2008ರಿಂದ 16 ಆವೃತ್ತಿಗಳು ನಡೆದರೂ, ಒಂದೇ ಒಂದು ಐಪಿಎಲ್ ಪ್ರಶಸ್ತಿ ಗೆಲ್ಲದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಈಗಲೂ ಅಪಾರ ಅಪ್ಪಟ ಅಭಿಮಾನಿ ಬಳಗವಿದೆ.
ಆರ್‌ಸಿಬಿ ಫ್ರಾಂಚೈಸಿ ಪ್ರತಿ ಬಾರಿ ಎಡವಿದಂತೆ ಈ ಬಾರಿಯೂ ಐಪಿಎಲ್ ಹರಾಜಿನಲ್ಲಿ ಆಟಗಾರರಿಗೆ ಬಿಡ್ ಮಾಡುವಾಗ ಮತ್ತೆ ಎಡವಿದೆ. ಪರ್ಸ್‌ನಲ್ಲಿ ಹಣವಿದ್ದರೂ ಗುಣಮಟ್ಟದ ಆಟಗಾರರನ್ನು ಪಡೆಯುವಲ್ಲಿ ವಿಫಲವಾಗಿದೆ.
ಮಂಗಳವಾರ, ಡಿಸೆಂಬರ್ 19ರಂದು ದುಬೈನ ಕೋಕಾ-ಕೋಲಾ ಅರೇನಾದಲ್ಲಿ ನಡೆದ 2024ರ ಐಪಿಎಲ್ ಮಿನಿ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಬೌಲಿಂಗ್ ವಿಭಾಗವನ್ನು ಬಲಪಡಿಸಲು ನೋಡಿತು.

ಆದರೆ, ಎದುರಾಳಿ ತಂಡವನ್ನು ನಡುಗಿಸಬಲ್ಲ ಬೌಲರ್‌ಗಳನ್ನು ಪಡೆಯಲಾಗಲಿಲ್ಲ. ಬೇರೆ ತಂಡಗಳು ಆರಿಸಿ ಬಿಟ್ಟ ಆಟಗಾರರನ್ನು ಖರೀದಿಸಿದಂತಾಗಿದೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಪರಿಸ್ಥಿತಿ.
ಐಪಿಎಲ್ 17ನೇ ಆವೃತ್ತಿಗಾಗಿ ನಡೆದ ಹರಾಜಿನಲ್ಲಿ ಆರ್‌ಸಿಬಿ ತನ್ನ ಮೂರನೇ ಆಟಗಾರನ ರೂಪದಲ್ಲಿ ಟಾಮ್ ಕರ್ರಾನ್ ಅವರನ್ನು ಖರೀದಿಸಿದೆ. ಈ ಬಾರಿ ಆರ್‌ಸಿಬಿ ಫ್ರಾಂಚೈಸಿ ಖರೀದಿಸಿರುವುದು ಇಂಗ್ಲೆಂಡ್ನ ಆಲ್‌ರೌಂಡರ್.
ಇಂಗ್ಲೆಂಡ್ ತಂಡದಿಂದಲೇ ಹೊರಬಿದ್ದಿರುವ ಆಲ್‌ರೌಂಡರ್ ಟಾಮ್ ಕರ್ರಾನ್ ಅವರನ್ನು ಆರ್‌ಸಿಬಿ ತಂಡ 1.5 ಕೋಟಿ ರೂಪಾಯಿಗೆ ಖರೀದಿಸಿದೆ. ಇಂಗ್ಲೆಂಡ್ ಪರ 30 ಟಿ20 ಪಂದ್ಯಗಳನ್ನಾಡಿರುವ ಟಾಮ್ ಕರ್ರಾನ್ 29 ವಿಕೆಟ್ಗಳನ್ನು ಪಡೆದಿದ್ದಾರೆ. ಇದೇ ವೇಳೆ 13 ಇನಿಂಗ್ಸ್‌ಗಳಲ್ಲಿ 64 ರನ್ ಗಳಿಸಿದ್ದಾರೆ.
ಇನ್ನು ಐಪಿಎಲ್ನಲ್ಲಿ ಕಾಣಿಸಿಕೊಂಡಿರುವ ಟಾಮ್ ಕರ್ರಾನ್ ಕೆಕೆಆರ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ಪರ ಒಟ್ಟು 13 ಪಂದ್ಯಗಳನ್ನಾಡಿದ್ದಾರೆ ಮತ್ತು 127 ರನ್ ಗಳಿಸಿದ್ದಾರೆ. ಅಲ್ಲದೆ, 13 ವಿಕೆಟ್ಗಳನ್ನು ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಈ ಬಾರಿಯ ಹರಾಜಿನಲ್ಲಿ 1.5 ಕೋಟಿ ರೂಪಾಯಿ ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಟಾಮ್ ಕರ್ರಾನ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಅದೇ ಮೊತ್ತಕ್ಕೆ ಖರೀದಿಸುವಲ್ಲಿ ಯಶಸ್ವಿಯಾಗಿದೆ.
2024ರ ಐಪಿಎಲ್ ಹರಾಜಿನಲ್ಲಿ ಆರ್‌ಸಿಬಿ ಖರೀದಿಸಿದ ಆಟಗಾರರು
ಯಶ್ ದಯಾಳ್ (5 ಕೋಟಿ ರೂಪಾಯಿ)
ಅಲ್ಜಾರಿ ಜೋಸೆಫ್ (11.50 ಕೋಟಿ ರೂಪಾಯಿ)
ಟಾಮ್ ಕರ್ರಾನ್ (1.50 ಕೋಟಿ ರೂಪಾಯಿ)
ಲಾಕಿ ಫರ್ಗುಸನ್ (2 ಕೋಟಿ ರೂಪಾಯಿ)
ಸ್ವಪ್ನಿಲ್ ಸಿಂಗ್ (20 ಲಕ್ಷ ರೂಪಾಯಿ)
ಸೌರವ್ ಚೌಹಾಣ್ (20 ಲಕ್ಷ ರೂಪಾಯಿ)