2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 17ನೇ ಆವೃತ್ತಿಯು ಬ್ಲಾಕ್‌ಬಸ್ಟರ್ ಪಂದ್ಯದೊಂದಿಗೆ ಪ್ರಾರಂಭವಾಗಲಿದ್ದು, ಶುಕ್ರವಾರ, ಮಾರ್ಚ್ 22ರಂದು ಆತಿಥೇಯ ಚೆನ್ನೈ ಸೂಪರ್ ಕಿಂಗ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಎದುರಿಸಲಿದೆ.
ಫಾಫ್ ಡು ಪ್ಲೆಸಿಸ್ ನಾಯಕತ್ವದ ಆರ್‌ಸಿಬಿ ಮತ್ತೊಮ್ಮೆ ತಮ್ಮ ಚೊಚ್ಚಲ ಟ್ರೋಫಿಯನ್ನು ಬೆನ್ನಟ್ಟುತ್ತಿದೆ. ಮತ್ತೊಂದೆಡೆ, ಸಿಎಸ್‌ಕೆ ತಂಡ ಐಪಿಎಲ್‌ನ ಅತಿ ಹೆಚ್ಚು ಪ್ರಶಸ್ತಿ ಗೆದ್ದು ಮುಂಬೈ ಇಂಡಿಯನ್ಸ್ ತಂಡವನ್ನು ಮೀರಿಸಲು ನೋಡುತ್ತಿದೆ. ಏಕೆಂದರೆ ಉಭಯ ತಂಡಗಳು ಈವರೆಗೆ 5 ಟ್ರೋಫಿ ಗೆದ್ದಿವೆ.

ಕಳೆದ ಕೆಲವು ವರ್ಷಗಳಲ್ಲಿ, ಆರ್‌ಸಿಬಿ ಮತ್ತು ಸಿಎಸ್‌ಕೆ ತಂಡಗಳು ಮೈದಾನದಲ್ಲಿ ಉತ್ತಮ ಪೈಪೋಟಿ ನಡೆಸಿವೆ. ಆದರೆ ಸಿಎಸ್‌ಕೆ ನಿಸ್ಸಂಶಯವಾಗಿ ತಮ್ಮ ದಕ್ಷಿಣ ಭಾರತದ ಪ್ರತಿಸ್ಪರ್ಧಿ ಮೇಲೆ ಹೆಡ್-ಟು-ಹೆಡ್ ಅಂಕಿಅಂಶಗಳಿಗೆ ಬಂದಾಗ ಪ್ರಾಬಲ್ಯ ಹೊಂದಿದೆ.
ಶುಕ್ರವಾರದ ಪಂದ್ಯಕ್ಕೂ ಮುನ್ನ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಒಟ್ಟು 31 ಬಾರಿ ಮುಖಾಮುಖಿಯಾಗಿವೆ.
ಈ ಪೈಕಿ ಎಂಎಸ್ ಧೋನಿ ನಾಯಕತ್ವದ ಸಿಎಸ್‌ಕೆ ತಂಡವು 20 ಬಾರಿ ಗೆದ್ದಿದ್ದರೆ, ಆರ್‌ಸಿ ತಂಡವು ಕೇವಲ 10 ಬಾರಿ ವಿಜಯಶಾಲಿಯಾಗಿದೆ. ಒಂದು ಪಂದ್ಯ ಯಾವುದೇ ಫಲಿತಾಂಶ ಕಾಣದೆ ರದ್ದಾಗಿದೆ.
ಕಳೆದ ಋತುವಿನಲ್ಲಿ ಎಂ ಚಿನ್ನಸ್ವಾಮಿಯಲ್ಲಿ ಎರಡೂ ತಂಡಗಳು ಕೊನೆಯ ಬಾರಿಗೆ ಮುಖಾಮುಖಿಯಾದಾಗ, ಡೆವೊನ್ ಕಾನ್ವೇ ಅವರ ಉತ್ತಮ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಸಿಎಸ್‌ಕೆ ತಂಡವು ಆರ್‌ಸಿಬಿ ತಂಡವನ್ನು 8 ರನ್‌ಗಳಿಂದ ಸೋಲಿಸಿತು.

ಇನ್ನು ಚೆಪಾಕ್‌ನ ಎಂಎ ಚಿದಂಬರಂ ಕ್ರೀಡಾಂಗಣಕ್ಕೆ ಬಂದರೆ, ಆರ್‌ಸಿಬಿ ತಮ್ಮ ಯಶಸ್ಸಿನ ದಾಖಲೆಯನ್ನು ನೋಡಲು ಬಯಸುವುದಿಲ್ಲ. ಇಲ್ಲಿ ಆಡಿದ 8 ಪಂದ್ಯಗಳಲ್ಲಿ ಕೇವಲ ಒಮ್ಮೆ ಮಾತ್ರ ಗೆಲುವು ಸಾಧಿಸಿದೆ.
2008ರಲ್ಲಿ ಈ ಮೈದಾನದಲ್ಲಿ ಉಭಯ ತಂಡಗಳ ನಡುವಿನ ಮೊದಲ ಪಂದ್ಯವನ್ನು ಗೆದ್ದ ನಂತರ, ಆರ್‌ಸಿಬಿ ಇದುವರೆಗಿನ ಎಲ್ಲಾ ಪಂದ್ಯಗಳನ್ನು ಸಿಎಸ್‌ಕೆ ವಿರುದ್ಧ ಸೋತಿದೆ. ಚೆನ್ನೈ ಸೂಪರ್ ಕಿಂಗ್ಸ್ 7-1 ಅಂತರದಲ್ಲಿ ಮುನ್ನಡೆ ಹೊಂದಿದೆ.
2008ರಲ್ಲಿ ಸಿಎಸ್‌ಕೆ ತಂಡವನ್ನು 14 ರನ್‌ಗಳಿಂದ ಕಡಿಮೆ ಸ್ಕೋರಿಂಗ್ ಪಂದ್ಯದಲ್ಲಿ ಸೋಲಿಸಿತು. ರಾಹುಲ್ ದ್ರಾವಿಡ್ ಅವರ 39 ಎಸೆತಗಳಲ್ಲಿ 47 ರನ್‌ಗಳ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ 20 ಓವರ್‌ಗಳಲ್ಲಿ 126 ರನ್ ಗಳಿಸಿತು.
ಸ್ಪಿನ್ನರ್ ಅನಿಲ್ ಕುಂಬ್ಳೆ ಅವರು ತಮ್ಮ 4 ಓವರ್‌ಗಳಲ್ಲಿ 14 ರನ್‌ಗಳಿಗೆ 3 ವಿಕೆಟ್ ಪಡೆದ ಕಾರಣ ಸಿಎಸ್‌ಕೆ ತಂಡದ ಇನ್ನಿಂಗ್ಸ್ 8 ವಿಕೆಟ್‌ಗೆ 112 ರನ್‌ಗಳಿಗೆ ಕೊನೆಗೊಂಡಿತು.
ಮತ್ತೊಂದು ಸಂದರ್ಭದಲ್ಲಿ, ಇದು ಆರ್‌ಸಿಬಿ 2024ರ ಆವೃತ್ತಿಗೆ ಹೋಗುವಾಗ ನೆನಪಿಟ್ಟುಕೊಳ್ಳಲು ಬಯಸದ ಪಂದ್ಯವಾಗಿದೆ. ಐಪಿಎಲ್ 2019ರ ಆರಂಭಿಕ ಪಂದ್ಯದಲ್ಲಿ ಆರ್‌ಸಿಬಿ ತಂಡವು ಸಿಎಸ್‌ಕೆ ವಿರುದ್ಧ ತೀರಾ ಅವಮಾನಕಾರಿಯಾಗಿ ಸೋತರು.
ಹರ್ಭಜನ್ ಸಿಂಗ್, ಇಮ್ರಾನ್ ತಾಹಿರ್ ಮತ್ತು ರವೀಂದ್ರ ಜಡೇಜಾ ಅವರ ಸ್ಪಿನ್ ತ್ರಿವಳಿ ದಿನದ 10 ವಿಕೆಟ್‌ಗಳಲ್ಲಿ 8 ವಿಕೆಟ್ ಪಡೆದ ಕಾರಣ, ಆರ್‌ಸಿಬಿ ತಂಡ 17.4 ಓವರ್‌ಗಳಲ್ಲಿ ಕೇವಲ 70 ರನ್‌ಗಳಿಗೆ ಆಲೌಟ್ ಆಯಿತು. ನಂತರ, ಇನ್ನೂ 14 ಎಸೆತಗಳು ಬಾಕಿ ಇರುವಂತೆಯೇ ಸಿಎಸ್‌ಕೆ ತಂಡ 7 ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದಿತು.