IPL Auction 2023: ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕತ್ವಕ್ಕೆ ಇವರಿಬ್ಬರ ಮಧ್ಯೆ ಪೈಪೋಟಿ?

2023ರ ಐಪಿಎಲ್ ಮಿನಿ ಹರಾಜಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಹಲವು ಪ್ರಮುಖ ಆಟಗಾರರನ್ನು ಖರೀದಿ ಮಾಡುವಲ್ಲಿ ಯಶಸ್ವಿಯಾಗಿದೆ. ತಂಡದ ನಾಯಕ ಕೇನ್ ವಿಲಿಯಮ್ಸನ್, ನಿಕೋಲಸ್ ಪೂರನ್ ಸೇರಿದಂತೆ ಪ್ರಮುಖ ಆಟಗಾರರನ್ನೇ ಬಿಡುಗಡೆ ಮಾಡಿದ್ದ ಎಸ್‌ಆರ್‌ಎಚ್ ಬದಲೀ ಆಟಗಾರರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ.
ಇಂಗ್ಲೆಂಡ್ ತಂಡದ ಸ್ಫೋಟಕ ಆಟಗಾರ ಹ್ಯಾರಿ ಬ್ರೂಕ್‌ರನ್ನು 13.25 ಕೋಟಿ ರುಪಾಯಿ ನೀಡಿ ಖರೀದಿ ಮಾಡಿತು. ನಂತರ, ಮಯಾಂಕ್ ಅಗರ್ವಾಲ್, ಅಕೀಲ್ ಹೊಸೈನ್, ಸೇರಿದಂತೆ 13 ಆಟಗಾರರನ್ನು ಮಿನಿ ಹರಾಜಿನಲ್ಲಿ ಖರೀದಿ ಮಾಡಿತು. 35 ಕೋಟಿ ರುಪಾಯಿಗೂ ಹೆಚ್ಚಿನ ಹಣವನ್ನು ಅದು ಹರಾಜಿನಲ್ಲಿ ಖರ್ಚು ಮಾಡಿತು.
ಹೆನ್ರಿಚ್ ಕ್ಲಾಸೆನ್, ಆದಿಲ್ ರಶೀದ್, ಮಯಾಂಕ್ ಮಾರ್ಕಾಂಡೆ, ವಿವ್ರಾಂತ್ ಶರ್ಮಾ, ಸಮರ್ಥ ವ್ಯಾಸ್, ಸನ್ವಿರ್ ಸಿಂಗ್ , ಉಪೇಂದ್ರ ಸಿಂಗ್ ಯಾದವ್, ಮಯಾಂಕ್ ದಾಗರ್, ನಿತೀಶ್ ಕುಮಾರ್ ರೆಡ್ಡಿ, ಅಕೇಲ್ ಹೊಸೈನ್, ಅನ್ಮೋಲ್‌ಪ್ರೀತ್ ಸಿಂಗ್ 2023ರ ಮಿನಿ ಹರಾಜಿನಲ್ಲಿ ಎಸ್‌ಆರ್‌ಎಚ್ ಸೇರಿದ ಆಟಗಾರರಾಗಿದ್ದಾರೆ.
ಕೇನ್ ವಿಲಿಯಮ್ಸ್‌ರನ್ನು ಬಿಡುಗಡೆ ಮಾಡಿದ ನಂತರ ತಂಡದ ನಾಯಕತ್ವವನ್ನು ಯಾರು ವಹಿಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಇದೆ. ಮೂಲಗಳ ಪ್ರಕಾರ ಮಯಾಂಕ್ ಅಗರ್ವಾಲ್ ಮತ್ತು ಐಡೆನ್ ಮಾರ್ಕ್ರಾಮ್ ನಾಯಕತ್ವದ ರೇಸ್‌ನಲ್ಲಿದ್ದಾರೆ.

ಹೊಸ ನಾಯಕನ ಬಗ್ಗೆ ಕೋಚ್ ಹೇಳಿದ್ದೇನು?
ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು 2023ರ ಆವೃತ್ತಿಯಲ್ಲಿ ಯಾರು ಮುನ್ನಡೆಸುತ್ತಾರೆ ಎನ್ನುವ ಪ್ರಶ್ನೆಗೆ ಹಲವು ಆಯ್ಕೆಗಳಿವೆ. ಕಳೆದ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿದ್ದ ಮಯಾಂಕ್ ಅಗರ್ವಾಲ್ ಕೂಡ ನಾಯಕನ ಸ್ಪರ್ಧೆಯಲ್ಲಿದ್ದಾರೆ.
ತಂಡದ ನಾಯಕ ಯಾರು ಎನ್ನುವ ಪ್ರಶ್ನೆಗೆ ಎಸ್‌ಆರ್‌ಎಚ್ ಕೋಚ್ ಬ್ರಿಯಾನ್ ಲಾರಾ ಪ್ರತಿಕ್ರಿಯೆ ನೀಡಿದ್ದಾರೆ. "ಈಗಲೇ ನಾಯಕನ ಆಯ್ಕೆ ಬಗ್ಗೆ ಯಾವುದನ್ನೂ ಹೇಳಲಾಗದು. ತಂಡದಲ್ಲಿ ಅನುಭವಿ ಆಟಗಾರರು ಇದ್ದಾರೆ, ಅವರು ನಾಯಕತ್ವದ ಗುಣಗಳನ್ನು ಹೊಂದಿದ್ದಾರೆ. ನಾವಿನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ, ಹರಾಜು ಮುಕ್ತಾಯವಾದ ಬಳಿಕ ತಂಡದ ಮ್ಯಾನೇಜ್‌ಮೆಂಟ್ ಈ ಬಗ್ಗೆ ಚರ್ಚೆ ನಡೆಸಿ ನಿರ್ಧರಿಸುತ್ತದೆ" ಎಂದು ಅವರು ಹರಾಜಿನ ವೇಳೆಯಲ್ಲಿ ತಿಳಿಸಿದ್ದರು.
IPL Auction 2023: ಎಲ್‌ಎಸ್‌ಜಿ ತಂಡಕ್ಕೆ 16 ಕೋಟಿ ರುಪಾಯಿಗೆ ಹರಾಜಾದ ನಿಕೋಲಸ್ ಪೂರನ್ ಪ್ರತಿಕ್ರಿಯೆ

ದಕ್ಷಿಣ ಆಫ್ರಿಕಾದ ಆಟಗಾರನಿಗೆ ನಾಯಕತ್ವ
ದಕ್ಷಿಣ ಆಫ್ರಿಕಾದ ಐಡೆನ್ ಮಾರ್ಕ್ರಾಮ್ ಕೂಡ ನಾಯಕತ್ವದ ಸ್ಪರ್ಧೆಯಲ್ಲಿದ್ದಾರೆ. ಕಳೆದ ಆವೃತ್ತಿಯಲ್ಲಿ ಅವರು ಉತ್ತಮ ಪ್ರದರ್ಶನ ನೀಡಿದ್ದರು. 14 ಪಂದ್ಯಗಳಲ್ಲಿ 139.05 ಸ್ಟ್ರೈಕ್ ರೇಟ್‌ನಲ್ಲಿ 381 ರನ್ ಗಳಿಸಿದ್ದರು. ಮಧ್ಯಮ ಕ್ರಮಾಂಕದ ಪ್ರಮುಖ ಬ್ಯಾಟರ್ ಆಗಿರುವ ಮಾರ್ಕ್ರಾಮ್ ಬ್ಯಾಟಿಂಗ್ ವಿಭಾಗದ ಶಕ್ತಿಯಾಗಿದ್ದಾರೆ.
ನಾಯಕನಾಗಿ ಅನುಭವ ಇಲ್ಲದಿರುವುದು ಅವರ ದೊಡ್ಡ ಕೊರತೆಯಾಗಿದೆ. ಆದರೂ, ಎಸ್‌ಎ20 ಫ್ರಾಂಚೈಸಿಯಾದ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ತಂಡಕ್ಕೆ ಅವರು ನಾಯಕರಾಗಿ ಆಯ್ಕೆಯಾಗಿದ್ದಾರೆ. ಐಪಿಎಲ್‌ಗೆ ಮೊದಲು ಈ ಪಂದ್ಯಾವಳಿ ನಡೆಯಲಿದ್ದು, ಅಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಅವರಿಗೆ ಎಸ್‌ಆರ್‌ಎಚ್ ಮುನ್ನಡೆಸುವಜವಾಬ್ದಾರಿ ಸಿಕ್ಕರೂ ಸಿಗಬಹುದು.

ಭುವನೇಶ್ವರ್ ಕುಮಾರ್ ಕೂಡ ರೇಸ್‌ನಲ್ಲಿದ್ದಾರೆ
ಎಸ್‌ಆರ್‌ಎಚ್ ತಂಡದ ಹಿರಿಯ ಆಟಗಾರ ಭುವನೇಶ್ವರ್ ಕುಮಾರ್ ಕೂಡ ನಾಯಕತ್ವದ ಸ್ಥಾನಕ್ಕೆ ರೇಸ್‌ನಲ್ಲಿದ್ದಾರೆ. ಈ ಹಿಂದೆ ಅವರು ಹಲವು ಪಂದ್ಯಗಳಲ್ಲಿ ನಾಯಕತ್ವದ ಹೊಣೆಯನ್ನು ಹೊತ್ತಿದ್ದಾರೆ. ಹಲವು ಆವೃತ್ತಿಯಲ್ಲಿ ಎಸ್‌ಆರ್‌ಎಚ್ ತಂಡದ ಉಪನಾಯಕರಾಗಿ ಸೇವೆ ಸಲ್ಲಿಸಿದ್ದಾರೆ. ತಂಡದಲ್ಲಿ ಹಿರಿಯನಾಗಿರುವ ಭುವನೇಶ್ವರ್ ಅಚ್ಚರಿಯ ಆಯ್ಕೆಯಾಗುವ ಸಾಧ್ಯತೆ ಇದೆ.
ಮಿನಿ ಹರಾಜಿನ ಬಳಿಕ ಎಸ್‌ಆರ್‌ಎಚ್ ತಂಡ: ಅಬ್ದುಲ್ ಸಮದ್, ಐಡೆನ್ ಮಾರ್ಕ್ರಾಮ್, ರಾಹುಲ್ ತ್ರಿಪಾಠಿ, ಗ್ಲೆನ್ ಫಿಲಿಪ್ಸ್, ಅಭಿಷೇಕ್ ಶರ್ಮಾ, ಮಾರ್ಕೊ ಜಾನ್ಸೆನ್, ವಾಷಿಂಗ್ಟನ್ ಸುಂದರ್, ಫಜಲ್ಹಕ್ ಫಾರೂಕಿ, ಕಾರ್ತಿಕ್ ತ್ಯಾಗಿ, ಭುವನೇಶ್ವರ್ ಕುಮಾರ್, ಟಿ ನಟರಾಜನ್, ಉಮ್ರಾನ್ ಮಲಿಕ್, ಹ್ಯಾರಿ ಬ್ರೂಕ್, ಮಯಾಂಕ್ ಅಗರ್ವಾಲ್, ಹೆನ್ರಿಚ್ ಕ್ಲಾಸೆನ್, ಆದಿಲ್ ರಶೀದ್, ಮಯಾಂಕ್ ಮಾರ್ಕಾಂಡೆ, ವಿವ್ರಾಂತ್ ಶರ್ಮಾ, ಸಮರ್ಥ ವ್ಯಾಸ್, ಸನ್ವಿರ್ ಸಿಂಗ್ , ಉಪೇಂದ್ರ ಸಿಂಗ್ ಯಾದವ್, ಮಯಾಂಕ್ ದಾಗರ್, ನಿತೀಶ್ ಕುಮಾರ್ ರೆಡ್ಡಿ, ಅಕೇಲ್ ಹೊಸೈನ್, ಅನ್ಮೋಲ್‌ಪ್ರೀತ್ ಸಿಂಗ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications