ಮಂಗಳವಾರ, ಏಪ್ರಿಲ್ 23ರಂದು ಚೆನ್ನೈನ ಐಕಾನಿಕ್ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 39ನೇ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡವು ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ತಂಡದ ವಿರುದ್ಧ ಬೃಹತ್ ಮೊತ್ತ ಕಲೆಹಾಕಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ರುತುರಾಜ್ ಗಾಯಕ್ವಾಡ್ ಅವರ ಭರ್ಜರಿ ಶತಕ ಮತ್ತು ಶಿವಂ ದುಬೆ ಅವರ ಸ್ಫೋಟಕ ಅರ್ಧಶತಕ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 210 ರನ್ ಗಳಿಸಿದ್ದು, ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ 211 ರನ್‌ಗಳ ಸವಾಲಿನ ಗುರಿ ನೀಡಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ನಾಯಕ ರುತುರಾಜ್ ಗಾಯಕ್ವಾಡ್ ಮತ್ತು ಅಜಿಂಕ್ಯ ರಹಾನೆ ಉತ್ತಮ ಆರಂಭ ನೀಡಲಿಲ್ಲ. ಏಕೆಂದರೆ ತಂಡದ ಮೊತ್ತ 4 ರನ್‌ಗಳಾಗಿದ್ದಾಗ ಕೇವಲ 1 ರನ್ ಗಳಿಸಿದ್ದ ಅಜಿಂಕ್ಯ ರಹಾನೆ ಔಟಾದರು.
ನಂತರ ಬಂದ ಡೇರಿಲ್ ಮಿಚೆಲ್ 11 ರನ್ ಗಳಿಸಿ ವಿಕೆಟ್ ಒಪಿಸಿದರೆ, ಬಡ್ತಿ ಪಡೆದು ಬ್ಯಾಟಿಂಗ್‌ಗೆ ಬಂದ ರವೀಂದ್ರ ಜಡೇಜಾ 16 ರನ್ ಗಳಿಸಿ ಪೆವಿಲಿಯನ್ ಸೇರಿದರು. ಆಗ ಕ್ರೀಸ್‌ಗೆ ಆಗಮಿಸಿದ ಶಿವಂ ದುಬೆ ಲಕ್ನೋ ಬೌಲರ್‌ಗಳನ್ನು ದಂಡಿಸಿದರು ಮತ್ತು ಕೇವಲ 27 ಎಸೆತಗಳಲ್ಲಿ 3 ಬೌಂಡರಿ ಹಾಗೂ 7 ಸಿಕ್ಸರ್‌ಗಳ ಸಮೇತ 66 ರನ್ ಗಳಿಸಿ ಕೊನೆಯ ಓವರ್‌ನಲ್ಲಿ ಔಟಾದರು.
ಇನ್ನು ಸಿಎಸ್‌ಕೆ ನಾಯಕ ರುತುರಾಜ್ ಗಾಯಕ್ವಾಡ್ ಐಪಿಎಲ್‌ನಲ್ಲಿ ತಮ್ಮ 2ನೇ ಶತಕ ಸಿಡಿಸಿದರು. ಆರಂಭಿಕರಾಗಿ ಬಂದು ಕೊನೆಯವರೆಗೂ ಆಡಿ ಅಜೇಯರಾಗುಳಿದರು.
ರುತುರಾಜ್ ಕೇವಲ 60 ಎಸೆತಗಳಲ್ಲಿ 12 ಬೌಂಡರಿ ಹಾಗೂ 3 ಸಿಕ್ಸರ್‌ಗಳ ಮೂಲಕ 108 ರನ್‌ಗಳ ಶತಕ ಬಾರಿಸಿದರು. ಮಾಜಿ ನಾಯಕ ಎಂಎಸ್ ಧೋನಿ ಕ್ರೀಸ್‌ಗೆ ಬರುತ್ತಿದ್ದಂತೆಯೇ ಕ್ರೀಡಾಂಗಣದಲ್ಲಿ ನೆರೆದಿದ್ದ ಪ್ರೇಕ್ಷಕರ ಚೀರಾಟ ದುಪ್ಪಟ್ಟಾಗಿತ್ತು. ಇನ್ನಿಂಗ್ಸ್‌ನ ಕೊನೆಯ ಎಸೆತ ಎದುರಿಸಿದ ಧೋನಿ ಬೌಂಡರಿ ಮೂಲಕ ಮುಗಿಸಿದರು.
ಬೌಲಿಂಗ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ಮ್ಯಾಟ್ ಹೆನ್ರಿ 4 ಓವರ್‌ಗಳಲ್ಲಿ 28 ರನ್ ನೀಡಿ 1 ವಿಕೆಟ್ ಪಡೆದರೆ, ಮೊಹ್ಸಿನ್ ಖಾನ್ ಮತ್ತು ಯಶ್ ಠಾಕೂರ್ ತಲಾ ಒಂದೊಂದು ವಿಕೆಟ್ ಪಡೆದರೂ ಹೆಚ್ಚಿನ ರನ್ ಬಿಟ್ಟುಕೊಟ್ಟರು.