
ಬೆಂಗಳೂರಿನಲ್ಲಿ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಜೋಶ್ ಹೇಜಲ್ ವುಡ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ತೆಕ್ಕೆಗೆ ಬಿದ್ದಿದ್ದಾರೆ.
ಆಸ್ಟ್ರೇಲಿಯಾ ಮೂಲದ ವೇಗಿ ಜೋಶ್ ಹೇಜಲ್ ವುಡ್ 2020 ಹಾಗೂ 2021ರ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಕಣಕ್ಕಿಳಿದಿದ್ದರು. ಬಿಗ್ ಬ್ಯಾಶ್ ಲೀಗ್ ಟೂರ್ನಿಗಳಲ್ಲಿ ಸಿಡ್ನಿ ಸಿಕ್ಸರ್ಸ್ ಪರ ಕಣಕ್ಕಿಳಿದು ಸಾಕಷ್ಟು ದೊಡ್ಡ ಮಟ್ಟದ ಪ್ರದರ್ಶನ ನೀಡಿರುವ ಜೋಶ್ ಹೇಜಲ್ ವುಡ್ ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಒಟ್ಟು 12 ಪಂದ್ಯಗಳಲ್ಲಿ ಕಣಕ್ಕಿಳಿದು 45 ಓವರ್ ಬೌಲಿಂಗ್ ಮಾಡಿ 12 ವಿಕೆಟ್ ಪಡೆದಿದ್ದಾರೆ. ಇನ್ನು ಮೆಗಾ ಹರಾಜು ಪ್ರಕ್ರಿಯೆ ಆರಂಭಕ್ಕೂ ಮುನ್ನಾ ದಿನ ನಡೆದ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ನಡುವಿನ ಟಿ ಟ್ವೆಂಟಿ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿರುವ ಜೋಶ್ ಹೇಜಲ್ ವುಡ್ ಕೇವಲ 12 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದ್ದಾರೆ. ಹೀಗೆ ಮೆಗಾ ಹರಾಜು ಪ್ರಕ್ರಿಯೆ ಆರಂಭವಾಗುವುದಕ್ಕೆ ಕೆಲ ಗಂಟೆಗಳು ಬಾಕಿ ಇರುವಾಗ ಜೋಶ್ ಹೇಜಲ್ ವುಡ್ ನೀಡಿದ ಈ ಉತ್ತಮ ಪ್ರದರ್ಶನ ಫ್ರಾಂಚೈಸಿಗಳ ಗಮನವನ್ನು ಸೆಳೆದಿತ್ತು ಎಂದೇ ಹೇಳಬಹುದು. ಸದ್ಯ ಈತನನ್ನು ತನ್ನ ತೆಕ್ಕೆಗೆ ಹಾಕಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು 7.75 ಕೋಟಿ ನೀಡಿದೆ. ಈ ಮೂಲಕ ಇಂದು ನಡೆದ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹರ್ಷಲ್ ಪಟೇಲ್, ವನಿಂದು ಹಸರಂಗ ನಂತರ ಮೂರನೇ ಬೌಲರ್‌ನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ.