ನ್ಯೂಜಿಲೆಂಡ್‌ನ ಯುವ ಆಲ್‌ರೌಂಡರ್ ರಚಿನ್ ರವೀಂದ್ರ ಇತ್ತೀಚೆಗೆ ಆಡಿದ 2023ರ ಏಕದಿನ ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ. ಕಿವೀಸ್ ಯುವ ಬ್ಯಾಟರ್ ಆಟಕ್ಕೆ ವಿಶ್ವದ ಮಾಜಿ ಆಟಗಾರರು ಸಹ ತಲೆ ತೂಗಿದ್ದಾರೆ.
ಬೆಂಗಳೂರು ಮೂಲದ ರಚಿನ್ ಬ್ಯಾಟ್ ಹಿಡಿದು ಅಂಗಳಕ್ಕೆ ಎಂಟ್ರಿ ನೀಡಿದರೆ, ಎದುರಾಳಿ ಬೌಲರ್‌ಗಳಿಗೆ ನಡುಕ ಹುಟ್ಟಿಸುವಂತಹ ಆಟಗಾರ. ಏಕದಿನ ಕ್ರಿಕೆಟ್‌ನಲ್ಲಿ ರಚಿನ್ ರವೀಂದ್ರ ಅಬ್ಬರಿಸಿರುವ ಧಾಟಿ ನೋಡಿದರೆ, ಈ ಸ್ಟಾರ್ ಪ್ಲೇಯರ್‌ಗೆ ಮಿನಿ ಹರಾಜಿನಲ್ಲಿ ಹಣದ ಹೊಳೆ ಹರಿಯುವ ಸಾಧ್ಯತೆ ಇದೆ.

ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಕಿವೀಸ್ ಆಲ್‌ರೌಂಡರ್ ಬ್ಯಾಟ್‌ನಿಂದ ಮೂರು ಶತಕಗಳು ಬಂದವು. ಈ ಮೂಲಕ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅಲ್ಲದೆ 24ನೇ ವಯಸ್ಸಿನಲ್ಲಿ ವಿಶ್ವಕಪ್‌ನಲ್ಲಿ ಅಧಿಕ ಶತಕ ಬಾರಿಸಿದ ದಾಖಲೆಯನ್ನು ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. ಇದಕ್ಕೂ ಮೊದಲು ಈ ದಾಖಲೆ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿ ಇತ್ತು.
ನ್ಯೂಜಿಲೆಂಡ್ ಆಟಗಾರ ಐಪಿಎಲ್ ಮಿನಿ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗಿದ್ದರೆ, ಇವರ ಮೂಲ ಬೆಲೆ ಏನಿರಲಿದೆ ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿವೆ.

'ಇಎಸ್‌ಪಿಎನ್ ಕ್ರಿಕ್‌ಇನ್ಫೋ' ವರದಿಯ ಪ್ರಕಾರ, 2024ರ ಐಪಿಎಲ್‌ಗಾಗಿ ನಡೆಯುತ್ತಿರುವ ಹರಾಜಿನಲ್ಲಿ ರಚಿನ್ ರವೀಂದ್ರ ಅವರು ತಮ್ಮ ಬೇಸ್ ಪ್ರೈಸ್ ಅನ್ನು 50 ಲಕ್ಷ ರೂಪಾಯಿಗೆ ನೋಂದಾಯಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈ ಮೂಲ ಬೆಲೆಯಲ್ಲಿ ಇವರ ಬಿಡ್ಡಿಂಗ್ ಆರಂಭವಾಗಿ ಯಾವ ಮೊತ್ತಕ್ಕೆ ಹೋಗಿ ನಿಲ್ಲುತ್ತದೆ ಕಾದು ನೋಡಬೇಕಿದೆ.
ಒಂದಂತೂ ಪಕ್ಕಾ, ಈ ಆಟಗಾರನ ಹೆಸರು ಹರಾಜಿನ ಅಂಗಳಕ್ಕೆ ಬರುತ್ತಲೇ ಫ್ರಾಂಚೈಸಿ ಮಾಲೀಕರು ಬಿಡ್ ಮಾಡಲು ತಯಾರಿ ನಡೆಸುತ್ತಾರೆ. 24 ವರ್ಷದ ರಚಿನ್ ರವೀಂದ್ರ ತಂದೆ ಬೆಂಗಳೂರು ನಿವಾಸಿ. ಹೀಗಿರುವಾಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅವರನ್ನು ಖರೀದಿಸಬಹುದೇ? ಎಂದು ಕಾದು ನೋಡಬೇಕಿದೆ.
ರಚಿನ್ ರವೀಂದ್ರ 2023ರಲ್ಲಿ ತಮ್ಮ ಮೊದಲ ಏಕದಿನ ವಿಶ್ವಕಪ್ ಆಡಿದರು. ಇದರಲ್ಲಿ ಅವರು 10 ಪಂದ್ಯಗಳ 10 ಇನ್ನಿಂಗ್ಸ್‌ಗಳಲ್ಲಿ 64.22ರ ಸರಾಸರಿ ಮತ್ತು 106.45 ಸ್ಟ್ರೈಕ್‌ರೇಟ್‌ನಲ್ಲಿ 578 ರನ್ ಗಳಿಸುವ ಮೂಲಕ ತಮ್ ಬ್ಯಾಟಿಂಗ್ ಕ್ಷಮತೆಯನ್ನು ವಿಶ್ವದ ಮುಂದೆ ತಂದಿಟ್ಟದ್ದರು.
ಈ ಅವಧಿಯಲ್ಲಿ ರಚಿನ್ 3 ಶತಕ ಬಾರಿಸಿ ಎಲ್ಲರ ಮನ ಗೆದ್ದಿದ್ದರು. ಇದೇ ವೇಳೆ ಕಿವೀಸ್ ಆಟಗಾರ ಪಂದ್ಯಾವಳಿಯಲ್ಲಿ ಒಟ್ಟಾರೆ 55 ಬೌಂಡರಿ ಹಾಗೂ 17 ಸಿಕ್ಸರ್ ಸಿಡಿಸಿದ್ದರು. ರಚಿನ್ ರವೀಂದ್ರ ಆಗಲೇ ವಿಶ್ವಕಪ್‌ನಲ್ಲಿ ಎಲ್ಲರ ಗಮನ ಸೆಳೆದಿದ್ದರು.
ರಚಿನ್ ರವೀಂದ್ರ ನ್ಯೂಜಿಲೆಂಡ್ ಪರ ಎಲ್ಲಾ ಮೂರು ಸ್ವರೂಪಗಳಲ್ಲಿ ಕ್ರಿಕೆಟ್ ಆಡುತ್ತಾರೆ. ಸೆಪ್ಟೆಂಬರ್ 2021ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ರಚಿನ್ ಅವರು ಇಲ್ಲಿಯವರೆಗೆ 3 ಟೆಸ್ಟ್, 22 ಏಕದಿನ ಮತ್ತು 19 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.
ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 73 ರನ್ ಗಳಿಸಿದ್ದಾರೆ. ಇದಲ್ಲದೆ, ಅವರು 18 ODI ಇನ್ನಿಂಗ್ಸ್‌ಗಳಲ್ಲಿ 45.11ರ ಸರಾಸರಿಯಲ್ಲಿ 3 ಶತಕ ಮತ್ತು 3 ಅರ್ಧ ಶತಕಗಳನ್ನು ಒಳಗೊಂಡಂತೆ 767 ರನ್ ಗಳಿಸಿದ್ದಾರೆ. ಇನ್ನು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 145 ರನ್ ಗಳಿಸಿದ್ದಾರೆ.
ಇದಲ್ಲದೇ ಆಫ್‌ಸ್ಪಿನ್ನರ್ ಬೌಲರ್ ಆಗಿರುವ ರಚಿನ್ ರವೀಂದ್ರ ಅವರು ಟೆಸ್ಟ್‌ನಲ್ಲಿ 3, ಏಕದಿನದಲ್ಲಿ 11 ಮತ್ತು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 11 ವಿಕೆಟ್‌ಗಳನ್ನು ಪಡೆದಿದ್ದಾರೆ.