ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ರೋಚಕ ಘಟದತ್ತ ಮುಖ ಮಾಡಿದೆ. ಹಲವು ತಂಡಗಳು ತಮ್ಮ ಲೀಗ್ ಹಂತದ ಕೊನೆಯ ಪಂದ್ಯವನ್ನು ಸಹ ಆಡಿವೆ. ಇನ್ನು ನಾಲ್ಕು ತಂಡಗಳು ಲೀಗ್‌ನಲ್ಲಿ ಕೊನೆಯ ಬಾರಿಗೆ ಅಂಗಳ ಪ್ರವೇಶಿಸಲಿವೆ. 18ನೇ ಆವೃತ್ತಿಯ ಐಪಿಎಲ್‌ನ ಅಗ್ರ ಎರಡು ತಂಡಗಳು ಯಾವವು ಎಂಬ ಬಗ್ಗೆ ಇನ್ನು ಸ್ಪಷ್ಟತೆ ಸಿಕ್ಕಿಲ್ಲ. ಅಗ್ರ ಸ್ಥಾನದಲ್ಲಿರುವ ನಾಲ್ಕು ತಂಡಗಳಿಗೆ ಅಗ್ರ ಎರಡು ಸ್ಥಾನವನ್ನು ಪಡೆಯುವ ಅವಕಾಶ ಇದೆ.
ಭಾನುವಾರ ನಡೆದ ಲೀಗ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡ ತನ್ನ ಕೊನೆಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲು ಕಂಡಿತ್ತು. ಇಲ್ಲಿಂದಲೇ ಆರಂಭವಾಯಿತು, ಮತ್ತೆ ಅಂಕ ಪಟ್ಟಿಯಲ್ಲಿ ಹಾವು ಏಣಿಯ ಆಟ. ಲೀಗ್ ಹಂತದಲ್ಲಿ ಅಮೋಘ ಪ್ರದರ್ಶನ ನೀಡಿರುವ ಗುಜರಾತ್ (Gujarat Titans) ಲೀಗ್ ಹಂತದ ಕೊನೆಯ ಎರಡು ಪಂದ್ಯಗಳನ್ನು ಸೋತಿದೆ. ಅಂತೆಯೇ, ಪಂಜಾಬ್ ಕಿಂಗ್ಸ್ (Punjab Kings) ಹಾಗೂ ಆರ್‌ಸಿಬಿ (RCB) ಸಹ ತಮ್ಮ ಲೀಗ್ ಹಂತದಲ್ಲಿ ತಲಾ ಒಂದು ಪಂದ್ಯವನ್ನು ಸೋತಿವೆ. ಸೋಮವಾರ ಐಪಿಎಲ್ ಲೀಗ್‌ನ ಬಿಗ್ ಫೈಟ್ ನಡೆಯಲಿದೆ. ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ (Mumbai Indians) ತಂಡಗಳು ಕಾದಾಟ ನಡೆಸಲಿವೆ.

ಪ್ಲೇ ಆಫ್‌ಗೆ ನಾಲ್ಕು ತಂಡಗಳು ಈಗಾಗಲೇ ಡಿಸೈಡ್ ಆಗಿವೆ. ಆದರೆ ಯಾರು ಕ್ವಾಲಿಫೈಯರ್ ಪಂದ್ಯವನ್ನು ಆಡುತ್ತಾರೆ. ಯಾರು ಎಲಿಮಿನೇಟರ್ ಆಡುತ್ತಾರೆ ಎಂಬುದು ಇನ್ನು ಡಿಸೈಡ್ ಆಗಿಲ್ಲ. ಇಂದು ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಜಯ ಸಾಧಿಸಿರುವ ತಂಡ ನಿಶ್ಚಿತವಾಗಿ ಅಗ್ರ ಎರಡು ಸ್ಥಾನಗಳಲ್ಲಿ ಒಂದನ್ನು ಪಡೆಯುತ್ತದೆ.
ಗುಜರಾಟ್ ಟೈಟಾನ್ಸ್ ತಂಡ ಲೀಗ್ ಹಂತದಲ್ಲಿ ಅಮೋಘ ಪ್ರದರ್ಶನ ನೀಡಿದೆ. ಆಡಿದ 14 ಪಂದ್ಯಗಳಲ್ಲಿ 9 ಜಯ ಸಾಧಿಸಿದ್ದು 18 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಸದ್ಯ ಅಗ್ರ ಸ್ಥಾನದಲ್ಲಿದೆ. ಸೋಮವಾರ ನಡೆಯುವ ಪಂದ್ಯದಲ್ಲಿ ಮುಂಬೈ ಗೆಲುವು ಸಾಧಿಸಿದರೆ, ಇಂಡಿಯನ್ಸ್ ಅಂಕ 18 ಆಗುತ್ತದೆ. ಅಲ್ಲದೆ ರನ್ ರೇಟ್ ಸಹ ಅಮೋಘವಾಗಿದ್ದು, ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆಯುತ್ತದೆ. ಒಂದು ವೇಳೆ ಪಂಜಾಬ್ ಜಯ ಸಾಧಿಸಿದರೆ, 19 ಅಂಕಗಳೊಂದಿಗೆ ಅಗ್ರ ಸ್ಥಾನ ಭದ್ರ ಪಡಿಸಿಕೊಳ್ಳುತ್ತದೆ.
ಪಂಜಾಬ್ ಕಿಂಗ್ಸ್ ತಂಡ ಸದ್ಯ 17 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಸೋಮವಾರ ಮುಂಬೈ ವಿರುದ್ಧ ಜಯ ಸಾಧಿಸಿದರೆ, ನಿಶ್ಚಿತವಾಗಿ ಕ್ವಾಲಿಫೈಯರ್ ಆಡದಲಿದೆ. ಈ ಪಂದ್ಯದಲ್ಲಿ ಪಂಜಾಬ್ ಸೋಲು ಕಂಡರೆ, ಎಲಿಮಿನೇಟರ್‌ನಲ್ಲಿ ಆಡಬೇಕಾಗುತ್ತದೆ. ಹೀಗಾಗಿ ಈ ಪಂದ್ಯ ಮಹತ್ವದಾಗಿದೆ.
ಆರ್‌ಸಿಬಿ ತಂಡ ಲೀಗ್‌ನಲ್ಲಿ ಸ್ಥಿರ ಪ್ರದರ್ಶನವನ್ನು ನೀಡಿ 17 ಅಂಕಗಳನ್ನು ಕಲೆ ಹಾಕಿದ್ದು ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಮಂಗಳವಾ ನಡೆಯಲಿರುವ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಆರ್‌ಸಿಬಿ ಜಯ ಸಾಧಿಸಿದರೆ, ಬೆಂಗಳೂರು ತಂಡ ಅಗ್ರ ಸ್ಥಾನಕ್ಕೆ ಬಡ್ತಿ ಪಡೆಯಬಹುದಾಗಿದೆ. ಲಕ್ನೋ ವಿರುದ್ಧ ನಡೆಯುವ ಪಂದ್ಯದಲ್ಲಿ ಆರ್‌ಸಿಬಿ ಗೆಲ್ಲುವುದು ಅನಿವಾರ್ಯವಾಗಿದೆ.
ಲೀಗ್ ಹಂತದ ಆರಂಭದಲ್ಲಿ ಸೋಲುಗಳಿಂದ ಕಂಗೆಟ್ಟಿದ್ದ ಮುಂಬೈ ಇಂಡಿಯನ್ಸ್, ಬಳಿಕ ಗೆಲುವಿನ ಟ್ರ್ಯಾಕ್‌ಗೆ ಮರಳಿ ಪ್ಲೇ ಆಫ್‌ಗೆ ಎಂಟ್ರಿ ಪಡೆದಿದೆ. ಈ ತಂಡ ಪಂಜಾಬ್ ತಂಡವನ್ನು ಮಣಿಸಿದರೆ, ಕ್ವಾಲಿಫೈಯರ್ ನಲ್ಲಿ ಹೋರಾಟ ನಡೆಸಲಿದೆ. ಒಂದು ವೇಳೆ ಸೋತಲ್ಲಿ ಎಲಿಮಿನೇಟರ್‌ನಲ್ಲಿ ಹೋರಾಟ ನಡೆಸಿದೆ.
ಗುಜರಾತ್ ಕ್ವಾಲಿಫೈಯರ್ ಪಂದ್ಯವನ್ನು ಆಡುವುದು ಈಗ ಕಷ್ಟವಾಗಿದೆ. ಟೈಟಾನ್ಸ್ ತಂಡ ಪಂಜಾಬ್ ಹಾಗೂ ಆರ್‌ಸಿಬಿ ತಂಡಗಳ ಫಲಿತಾಂಶವನ್ನು ಎದುರು ನೋಡಬೇಕಾಗುತ್ತದೆ. ಮುಂಬೈ ವಿರುದ್ಧ ಪಂಜಾಬ್, ಲಕ್ನೋ ವಿರುದ್ಧ ಆರ್‌ಸಿಬಿ ಸೋಲು ಕಂಡಲ್ಲಿ ಟೈಟಾನ್ಸ್ ಕ್ವಾಲಿಫೈಯರ್ ಪಂದ್ಯವನ್ನು ಆಡಬಹುದು. ಇದಕ್ಕೆ ಕಾರಣ ಪಂಜಾಬ್ ಹಾಗೂ ಬೆಂಗಳೂರು ತಂಡದ ಬುಟ್ಟಿಯಲ್ಲಿ 17 ಅಂಕಗಳಿವೆ. ಮುಂಬೈ ಪಂಜಾಬ್ ತಂಡವನ್ನು ಮಣಿಸಿದರೆ, ಹಾರ್ದಿಕ್ ಪಡೆಯ ಅಂಕಗಳು ಸಹ 18 ಆಗುತ್ತವೆ. ಪಂಜಾಬ್, ಆರ್‌ಸಿಬಿ ತಂಡಗಳು ಸೋತಲ್ಲಿ ಈ ತಂಡಗಳ ಅಂಕಗಳು 17 ಇರುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಗುಜರಾತ್ ಟೈಟಾನ್ಸ್ 18 ಅಂಕಗಳೊಂದಿಗೆ ಕ್ವಾಲಿಫೈಯರ್‌ಗೆ ಕ್ವಾಲಿಫೈ ಆಗುತ್ತದೆ.