು ಅವರನ್ನು ಮುಂಬರುವ ಟಿ20 ವಿಶ್ವಕಪ್‌ನ ಭಾರತ ತಂಡದ ಆಯ್ಕೆ ಕುರಿತ ಚರ್ಚೆಯಲ್ಲಿ ಇರಿಸಿದೆ. ವಿಕೆಟ್ ಕೀಪರ್-ಬ್ಯಾಟರ್ ಸ್ವತಃ 2024ರ ಐಸಿಸಿ ಟೂರ್ನಿಯಲ್ಲಿ ಆಡಲು ಆಸಕ್ತಿ ವ್ಯಕ್ತಪಡಿಸಿದ್ದಾರೆ.
"ನನ್ನ ಜೀವನದಲ್ಲಿ ಭಾರತ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವುದು ನನಗೆ ದೊಡ್ಡ ಭಾವನೆಯಾಗಿದೆ. ನಾನು ಭಾರತ ತಂಡಕ್ಕೆ ಆಯ್ಕೆಯಾಗಲು ತುಂಬಾ ಉತ್ಸುಕನಾಗಿದ್ದೇನೆ. ಟಿ20 ವಿಶ್ವಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವುದಕ್ಕಿಂತ ದೊಡ್ಡದು ನನ್ನ ಜೀವನದಲ್ಲಿ ಏನೂ ಇಲ್ಲ," ಎಂದು ಆರ್‌ಸಿಬಿ ವಿಕೆಟ್‌ಕೀಪರ್-ಬ್ಯಾಟರ್ ದಿನೇಶ್ ಕಾರ್ತಿಕ್ ಅವರು ಕೆಕೆಆರ್ ವಿರುದ್ಧದ ಪಂದ್ಯಕ್ಕೆ ಮುಂಚಿತವಾಗಿ ಹೇಳಿದರು.
"ಟಿ20 ವಿಶ್ವಕಪ್‌ಗೆ ಅತ್ಯುತ್ತಮ ಭಾರತೀಯ ತಂಡ ಯಾವುದು ಎಂದು ನಿರ್ಧರಿಸಲು ರಾಹುಲ್ ದ್ರಾವಿಡ್, ರೋಹಿತ್ ಶರ್ಮಾ ಮತ್ತು ಅಜಿತ್ ಅಗರ್ಕರ್ ಮೂವರು ಅತ್ಯಂತ ಸ್ಥಿರ, ಪ್ರಾಮಾಣಿಕ ವ್ಯಕ್ತಿಗಳು ಇದ್ದಾರೆ ಎಂದು ನಾನು ಭಾವಿಸುತ್ತೇನೆ," ಎಂದು ತಿಳಿಸಿದ್ದಾರೆ.
"ನಾನು ಸಂಪೂರ್ಣವಾಗಿ ಅವರ ನಿರ್ಧಾರದೊಂದಿಗೆ ಇದ್ದೇನೆ. ಅವರು ತೆಗೆದುಕೊಳ್ಳುವ ಯಾವುದೇ ನಿರ್ಧಾರವನ್ನು ನಾನು ಗೌರವಿಸುತ್ತೇನೆ. ಆದರೆ ನಾನು ಹೇಳಬಲ್ಲೆ, ನಾನು 100 ಪ್ರತಿಶತ ಸಿದ್ಧನಿದ್ದೇನೆ ಮತ್ತು ವಿಶ್ವಕಪ್‌ಗೆ ಭಾರತ ತಂಡದ ವಿಮಾನದಲ್ಲಿರಲು ನಾನು ಎಲ್ಲವನ್ನೂ ಮಾಡುತ್ತೇನೆ," ಎಂದು ಆರ್‌ಸಿಬಿ ಆಟಗಾರ ದಿನೇಶ್ ಕಾರ್ತಿಕ್ ವಿಶ್ವಾಸ ವ್ಯಕ್ತಪಡಿಸಿದರು.