ಐಪಿಎಲ್ ಮೆಗಾ ಹರಾಜು: ರಶೀದ್ ಖಾನ್‌ಗೆ ಸಿಕ್ಸರ್ ಮೇಲೆ ಸಿಕ್ಸರ್ ಬಾರಿಸಿದ್ದ ಫಿನಿಷರ್ ಆರ್‌ಸಿಬಿ ತೆಕ್ಕೆಗೆ

ಬೆಂಗಳೂರಿನಲ್ಲಿ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮೆಗಾ ಹರಾಜಿನ ಎರಡನೇ ದಿನವಾದ ಇಂದು ವೆಸ್ಟ್ ಇಂಡೀಸ್ ಮೂಲದ ಶೆರ್ಫೇನ್ ರುಥರ್‌ಫೋರ್ಡ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹರಾಜಾಗಿದ್ದಾರೆ.
23 ವರ್ಷದ ಶೆರ್ಫೇನ್ ರುಥರ್‌ಫೋರ್ಡ್ ಬ್ಯಾಟಿಂಗ್ ಆಲ್ ರೌಂಡರ್ ಆಗಿದ್ದು ಪಂದ್ಯದ ಅಂತಿಮ ಹಂತದಲ್ಲಿ ವೇಗವಾಗಿ ಬ್ಯಾಟ್ ಬೀಸಿ ರನ್ ಮಳೆ ಸುರಿಸಬಲ್ಲ ಸಾಮರ್ಥ್ಯವಿರುವಂತಹ ಫಿನಿಶರ್ ಆಗಿದ್ದಾರೆ. ಗಯಾನ ಅಮೆಜಾನ್ ವಾರಿಯರ್ಸ್, ಕರಾಚಿ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್, ಮುಂಬೈ ಇಂಡಿಯನ್ಸ್, ಪೇಶಾವರ್ ಜಲ್ಮಿ ಹಾಗೂ ಕೊಲಂಬೋ ಸ್ಟಾರ್ಸ್ ತಂಡಗಳ ಪರ ಫ್ರಾಂಚೈಸಿ ಕ್ರಿಕೆಟ್ ಟೂರ್ನಿಗಳಲ್ಲಿ ಆಡಿರುವ ಅನುಭವವನ್ನು ಹೊಂದಿರುವ ಈ ಆಟಗಾರ ಇತ್ತೀಚೆಗಷ್ಟೇ ನಡೆದ ಟಿ ಟೆನ್ ಕ್ರಿಕೆಟ್ ಟೂರ್ನಿಯಲ್ಲಿ ಪ್ರತಿಭಾವಂತ ಸ್ಪಿನ್ ಬೌಲರ್ ಆಗಿರುವ ರಶೀದ್ ಖಾನ್‌ಗೆ ಸಿಕ್ಸರ್ ಮೇಲೆ ಸಿಕ್ಸರ್ ಬಾರಿಸಿ ಮಿಂಚಿದ್ದರು.
ಇತ್ತ ಇಂದು ನಡೆದ ಮೆಗಾ ಹರಾಜಿನಲ್ಲಿ ಶೆರ್ಫೇನ್ ರುಥರ್‌ಫೋರ್ಡ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು 1 ಕೋಟಿಗೆ ಖರೀದಿಸುತ್ತಿದ್ದಂತೆ ಅತ್ತ ಸಾಮಾಜಿಕ ಜಾಲತಾಣದಲ್ಲಿ ರಶೀದ್ ಖಾನ್ ಮತ್ತು ಡ್ವೈನ್ ಬ್ರಾವೊ ಎಸೆತಗಳಿಗೆ ಶೆರ್ಫೇನ್ ರುಥರ್‌ಫೋರ್ಡ್ ಅಬ್ಬರದ ಹೊಡೆತಗಳನ್ನು ಬಾರಿಸಿರುವ ವಿಡಿಯೋ ವೈರಲ್ ಆಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಈತನನ್ನು ಖರೀದಿಸಿದರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ನಡೆಯುತ್ತಿದ್ದು ತಂಡಕ್ಕೆ ಅನಿವಾರ್ಯವಾದ ಸಂದರ್ಭಗಳಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿ ಪಂದ್ಯವನ್ನು ಫಿನಿಶ್ ಮಾಡಬಲ್ಲಂತಹ ಸಾಮರ್ಥ್ಯವಿರುವ ಇಂತಹ ಆಟಗಾರನನ್ನು ಖರೀದಿಸಿದ್ದು ಉತ್ತಮ ಎಂಬ ಅಭಿಪ್ರಾಯಗಳು ಹೆಚ್ಚಾಗಿ ವ್ಯಕ್ತವಾಗುತ್ತಿವೆ.
ಇನ್ನು 2019ರ ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಮಾತ್ರ ಕಣಕ್ಕಿಳಿದಿರುವ ಶೆರ್ಫೇನ್ ರುಥರ್‌ಫೋರ್ಡ್ ಆ ಆವೃತ್ತಿಯಲ್ಲಿ 7 ಪಂದ್ಯಗಳನ್ನಾಡಿದ್ದು 73 ರನ್ ಕಲೆಹಾಕಿದ್ದಾರೆ.

ಹರಾಜಿನ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು
ಮೆಗಾ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಸ್ಥಾನ ಪಡೆದುಕೊಂಡಿರುವ ಆಟಗಾರರ ಪಟ್ಟಿ: ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ಫಾಫ್ ಡು ಪ್ಲೆಸಿಸ್, ದಿನೇಶ್ ಕಾರ್ತಿಕ್, ಅನುಜ್ ರಾವತ್, ಫಿನ್ ಅಲೆನ್, ಆಕಾಶ್ ದೀಪ್, ಜೋಶ್ ಹ್ಯಾಜಲ್‌ವುಡ್, ಜೇಸನ್ ಬೆಹ್ರೆನ್‌ಡಾರ್ಫ್, ಚಾಮಾ ಮಿಲಿಂದ್, ಕರ್ಣ್ ಶರ್ಮಾ, ಹರ್ಷಲ್ ಪಟೇಲ್, ವನಿಂದು ಹಸರಂಗ, ಶಹಬಾಜ್ ಅಹ್ಮದ್, ಮಾಹಿ ಶೆಪಾಲ್ ಅಹ್ಮದ್ ರುದರ್‌ಫೋರ್ಡ್, ಸುಯಶ್ ಪ್ರಭುದೇಸಾಯಿ, ಅನೀಶ್ವರ್ ಗೌತಮ್, ಡೇವಿಡ್ ವಿಲ್ಲಿ, ಲುವ್ನಿತ್ ಸಿಸೋಡಿಯಾ, ಸಿದ್ಧಾರ್ಥ್ ಕೌಲ್

ಶೆರ್ಫೇನ್ ರುಥರ್‌ಫೋರ್ಡ್ ಫ್ರಾಂಚೈಸಿ ಕ್ರಿಕೆಟ್ ಲೀಗ್ ಅಂಕಿ ಅಂಶ
ಶೆರ್ಫೇನ್ ರುಥರ್‌ಫೋರ್ಡ್ ಒಟ್ಟಾರೆ 24 ಫ್ರಾಂಚೈಸಿ ಕ್ರಿಕೆಟ್ ಲೀಗ್ ಇನ್ನಿಂಗ್ಸ್ ಆಡಿದ್ದು 486 ರನ್ ಕಲೆಹಾಕಿದ್ದಾರೆ. ಈ ಪೈಕಿ 3 ಅರ್ಧಶತಕಗಳನ್ನು ಬಾರಿಸಿರುವ ಶೆರ್ಫೇನ್ ರುಥರ್‌ಫೋರ್ಡ್ 3 ಬಾರಿ ಅಜೇಯರಾಗಿ ಉಳಿದಿದ್ದಾರೆ ಹಾಗೂ 57 ಬೌಂಡರಿ ಮತ್ತು 18 ಸಿಕ್ಸರ್ ಬಾರಿಸಿದ್ದಾರೆ. ಇನ್ನು ಚುಟುಕು ಕ್ರಿಕೆಟ್ ಕದನದಲ್ಲಿ ಶೆರ್ಫೇನ್ ರುಥರ್‌ಫೋರ್ಡ್ ಬಾರಿಸಿರುವ ಗರಿಷ್ಠ ರನ್ 93.

ಬೆಂಗಳೂರು ಖರೀದಿಸಿದ ಸ್ವದೇಶಿ ಹಾಗೂ ವಿದೇಶಿ ಆಟಗಾರರೆಷ್ಟು?
ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿಯ ಹರಾಜಿನಲ್ಲಿ ಒಟ್ಟು 22 ಆಟಗಾರರನ್ನು ಖರೀದಿಸಿದ್ದು, ಈ ಪೈಕಿ 14 ಭಾರತೀಯ ಆಟಗಾರರು ಹಾಗೂ 8 ವಿದೇಶಿ ಆಟಗಾರರಿದ್ದಾರೆ. ಹರ್ಷಲ್ ಪಟೇಲ್ ಹಾಗೂ ವನಿಂದು ಹಸರಂಗಗೆ ತಲಾ 10.75 ಕೋಟಿ ನೀಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೆಗಾ ಹರಾಜು ಸಂಪೂರ್ಣವಾಗಿ ಮುಕ್ತಾಯಗೊಂಡ ನಂತರ ಇನ್ನೂ 1.55 ಕೋಟಿಯನ್ನು ತನ್ನ ಬಳಿ ಹೊಂದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications