IPL 2026: ಚೆನ್ನೈನಲ್ಲಿ ಪಂಜಾಬ್‌ಗೆ ಗೆಲುವಿನ ಶ್ರೇಯ
ಚೆನ್ನೈ: ನಾಯಕ ಶ್ರೇಯಸ್ ಅಯ್ಯರ್ ಅವರ ಜವಾಬ್ದಾರಿಯುತ ಆಟದ ನೆರವಿನಿಂದ ಪಂಜಾಬ್ ಕಿಂಗ್ಸ್ 19ನೇ ಆವೃತ್ತಿ ಐಪಿಎಲ್‌ನ 7ನೇ ಪಂದ್ಯದಲ್ಲಿ 5 ವಿಕೆಟ್‌ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿ, ಲೀಗ್‌ನಲ್ಲಿ ಸತತ ಎರಡನೇ ಗೆಲುವಿನ ನಗೆ ಬೀರಿದೆ.
210 ರನ್‌ಗಳ ಸವಾಲಿನ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ತಂಡದ ಪ್ರಿಯಾಂಶ್ ಆರ್ಯ ಹಾಗೂ ಪ್ರಭ್‌ಸಿಮ್ರನ್ ಸಿಂಗ್ ಭರ್ಜರಿ ಜೊತೆಯಾಟವನ್ನು ನೀಡಿ ತಂಡಕ್ಕೆ ಆಧಾರವಾದರು. ಈ ಜೋಡಿ ಮೊದಲ ವಿಕೆಟ್‌ಗೆ 4.2 ಓವರ್‌ಗಳಲ್ಲಿ 61 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಈ ವೇಳೆ ಪ್ರಿಯಾಂಶ್ ಆರ್ಯ 3 ಬೌಂಡರಿ, 4 ಸಿಕ್ಸರ್ ಸಹಾಯದಿಂದ 39 ರನ್ ಬಾರಿಸಿ ಔಟ್ ಆದರು.

ಎರಡನೇ ವಿಕೆಟ್‌ಗೆ ಕೂಪರ್ ಕಾನೋಲಿ ಮತ್ತು ಪ್ರಭ್‌ಸಿಮ್ರನ್ ಸಿಂಗ್ ಜೋಡಿ 34 ರನ್ ಸಿಡಿಸಿತು. ಈ ವೇಳೆ ಪ್ರಭ್‌ಸಿಮ್ರನ್ ಸಿಂಗ್ 6 ಬೌಂಡರಿ, 1 ಸಿಕ್ಸರ್ ಸಹಾಯದಿಂದ 43 ರನ್ ಬಾರಿಸಿ ಇಲ್ಲದ ರನ್ ಕದಿಯಲು ಹೋಗಿ ರನ್‌ಔಟ್ ಆದರು. ಕೂಪರ್ ಕಾನೋಲಿ 6 ಬೌಂಡರಿ ನೆರವಿನಿಂದ 36 ರನ್ ಬಾರಿಸಿ ಔಟ್ ಆದರು. ನಾಯಕ ಶ್ರೇಯಸ್ ಅಯ್ಯರ್ ಅವರು ಜವಾಬ್ದಾರಿ ಅರಿತು ಬ್ಯಾಟಿಂಗ್ ಮಾಡಿದರು. ಇವರು 29 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ಸಹಾಯದಿಂದ 50 ರನ್ ಬಾರಿಸಿ ಔಟ್ ಆದರು.
ಅಂತಿಮವಾಗಿ ಪಂಜಾಬ್ 18.4 ಓವರ್‌ಗಳಲ್ಲಿ 5 ವಿಕೆಟ್‌ಗೆ 210 ರನ್ ಸೇರಿಸಿ ಜಯ ಸಾಧಿಸಿತು. ಈ ಗೆಲುವಿನ ಮೂಲಕ ಪಂಜಾಬ್ ಪ್ರಸಕ್ತ ಆವೃತ್ತಿಯಲ್ಲಿ ಎರಡು ಗೆಲುವು ದಾಖಲಿಸಿದ ಮೊದಲ ತಂಡ ಎಂಬ ಖ್ಯಾತಿ ತನ್ನದಾಗಿಸಿಕೊಂಡಿದೆ.
ಆಯುಷ್ ಆಸರೆ
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಸಿಎಸ್‌ಕೆ ತಂಡದ ಆರಂಭ ಕಳಪೆಯಾಗಿತ್ತು. ಆರಂಭಿಕ ಸಂಜು ಸ್ಯಾಮ್ಸನ್ ಅವರು ಜವಾಬ್ದಾರಿಯುತ ಆಟವನ್ನು ಆಡುವಲ್ಲಿ ವಿಫಲರಾದರು. 14 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ನಾಯಕ ರುತುರಾಜ್ ಗಾಯಕ್ವಾಡ್ ಹಾಗೂ ಆಯುಷ್ ಮಾತ್ರೆ ಆಧಾರವಾದರು. ಈ ಜೊಡಿ ಎರಡನೇ ವಿಕೆಟ್‌ಗೆ 96 ರನ್‌ಗಳ ಜೊತೆಯಾಟವನ್ನು ನೀಡಿತು. ಈ ವೇಳೆ ರುತುರಾಜ್ ಗಾಯಕ್ವಾಡ್ 28 ರನ್ ಸಿಡಿಸಿ ಔಟ್ ಆದರು.

18 ವರ್ಷದ ಆಯುಷ್ ಮಾತ್ರೆ 6 ಬೌಂಡರಿ, 5 ಸಿಕ್ಸರ್ ಸಹಾಯದಿಂದ 73 ರನ್ ಬಾರಿಸಿದರು. ಮಧ್ಯಮ ಕ್ರಮಾಂಕದಲ್ಲಿ ಕಾರ್ತಿಕ್ ಶರ್ಮಾ (1) ರನ್ ಕಲೆ ಹಾಕುವಲ್ಲಿ ವಿಫಲರಾದರು. ಭರವಸೆಯ ಆಟಗಾರ ಸರ್ಫರಾಜ್ ಖಾನ್ 6 ಬೌಂಡರಿ ನೆರವಿನಿಂದ 32 ರನ್ ಬಾರಿಸಿದರು. ಮಧ್ಯಮ ಕ್ರಮಾಂಕದ ಶಿವಂ ದುಬೆ 5 ಬೌಂಡರಿ, 1 ಸಿಕ್ಸರ್ ಸಹಾಯದಿಂದ ಅಜೇಯ 45 ರನ್ ಸಿಡಿಸಿ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಸಫಲರಾದರು. ಅಂತಿಮವಾಗಿ ಸಿಎಸ್‌ಕೆ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 209 ರನ್ ಸೇರಿಸಿತು. ಪಂಜಾಬ್ ಪರ ಕನ್ನಡಿಗ ವೈಶಾಖ್ ವಿಜಯ್ ಕುಮಾರ್ 2 ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications