ಐದು ಬಾರಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ 2025 ರಲ್ಲಿ ಇಲ್ಲಿವರೆಗೆ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಆಡಿರುವ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಹೀನಾಯವಾಗಿ ಸೋಲು ಕಂಡಿದೆ. ಕೇವಲ ಒಂದು ಪಂದ್ಯವನ್ನು ಮಾತ್ರ ಮುಂಬೈ ಇಂಡಿಯನ್ಸ್ ವಿರುದ್ಧ ಸಿಎಸ್‌ಕೆ ಗೆದ್ದಿದೆ. ಇಂತಹ ಸಂದರ್ಭದಲ್ಲಿ ಪುಟಿದೇಳುವ ನಿರೀಕ್ಷೆಯಲ್ಲಿದ್ದ ಸಿಎಸ್‌ಕೆ ತಂಡಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ನಾಯಕ ರುತುರಾಜ್ ಗಾಯಕ್ವಾಡ್ ಗಾಯದ ಕಾರಣದಿಂದಾಗಿ ಐಪಿಎಲ್ 2025 ರ ಸೀಸನ್‌ನಿಂದ ಹೊರಗುಳಿದಿದ್ದಾರೆ.
ರುತುರಾಜ್ ಗಾಯಕ್ವಾಡ್ ಬದಲಿಗೆ ಮಾಜಿ ನಾಯಕ ಎಂಎಸ್ ಧೋನಿ ಮತ್ತೆ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಎಂಎಸ್ ಧೋನಿ ಐಪಿಎಲ್ 2025 ರ ಉಳಿದ ಪಂದ್ಯಗಳಿಗೆ ನಾಯಕತ್ವ ವಹಿಸಲಿದ್ದಾರೆ. ಮೊಣಕೈ ಗಾಯದಿಂದಾಗಿ ರುತುರಾಜ್ ಗಾಯಕ್ವಾಡ್ ಐಪಿಎಲ್ 2025 ರಿಂದ ಹೊರಗುಳಿಬೇಕಾಗಿದೆ.

ಮಾರ್ಚ್ 30 ರಂದು ಗುವಾಹಟಿಯಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧದ ಸಿಎಸ್‌ಕೆ ಪಂದ್ಯದ ಸಮಯದಲ್ಲಿ ಗಾಯಕ್ವಾಡ್ ಗಾಯಗೊಂಡರು. ಆ ಪಂದ್ಯದಲ್ಲಿ ಸಿಎಸ್‌ಕೆ ಸೋತಿತು. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ವೇಗಿ ತುಷಾರ್ ದೇಶಪಾಂಡೆ ಅವರ ಎಸೆತದಲ್ಲಿ ರುತುರಾಜ್ ಗಾಯಗೊಂಡಿದ್ದರು. ಇದರ ಹೊರತಾಗಿಯೂ, ಅವರು ಬ್ಯಾಟಿಂಗ್ ಮಾಡಿ 63 ರನ್ ಗಳಿಸಿದರು. ಇದಾದ ನಂತರ ಅವರು ಗಾಯದಿಂದ ಚೇತರಿಸಿಕೊಳ್ಳುತ್ತಾರೆ ಎನ್ನಲಾಗಿತ್ತು. ಆದರೆ, ಅವರು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ವಿರುದ್ಧದ ಮುಂದಿನ ಎರಡು ಪಂದ್ಯಗಳಿಂದ ಹೊರಗುಳಿದು ಚೇತರಿಸಿಕೊಂಡರೂ, ಮುಂದಿನ ಪಂದ್ಯಗಳನ್ನು ಆಡುವುದು ಅಸಾಧ್ಯವಾಗಿದೆ. ಹೀಗಾಗಿ ವೈದ್ಯರ ಸಲಹೆ ಮೇರೆಗೆ ಅವರು ಟೂರ್ನಿಯಿಂದ ಹೊರಗುಳಿದಿದ್ದಾರೆ.
ಶುಕ್ರವಾರ ಚೆಪಾಕ್ ಕ್ರೀಡಾಂಗಣದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಆಡಲಿದೆ. ಈ ಪಂದ್ಯಕ್ಕೂ ಚೆನ್ನೈ ತಂಡಕ್ಕೆ ಹಿನ್ನಡೆಯಾಗಿದೆ. ರುತುರಾಜ್ ನಾಯಕತ್ವದಲ್ಲಿ ಚೆನ್ನೈ ತಂಡವು ಮೊದಲ ಐದು ಪಂದ್ಯಗಳಲ್ಲಿ ಕೇವಲ ಒಂದು ಗೆಲುವು ಮಾತ್ರ ಗಳಿಸಿದ್ದು, ನಾಲ್ವರಲ್ಲಿ ಸೋತಿದೆ. ಹೀಗಾಗಿ ಪಾಯಿಂಟ್ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ.
ಚೆನ್ನೈನಲ್ಲಿ ಈ ಬಗ್ಗೆ ಮಾತನಾಡಿರುವ ಸಿಎಸ್‌ಕೆ ಹೆಡ್‌ಕೋಚ್ ಸ್ಟೀಫನ್ ಫ್ಲೆಮಿಂಗ್, ರುತುರಾಜ್ ಅವರಿಗೆ ತುಂಬಾ ನೋವು ಇತ್ತು. ನಾವು ಎಕ್ಸ್-ರೇ ಮಾಡಿಸಿದ್ದೇವೆ. ಅದರಿಂದ ಉತ್ತಮ ಫಲಿತಾಂಶ ಹೊರಬರಲಿಲ್ಲ. ಇದಾದ ನಂತರ, ನಾವು ಎಂಆರ್‍ಐ ಮಾಡಿಸಿದಾಗ ಅವರ ಮೊಣಕೈ ಮುರಿತವಾಗಿರುವುದು ತಿಳಿದು ಬಂದಿದೆ. ಆದ್ದರಿಂದ ಅವರ ಹೊರಗುಳಿದಿರುವ ಬಗ್ಗೆ ನಾವು ನಿರಾಶೆಗೊಂಡಿದ್ದೇವೆ. ಅವರ ಆಟದ ಪ್ರಯತ್ನಗಳನ್ನು ನಾವು ಪ್ರಶಂಸಿಸುತ್ತೇವೆ. ಆದರೆ ದುರದೃಷ್ಟವಶಾತ್ ಅವರು ಈಗ ಟೂರ್ನಿಯಿಂದ ಹೊರಗುಳಿಯಲಿದ್ದಾರೆ. ಎಂಎಸ್ ಧೋನಿ ಅವರು ಐಪಿಎಲ್‌ನ ಉಳಿದ ಪಂದ್ಯಗಳಲ್ಲಿ ನಾಯಕನ ಪಾತ್ರವನ್ನು ನಿರ್ವಹಿಸುತ್ತಾರೆ ಎಂದಿದ್ದಾರೆ.
ಎಂಎಸ್ ಧೋನಿ 2008 ರಿಂದ 2024 ರವರೆಗೆ ಚೆನ್ನೈ ತಂಡದ ನಾಯಕತ್ವ ವಹಿಸಿದ್ದರು. ಇದಾದ ನಂತರ ಅವರು ಗಾಯಕ್ವಾಡ್ ಅವರಿಗೆ ನಾಯಕತ್ವವನ್ನು ಹಸ್ತಾಂತರಿಸಿದರು. ಧೋನಿ 2022 ರಲ್ಲಿ ರವೀಂದ್ರ ಜಡೇಜಾ ಅವರಿಗೆ ನಾಯಕತ್ವವನ್ನು ಹಸ್ತಾಂತರಿಸಿದ್ದರು. ಆದರೆ ತಂಡದ ಕಳಪೆ ಫಲಿತಾಂಶದ ನಂತರ, ಸೀಸನ್ ಮಧ್ಯದಲ್ಲಿ ಅವರು ನಾಯಕತ್ವವನ್ನು ಮರಳಿ ಪಡೆದರು. ಧೋನಿ ನಾಯಕತ್ವದಲ್ಲಿ, ಚೆನ್ನೈ ತಂಡವು 2010, 2011, 2018, 2021 ಮತ್ತು 2023 ರಲ್ಲಿ ಐದು ಐಪಿಎಲ್ ಪ್ರಶಸ್ತಿಗಳು ಮತ್ತು ಎರಡು ಚಾಂಪಿಯನ್ಸ್ ಲೀಗ್ ಟ್ರೋಫಿಗಳನ್ನು ಗೆದ್ದಿದೆ.