ಐಪಿಎಲ್ 2025 ರ 49ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪಂಜಾಬ್ ಕಿಂಗ್ಸ್ 4 ವಿಕೆಟ್‌ಗಳಿಂದ ಸೋಲಿಸಿತು. ಈ ಗೆಲುವಿನೊಂದಿಗೆ, ಪಂಜಾಬ್ ಕಿಂಗ್ಸ್ ತಂಡವು 10 ಪಂದ್ಯಗಳಲ್ಲಿ 6 ಗೆಲುವು, 3 ಸೋಲು ಮತ್ತು ಒಂದು ಡ್ರಾದೊಂದಿಗೆ 13 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ತಲುಪಿದೆ. ಈ ಮೂಲಕ ಪಂಜಾಬ್ ಪ್ಲೇಆಫ್‌ಗೆ ಹತ್ತಿರದಲ್ಲಿದೆ. ಮತ್ತೊಂದೆಡೆ, ಚೆನ್ನೈ ಸೂಪರ್ ಕಿಂಗ್ಸ್ 10 ಪಂದ್ಯಗಳಲ್ಲಿ 8 ಪಂದ್ಯಗಳಲ್ಲಿ ಸೋತ ನಂತರ 4 ಅಂಕಗಳೊಂದಿಗೆ 10 ನೇ ಸ್ಥಾನದಲ್ಲಿದೆ. ಈ ಸೋಲಿನೊಂದಿಗೆ ಸಿಎಸ್‌ಕೆ ತಂಡ ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿದೆ.
ಪಂಜಾಬ್ ಕಿಂಗ್ಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ 19.2 ಓವರ್‌ಗಳಲ್ಲಿ 190 ರನ್ ಗಳಿಗೆ ಆಲೌಟಾಯಿತು. ಚೆನ್ನೈ ನೀಡಿದ 191 ರನ್‌ಗಳ ಗೆಲುವಿಗೆ ಗುರಿ ಬೆನ್ನಟ್ಟಿದ ಪಂಜಾಬ್ 19.4 ಓವರ್‌ಗಳಲ್ಲಿ 6 ವಿಕೆಟ್‌ಗಳನ್ನು ಕಳೆದುಕೊಂಡು 194 ರನ್ ಗಳಿಸಿ ಗೆಲುವು ನಗೆ ಬೀರಿತು. ಚೆನ್ನೈ ಸೂಪರ್ ಕಿಂಗ್ಸ್ ಪರ ಆಲ್‌ರೌಂಡರ್ ಸ್ಯಾಮ್ ಕರನ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಅವರು ತಮ್ಮ ಮಾಜಿ ಪಂಜಾಬ್ ತಂಡದ ವಿರುದ್ಧ ಅರ್ಧಶತಕ ಸಿಡಿಸಿ ಚೆನ್ನೈಗೆ ನೆರವಾದರು.

ಚೆನ್ನೈ ಸೂಪರ್ ಕಿಂಗ್ಸ್ 190 ರನ್ ಗಳಿಸಲು ಸ್ಯಾಮ್ ಕರನ್ ಅದ್ಭುತ ಇನ್ನಿಂಗ್ಸ್ ಆಡಿದರು. ಸಿಎಸ್‌ಕೆ ಪರ ಸ್ಯಾಮ್ ಕರನ್ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಪಂಜಾಬ್ ಕಿಂಗ್ಸ್ ಬೌಲರ್ಸ್ ಅನ್ನು ಬೆಂಡೆತ್ತಿದ ಸ್ಯಾಮ್ ಕರನ್ ಅವರು ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಅವರು 47 ಎಸೆತಗಳಲ್ಲಿ 9 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ 88 ರನ್ ಗಳಿಸಿದರು. ಕರನ್ ಅವರ ಅರ್ಧಶತಕದ ನೆರವಿನಿಂದ ಚೆನ್ನೈ ಸವಾಲಿನ ಮೊತ್ತ ಕಲೆ ಹಾಕಿತು.
ಐಪಿಎಲ್ 2024 ರಲ್ಲಿ ಪಂಜಾಬ್ ಪರ ಸ್ಯಾಮ್ ಕರನ್ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿತ್ತು. ಇದರಿಂದಾಗಿ ಐಪಿಎಲ್ 2025ರ ಮೆಗಾ ಹರಾಜಿಗೂ ಮುನ್ನ ಅವರನ್ನು ಬಿಡುಗಡೆ ಮಾಡಲು ಪಂಜಾಬ್ ಫ್ರಾಂಚೈಸಿ ನಿರ್ಧರಿಸಿತು. ಮೆಗಾ ಹರಾಜಿನಲ್ಲಿ, ಚೆನ್ನೈ ಫ್ರಾಂಚೈಸಿ ಅವರನ್ನು 2.4 ಕೋಟಿ ರೂ.ಗೆ ತಮ್ಮ ತಂಡಕ್ಕೆ ಸೇರಿಸಿಕೊಂಡಿತು.
ಇದಾದ ನಂತರ, ಐಪಿಎಲ್ 2025 ರಲ್ಲಿ ಚೆನ್ನೈ ತಂಡದಲ್ಲಿ ಕರನ್ ಅವರಿಗೆ 3ನೇ ಸ್ಥಾನದಲ್ಲಿ ಆಡಲು ಅವಕಾಶ ನಾಯಕ ಎಂಎಸ್ ಧೋನಿ ನೀಡಿದರು. ಈ ಅವಕಾಶ ಪಡೆದುಕೊಂಡ ಅವರು ತಮ್ಮ ಮಾಜಿ ತಂಡದ ವಿರುದ್ಧ ಬಿರುಸಿನ ಬ್ಯಾಟಿಂಗ್ ಮಾಡಿ ಅದ್ಭುತ ಇನ್ನಿಂಗ್ಸ್ ಆಡಿದರು. ಕರನ್ ಅವರಲ್ಲದೆ, ಡೆವಾಲ್ಡ್ ಬ್ರೆವಿಸ್ 26 ಎಸೆತಗಳಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್‌ನೊಂದಿಗೆ 32 ರನ್ ಗಳಿಸಿದರು.