ಗುರುವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಭರ್ಜರಿ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ, ಮುಂಬೈ ಇಂಡಿಯನ್ಸ್ ಐಪಿಎಲ್ 2025ರ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಮತ್ತೊಂದೆಡೆ ಮುಂಬೈ ಇಂಡಿಯನ್ಸ್ ಪರ ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ತಮ್ಮ ಸ್ಥಿರ ಪ್ರದರ್ಶನ ಮುಂದುವರಸಿದ್ದಾರೆ. ಐಪಿಎಲ್ 2025 ರಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮತ್ತು ಸಾಯಿ ಸುದರ್ಶನ್ ಅವರನ್ನು ಸೂರ್ಯಕುಮಾರ್ ಯಾದವ್ ಹಿಂದಿಕ್ಕಿದ್ದಾರೆ. ಈ ಮೂಲಕ ಸೂರ್ಯ ಮರಳಿ ಆರೆಂಜ್ ಕ್ಯಾಪ್ ಪಡೆದಿದ್ದಾರೆ.
ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಸೂರ್ಯಕುಮಾರ್ ಯಾದವ್ 23 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ ಅಜೇಯ 48 ರನ್ ಗಳಿಸಿದರು. ಪರಿಣಾಮ ಮುಂಬೈ ಇಂಡಿಯನ್ಸ್ 200 ರನ್‌ಗಳ ಗಡಿ ದಾಟಿತು. ಜೊತೆಗೆ ಸೂರ್ಯ ಕೂಡ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದರು.

ಸೂರ್ಯಕುಮಾರ್ ಯಾದವ್ ಐಪಿಎಲ್ 2025 ರಲ್ಲಿ ಆಡಿದ 11 ಪಂದ್ಯಗಳಲ್ಲಿ 475 ರನ್ ಗಳಿಸಿದ್ದು, ಆಗ್ರಸ್ಥಾನ ಪಡೆದಿದ್ದಾರೆ. ಗುಜರಾತ್ ಟೈಟಾನ್ಸ್ ತಂಡದ ಯುವ ಸ್ಟಾರ್ ಬ್ಯಾಟರ್ ಸಾಯಿ ಸುದರ್ಶನ್ ಎರಡನೇ ಸ್ಥಾನದಲ್ಲಿದ್ದಾರೆ. ಅವರು ಆಡಿರುವ 9 ಪಂದ್ಯಗಳಲ್ಲಿ 456 ರನ್ ಗಳಿಸಿದ್ದಾರೆ. ಮೂರನೇ ಸ್ಥಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರಾಟ್ ಕೊಹ್ಲಿ ಇದ್ದಾರೆ. ಅವರು ಆಡಿದ 10 ಪಂದ್ಯಗಳಲ್ಲಿ 443 ರನ್ ಕಲೆ ಹಾಕಿದ್ದಾರೆ.
ಯಶಸ್ವಿ ಜೈಸ್ವಾಲ್ ರಾಜಸ್ಥಾನ ರಾಯಲ್ಸ್ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದು, ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಜೈಸ್ವಾಲ್ ಆಡಿರುವ 11 ಪಂದ್ಯಗಳಲ್ಲಿ 439 ರನ್ ಗಳಿಸಿದ್ದಾರೆ. ನಂತರ ಗುಜರಾತ್ ಟೈಟಾನ್ಸ್ ಪರ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಜೋಸ್ ಬಟ್ಲರ್ ಐದನೇ ಸ್ಥಾನದಲ್ಲಿದ್ದಾರೆ. ಬಟ್ಲರ್ ಕೂಡ
ಆಡಿರುವ 9 ಪಂದ್ಯಗಳಲ್ಲಿ 406 ರನ್ ಗಳಿಸಿದ್ದಾರೆ.
ಐಪಿಎಲ್ 2025 ಸೀಸನ್ ಈಗ ಮೂರನೇ ಹಂತಕ್ಕೆ ತಲುಪಿದ್ದು, ಭಾರಿ ಕುತೂಹಲ ಮೂಡಿಸಿದೆ. ಅತಿ ಹೆಚ್ಚು ರನ್ ಗಳಿಸಿರುವ ಬ್ಯಾಟರ್ಸ್ ತಂಡಗಳು ಪ್ಲೇ ಆಫ್ ರೇಸ್‌ನಲ್ಲಿ ಮುಂಚೂಣಿಯಲ್ಲವೆ. ಹೀಗಾಗಿ ಮುಂಬರುವ ಪಂದ್ಯಗಳಲ್ಲಿ ಈ ಬ್ಯಾಟರ್ಸ್‌ನಿಂದ ಮತ್ತಷ್ಟು ಬಿಗ್ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಕ್ರಿಕೆಟ್ ಅಭಿಮಾನಿಗಳಿದ್ದಾರೆ.
ಸೂರ್ಯಕುಮಾರ್ ಯಾದವ್ (ಎಂಐ)- 11 ಪಂದ್ಯ, 475 ರನ್
ಬಿ ಸಾಯಿ ಸುದರ್ಶನ್ (ಜಿಟಿ)- 9 ಪಂದ್ಯ, 456 ರನ್
ವಿರಾಟ್ ಕೊಹ್ಲಿ (ಆರ್‌ಸಿಬಿ)- 10 ಪಂದ್ಯ, 443 ರನ್
ಯಶಸ್ವಿ ಜೈಸ್ವಾಲ್ (ಆರ್‌ಆರ್)- 11 ಪಂದ್ಯ, 439 ರನ್
ಜೋಸ್ ಬಟ್ಲರ್ (ಜಿಟಿ)- 9 ಪಂದ್ಯ, 406 ರನ್
ನಿಕೋಲಸ್ ಪೂರನ್ (ಎಲ್‌ಎಸ್‌ಜಿ)- 10 ಪಂದ್ಯ, 404 ರನ್