IPL 2025: ದಶಕಗಳ ನಂತರ ಇತಿಹಾಸ ನಿರ್ಮಿಸುತ್ತಾ ಆರ್‌ಸಿಬಿ?
ಐಪಿಎಲ್‌ನಲ್ಲಿ ಒಟ್ಟು 10 ತಂಡಗಳು ಭಾಗವಹಿಸುತ್ತವೆ. ಪ್ರತಿಯೊಂದು ತಂಡಕ್ಕೂ ತನ್ನದೇ ಆದ ಅಭಿಮಾನಿ ಬಳಗವಿದೆ. ಆದರೆ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕಿರುವಷ್ಟು ಅಭಿಮಾನಿಗಳ ಕ್ರೇಜ್ ಬೇರೆ ಯಾವ ತಂಡಕ್ಕೂ ಇಲ್ಲ. ವರ್ಷದಿಂದ ವರ್ಷಕ್ಕೆ ಆರ್‍ಸಿಬಿ ಅಭಿಮಾನಿಗಳ ಬಳಗ ಬೆಳೆಯುತ್ತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯಕ್ಕೂ ಅಷ್ಟೇ ಅಪಾರ ಸಂಖ್ಯೆಯಲ್ಲಿ ಮೈದಾನಕ್ಕೆ ಉಭಯ ತಂಡಗಳ ಅಭಿಮಾನಿಗಳು ಸೇರುತ್ತಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ರೋಚಕ ಪಂದ್ಯಗಳು ನಡೆದಿವೆ. ಐಪಿಎಲ್ 2024 ರಲ್ಲಿ ಸಿಎಸ್‌ಕೆ ತಂಡದ ವಿರುದ್ಧ ಆರ್‍ಸಿಬಿ ಭರ್ಜರಿ ಗೆಲುವು ಸಾಧಿಸಿತ್ತು. ಈ ಗೆಲುವಿನೊಂದಿಗೆ ಸಿಎಸ್‌ಕೆ ತಂಡವನ್ನು ಆರ್‍ಸಿಬಿ ಪ್ಲೇಆಫ್ ರೇಸ್‌ನಿಂದ ಹೊರದಬ್ಬಿತ್ತು. ಈಗ ಆರ್‌ಸಿಬಿಗೆ ಮತ್ತೊಮ್ಮೆ ಸಿಎಸ್‌ಕೆ ತಂಡವನ್ನು ತವರಿನಲ್ಲಿ ಹೆಡೆಮುರಿ ಕಟ್ಟುವ ಅವಕಾಶ ಸಿಕ್ಕಿದೆ.

ಚೆಪಾಕ್‌ನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ 2025 ರ ಎಂಟನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ. ಮಾರ್ಚ್ 28, ಶುಕ್ರವಾರದಂದು ನಡೆಯಲಿರುವ ಉಭಯ ತಂಡಗಳ ನಡುವಿನ
ಪಂದ್ಯ ಭಾರೀ ಕುತೂಹಲ ಮೂಡಿಸಿದೆ. 2008 ರ ಐಪಿಎಲ್ ಉದ್ಘಾಟನಾ ಸೀಸನ್ ನಂತರ ಆರ್‌ಸಿಬಿ ಚೆಪಾಕ್ ಮೈದಾನದಲ್ಲಿ ಸಿಎಸ್‌ಕೆ ವಿರುದ್ಧ ಗೆಲ್ಲಲು ಸಾಧ್ಯವಾಗಿಲ್ಲ. ಈಗ ಚೆಪಾಕ್ ಮೈದಾನಲ್ಲಿ ಸಿಎಸ್‌ಕೆ ತಂಡವನ್ನು ಮಣಿಸಿ ಆರ್‍ಸಿಬಿ ಇತಿಹಾಸ ನಿರ್ಮಿಸಲು ಸಜ್ಜಾಗಿದೆ.
ಚೆಪಾಕ್ ಮೈದಾನ ಸಿಎಸ್‌ಕೆ ತಂಡದ ಭದ್ರಕೋಟೆಯಾಗಿದೆ. ಇದರ ಸ್ಪಿನ್ ಸ್ನೇಹಿ ಪಿಚ್ ಸಿಎಸ್‌ಕೆ ತಂಡದ ಕೈಯಲ್ಲಿದೆ. ರವಿಚಂದ್ರನ್ ಅಶ್ವಿನ್ ಮರಳಿರುವುದು ಸಿಎಸ್‌ಕೆ ತಂಡದ ಬಲ ಹೆಚ್ಚಿಸಿದೆ. ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್ ಜೊತೆಗೆ ನೂರ್ ಅಹ್ಮದ್ ಅವರಂತಹ ಸ್ಟಾರ್ ಸ್ಪಿನ್ನರ್ಸ್ ಸಿಎಸ್‌ಕೆ ತಂಡಕ್ಕೆ ಆಧಾರಸ್ತಂಭವಾಗಿದ್ದಾರೆ. ಈ ಮೂವರು ಮುಂಬೈ ಇಂಡಿಯನ್ಸ್ ವಿರುದ್ಧದ ಆರಂಭಿಕ ಪಂದ್ಯದ ಅದ್ಭುತ ಪ್ರದರ್ಶನ ನೀಡಿದ್ದರು. ಕೇವಲ 11 ಓವರ್‌ಗಳಲ್ಲಿ ಕೇವಲ 70 ರನ್‌ಗಳಿಗೆ ಐದು ವಿಕೆಟ್‌ಗಳನ್ನು ಪಡೆಯುವ ಮೂಲಕ ಅವರ ಮುಂಬೈ ತಂಡವನ್ನು ಕಟ್ಟಿದ್ದರು.
ಸಿಎಸ್‌ಕೆ ಸ್ಪಿನ್ನರ್ಸ್ ವಿರುದ್ಧ ರಜತ್ ಪಾಟಿದಾರ್ ಮತ್ತು ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ ಬ್ಯಾಟಿಂಗ್ ಲೈನ್ ಆಫ್ ಎಚ್ಚರಿಕೆ ಹೆಜ್ಜೆ ಹಾಕಬೇಕಾಗಿದೆ. ಸ್ಪಿನ್ ವಿರುದ್ಧ ಕೊಹ್ಲಿಯ ಇತ್ತೀಚಿನ ಪ್ರದರ್ಶನ ಉತ್ತಮವಾಗಿದೆ. ಈ ಮೂವರನ್ನು ಎದುರಿಸುವಲ್ಲಿ ಆರ್‍ಸಿಬಿ ಯಶಸ್ವಿಯಾದರೆ ಐತಿಹಾಸಿಕ ಗೆಲುವು ಸಾಧಿಸುವುದು ಖಚಿತ.
ಮೊದಲ ಗೆಲುವು ಹೇಗಿತ್ತು?
ಐಪಿಎಲ್ 2008ರ ಸೀಸನ್‌ನಲ್ಲಿ ಆರ್‍ಸಿಬಿ ಮತ್ತು ಸಿಎಸ್‌ಕೆ ತಂಡಗಳು ಚೆಪಾಕ್ ಮೈದಾನದಲ್ಲಿ ಮುಖಾಮುಖಿಯಾಗಿದ್ದವು. ಮೊದಲ ಬ್ಯಾಟಿಂಗ್ ಮಾಡಿದ ಆರ್‍ಸಿಬಿ ನಾಯಕ ರಾಹುಲ್ ದ್ರಾವಿಡ್ ಅವರ (47) ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಆರ್‍ಸಿಬಿ ನಿಗದಿತ 20 ಓವರ್‍ಗಳಲ್ಲಿ 8 ವಿಕೆಟ್ ನಷ್ಟಕ್ಕೆ 126 ರನ್ ಕಲೆ ಹಾಕಿತ್ತು. ಈ ಪಂದ್ಯದಲ್ಲಿ ಸಿಎಸ್‌ಕೆ ಪರ ಆಲ್ಬೀ ಮಾರ್ಕೆಲ್ 4 ವಿಕೆಟ್ ಕಬಳಿಸಿ ಮಿಂಚಿದ್ದರು.
ಆರ್‍ಸಿಬಿ ನೀಡಿದ 127 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ ಸಿಎಸ್‌ಕೆ ಉತ್ತಮ ಆರಂಭ ಪಡೆಯಿತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಆರ್‍ಸಿಬಿ ಬೌಲಿಂಗ್‌ಗೆ ತತ್ತರಿಸಿತ್ತು. ಸಿಎಸ್‌ಕೆ ತಂಡಕ್ಕೆ ಅನಿಲ್ ಕುಂಬ್ಳೆ ತಮ್ಮ ಸ್ಪಿನ್ ಬೌಲಿಂಗ್ ಮೂಲಕ ಕಡಿವಾಣ ಹಾಕಿದ್ದರು. ಸ್ಟೀಫನ್ ಫ್ಲೆಮಿಂಗ್ 45 ರನ್ ಗಳಿಸಿದ್ದು ಬಿಟ್ಟರೆ, ಬೇರೆ ಯಾವುದೇ ಬ್ಯಾಟರ್ ರನ್ ಗಳಿಸುವಲ್ಲಿ ವಿಫಲವಾಗಿದ್ದರು. ಅಂತಿಮವಾಗಿ ಆರ್‍ಸಿಬಿ ಬೌಲರ್‍ಗಳು ಸಿಎಸ್‌ಕೆ ತಂಡವನ್ನು 112 ರನ್‌ಗಳಿಗೆ ಕಟ್ಟಿ ಹಾಕಿದ್ದರು. ಈ ಮೂಲಕ ಮೊದಲ ಬಾರಿಗೆ ಚೆಪಾಕ್ ಮೈದಾನದಲ್ಲಿ ಸಿಎಸ್‌ಕೆ ಎದುರು ಆರ್‍ಸಿಬಿ 14 ರನ್‌ಗಳ ಭರ್ಜರಿ ಗೆಲುವು ಸಾಧಿಸಿತ್ತು. ಈಗ ದಶಕಗಳ ನಂತರ ಚೆಪಾಲ್ ಮೈದಾನದಲ್ಲಿ ಇತಿಹಾಸ ಸೃಷ್ಟಿಸಲು ರಜತ್ ಪಾಟಿದಾರ್ ನೇತೃತ್ವದಲ್ಲಿ ಆರ್‍ಸಿಬಿ ತಂತ್ರ ರೂಪಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications