ಐಪಿಎಲ್ ಹರಾಜಿಗೆ ದಿನಗಣನೆ ಆರಂಭವಾಗಿದೆ. ಈ ಬಾರಿ ಹಲವು ಸ್ಟಾರ್ ಆಟಗಾರರು ಅಖಾಡ ಪ್ರವೇಶಿಸಲಿದ್ದಾರೆ. ಈ ಆಟಗಾರರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಮಾಲೀಕರು ಸಹ ಹಣದ ಹೊಳೆಯನ್ನು ಹರಿಸಲಿದ್ದಾರೆ. ಈ ಬಾರಿ 1300ಕ್ಕೂ ಹೆಚ್ಚು ಆಟಗಾರರು ಐಪಿಎಲ್ ಹರಾಜಿನಲ್ಲಿ ಅದೃಷ್ಟ ಪರೀಕ್ಷೆಯನ್ನು ನಡೆಸಲಿದ್ದಾರೆ. ಆದರೆ ಎಲ್ಲರ ಕಣ್ಣುಗಳು ಮಾತ್ರ ಆ ಒಬ್ಬ ಆಲ್‌ರೌಂಡರ್ ಮೇಲೆ ನೆಟ್ಟಿರಲಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತನ್ನದೇ ಧಮಾಕೆದಾರ್ ಆಲ್‌ರೌಂಡರ್ ಪ್ರದರ್ಶನದಿಂದ ಹೆಸರುವಾಸಿಯಾಗಿದ್ದ ಆಟಗಾರ ಆಸ್ಟ್ರೇಲಿಯಾ ಕ್ಯಾಮರೂನ್ ಗ್ರೀನ್ (Cameron Green). ಈಗಾಗಲೇ ಇವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಂಡು ಅಬ್ಬರಿಸಿದ್ದಾರೆ. ಅಲ್ಲದೆ ಐಪಿಎಲ್‌ನಲ್ಲೂ ಆಡಿದ ಅನುಭವ ಹೊಂದಿದ್ದಾರೆ. ಇವರು ಹೆಸರು ಹರಾಜಿನ ಅಂಗಳಕ್ಕೆ ಎಂಟ್ರಿ ನೀಡುತ್ತಿದ್ದಂತೆ ಫ್ರಾಂಚೈಸಿಗಳ ಕಿವಿ ನೆಟ್ಟಗಾಗಲಿವೆ.

ಕ್ಯಾಮರೂನ್ ಗ್ರೀನ್ ಸ್ಟಾರ್ ಆಲ್‌ರೌಂಡರ್ ಎರಡು ಸ್ಥಾನವನ್ನು ಸುಲಭವಾಗಿ ತುಂಬ ಬಲ್ಲ ಕ್ಷಮತೆ ಹೊಂದಿದ್ದಾರೆ. ಅಲ್ಲದೆ ಇವರು ಬೆಸ್ಟ್ ಫೀಲ್ಡರ್ ಕೂಡ ಹೌದು. ಗ್ರೀನ್ ತಮ್ಮ ಬಿಗ್ ಹಿಟ್ಟಿಂಗ್‌ನಿಂದಲೇ ಹೆಸರುವಾಸಿ. ಇವರು ಮುಂಬೈ ಪರ ಆಡಿದ್ದಾಗ 47 ಎಸೆತಗಳಲ್ಲಿ ಶತಕ ಬಾರಿಸಿ ಮಿಂಚಿದ್ದರು. ಇವರು ಐಪಿಎಲ್‌ನಲ್ಲಿ ಆಡಿದ 29 ಪಂದ್ಯಗಳಲ್ಲಿ 153ರ ಸ್ಟ್ರೈಕ್ ರೇಟ್‌ನಲ್ಲಿ 707 ರನ್ ಸಿಡಿಸಿದ್ದಾರೆ. ಈ ವೇಳೆ 1 ಶತಕ, 2 ಅರ್ಧಶತಕ ಬಾರಿಸಿದ್ದಾರೆ. ಇವರಿಗಾಗಿ ಐಪಿಎಲ್‌ನ 2 ತಂಡಗಳು ಫೈಟ್ ನಡೆಸುವ ಸಾಧ್ಯತೆ ಇದೆ.
ಕ್ಯಾಮರೂನ್ ಗ್ರೀನ್ ಅವರಿಗೆ ಸಿಎಸ್‌ಕೆ ಗಾಳ ಹಾಕುವ ಸಾಧ್ಯತೆ ಹೆಚ್ಚಿದೆ. ಸಿಎಸ್‌ಕೆ ತಂಡದಲ್ಲಿದ್ದ ಸ್ಟಾರ್ ಆಲ್‌ರೌಂಡರ್‌ಗಳಾದ ರವೀಂದ್ರ ಜಡೇಜಾ, ಸ್ಯಾಮ್ ಕರನ್‌ರನ್ನು ಟ್ರೇಡ್ ಮಾಡಿದ್ದರಿಂದ ಈ ತಂಡದಲ್ಲಿ ಆಲ್‌ರೌಂಡರ್‌ಗಳ ಅವಶ್ಯಕತೆ ತುಂಬ ಇದೆ. ಅಲ್ಲದೆ ಮಧ್ಯಮ ಕ್ರಮಾಂಕದಲ್ಲಿ ಚೆನ್ನೈ ತಂಡಕ್ಕೆ ಒಬ್ಬ ಸ್ಫೋಟಕ ಬ್ಯಾಟರ್ ಸಹ ಬೇಕಾಗಿದೆ. ಈ ಸ್ಥಾನಕ್ಕಾಗಿ ಗ್ರೀನ್ ಉತ್ತಮ ಆಯ್ಕೆ. ಸಿಎಸ್‌ಕೆ ಬಳಿ ₹43.4 ಕೋಟಿ ಇರುವುದರಿಂದ ಗ್ರೀನ್ ಕೊಳ್ಳಲು ದೊಡ್ಡ ಮೊತ್ತವನ್ನು ಹೂಡುವ ಸಾಧ್ಯತೆ ಇದೆ.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಆಂಡ್ರೆ ರಸೆಲ್ ಹಾಗೂ ವೆಂಕಟೇಶ್ ಅಯ್ಯರ್ ಅವರನ್ನು ರಿಲೀಸ್ ಮಾಡಿದ್ದರಿಂದ ಇವರ ಸ್ಥಾನವನ್ನು ತುಂಬ ಬಲ್ಲ ಆಟಗಾರನ ಹುಡುಕಾಟ ನಡೆಸಲಿದೆ. ಕ್ಯಾಮರೂನ್ ಗ್ರೀನ್ ಸಹ ಕೆಕೆಆರ್‌ಗೆ ಅವಶ್ಯಕತೆ ಇದ್ದ ಎಲ್ಲ ಬಾಕ್ಸ್‌ಗಳನ್ನು ಟಿಕ್ ಮಾಡುವ ಆಟಗಾರ. ಹೀಗಾಗಿ ಹರಾಜಿನ ಅಂಗಳಕ್ಕೆ ₹64.3 ಕೋಟಿಗಳೊಂದಿಗೆ ಅಂಗಳ ಪ್ರವೇಶಿಸಲಿರುವ ಕೆಕೆಆರ್ ದೊಡ್ಡ ಮೊತ್ತದ ಬಾಜಿ ಕಟ್ಟಲಿದೆ. ಕ್ರಿಕೆಟ್ ತಜ್ಞರ ಪ್ರಕಾರ ಈ ಎರಡೂ ತಂಡಗಳು ಇವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಸುಮಾರು 20 ಕೋಟಿ ರೂಗಳ ವರೆಗೂ ಹಣವನ್ನು ಹೂಡಬಹುದು ಎಂದು ಹೇಳಲಾಗುತ್ತಿದೆ.