ಇನ್ನೇನು ಕೆಲವೇ ದಿನಗಳಲ್ಲಿ ಭಾರತದಲ್ಲಿ ಕ್ರಿಕೆಟ್ ಜ್ವರ ಸಂಪೂರ್ಣವಾಗಿ ಆವರಿಸಲಿದೆ. ಒಂದು ಕಡೆಯಲ್ಲಿ ಚುನಾವಣೆಯ ಕಾವು, ಒಂದು ಕಡೆಯಲ್ಲಿ ಪರೀಕ್ಷೆಗಳ ಬಿಸಿಯ ಮಧ್ಯ ಐಪಿಎಲ್ ಲೀಗ್ ಆರಂಭವಾಗಲಿದೆ. ವಿಶ್ವದ ಶ್ರೀಮಂತ ಲೀಗ್ ಎಂದೇ ಕರಿಸಿಕೊಳ್ಳುವ ಲೀಗ್ ಕಣ್ಣು ತುಂಬಿಕೊಳ್ಳಲು ಅಭಿಮಾನಿಗಳು ಸಹ ಕಾತುರರಾಗಿದ್ದಾರೆ.
ಉದ್ಘಾಟನಾ ಪಂದ್ಯ ತನ್ನ ಗಮತ್ತನ್ನೂ ಪ್ರತಿ ಬಾರಿಯೂ ಹೊಂದಿದೆ. ಈ ಬಾರಿಯಂತೂ ಉದ್ಘಾಟನಾ ಪಂದ್ಯ ಅಭಿಮಾನಿಗಳಿಗೆ ಹಬ್ಬದೂಟವನ್ನು ಉಣ ಬಡಿಸುವುದರಲ್ಲಿ ಯಾವುದೇ ಸಂಶಯವೂ ಇಲ್ಲ. ದಕ್ಷಿಣ ಡರ್ಬಿ ಎಂದೆ ಖ್ಯಾತಿ ಪಡೆದಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಈ ಬಾರಿ ಮೊದಲ ಪಂದ್ಯದಲ್ಲಿ ಕಾದಾಟ ನಡೆಸಲಿವೆ.

ಐಪಿಎಲ್ 2024 ರ ಮೊದಲ ಪಂದ್ಯ ಮಾರ್ಚ್ 22 ರಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಸಿಎಸ್‌ಕೆ ತವರು ಮೈದಾನ ಚೆಪಾಕ್ ಸ್ಟೇಡಿಯಂನಲ್ಲಿ ನಡೆಯಲಿದೆ. ಇದು ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಆಡಲಿರುವ 9 ನೇ ಆರಂಭಿಕ ಪಂದ್ಯವಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿ ಹಾಲಿ ಚಾಂಪಿಯನ್ ಆಗಿ ಮೈದಾನಕ್ಕಿಳಿಯಲಿದೆ.
ಐಪಿಎಲ್ 2023ರ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಸಿಎಸ್‌ಕೆ ಸೋಲಿಸಿತ್ತು. ಇದು ಚೆನ್ನೈ ಸೂಪರ್ ಕಿಂಗ್ಸ್‌ನ ಐದನೇ ಐಪಿಎಲ್ ಪ್ರಶಸ್ತಿ. ಇದರೊಂದಿಗೆ ಅವರು ಐಪಿಎಲ್‌ನಲ್ಲಿ ಅತಿ ಹೆಚ್ಚು ಪ್ರಶಸ್ತಿಗಳನ್ನು ಗೆದ್ದ ಮುಂಬೈ ಇಂಡಿಯನ್ಸ್ ಅನ್ನು ದಾಖಲೆಯನ್ನು ಸರಿಗಟ್ಟಿತು.
ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ 2009 ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಮೊದಲ ಬಾರಿಗೆ ಲೀಗ್‌ನ ಆರಂಭಿಕ ಪಂದ್ಯವನ್ನು ಆಡಿತ್ತು. ಅದರ ನಂತರ, 2011 ರಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆರಂಭಿಕ ಪಂದ್ಯವನ್ನು ಆಡಿತ್ತು. ಇದರ ನಂತರ 2012, 2018 ಹಾಗೂ 2020 ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ, 2019 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ, 2022 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ, 2023 ರಲ್ಲಿ ಗುಜರಾತ್ ಟೈಟಾನ್ಸ್ ಉದ್ಘಾಟನಾ ಪಂದ್ಯದಲ್ಲಿ ಅದೃಷ್ಟ ಪರೀಕ್ಷಿಸಿತ್ತು.
ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಹೊರತು ಪಡಿಸಿದರೆ, ಅತಿ ಹೆಚ್ಚು ಉದ್ಘಾಟನಾ ಪಂದ್ಯವನ್ನು ಆಡಿದ ಕೀರ್ತಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಸಲ್ಲುತ್ತದೆ. ಮುಂಬೈ 2009, 2012, 2014, 2015, 2016, 2018, 2020, 2021ರಲ್ಲಿ ಉದ್ಘಾಟನ ಪಂದ್ಯವನ್ನು ಆಡಿತ್ತು. ಮುಂಬೈ ಬಳಿಕ ಅತಿ ಹೆಚ್ಚು ಬಾರಿ ಮೊದಲ ಪಂದ್ಯವನ್ನು ಆಡಿದ ಕೀರ್ತಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಸಲ್ಲುತ್ತದೆ. ಈ ತಂಡ ಒಟ್ಟು ಏಳು ಬಾರಿ ಮೊದಲ ಪಂದ್ಯವನ್ನು ಆಡಿದೆ.

ಮತ್ತೊಮ್ಮೆ ಐಪಿಎಲ್‌ನ ಉದ್ಘಾಟನಾ ಪಂದ್ಯ ನಡೆಯಲಿದೆ. ಇದು ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನ 9ನೇ ಮೊದಲ ಪಂದ್ಯವಾಗಿದೆ. ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ಸಂಖ್ಯೆಯ ಆರಂಭಿಕ ಪಂದ್ಯಗಳನ್ನು ಆಡಿದ ತಂಡವೆಂದರೆ ಸಿಎಸ್‌ಕೆ.
ಐಪಿಎಲ್ 2016 ಮತ್ತು 2017ರಲ್ಲಿ ಸಿಎಸ್‌ಕೆಗೆ ಎರಡು ವರ್ಷಗಳ ನಿಷೇಧ ಹೇರಲಾಗಿತ್ತು. ಇದರಿಂದಾಗಿ 2016 ಮತ್ತು 2017ರಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಇದರ ನಂತರ, 2018 ರಲ್ಲಿ, ಧೋನಿ ನಾಯಕತ್ವದಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ಭರ್ಜರಿ ಕಮ್‌ಬ್ಯಾಕ್ ಮಾಡಿತು ಮತ್ತು ಋತುವಿನ ಮೊದಲ ಪಂದ್ಯವನ್ನು ಆಡಿತು. ಅದೇ ವರ್ಷದಲ್ಲಿ, ಧೋನಿ ನಾಯಕತ್ವದಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ಮೂರನೇ ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. 2021 ರಲ್ಲಿ ನಾಲ್ಕನೇ ಮತ್ತು 2023 ರಲ್ಲಿ ಐದನೇ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಮುಂಬೈ ಇಂಡಿಯನ್ಸ್ ಅನ್ನು ದಾಖಲೆ ಸರಿಗಟ್ಟಿತು.
ಐಪಿಎಲ್ 2024 ರ ಮೊದಲ ಪಂದ್ಯ ಬಹಳ ರೋಚಕವಾಗಿರುತ್ತದೆ. ಇದಕ್ಕೆ ಮುಖ್ಯ ಕಾರಣ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ಮೇಲಿನ ಅಭಿಮಾನ. ವಿಶೇಷವೆಂದರೆ 2008 ರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೆಪಾಕ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಸೋಲಿಸುವಲ್ಲಿ ವಿಫಲವಾಗಿದೆ. ಬೆಂಗಳೂರು ತಂಡದ ನಾಯಕತ್ವವನ್ನು ಫಾಫ್ ಡು ಪ್ಲೆಸಿಸ್ ನಿಭಾಯಿಸುತ್ತಿದ್ದಾರೆ. ಡು ಪ್ಲೆಸಿಸ್ ಸಿಎಸ್‌ಕೆಯಲ್ಲಿ ಸುದೀರ್ಘ ಕಾಲ ಧೋನಿ ನಾಯಕತ್ವದಲ್ಲಿ ಆಡಿದ್ದಾರೆ. ಇದರ ಲಾಭವನ್ನು ಅವರು ಋತುವಿನ ಆರಂಭಿಕ ಪಂದ್ಯದಲ್ಲಿ ಪಡೆಯಬಹುದು.
ಆದರೆ ಚೆನ್ನೈನ ಪ್ರೇಕ್ಷಕರು ತಮ್ಮ ತವರು ತಂಡವನ್ನು ಬೆಂಬಲಿಸಲು ಮೈದಾನವನ್ನು ತಲುಪುತ್ತಾರೆ. ಈ ವರ್ಷ ಧೋನಿ ಐಪಿಎಲ್‌ನಿಂದ ನಿವೃತ್ತಿ ಘೋಷಿಸಬಹುದು ಎಂಬ ಊಹಾಪೋಹಗಳಿವೆ. ಆದರೆ, ಈ ಲೀಗ್‌ಗೆ ಯಾವಾಗ ವಿದಾಯ ಹೇಳುತ್ತಾರೆ ಎಂಬುದು ಧೋನಿ ಅವರ ಮನಸ್ಥಿತಿಯನ್ನು ಅವಲಂಬಿಸಿರುತ್ತದೆ.