ಐಪಿಎಲ್‌ನ ಯಶಸ್ವಿ ತಂಡಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ಗೂ ಸ್ಥಾನ. ಈ ತಂಡ ದಾಖಲೆಯ ಐದು ಬಾರಿ ಐಪಿಎಲ್ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಿದೆ. ಈ ಬಾರಿ ಸಿಎಸ್‌ಕೆ ಹಳೆಯ ಖದರ್‌ನಲ್ಲಿ ಕಣಕ್ಕೆ ಇಳಿಯಲಿದೆ. ತಂಡದಲ್ಲಿ ಅನುಭವಿ ಹಾಗೂ ಯುವ ಆಟಗಾರರು ಇದ್ದು ತಂಡದ ಭರವಸೆಯ ಹೆಚ್ಚಿಸಿದೆ. ಇನ್ನೊಂದು ಟ್ರೋಫಿ ಗೆಲ್ಲಲು ಸಿಎಸ್‌ಕೆ ರಣತಂತ್ರವನ್ನು ರೂಪಿಸಿಕೊಳ್ಳುತ್ತಿದೆ. ಅಬುಧಾಬಿಯಲ್ಲಿ ನಡೆದ ಐಪಿಎಲ್ ಹರಾಜಿನಲ್ಲಿ ಸಿಎಸ್‌ಕೆ ಯುವ ಆಟಗಾರರನ್ನು ಖರೀದಿಸಿದ್ದು, ಈ ಬಾರಿ ಉತ್ಸಾಹದಿಂದ ಕಣಕ್ಕೆ ಇಳಿಯಲಿದೆ.
ಚೆನ್ನೈನ ಎಂ.ಎ. ಚಿದಂಬರಂನ ಮೈದಾನ ಸ್ಪಿನ್ ಸ್ನೇಹಿ ಪಿಚ್ ಆಗಿದೆ. ಈಗಾಗಲೇ ಸಿಎಸ್‌ಕೆ ಇದಕ್ಕೆ ತಂತ್ರವನ್ನು ರೂಪಿಸಿಕೊಂಡಿದ್ದು, ಎದುರಾಳಿಗಳನ್ನು ಕಟ್ಟಿ ಹಾಕುವ ವಿಶ್ವಾಸದಲ್ಲಿದೆ. ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ಬದಲಾಗುತ್ತಿರುವ ಟಿ20 ಆಟಕ್ಕೆ ಹೊಂದಿಕೊಂಡು ತಂಡವನ್ನು ಸಂಯೋಜಿಸುವ ಆಸೆ ಸಿಎಸ್‌ಕೆ ತಂಡದ್ದಾಗಿದೆ. ಈ ಬಾರಿ ತಂಡ ಭವಿಷ್ಯದ ಆಟಗಾರರನ್ನು ಹೆಚ್ಚಾಗಿ ಭರವಸೆ ಇಟ್ಟಿದೆ. ಚೆನ್ನೈ ತಂಡದ ಬಲ ಹಾಗೂ ದೌರ್ಬಲ್ಯಗಳು ಏನು ಎಂಬ ಬಗ್ಗೆ ವರದಿ ಇಲ್ಲಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಶಕ್ತಿ ಎಂದರೆ ಅದು ಬ್ಯಾಟಿಂಗ್. ಅನುಭವಿ ಹಾಗೂ ಸ್ಟಾರ್ ಆಟಗಾರರು ತಂಡದ ಬ್ಯಾಟಿಂಗ್ ವಿಭಾಗಕ್ಕೆ ಬಲ ತುಂಬಲಿದ್ದಾರೆ. ಐಪಿಎಲ್ ಹರಾಜು ಆರಂಭಕ್ಕೂ ಮುನ್ನವೇ ಸಿಎಸ್‌ಕೆ ತಂಡ ಸಂಜು ಸ್ಯಾಮ್ಸನ್ ಅವರನ್ನು ರಾಜಸ್ಥಾನ ರಾಯಲ್ಸ್ ತಂಡದಿಂದ ಟ್ರೇಡ್ ಮಾಡಿಕೊಂಡಿತ್ತು. ಸಂಜು ಇತ್ತೀಚೆಗೆ ಭಾರತದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಅಮೋಘ ಬ್ಯಾಟಿಂಗ್ ನಡೆಸಿ ಅಬ್ಬರಿಸಿದ್ದರು. ಇವರು ಚೆನ್ನೈ ಪರ ಟಾಪ್ ಆರ್ಡರ್‌ನಲ್ಲಿ ಆಡಲಿದ್ದಾರೆ. ರುತುರಾಜ್ ಗಾಯಕ್ವಾಡ್, ಡೆವಾಲ್ಡ್ ಬ್ರೆವಿಸ್, ಸರ್ಫರಾಜ್ ಖಾನ್, MS ಧೋನಿ ಮತ್ತು ಶಿವಂ ದುಬೆ ಅವರಂತಹ ಆಟಗಾರರ ಉಪಸ್ಥಿತಿಯು ಬ್ಯಾಟಿಂಗ್ ಲ್ಯಾನ್ ಅಪ್‌ಗೆ ಬಲ ನೀಡಲಿದೆ.

ಚೆನ್ನೈ ತಂಡದ ಸ್ಪಿನ್ ಬೌಲಿಂಗ್ ಸಹ ಬಲಿಷ್ಠವಾಗಿದೆ. ನೂರ್ ಅಹ್ಮದ್, ಅಕೀಲ್ ಹುಸೇನ್ ಮತ್ತು ರಾಹುಲ್ ಚಾಹರ್ ಮಧ್ಯಮ ಓವರ್‌ಗಳಲ್ಲಿ ವಿಕೆಟ್ ಪಡೆಯುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಇಷ್ಟೇ ಅಲ್ಲ ಧೋನಿ ಉಪಸ್ಥಿತಿಯು ತಂಡಕ್ಕೆ ಕಾರ್ಯತಂತ್ರ ರೂಪಿಸಲು ನೆರವಾಗಲಿದೆ.
ಸಿಎಸ್‌ಕೆ ತಂಡದ ಅತಿದೊಡ್ಡ ದೌರ್ಬಲ್ಯವೆಂದರೆ ಅದರ ವೇಗದ ಬೌಲಿಂಗ್. ಖಲೀಲ್ ಅಹ್ಮದ್ ಮತ್ತು ಮ್ಯಾಟ್ ಹೆನ್ರಿ ಅನುಭವದ ಕೊರತೆ ಎದ್ದು ಕಾಣುತ್ತದೆ. ಈ ದಾಳಿಯಲ್ಲಿ ಸ್ಥಿರತೆ ಹಾಗೂ ವಿಕೆಟ್ ಪಡೆಯುವ ಸಾಮರ್ಥ್ಯ ಕಡಿಮೆ ಕಾಣುತ್ತಿದೆ. ಮಥಿಶಾ ಪತಿರಾನ ನಿರ್ಗಮನವು ತಂಡದ ವೇಗದ ಬೌಲಿಂಗ್ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರಲಿದೆ. ಶಿವಂ ದುಬೆ ಹಾಗೂ ಧೋನಿ ಅವರ ಮೇಲೆ ತಂಡ ಅತಿಯಾಗಿ ಅವಲಂಬಿತವಾಗಿದೆ. ಧೋನಿ ಅವರಿಗೆ 44 ವರ್ಷ ಆಗಿದ್ದು ಅವರ ಮೇಲೆ ತಂಡ ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟುಕೊಳ್ಳಲು ಸಾಧ್ಯವಿಲ್ಲ.