IPL Auction 2022: ಈ ನಾಲ್ಕು ಭಾರತದ ಅಂಡರ್-19 ಕ್ರಿಕೆಟಿಗರಿಗೆ ಭಾರೀ ಬೇಡಿಕೆ

ವೆಸ್ಟ್ ಇಂಡೀಸ್‌ನಲ್ಲಿ ನಡೆಯುತ್ತಿರುವ ಅಂಡರ್-19 ವಿಶ್ವಕಪ್‌ನಲ್ಲಿ ಈಗಾಗಲೇ ಭಾರತ ಫೈನಲ್ ತಲುಪಿದೆ. ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನೇ ಮಣಿಸಿರುವ ಭಾರತ ಜ್ಯೂನಿಯರ್ ತಂಡ ಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನ ಎದುರಿಸಲಿದೆ.
ಸೆಮೀಸ್‌ನಲ್ಲಿ ಅಮೋಘ ಶತಕ ಸಿಡಿಸಿದ ನಾಯಕ ಯಶ್ ಧುಲ್ ಭಾರತವನ್ನ ಫೈನಲ್ ಗಡಿ ತಲುಪಿಸಿದ್ರು. ನಾಯಕನ ಜವಾಬ್ದಾರಿಯುತ ಆಟವಾಡಿದ ಯಶ್ ಧುಲ್ 110 ಎಸೆತಗಳಲ್ಲಿ 110 ರನ್ ಕಲೆಹಾಕುವ ಮೂಲಕ ಭರ್ಜರಿ ಶತಕ ಸಿಡಿಸಿದ್ರು. ಮತ್ತೊಂದೆಡೆ ನಾಯಕನಿಗೆ ಉತ್ತಮ ಸಾಥ್ ನೀಡಿದ ಶೇಕ್ ರಶೀದ್ 108 ಎಸೆತಗಳಲ್ಲಿ 94ರನ್ ಕಲೆಹಾಕಿ ಶತಕ ವಂಚಿತರಾದರು.
ಈ ಇಬ್ಬರು ಆಟಗಾರರ ದ್ವಿಶತಕದ ಜೊತೆಯಾಟದಿಂದ ಭಾರತ 291 ರನ್‌ಗಳ ಕಲೆಹಾಕಿತು. ಅಲ್ಲದೆ ಎದುರಾಳಿ ಆಸ್ಟ್ರೇಲಿಯಾವನ್ನ 190 ರನ್‌ಗಳಿಗೆ ಆಲೌಟ್ ಮಾಡಿ 96ರನ್‌ಗಳಿಂದ ಗೆದ್ದು ಬೀಗಿದೆ. ಆದ್ರೀಗ ವಿಶ್ವಕಪ್‌ನಲ್ಲಿ ಬೊಂಬಾಟ್ ಪ್ರದರ್ಶನ ನೀಡುತ್ತಿರುವ ಭಾರತ ಅಂಡರ್-19 ಕ್ರಿಕೆಟಿಗರ ಮೇಲೆ ಐಪಿಎಲ್ ಫ್ರಾಂಚೈಸಿಗಳು ಕಣ್ಣಿಟ್ಟಿವೆ.
ಬೆಂಗಳೂರಿನಲ್ಲಿ ಫೆಬ್ರವರಿ 12 ಮತ್ತು 13ರಂದು ನಡೆಯಲಿರುವ ಮೆಗಾ ಹರಾಜಿನಲ್ಲಿ ಭಾರತದ ಯಶ್ ಧುಲ್, ರಾಜ್ ಅಂಗದ್ ಬಾವಾ, ವಿಕ್ಕಿ ಓಸ್ವಾಲ್, ರಾಜ್ಯವರ್ಧನ್ ಹಂಗರ್ಗೇಕರ್ ಮೇಲೆ ಸಖತ್ ಬಿಡ್ ನಡೆಯುವ ನಿರೀಕ್ಷೆಯಿದೆ.
ಯಶ್ ಧುಲ್ (ಮೂಲ ಬೆಲೆ 20 ಲಕ್ಷ)
ಭಾರತ ಅಂಡರ್ 19 ತಂಡ ನಾಯಕ ಯಶಸ್ ಧುಲ್ 106ರ ಬ್ಯಾಟಿಂಗ್ ಸರಾಸರಿಯ್ಲಿ ಒಂದು ಶತಕ ಮತ್ತು ಅರ್ಧಶತಕದ ನೆರವಿನಿಂದ ಮೂರು ಪಂದ್ಯಗಳಲ್ಲಿ 212 ರನ್ ಕಲೆಹಾಕಿದ್ದಾರೆ. ಐಪಿಎಲ್ ಹರಾಜಿನಲ್ಲಿ ಈ 19 ವರ್ಷದ ಯುವ ನಾಯಕ ಹೆಚ್ಚು ಮೊತ್ತಕ್ಕೆ ಬಿಡ್ ಆಗುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಕಳೆದ 2021-22ರ ವಿನೂ ಮಂಕಡ್ ಟ್ರೋಫಿಯಲ್ಲಿ ಧುಲ್ ಡೆಲ್ಲಿ ಪರ ಕೇವಲ 5 ಪಂದ್ಯಗಳಲ್ಲಿ 302 ರನ್ ಗಳಿಸಿದ್ದಾರೆ. ಫ್ರಾಂಚೈಸಿಗಳು ಭವಿಷ್ಯದ ದೀರ್ಘಾವಧಿಯ ಬ್ಯಾಟಿಂಗ್ ಆಯ್ಕೆಗಾಗಿ ಹುಡುಕುತ್ತಿದ್ದರೆ ಈತನ ಮೇಲೆ ಬಿಡ್ ಮಾಡಲಿವೆ.
ವಿಕ್ಕಿ ಓಸ್ವಾಲ್ (ಮೂಲ ಬೆಲೆ 20 ಲಕ್ಷ)
19 ವರ್ಷದ ಮಹಾರಾಷ್ಟ್ರ ಮೂಲದ ಕ್ರಿಕೆಟಿಗ ವಿಕ್ಕಿ ಅಂಡರ್-19 ವಿಶ್ವಕಪ್‌ನಲ್ಲಿ ಬೊಂಬಾಟ್ ಪ್ರದರ್ಶನ ನೀಡಿದ್ದಾನೆ. 5 ಪಂದ್ಯಗಳಲ್ಲಿ 12 ವಿಕೆಟ್ ಉರುಳಿಸಿರುವ ಓಸ್ವಾಲ್ ತನ್ನ ಎಡಗೈ ಸ್ಪಿನ್ ಮೂಲಕ ಮೋಡಿ ಮಾಡಿದ್ದಾನೆ. ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಐದು ವಿಕೆಟ್ ಬೇಟೆಯಾಡಿದ ಈತ ಸದ್ಯ ಗರಿಷ್ಠ ವಿಕೆಟ್ ಟೇಕರ್‌ಗಲ್ಲಿ ಒಬ್ಬಾತ. ಹೀಗಾಗಿ ಮುಂಬರುವ ಐಪಿಎಲ್‌ನಲ್ಲಿ ಹರಾಜಿನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾನೆ.
ರಾಜ್ ಅಂಗದ್ ಬಾವಾ(ಮೂಲ ಬೆಲೆ 20 ಲಕ್ಷ)
ಹಿಮಾಚಲ ಪ್ರದೇಶದ 19 ವರ್ಷದ ಕ್ರಿಕೆಟಿಗ ರಾಜ್ ಅಂಗದ್ ಬಾವಾ ಭಾರತದ ಪರ ಎರಡನೇ ಗರಿಷ್ಠ ರನ್ ಸ್ಕೋರರ್ ಆಗಿದ್ದಾನೆ. ಐದು ಪಂದ್ಯಗಳಲ್ಲಿ 217ರನ್ ಕಲೆಹಾಕಿರುವ ಈತ 72ರ ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದಾನೆ. 110ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿರುವ ರಾಜ್ ಮಧ್ಯಮ ವೇಗಿ ಕೂಡ ಆಗಿದ್ದು ನಾಲ್ಕು ವಿಕೆಟ್‌ಗಳನ್ನ ಸಹ ಪಡೆದಿದ್ದಾರೆ. ಹೀಗಾಗಿ ರಾಜ್ ಅಂಗದ್ ಭವಿಷ್ಯದ ಆಲ್‌ರೌಂಡರ್ ಆಗಿ ಗುರುತಿಸಿಕೊಳ್ಳಲಿದ್ದು, ಐಪಿಎಲ್ 2022ರ ಹರಾಜಿನಲ್ಲಿ ಸಾಕಷ್ಟು ಫ್ರಾಂಚೈಸಿಗಳು ಕಣ್ಣಿಟ್ಟಿವೆ.
ರಾಜ್ಯವರ್ಧನ್ ಹಂಗರ್ಗೇಕರ್ (ಮೂಲ ಬೆಲೆ 30 ಲಕ್ಷ)
ಮಹಾರಾಷ್ಟ್ರ ಮೂಲದ ಆಲ್‌ರೌಂಡರ್ ರಾಜ್ಯವರ್ಧನ್ ವೆಸ್ಟ್ ಇಂಡೀಸ್‌ನಲ್ಲಿ ನಡೆಯುತ್ತಿರುವ ಅಂಡರ್-19 ವಿಶ್ವಕಪ್‌ನಲ್ಲಿ ಅಷ್ಟಾಗಿ ಮಿಂಚದಿದ್ರೂ ಬೇಡಿಕೆ ಹೊಂದಿರುವ ಆಟಗಾರನಾಗಿದ್ದಾನೆ. ಈತ ಐದು ಪಂದ್ಯಗಳಲ್ಲಿ 52 ರನ್ ಕಲೆಹಾಕಿದ್ದು, ಐದು ವಿಕೆಟ್ ಉರುಳಿಸಿದ್ದಾನೆ. ಆದ್ರೆ ಈತ ಭರ್ಜರಿ 185ರ ಸ್ಟ್ರೈಕ್‌ರೇಟ್ ಹೊಂದಿದ್ದು, 140 kmph ಸ್ಪೀಡ್‌ನಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾನೆ. ಹೀಗಾಗಿಯೇ ಈತನ ಮೂಲ ಬೆಲೆ 30 ಲಕ್ಷ ರೂಪಾಯಿಗಳಿದ್ದು, ಫ್ರಾಂಚೈಸಿಗಳು ಭವಿಷ್ಯದ ಆಲ್‌ರೌಂಡರ್ ಸ್ಥಾನಕ್ಕಾಗಿ ಈತನ ಮೇಲೆ ಹೆಚ್ಚು ಬಿಡ್ ಮಾಡಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications