IPL 2026: ಸಿಎಸ್‌ಕೆ ವಿರುದ್ಧ ಗುಜರಾತ್‌ಗೆ 89 ರನ್ ಜಯ; ಲೀಗ್ ಹಂತದಲ್ಲೇ ಚೆನ್ನೈ ಹೊರಕ್ಕೆ
ಅಹಮದಾಬಾದ್: ಸಂಘಟಿತ ಆಟದ ಪ್ರದರ್ಶನ ನೀಡಿದ ಆತಿಥೇಯ ಗುಜರಾತ್ ಟೈಟಾನ್ಸ್ ತಂಡ 19ನೇ ಆವೃತ್ತಿ ಐಪಿಎಲ್‌ನ 66ನೇ ಪಂದ್ಯದಲ್ಲಿ 89 ರನ್‌ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿ, ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಭದ್ರ ಪಡಿಸಿಕೊಂಡಿದೆ. ಈ ಸೋಲಿನ ಮೂಲಕ ಸಿಎಸ್‌ಕೆ ತನ್ನ ಅಭಿಯಾನವನ್ನು ಲೀಗ್ ಹಂತದಲ್ಲೇ ಮುಗಿಸಿದೆ.
230 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಚೆನ್ನೈ ತಂಡದ ಆರಂಭ ಕಳಪೆಯಾಗಿತ್ತು. ಸ್ಟಾರ್ ಆಟಗಾರ ಸಂಜು ಸ್ಯಾಮ್ಸನ್ (0) ಇನಿಂಗ್ಸ್‌ನ ಮೊದಲ ಎಸೆತದಲ್ಲಿ ಔಟ್ ಆದರು. ಈ ಮೂಲಕ ಮೊಹಮ್ಮದ್ ಸಿರಾಜ್ ತಮ್ಮ ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ, ಮೊದಲ ಎಸೆತದಲ್ಲಿ ಔಟ್ ಮಾಡಿದ ಸಾಧನೆ ಮಾಡಿದರು.

ಅಬ್ಬರದ ಬ್ಯಾಟಿಂಗ್ ನಡೆಸುವ ಸೂಚನೆ ನೀಡಿದ ರುತುರಾಜ್ ಗಾಯಕ್ವಾಡ್ 2 ಸಿಕ್ಸರ್, 1 ಬೌಂಡರಿ ನೆರವಿನಿಂದ 16 ರನ್ ಬಾರಿಸಿ ಸಿರಾಜ್ ಅವರಿ ತೋಡಿದ ಖೆಡ್ಡಾಗೆ ಬಲಿಯಾದರು. ತವರಿನ ಹುಡುಗ ಉರ್ವಿಲ್ ಪಟೇಲ್ ಸೊನ್ನೆ ಸುತ್ತಿದರು. ಬ್ಯಾಟಿಂಗ್‌ನಲ್ಲಿ ಬಡ್ತಿ ಪಡೆದ ಮ್ಯಾಥ್ಯೂ ಶಾರ್ಟ್ 24 ರನ್ ಬಾರಿಸಿ ಔಟ್ ಆದರು. ಪರಿಣಾಮ ಸಿಎಸ್‌ಕೆ ಪವರ್ ಪ್ಲೇನಲ್ಲಿ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ರನ್ ಕಲೆ ಹಾಕಲು ಪರದಾಟ
ಮಧ್ಯಮ ಕ್ರಮಾಂಕದ ಭರವಸೆಯ ಬ್ಯಾಟರ್ ಕಾರ್ತಿಕ್ ಶರ್ಮಾ (19) ಇಲ್ಲದ ರನ್ ಕದಿಯಲು ಹೋಗಿ ರನೌಟ್ ಆದರು. 6ನೇ ವಿಕೆಟ್‌ಗೆ ಶಿವಂ ದುಬೆ ಹಾಗೂ ಡೆವಾಲ್ಡ್ ಬ್ರೆವಿಸ್ (8) ಜೋಡಿ ಸಮಯೋಚಿತ ಬ್ಯಾಟಿಂಗ್ ನಡೆಸಿತು. ಅಲ್ಲದೆ 21 ಎಸೆತಗಳಲ್ಲಿ 53 ರನ್ ಸೇರಿಸಿತು. ಈ ಹಂತದಲ್ಲಿ ಶಿವಂ ದುಬೆ 4 ಬೌಂಡರಿ, 4 ಸಿಕ್ಸರ್ ಸಹಿತ 47 ರನ್ ಸಿಡಿಸಿದರು. ಅನ್ಶುಲ್ ಕಾಂಬೋಜ್ 1 ಬೌಂಡರಿ, 2 ಸಿಕ್ಸರ್ ಸಹಾಯದಿಂದ 19 ರನ್ ಬಾರಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು. ಅಂತಿಮವಾಗಿ ಸಿಎಸ್‌ಕೆ 13.4 ಓವರ್‌ಗಳಲ್ಲಿ 140 ರನ್ ಸೇರಿಸಿ ಆಲ್ ಔಟ್ ಆಯಿತು.
ಗುಜರಾತ್ ಟೈಟಾನ್ಸ್ ತಂಡದ ಪರ ವೇಗದ ಬೌಲರ್ ಮೊಹಮ್ಮದ್ ಸಿರಾಜ್ 26ಕ್ಕೆ 3, ಕಗಿಸೊ ರಬಾಡ 32ಕ್ಕೆ 3, ರಶೀದ್ ಖಾನ್ 18ಕ್ಕೆ 3 ವಿಕೆಟ್ ಕಬಳಿಸಿದರು.
ಭರ್ಜರಿ ಆರಂಭ
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭಿಕರಾದ ಸಾಯಿ ಸುದರ್ಶನ್ ಹಾಗೂ ನಾಯಕ ಶುಭಮನ್ ಗಿಲ್ ಜೋಡಿ ಮೊದಲ ವಿಕೆಟ್‌ಗೆ 12.2 ಓವರ್‌ಗಳಲ್ಲಿ 125 ರನ್ ಸೇರಿಸಿತು. ಈ ಹಂತದಲ್ಲಿ ಗಿಲ್ 7 ಬೌಂಡರಿ, 3 ಸಿಕ್ಸರ್ ನೆರವಿನಿಂದ 64 ರನ್ ಸೇರಿಸಿದರು. ಎರಡನೇ ವಿಕೆಟ್‌ಗೆ ಸಾಯಿ ಸುದರ್ಶನ್ ಜೊತೆಗೂಡಿದ ಜೋಸ್ ಬಟ್ಲರ್ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ 37 ಎಸೆತಗಳಲ್ಲಿ 82 ರನ್ ಸೇರಿಸಿತು. ಸಾಯಿ ಸುದರ್ಶನ್ 53 ಎಸೆತಗಳಲ್ಲಿ 7 ಬೌಂಡರಿ, 4 ಸಿಕ್ಸರ್ ಸಹಾಯದಿಂದ 84, ಜೋಸ್ ಬಟ್ಲರ್ ಅಜೇಯ 57 ರನ್ ಸಿಡಿಸಿದರು. ಅಂತಿಮವಾಗಿ ಗುಜರಾತ್ ಟೈಟಾನ್ಸ್ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 229 ರನ್ ಸೇರಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications