ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾಗಿದೆ. ಈ ಮೆಗಾ ಲೀಗ್‌ನಲ್ಲಿ ವಿಶ್ವದ ಖ್ಯಾತ ನಾಮ ಆಟಗಾರರು ಭಾಗವಹಿಸುತ್ತಿದ್ದಾರೆ. ಈ ಲೀಗ್‌ನಲ್ಲಿ ಮಿಂಚಿ ತಮ್ಮದೇ ಆದ ಅಭಿಮಾನಿಗಳ ಬಳಗವನ್ನು ಸೃಷ್ಟಿಕೊಳ್ಳುವ ಆಸೆ ಹಲವು ಆಟಗಾರರದ್ದಾಗಿದೆ. ಈ ನಿಟ್ಟಿನಲ್ಲಿ ಅವರು ಸಹ ಮೈದಾನದಲ್ಲಿ ಹಗಲು ಇರುಳು ಬೆವರು ಹರಿಸುತ್ತಾರೆ. ಆದರೆ ಲಕ್ ಒಮೊಮ್ಮೆ ಇವರ ಕೈ ಹಿಡಿಯುವುದಿಲ್ಲ. ಈ ಬಾರಿಯೂ ಐಪಿಎಲ್‌ನಲ್ಲಿ ಕೋಟಿ ಕೋಟಿ ಪಡೆದು ಆಟಗಾರರು ಕ್ಷಮತೆಯಷ್ಟು ಪ್ರದರ್ಶನ ನೀಡುತ್ತಿಲ್ಲ ಎಂಬ ಟೀಕೆಗೆ ಕೇಳಿ ಬಂದಿದೆ. ಹಾಗಿದ್ದರೆ ಐಪಿಎಲ್‌ನಲ್ಲಿ ಫ್ಲಾಪ್ ಶೋ ನೀಡಿದ ದುಬಾರಿ ಆಟಗಾರರ ಬಗ್ಗೆ ವರದಿ ಇಲ್ಲಿದೆ. (ಈ ವರದಿ ಐಪಿಎಲ್ (IPL 2025) ನ ಏಪ್ರಿಲ್ 16ರ ವರೆಗಿನ 32 ಪಂದ್ಯಗಳಿಗೆ ಆದರಿಸಿದ್ದಾಗಿದೆ)
ಈ ಬಾರಿಯ ಐಪಿಎಲ್ ಮೆಗಾ ಹರಾಜು ಸೌದಿಯಲ್ಲಿ ನಡೆದಿತ್ತು. ಈ ಹರಾಜು ವಿಶ್ವದ ಚಿತ್ತ ಕದ್ದಿತ್ತು. ಯಾರು ಸೋಲ್ಡ್ ಆಗುತ್ತಾರೆ, ಯಾರು ಅನ್‌ಸೋಲ್ಡ್ ಆಗುತ್ತಾರೆ ಎಂಬ ಲೆಕ್ಕಾಚಾರವನ್ನು ಅಭಿಮಾನಿಗಳು ಆರಂಭಿಸಿದ್ದರು. ಅದರಂತೆ ಐಪಿಎಲ್‌ನಲ್ಲಿ ಬಿಕರಿ ಆಗಬಹುದಾದ ದುಬಾರಿ ಆಟಗಾರರ ಪಟ್ಟಿಯನ್ನು ಸಹ ಫ್ಯಾನ್ಸ್ ರೆಡಿ ಮಾಡಿದ್ದರು. ಕೊಂಚ ಏರು ಪೇರು ಆಗಿರಬಹುದು. ಆದರೆ ಅಭಿಮಾನಿಗಳು ಹಾಗೂ ಕ್ರಿಕೆಟ್ ಪಂಡಿತರ ಲೆಕ್ಕಾಚಾರ ಸರಿಯಾಗಿದೆ. ಈ ಬಾರಿ 27 ಕೋಟಿ ರೂಪಾಯಿ ಪಡೆದ ರಿಷಭ್ ಪಂತ್ ಐಪಿಎಲ್ ಇತಿಹಾಸದ ದುಬಾರಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಡೆಲ್ಲಿ ಕ್ಯಾಪಿಟಲ್ಸ್ ಪಂತ್‌ರನ್ನು ಕೈ ಬಿಟ್ಟ ಬಳಿಕ ಹಲವು ತಂಡಗಳು ರಿಷಭ್ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಹಲವು ತಂಡಗಳು ಬಾಜಿಗೆ ಬಿದ್ದವು. ಆದರೆ ಕೊನೆಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಬಾಜಿ ಗೆದ್ದಿತು. ಈ ತಂಡ ಇವರಿಗೆ ಭಾರೀ ಮೊತ್ತ ನೀಡಿ ತಂಡಕ್ಕೆ ಬರ ಮಾಡಿಕೊಂಡಿದೆ. ಆದರೆ ಈಗ ತಮ್ಮ ಆಯ್ಕೆ ಸರಿಯಾಗಿಲ್ಲ ಎಂಬ ಭಾವನೆ ಮಾಲೀಕರಿಗೂ ಬಂದಿರಬಹುದು. ಆದರೆ ಅವರ ಲೆಕ್ಕಾಚಾರ ವರ್ಕ್‌ಔಟ್ ಆದಂತೆ ಕಾಣುತ್ತಿದೆ.

18ನೇ ಆವೃತ್ತಿಯ ಐಪಿಎಲ್‌ನಲ್ಲಿ ರಿಷಭ್ ಪಂತ್ (Rishabh Pant) ತಮ್ಮ ಘನತೆಗೆ ತಕ್ಕ ಆಟವನ್ನು ಆಡುವಲ್ಲಿ ವಿಫಲರಾಗುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಒಂದು ಅರ್ಧಶತಕ ಬಾರಿಸಿದ್ದು ಬಿಟ್ಟರೆ ನಿರಾಸೆ ಇವರನ್ನು ಬಿಗಿದಪ್ಪಿಕೊಂಡಿದೆ. ಹೀಗಾಗಿ ಇವರ ಫಾರ್ಮ್ ಚಿಂತೆ ಲಕ್ನೋ ತಂಡಕ್ಕೆ ಬಹುವಾಗಿ ಕಾಡುತ್ತಿದೆ. ದುಬಾರಿ ಆಟಗಾರ ಎಂಬ ಹಣೆ ಪಟ್ಟಿಯನ್ನು ಹೊಂದಿರುವ ಪಂತ್ ಪ್ರಸಕ್ತ ಐಪಿಎಲ್‌ನಲ್ಲಿ 103 ರನ್ ಸಿಡಿಸಿದ್ದಾರೆ. ಅಂದರೆ ಏಳು ಪಂದ್ಯಗಳಲ್ಲಿ ಪಂತ್ ಗಳಿಸಿದ್ದು 103 ರನ್. ಹಾಗಿದ್ದರೆ ಇವರು ಬಾರಿಸಿರುವ ಪ್ರತಿ ರನ್‌ಗೆ ಎಷ್ಟು ಹಣ ಎಂದು ಅಭಿಮಾನಿಗಳು ಲೆಕ್ಕಾಚಾರ ಆರಂಭಿಸಿದ್ದಾರೆ. ಪಂತ್ ಒಂದು ರನ್‌ಗೆ ಸುಮಾರು 26.21 ಲಕ್ಷ ಪಡೆದಿದ್ದಾರೆ.
ಈ ಹಿಂದಿನ ಐಪಿಎಲ್ ಆವೃತ್ತಿಗಳಲ್ಲಿ ಪಂತ್ ನೀಡಿದ್ದ ಪ್ರದರ್ಶನ ನೋಡಿ ಎಲ್‌ಎಸ್‌ಜಿ ಇವರಿಗೆ ಮಣೆ ಹಾಕಿತ್ತು. ಆದರೆ ಪಂತ್ ಈ ಬಾರಿ ನಿರಾಸೆ ಅನುಭವಿಸಿದ್ದಾರೆ.
ಇಂಗ್ಲೆಂಡ್ ತಂಡದ ಸ್ಟಾರ್ ಆಟಗಾರ ಸ್ಯಾಮ್ ಕರನ್ (sam curran) ಸಹ ಈ ಬಾರಿಯ ಐಪಿಎಲ್‌ನ ಹರಾಜಿನಲ್ಲಿ ಆಲ್‌ರೌಂಡರ್ ಆಗಿ ಕಾಣಿಸಿಕೊಂಡರು. ಇವರ ಈ ಹಿಂದಿನ ಪ್ರದರ್ಶನವನ್ನು ಆಧಾರಿಸಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇವರಿಗೆ 2.40 ಕೋಟಿ ನೀಡಿ ತಂಡಕ್ಕೆ ಬರ ಮಾಡಿಕೊಂಡಿತು. ಆದರೆ ಇವರು ತಮ್ಮ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರಿಂದ ಬೆಂಚ್ ಮೇಲೆ ಕುಳಿತು ಪಂದ್ಯವನ್ನು ಇವರು ಆನಂದಿಸುತ್ತಿದ್ದಾರೆ.
ಚೆನ್ನೈ ಪರ ಈ ವರೆಗೆ ಎರಡು ಪಂದ್ಯಗಳಲ್ಲಿ ಆಡುವ ಅವಕಾಶವನ್ನು ಪಡೆದರು. ಆದರೆ ಎರಡರಲ್ಲೂ ಫ್ಲಾಫ್ ಶೋ ನೀಡಿದ್ದಾರೆ. ಆಡಿದ 2 ಪಂದ್ಯಗಳಲ್ಲಿ 12 ರನ್ ಬಾರಿಸಿರುವ ಸ್ಯಾಮ್, ಬೌಲಿಂಗ್‌ನ ವಿಕೆಟ್ ಕಾಲಮ್ ಖಾಲಿ ಇದೆ. ಇವರು ಪ್ರತಿ ರನ್‌ಗೆ 20 ಲಕ್ಷ ಪಡೆದುಕೊಂಡಿದ್ದಾರೆ ಎಂದು ಅಭಿಮಾನಿಗಳು ಲೆಕ್ಕಾಚಾರ ಹಾಕಿದ್ದಾರೆ.

ಕಳೆದ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆಡಿ ಸೈ ಎನಿಸಿಕೊಂಡಿದ್ದ ಜೆಕ್ ಫ್ರೇಸರ್ ಮೆಕ್‌ಗುರ್ಕ್ (Jake Fraser-McGurk), ಈ ಬಾರಿ ನಿರಾಸೆ ಅನುಭವಿಸಿದ್ದಾರೆ. ಪವರ್ ಪ್ಲೇನಲ್ಲಿ ಪವರ್ ಹಿಟ್‌ಗಳನ್ನು ಬಾರಿಸುವಲ್ಲಿ ಯಶಸ್ವಿಯಾಗಿರುವವ ಈ ಪ್ಲೇಯರ್ ಕ್ಷಮತೆಯನ್ನು ಕಂಡು ಡೆಲ್ಲಿ ಕ್ಯಾಪಿಟಲ್ಸ್ ಇವರನ್ನು ತಂಡಕ್ಕೆ ಮತ್ತೆ ಬರ ಮಾಡಿಕೊಂಡಿತು. ಅದು ದೊಡ್ಡ ಮೊತ್ತವನ್ನು ನೀಡಿ ಬ್ಯಾಕ್ ಮಾಡಿತು. ಇವರಿಗೆ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 9 ಕೋಟಿ ನೀಡಿ ತಂಡದಲ್ಲಿ ಉಳಿಸಿಕೊಂಡಿತು. ಅಂದಹಾಗೆ ಈ ಬಾರಿ ಜೆಕ್ ಫ್ರೇಸರ್ ಮೆಕ್‌ಗುರ್ಕ್ ಅವರ ಪ್ರದರ್ಶನ ಡೆಲ್ಲಿ ಕ್ಯಾಂಪ್‌ನಲ್ಲಿ ಚಿಂತೆಯ ಗೆರೆಗಳನ್ನು ಮೂಡಿಸಿವೆ. ಕಾರಣ ಅವರ ಕಳಪೆ ಫಾರ್ಮ್.
ಜೆಕ್ ಫ್ರೇಸರ್ ಮೆಕ್‌ಗುರ್ಕ್ ಅವರು ಈ ವರೆಗೆ ಡೆಲ್ಲಿ ಪರ ಆರು ಪಂದ್ಯಗಳನ್ನು ಆಡಿದ್ದು ಜಸ್ಟ್ 55 ರನ್ ಸಿಡಿಸಿದ್ದಾರೆ. ಈ ವೇಳೆ ಇವರ ಸ್ಟ್ರೈಕ್ ರೇಟ್ ಸಹ 105ರ ಆಸು ಪಾಸಿನಲ್ಲಿದೆ. ಈ ವೇಳೆ ಇವರು ಎಸ್‌ಆರ್‌ಎಚ್ ವಿರುದ್ಧ 38 ರನ್ ಬಾರಿಸಿದ್ದು ಬಿಟ್ಟರೆ, ಉಳಿದಿದ್ದು ಎಲ್ಲ ಸಿಂಗಲ್ ಡಿಜಿಟ್. ಈ ಲೆಕ್ಕಾಚಾರದಲ್ಲಿ ಇವರು ಒಂದು ರನ್‌ಗೆ 19.56 ಲಕ್ಷ ಪಡೆದಿದ್ದಾರೆ.

ಆರ್‌ಸಿಬಿ ತಂಡದಲ್ಲೂ ಇಂತಹದ್ದೇ ಒಬ್ಬ ದುಬಾರಿ ಆಟಗಾರ ಇದ್ದಾರೆ. ಇವರೇ ಲಿಯಾಮ್ ಲಿವಿಂಗ್‌ಸ್ಟೋನ್ (Liam Livingstone). ಇವರ ಲಯ ತಂಡದ ಚಿಂತೆಯನ್ನು ದುಪ್ಪಟ್ಟು ಮಾಡಿದೆ. ಆಲ್‌ರೌಂಡರ್ ರೂಪದಲ್ಲಿ ಕಾಣಿಸಿಕೊಳ್ಳುವ ಲಿಯಾಮ್ ತಮ್ಮ ಕಳಪೆ ಪ್ರದರ್ಶನದಿಂದ ತಂಡಕ್ಕೆ ತಲೆನೋವಾಗಿದ್ದಾರೆ. ಐಪಿಎಲ್ ಮೆಗಾ ಹರಾಜಿನಲ್ಲಿ ಇವರಿಗೆ ಆರ್‌ಸಿಬಿ 8.75 ಕೋಟಿ ನೀಡಿ ತಂಡಕ್ಕೆ ಸೇರಿಸಿಕೊಂಡಿತ್ತು. ಆದರೆ ಇವರು 18ನೇ ಆವೃತ್ತಿಯ ಐಪಿಎಲ್‌ನಲ್ಲಿ ತಮ್ಮ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಇವರು ಬ್ಯಾಟಿಂಗ್ ಆಲ್‌ರೌಂಡರ್ ಎಂದು ಗುರುತಿಸಿಕೊಂಡಿದ್ದಾರೆ.
ಲಿಯಾಮ್ ಈ ಬಾರಿ ಆಡಿದ 6 ಪಂದ್ಯಗಳಲ್ಲಿ 83 ರನ್ ಬಾರಿಸಿದ್ದಾರೆ. ಇದರಲ್ಲಿ ಗುಜರಾತ್ ಟೈಟನ್ಸ್ ವಿರುದ್ಧದ 54 ರನ್ ಸಹ ಸೇರಿದೆ. ಇನ್ನು ಬೌಲಿಂಗ್‌ನಲ್ಲಿ ಆಡಿದ 6 ಪಂದ್ಯಗಳಲ್ಲಿ ಇವರು ಕೇವಲ 9 ಓವರ್ ಬೌಲಿಂಗ್ ಮಾಡಿದ್ದಾರೆ. ಈ ವೇಳೆ 8.44ರ ಸರಾಸರಿಯಲ್ಲಿ ರನ್ ನೀಡಿ ಕೈ ಸುಟ್ಟುಕೊಂಡಿದ್ದಾರೆ. ಇವರ ಬುಟ್ಟಿಯಲ್ಲಿ 2 ವಿಕೆಟ್ ಇವೆ. ಇವರು ತಾವು ಬಾರಿಸುವ ಪ್ರತಿ ರನ್‌ಗೆ 10.54 ಲಕ್ಷ ತೆಗೆದುಕೊಂಡಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡುವ ಡೆವೊನ್ ಕಾನ್ವೆ (Devon Conway) ಸಹ ಇದೇ ಪಟ್ಟಿಯಲ್ಲಿ ಸೇರಿಕೊಳ್ಳುವ ಆಟಗಾರ. ಈ ಬಾರಿಯ ಐಪಿಎಲ್‌ನಲ್ಲಿ ಇವರ ಬ್ಯಾಟ್ ಮೌನಕ್ಕೆ ಶರಣಾಗಿದೆ. ಭಾರತದಲ್ಲಿ ಇವರು ನೀಡಿದ್ದ ಪ್ರದರ್ಶನವನ್ನು ಗುರುತಿಸಿ ಚೆನ್ನೈ ಇವರಿಗೆ ಮಣೆ ಹಾಕಿತ್ತು. ಆದರೆ ಇವರು 3 ಪಂದ್ಯಗಳಲ್ಲಿ 94 ರನ್ ಸಿಡಿಸಿದ್ದಾರೆ. ಇವರು ಪ್ರತಿ ರನ್‌ಗೆ 8.44 ಲಕ್ಷ ರೂಪಯಿ ಪಡೆದಿದ್ದಾರೆ.
ವಿಶ್ವದ ಸ್ಟಾರ್ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಆಟಗಾರ ಗ್ಲೇನ್ ಮ್ಯಾಕ್ಸ್‌ವೆಲ್ (Glenn Maxwell). ಇವರಲ್ಲಿನ ಕ್ಷಮತೆಯನ್ನು ಗುರುತಿಸಿ ಪಂಜಾಬ್ ಕಿಂಗ್ಸ್ 4.2 ಕೋಟಿ ರೂಪಾಯಿ ನೀಡಿತ್ತು. ತಮ್ಮ ಬ್ಯಾಟಿಂಗ್‌ನಿಂದಲೇ ಆರ್ಭಟಿಸಬೇಕಿದ್ದ ಮ್ಯಾಕ್ಸ್‌ವೆಲ್ ಬ್ಯಾಟ್ ಈ ಬಾರಿ ಥಂಡಾ ಹೊಡೆದಿದೆ. ಇವರು ಆರು ಪಂದ್ಯಗಳಲ್ಲಿ 41 ರನ್ ಸಿಡಿಸಿದ್ದಾರೆ. ಈ ಆಧಾರದಲ್ಲಿ ಇವರು ಪ್ರತಿ ರನ್‌ಗೆ 9.13 ಲಕ್ಷ ರೂ. ತೆಗೆದುಕೊಂಡಿದ್ದಾರೆ.