ಮಂಗಳವಾರ, ಡಿಸೆಂಬರ್ 19ರಂದು ದುಬೈನ ಕೋಕಾ-ಕೋಲಾ ಅರೇನಾದಲ್ಲಿ ಮುಕ್ತಾಯಗೊಂಡ 2024ರ ಐಪಿಎಲ್ ಮಿನಿ ಹರಾಜಿನಲ್ಲಿ ಎಲ್ಲಾ ಹತ್ತು ಫ್ರಾಂಚೈಸಿಗಳು ತಮ್ಮ ತಂಡಗಳನ್ನು ಪೂರ್ಣಗೊಳಿಸಿಕೊಂಡವು.
ಬಿಡ್ಡಿಂಗ್ ವಾರ್ ನಂತರ, 30 ಸಾಗರೋತ್ತರ ಆಟಗಾರರು ಸೇರಿದಂತೆ ಒಟ್ಟು 72 ಆಟಗಾರರು 230.45 ಕೋಟಿ ರೂಪಾಯಿಗೆ ಮಾರಾಟವಾದರು.
ಆಸ್ಟ್ರೇಲಿಯಾದ ಸ್ಟಾರ್ ವೇಗಿ ಮಿಚೆಲ್ ಸ್ಟಾರ್ಕ್ ಐಪಿಎಲ್ ದಾಖಲೆಯನ್ನು ನಿರ್ಮಿಸಿದರು. ಏಕೆಂದರೆ, ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ 24.75 ಕೋಟಿ ರೂಪಾಯಿಗೆ ಖರೀದಿಸಿದರು. ಇದು ಐಪಿಎಲ್ ಇತಿಹಾಸದಲ್ಲಿ ಆಟಗಾರನೊಬ್ಬನಿಗೆ ವ್ಯಯಿಸಿದ ಇದುವರೆಗಿನ ಅತ್ಯಧಿಕ ಬೆಲೆಯಾಗಿದೆ.

ಇದೇ ವೇಳೆ ಮೂರು ಬಾರಿಯ ರನ್ನರ್-ಅಪ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಬೌಲಿಂಗ್ ವಿಭಾಗವನ್ನು ಬಲಪಡಿಸುವ ಕಡೆ ಗಮನಹರಿಸಿತು ಮತ್ತು ಹರಾಜಿನಲ್ಲಿ ಆರು ಆಟಗಾರರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು.
ಪ್ರತಿ ಬಾರಿ ಆರ್‌ಸಿಬಿ ಫ್ರಾಂಚೈಸಿ ಆಟಗಾರರನ್ನು ಬಿಡ್ ಮಾಡುವಾಗ ತಪ್ಪು ಮಾಡುತ್ತದೆ. ಅದು ಈ ಬಾರಿಯೂ ಮುಂದುವರೆದಿದೆ. ಪರ್ಸ್‌ನಲ್ಲಿ ದೊಡ್ಡ ಹಣವಿದ್ದರೂ ಗುಣಮಟ್ಟದ ಆಟಗಾರರನ್ನು ಪಡೆಯುವಲ್ಲಿ ವಿಫಲವಾಗಿದೆ.
ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ 20.50 ಕೋಟಿ ರೂಪಾಯಿಗೆ ಖರೀದಿಯಾದ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮ್ಮಿನ್ಸ್ ಅವರನ್ನು ಕಳೆದುಕೊಂಡ ನಂತರ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವೆಸ್ಟ್ ಇಂಡೀಸ್ ವೇಗಿ ಅಲ್ಜಾರಿ ಜೋಸೆಫ್ ಅವರನ್ನು ಸೆಳೆದುಕೊಂಡಿತು.
1 ಕೋಟಿ ರೂಪಾಯಿ ಮೂಲ ಬೆಲೆಯೊಂದಿಗೆ ಬಂದ ಅಲ್ಜಾರಿ ಜೋಸೆಫ್ ಅವರನ್ನು ಖರೀದಿಸಲು ಆರ್‌ಸಿಬಿ ಫ್ರಾಂಚೈಸಿಯು ಡೆಲ್ಲಿ ಕ್ಯಾಪಿಟಲ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಕಿಂಗ್ಸ್ ನಡುವಿನ ಬಿಡ್ಡಿಂಗ್ ವಾರ್‌ನಲ್ಲಿ ಭಾಗಿಯಾಗಿದ್ದರು.
ಅಂತಿಮವಾಗಿ ಆರ್‌ಸಿಬಿ 11.5 ಕೋಟಿ ರೂಪಾಯಿ ವ್ಯಯಿಸಿ ಅಲ್ಜಾರಿ ಜೋಸೆಫ್‌ರನ್ನು ಪಡೆಯಿತು. ಇನ್ನು ಹರಾಜಿಗೂ ಮುನ್ನ ಗುಜರಾತ್ ಟೈಟನ್ಸ್ ಬಿಡುಗಡೆ ಮಾಡಿದ ಯಶ್ ದಯಾಳ್ ಅವರನ್ನು 5 ಕೋಟಿ ರೂಪಾಯಿಗೆ ಖರೀದಿಸಿತು.
ಅಲ್ಲದೆ, ಈ ಬಾರಿಯ ಹರಾಜಿನಲ್ಲಿ 1.5 ಕೋಟಿ ರೂಪಾಯಿ ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಟಾಮ್ ಕರ್ರಾನ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಅದೇ ಮೊತ್ತಕ್ಕೆ ಖರೀದಿಸುವಲ್ಲಿ ಯಶಸ್ವಿಯಾಗಿದೆ.
ನ್ಯೂಜಿಲೆಂಡ್ ವೇಗಿ ಲಾಕಿ ಫರ್ಗ್ಯೂಸನ್ ಅವರನ್ನು 2 ಕೋಟಿ ರೂಪಾಯಿಗೆ ಸಹಿ ಹಾಕುವ ಮೂಲಕ ಕೊನೆಯಲ್ಲಿ ಒಂದೆರಡು ವೇಗದ ಬೌಲರ್‌ಗಳನ್ನು ಪಡೆದುಕೊಂಡಿತು.
ಯಶ್ ದಯಾಳ್ (5 ಕೋಟಿ ರೂಪಾಯಿ)
ಅಲ್ಜಾರಿ ಜೋಸೆಫ್ (11.50 ಕೋಟಿ ರೂಪಾಯಿ)
ಟಾಮ್ ಕರ್ರಾನ್ (1.50 ಕೋಟಿ ರೂಪಾಯಿ)
ಲಾಕಿ ಫರ್ಗುಸನ್ (2 ಕೋಟಿ ರೂಪಾಯಿ)
ಸ್ವಪ್ನಿಲ್ ಸಿಂಗ್ (20 ಲಕ್ಷ ರೂಪಾಯಿ)
ಸೌರವ್ ಚೌಹಾಣ್ (20 ಲಕ್ಷ ರೂಪಾಯಿ)
ಆರ್‌ಸಿಬಿ ಉಳಿಸಿಕೊಂಡ ಆಟಗಾರರು: ಫಾಫ್ ಡು ಪ್ಲೆಸಿಸ್, ರಜತ್ ಪಾಟಿದಾರ್, ವಿರಾಟ್ ಕೊಹ್ಲಿ, ಅನುಜ್ ರಾವತ್, ದಿನೇಶ್ ಕಾರ್ತಿಕ್, ಸುಯಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೋರ್, ಕರ್ಣ್ ಶರ್ಮಾ, ಮನೋಜ್ ಭಾಂಡಗೆ, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಾಜನ್ ಕುಮಾರ್, ವೈಶಾಕ್ ವಿಜಯ್‌ಕುಮಾರ್.
ವ್ಯಾಪಾರ ಮಾಡಿಕೊಂಡ ಆಟಗಾರರು: ಮಯಾಂಕ್ ಡಾಗರ್, ಕ್ಯಾಮೆರಾನ್ ಗ್ರೀನ್.