ಬುಧವಾರ ನಡೆದ ಐಪಿಎಲ್ 2025 ರ 14ನೇ ಪಂದ್ಯ ಗುಜರಾತ್ ಟೈಟಾನ್ಸ್ (ಜಿಟಿ) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಗಳ ನಡುವೆ ನಡೆಯಿತು. ಈ ಪಂದ್ಯದಲ್ಲಿ ಆರ್‌ಸಿಬಿ ತಂಡವನ್ನು ಜಿಟಿ 13 ಎಸೆತಗಳು ಬಾಕಿ ಇರುವಂತೆಯೇ 8 ವಿಕೆಟ್‌ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ಆರ್‌ಸಿಬಿ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಬಿಗ್ ಇನ್ನಿಂಗ್ಸ್ ಆಡುವಲ್ಲಿ ವಿಫಲವಾದರು. ವಿರಾಟ್ ಕೊಹ್ಲಿ ಕೇವಲ 7 ರನ್ ಗಳಿಸಿ ಔಟಾದರು. ವಿರಾಟ್ ಕೊಹ್ಲಿ ಅವರನ್ನು ಔಟ್ ಮಾಡಿದ ಜಿಟಿ ತಂಡದ ಎಡಗೈ ವೇಗಿ ಅರ್ಷದ್ ಖಾನ್ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ.
ಗುಜರಾತ್ ಟೈಟಾನ್ಸ್ ತಂಡದ 27 ವರ್ಷದ ಎಡಗೈ ವೇಗದ ಬೌಲರ್ ಅರ್ಷದ್ ಖಾನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಇನ್ನಿಂಗ್ಸ್‌ನ ಎರಡನೇ ಓವರ್‌ನಲ್ಲಿ ಬೌಲಿಂಗ್ ಮಾಡಲು ಬಂದರು. ಅರ್ಷದ್ ಖಾನ್ ತಮ್ಮ ಮೊದಲ ಓವರ್‌ನ ನಾಲ್ಕನೇ ಎಸೆತದಲ್ಲೇ ವಿರಾಟ್ ಕೊಹ್ಲಿ ವಿಕೆಟ್ ಪಡೆಯುವ ಮೂಲಕ ಸಂಚಲನ ಸೃಷ್ಟಿಸಿದರು. ವಿರಾಟ್ ಕೊಹ್ಲಿ ಔಟಾದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕಳಪೆ ಆರಂಭವನ್ನೇ ಪಡೆಯಿತು. ಇದು ಗುಜರಾತ್ ಟೈಟಾನ್ಸ್‌ಗೆ ಪಂದ್ಯದ ಅತಿದೊಡ್ಡ ತಿರುವು.

ಅರ್ಷದ್ ಖಾನ್ ಅವರ ಶಾರ್ಟ್ ಲೆಂಗ್ತ್ ಚೆಂಡನ್ನು ವಿರಾಟ್ ಕೊಹ್ಲಿ ನೇರವಾಗಿ ಪ್ರಸಿದ್ಧ್ ಕೃಷ್ಣ ಅವರ ಕೈಗೆ ಹೊಡೆದರು. ಅವರು ಕೇವಲ 7 ರನ್ ಗಳಿಸಿ ಔಟಾದರು. ಅರ್ಷದ್ ಖಾನ್ ಮಧ್ಯಪ್ರದೇಶದ 27 ವರ್ಷದ ಆಲ್‌ರೌಂಡರ್ ಆಗಿದ್ದು, ಅವರು ಎಡಗೈ ಮಧ್ಯಮ ವೇಗದ ಬೌಲಿಂಗ್ ಮಾಡುತ್ತಾರೆ. ಕ್ರಮಾಂಕದ ಬ್ಯಾಟರ್ ಕೂಡ ಆಗಿದ್ದಾರೆ. ಮಧ್ಯಪ್ರದೇಶ ಪರ ದೇಶೀಯ ಕ್ರಿಕೆಟ್ ಮಿಂಚುತ್ತಿದ್ದಾರೆ. ಅವರು ಡಿಸೆಂಬರ್ 20, 1997 ರಂದು ಜನಿಸಿದರು.
ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ (ಎಂಐ) ಅರ್ಷದ್ ಖಾನ್ ಅವರನ್ನು ಮೊದಲು 20 ಲಕ್ಷ ರೂ.ಗೆ ಖರೀದಿಸಿತು. ಆದರೆ ಗಾಯದ ಕಾರಣದಿಂದಾಗಿ ಅವರನ್ನು ಈ ಸೀಸನ್‌ನಿಂದ ಹೊರಗುಳಿಯಬೇಕಾಯಿತು. ನಂತರ 2023 ರಲ್ಲಿ ಮುಂಬೈ ಇಂಡಿಯನ್ಸ್ ಅವರನ್ನು ಉಳಿಸಿಕೊಂಡಿತು. ಈ ಸೀಸನ್‌ನಲ್ಲಿ ಅವರು ಆರು ಪಂದ್ಯಗಳನ್ನು ಆಡಿ ಐದು ವಿಕೆಟ್‌ಗಳನ್ನು ಕಬಳಿಸಿದರು. ಆದರೆ ಅವರು ಎಂಐ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಐಪಿಎಲ್ 2023 ರ ನಂತರ ಮುಂಬೈ ಇಂಡಿಯನ್ಸ್ ಅರ್ಷದ್ ಖಾನ್ ಅವರನ್ನು ಬಿಡುಗಡೆ ಮಾಡಿತು. ಲಕ್ನೋ ಸೂಪರ್ ಜೈಂಟ್ಸ್ ಐಪಿಎಲ್ 2024 ರ ಸೀಸನ್‌ಗೆ ಅರ್ಷದ್ ಖಾನ್ ಅವರನ್ನು ಆಯ್ಕೆ ಮಾಡಿತು. ಅಲ್ಲಿ ಅವರು ಕೇವಲ 4 ಪಂದ್ಯಗಳನ್ನು ಆಡಿ ಒಂದು ವಿಕೆಟ್ ಪಡೆದರು. ಆದರೆ ನಂತರ ಅವರು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 33 ಎಸೆತಗಳಲ್ಲಿ 58* ರನ್ ಗಳಿಸುವ ಮೂಲಕ ಸದ್ದು ಮಾಡಿದ್ದರು.
ಐಪಿಎಲ್ 2025 ಮೆಗಾ ಹರಾಜಿಗೂ ಮುನ್ನ ಲಕ್ನೋ ಸೂಪರ್ ಜೈಂಟ್ಸ್ ತಂಡ ಕೂಡ ಅರ್ಷದ್ ಖಾನ್ ಅವರನ್ನು ಬಿಡುಗಡೆ ಮಾಡಿತು. ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ಗುಜರಾತ್ ಟೈಟಾನ್ಸ್ ಫ್ರಾಂಚೈಸಿ ಅರ್ಷದ್ ಖಾನ್ ಅವರನ್ನು 1.30 ಕೋಟಿ ರೂ.ಗೆ ಖರೀದಿಸಿತು.
ಅರ್ಷದ್ ಖಾನ್ ಒಬ್ಬ ಅಪಾಯಕಾರಿ ಎಡಗೈ ಮಧ್ಯಮ ವೇಗದ ಬೌಲರ್. ಅವರು ಚೆಂಡನ್ನು ಸ್ವಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಅರ್ಷದ್ ಖಾನ್ ಕೂಡ ಒಬ್ಬ ಸಮರ್ಥ ಕೆಳ ಕ್ರಮಾಂಕದ ಬ್ಯಾಟರ್ ಆಗಿರುವ ಕಾರಣ ಪಂದ್ಯದ ಗತಿಯನ್ನು ಬದಲಾಯಿಸಬಲ್ಲರು. ಬುಧವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದ ಟಾಸ್ ಸಂದರ್ಭದಲ್ಲಿ ಶುಭಮನ್ ಗಿಲ್, ದಕ್ಷಿಣ ಆಫ್ರಿಕಾದ ಸೂಪರ್‌ಸ್ಟಾರ್ ವೇಗಿ ಕಗಿಸೊ ರಬಾಡ ವೈಯಕ್ತಿಕ ಕಾರಣಗಳಿಂದ ಆಡುತ್ತಿಲ್ಲ. ಆದ್ದರಿಂದ ಕಗಿಸೊ ರಬಾಡ ಬದಲಿಗೆ ಅರ್ಷದ್ ಖಾನ್ ಅವರನ್ನು ಗುಜರಾತ್ ಟೈಟಾನ್ಸ್‌ನ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸೇರಿಸಿಕೊಳ್ಳಲಾಗಿದೆ ಎಂದು ಹೇಳಿದ್ದರು. ಇದೀಗ ಅರ್ಷದ್ ಖಾನ್ ಅವರು ನಾಯಕನ ಭರವಸೆಯನ್ನು ಉಳಿಸಿಕೊಂಡಿದ್ದಾರೆ.