For Quick Alerts
ALLOW NOTIFICATIONS  
For Daily Alerts
 

IPL 2025 GT vs PBKS: ಭವಿಷ್ಯದ ನಾಯಕರ ನಡುವೆ ಕಾದಾಟ

ಐಪಿಎಲ್ 2025ರ ಸೀಸನ್ ಅತ್ಯಂತ ಸಡಗರದಿಂದ ನಡೆಸುತ್ತಿದೆ. ಇಂದು ಅಂದರೆ, ಮಂಗಳವಾರ ಐಪಿಎಲ್ 2025ರ ಐದನೇ ಪಂದ್ಯದಲ್ಲಿ ಭವಿಷ್ಯದ ನಾಯಕರು ಸೆಣಸಾಟ ನಡೆಸಲಿದ್ದಾರೆ. ಶ್ರೇಯಸ್ ಅಯ್ಯರ್ ಮುನ್ನಡೆಸುತ್ತಿರುವ ಪಂಜಾಬ್ ಕಿಂಗ್ಸ್ ಮತ್ತು ಶುಭಮನ್ ಗಿಲ್ ನೇತೃತ್ವದ ಗುಜರಾತ್ ಟೈಟನ್ಸ್ ತಂಡಗಳ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಈ ಬಾರಿ ಐಪಿಎಲ್‌ನಲ್ಲಿ ಶ್ರೇಯಸ್‌ ಅಯ್ಯರ್‌ ಪಂಜಾಬ್‌ ಕಿಂಗ್ಸ್‌ ತಂಡದ ಅದೃಷ್ಟವನ್ನು ಬದಲಿಸಲು ತಯಾರಿ ನಡೆಸುತ್ತಿದ್ದು, ಶುಭಮನ್ ಗಿಲ್ ತಮ್ಮ ನಾಯಕತ್ವದಲ್ಲಿ ಮತ್ತೊಮ್ಮೆ ಗುಜರಾತ್ ತಂಡವನ್ನು ಚಾಂಪಿಯನ್ ಮಾಡಲು ಪಣ ತೊಟ್ಟಿದ್ದಾರೆ.

ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ನಡುವಿನ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ರಾತ್ರ 7.30 ಕ್ಕೆ ಪಂದ್ಯ ಆರಂಭವಾಗಲಿದೆ.

IPL 2025 Match Five Punjab Kings vs Gujarat Titans Preview Head to Head Playing-11

ಐಪಿಎಲ್‌ನಲ್ಲಿ ಕಳೆದ ಕೆಲವು ವರ್ಷಗಳಿಂದ ನಾಯಕನಾಗಿ ಶ್ರೇಯಸ್‌ ಅಯ್ಯರ್ ಯಶಸ್ಸು ಕಂಡಿದ್ದಾರೆ. ಐಪಿಎಲ್ 2025 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಅಯ್ಯರ್ ಚಾಂಪಿಯನ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಐಪಿಎಲ್ 2020ರಲ್ಲಿ ಟೀಮ್ ಇಂಡಿಯಾದ ಈ ಸ್ಟಾರ್ ಬ್ಯಾಟರ್ ನಾಯಕನಾಗಿದ್ದಾಗ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಫೈನಲ್‌ಗೆ ಕರೆದ್ಯೂಯಿದ್ದರು.

ಐಪಿಎಲ್ ಇತಿಹಾಸದಲ್ಲಿ ಇಲ್ಲಿವರೆಗೂ ಪಂಜಾಬ್ ಕಿಂಗ್ಸ್ ಯಶಸ್ವಿ ತಂಡ ಎನಿಸಿಕೊಂಡಿಲ್ಲ. ಚೊಚ್ಚಲ ಐಪಿಎಲ್‌ ಪ್ರಶಸ್ತಿಗಾಗಿ ಪಂಜಾಬ್‌ 18 ವರ್ಷಗಳಿಂದ ಕಾಯುತ್ತಿದೆ. ಈಗ ಪಂಜಾಬ್ ಕಿಂಗ್ಸ್ ತಂಡವನ್ನು ಚಾಂಪಿಯನ್ ಮಾಡುವ ಜವಾಬ್ದಾರಿ ಅಯ್ಯರ್‌ ಮೇಲಿದೆ. ಐಪಿಎಲ್ 2018ರಲ್ಲಿ ಪಂಜಾಬ್‌ ಸೆಮಿಫೈನಲ್‌ ತಲುಪಿದರೆ, 2014ರಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿತ್ತು. ಆದರೆ ಕಳೆದ ನಾಲ್ಕು ಸೀಸನ್‌ಗಳಿಂದ ಪಂಜಾಬ್ ಟಾಪ್ 5 ರೊಳಗೆ ಸ್ಥಾನ ಪಡೆಯುವಲ್ಲಿ ವಿಫಲವಾಗಿದೆ.

ಇನ್ನೊಂದೆಡೆ, ಭಾರತ ಏಕದಿನ ತಂಡದ ಉಪನಾಯಕ ಶುಭಮನ್ ಗಿಲ್‌ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಗುಜರಾತ್‌ ಟೈಟಾನ್ಸ್ ತಂಡದ ನಾಯಕತ್ವ ವಹಿಸಿರುವ ಗಿಲ್ ಈ ಬಾರಿ ಮತ್ತೊಂದು ಟ್ರೋಫಿ ಮೇಲೆ ಕಣ್ಣಿಟ್ಟಿದ್ದಾರೆ. 2022ರಲ್ಲಿ ಗುಜರಾತ್ ಪ್ರಶಸ್ತಿ ಗೆದ್ದ ಬಳಿಕ 2024ರಲ್ಲಿ 8ನೇ ಸ್ಥಾನಕ್ಕೆ ಕುಸಿದಿದೆ. ಹಾರ್ದಿಕ್‌ ಪಾಂಡ್ಯ ತಮ್ಮ ನಾಯಕತ್ವದಲ್ಲಿ 2022 ಮತ್ತು 2023ರಲ್ಲಿ ತಂಡವನ್ನು ಚಾಂಪಿಯನ್‌ ಮತ್ತು ರನ್ನರ್‌ ಅಪ್‌ ಮಾಡಿದ್ದರು.

ಉತ್ತಮ ಲಯದಲ್ಲಿ ನಾಯಕರು

ಟೀಮ್ ಇಂಡಿಯಾ ಭವಿಷ್ಯದ ನಾಯಕರು ಎನಿಸಿಕೊಂಡಿರುವ ಶ್ರೇಯಸ್ ಅಯ್ಯರ್ ಮತ್ತು ಶುಭಮನ್ ಗಿಲ್ ಪ್ರಸ್ತುತ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಇತ್ತೀಚೆಗೆ ಟೀಮ್ ಇಂಡಿಯಾ ಐಸಿಸಿ 2025ರ ಚಾಂಪಿಯನ್ಸ್‌ ಟ್ರೋಫಿ ಗೆಲ್ಲಲು ಈ ಇಬ್ಬರು ಪ್ರಮುಖ ಪಾತ್ರ ವಹಿಸಿದ್ದರು. ಅಯ್ಯರ್‌ ಆಡಿದ ಐದು ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ನೀಡುವ ಮೂಲಕ 243 ರನ್‌ ಗಳಿಸಿ ಭಾರತದ ಪರ ಗರಿಷ್ಠ ರನ್‌ ಸ್ಕೋರರ್‌ ಎನಿಸಿಕೊಂಡಿದ್ದರು. ಗಿಲ್‌ ಕೂಡ ತಮ್ಮ ಸ್ಥಿತ ಪ್ರದರ್ಶನ ನೀಡುವ ಮೂಲಕ ಬಾಂಗ್ಲಾದೇಶ ವಿರುದ್ಧದ ಆರಂಭಿಕ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದ್ದರು.

ಬಲಾಬಲ

ಗುಜರಾತ್ ಟೈಟಾನ್ಸ್ ತಂಡ ಸ್ಟಾರ್ ಆಟಗಾರರನ್ನು ಹೊಂದಿದೆ. ಗಿಲ್ ಜೊತೆಗೆ ಜೋಸ್ ಬಟ್ಲರ್ ಇನ್ನಿಂಗ್ಸ್ ತೆರೆಯಲು ಸಜ್ಜಾಗಿದ್ದಾರೆ. ಜೊತೆಗೆ ಶೆರ್ಫೇನ್ ರುದರ್ಫೋರ್ಡ್, ಸಾಯಿ ಸುದರ್ಶನ್ ಮತ್ತು ಮಸೂದ್ ಶಾರುಖ್ ಖಾನ್ ಅವರಂತಹ ಬಲಿಷ್ಠ ಮಧ್ಯಮ ಕ್ರಮಾಂಕದ ಬ್ಯಾಟರ್‍‌ಗಳಿದ್ದಾರೆ. ರಶೀದ್ ಖಾನ್, ರಾಹುಲ್ ತೆವಾಟಿಯಾ, ಗ್ಲೆನ್ ಫಿಲಿಪ್ಸ್, ವಾಷಿಂಗ್ಟನ್ ಸುಂದರ್ ಮತ್ತು ಮಹಿಪಾಲ್ ಲೊಮ್ರೋರ್ ಅವರ ಆಲ್‌ರೌಂಡರ್ ಬಲವು ತಂಡಕ್ಕೆ ಅಸರೆಯಾಗಲಿದೆ. ವೇಗದ ಬೌಲಿಂಗ್ ವಿಭಾಗದಲ್ಲಿ ಮೊಹಮ್ಮದ್ ಸಿರಾಜ್, ಕಗಿಸೊ ರಬಾಡ, ಪ್ರಸಿದ್ಧ್ ಕೃಷ್ಣ, ಜೆರಾಲ್ಡ್ ಕೋಟ್ಜೀ ಮತ್ತು ಇಶಾಂತ್ ಶರ್ಮಾ ಅವರಂತಹ ಅನುಭವಿಗಳಿದ್ದಾರೆ.

ಪಂಜಾಬ್ ಕಿಂಗ್ಸ್ ತಂಡ ಕೂಡ ಬಲಿಷ್ಠವಾಗಿದೆ. ಅಯ್ಯರ್, ಜೋಶ್ ಇಂಗ್ಲಿಸ್, ಪ್ರಭ್ಸಿಮ್ರಾನ್ ಸಿಂಗ್, ಮಾರ್ಕಸ್ ಸ್ಟೊಯಿನಿಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಪಂಜಾಬ್ ತಂಡದ ಬಲವಾಗಿದ್ದಾರೆ. ಬೌಲರ್‌ಗಳಲ್ಲಿ ಅಜ್ಮತುಲ್ಲಾ ಒಮರ್‌ಜೈ, ಸ್ಟೊಯಿನಿಸ್, ಮಾರ್ಕೊ ಜಾನ್ಸೆನ್, ಶಶಾಂಕ್ ಸಿಂಗ್ ಮತ್ತು ಮುಶೀರ್ ಖಾನ್ ಇದ್ದಾರೆ. ಅರ್ಷದೀಪ್ ಸಿಂಗ್ ವೇಗದ ಬೌಲಿಂಗ್ ದಾಳಿಯನ್ನು ಮುನ್ನಡೆಸಲಿದ್ದಾರೆ. ಅರ್ಷದೀಪ್ ಅವರಿಗೆ ಲಾಕಿ ಫರ್ಗುಸನ್, ಕುಲದೀಪ್ ಸೇನ್ ಮತ್ತು ಯಶ್ ಠಾಕೂರ್ ಸಾಥ್ ನೀಡಲಿದ್ದಾರೆ. ಯುಜ್ವೇಂದ್ರ ಚಾಹಲ್ ಮತ್ತು ಹರ್‌ಪ್ರೀತ್ ಬ್ರಾರ್ ಸ್ಪಿನ್ ಜವಾಬ್ದಾರಿಯನ್ನು ಹೊತ್ತಿಕೊಂಡಿದ್ದಾರೆ.

ಹೆಡ್-ಟು-ಹೆಡ್

ಐಪಿಎಲ್‌ನಲ್ಲಿ ಇಲ್ಲಿವರೆಗೆ ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ನಡುವೆ ಕೇವಲ 5 ಪಂದ್ಯಗಳು ನಡೆದಿವೆ. ಗುಜರಾತ್ 3 ರಲ್ಲಿ ಗೆಲುವು ಸಾಧಿಸಿದರೆ, ಪಂಜಾಬ್ 2 ರಲ್ಲಿ ಜಯ ಕಂಡಿದೆ. ಇಂದು ಗುಜರಾತ್ ಪ್ರಾಬಲ್ಯ ಸಾಧಿಸಲು ರೆಡಿಯಾಗಿದೆ. ಪಂಜಾಬ್ ಕೂಡ ಪಂದ್ಯವನ್ನು ಗೆದ್ದು ದಾಖಲೆ ಸರಿಗಟ್ಟುವ ನಿರೀಕ್ಷೆಯಲ್ಲಿದೆ.

ಸಂಭಾವ್ಯ ಪ್ಲೇಯಿಂಗ್-11

ಗುಜರಾತ್ ಟೈಟಾನ್ಸ್: ಶುಭಮನ್ ಗಿಲ್ (ನಾಯಕ), ಜೋಸ್ ಬಟ್ಲರ್ (ವಿಕೆಟ್‌ಕೀಪರ್), ಸಾಯಿ ಸುದರ್ಶನ್, ಗ್ಲೆನ್ ಫಿಲಿಪ್ಸ್, ವಾಷಿಂಗ್ಟನ್ ಸುಂದರ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಸಾಯಿ ಕಿಶೋರ್, ಕಗಿಸೊ ರಬಾಡ ಮತ್ತು ಮೊಹಮ್ಮದ್ ಸಿರಾಜ್.

ಪಂಜಾಬ್ ಕಿಂಗ್ಸ್: ಪ್ರಭಾಸಿಮ್ರಾನ್ ಸಿಂಗ್, ಜೋಶ್ ಇಂಗ್ಲಿಸ್ (ವಿಕೆಟ್‌ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಶಶಾಂಕ್ ಸಿಂಗ್, ಹರ್‌ಪ್ರೀತ್ ಬ್ರಾರ್, ಮಾರ್ಕೊ ಜಾನ್ಸೆನ್, ಅರ್ಷ್‌ದೀಪ್ ಸಿಂಗ್, ಯುಜ್ವೇಂದ್ರ ಚಾಹಲ್, ವಿಜಯ್‌ಕುಮಾರ್ ವೈಶಾಕ್.

Story first published: Tuesday, March 25, 2025, 7:33 [IST]
Other articles published on Mar 25, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+