ಕೆಲವರು 40 ವರ್ಷದವರೆಗೂ ಐಪಿಎಲ್ ಆಡ್ತಾರೆ: ಮೆಗಾ ಹರಾಜಿನಲ್ಲಿ ರೈನಾ ಅನ್‌ಸೋಲ್ಡ್ ಆಗಿದ್ದಕ್ಕೆ ಪಠಾಣ್ ಗರಂ!

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮುಂಬರುವ ಮಾರ್ಚ್ ಕೊನೆಯ ವಾರ ಅಥವಾ ಏಪ್ರಿಲ್ ತಿಂಗಳಿನಲ್ಲಿ ಆರಂಭಗೊಳ್ಳಲಿದ್ದು, ಈ ಬಾರಿಯ ಟೂರ್ನಿಯಲ್ಲಿ ಟ್ರೋಫಿಗಾಗಿ ಒಟ್ಟು ಹತ್ತು ತಂಡಗಳ ನಡುವೆ ಸೆಣಸಾಟ ನಡೆಯುವುದರಿಂದ ಸಾಕಷ್ಟು ವಿಶೇಷತೆಯಿಂದ ಕೂಡಿರಲಿದೆ ಹಾಗೂ ಕುತೂಹಲವನ್ನೂ ಕೂಡ ಹುಟ್ಟು ಹಾಕಿದೆ.
ಹೌದು, ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಟೈಟಾನ್ಸ್ ಸೇರ್ಪಡೆಗೊಳ್ಳುತ್ತಿರುವ ಸಲುವಾಗಿ ಮೆಗಾ ಹರಾಜು ಪ್ರಕ್ರಿಯೆಯೂ ನಡೆದಿದೆ. ಫೆಬ್ರವರಿ 12 ಹಾಗೂ 13ರಂದು ಬೆಂಗಳೂರಿನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜು ಪ್ರಕ್ರಿಯೆ ನಡೆದಿದ್ದು ಒಟ್ಟು 590 ಆಟಗಾರರು ಭಾಗವಹಿಸಿ 203 ಆಟಗಾರರು ಯಶಸ್ವಿಯಾಗಿ ಬಿಕರಿಯಾಗಿದ್ದಾರೆ. ಹೀಗೆ ಯಶಸ್ವಿಯಾಗಿ ಹರಾಜಾದ ಆಟಗಾರರ ಪೈಕಿ 66 ವಿದೇಶಿ ಆಟಗಾರರಿದ್ದರೆ, ಇನ್ನುಳಿದ 137 ಆಟಗಾರರು ಭಾರತೀಯರಾಗಿದ್ದಾರೆ. ಹೀಗೆ ಯಶಸ್ವಿಯಾಗಿ ನಡೆದ ಐಪಿಎಲ್ ಮೆಗಾ ಹರಾಜು ಮುಕ್ತಾಯಗೊಂಡ ನಂತರ ಅಭಿಮಾನಿಗಳಲ್ಲಿ ತುಂಬಾ ದಿನಗಳಿಂದ ಇದ್ದ ಯಾವ ಆಟಗಾರರನ್ನು ಯಾವ ಫ್ರಾಂಚೈಸಿ ಖರೀದಿಸಲಿದೆ ಎಂಬ ಪ್ರಶ್ನೆಗಳಿಗೆ ಉತ್ತರ ಸಿಕ್ಕಂತಾಗಿದೆ.
ಇನ್ನು ಈ ಬಾರಿಯ ಮೆಗಾ ಹರಾಜಿಗೂ ಮುನ್ನ ನಡೆದ ಆಟಗಾರರ ರಿಟೆನ್ಷನ್ ಪ್ರಕ್ರಿಯೆಯಲ್ಲಿ ರವೀಂದ್ರ ಜಡೇಜಾ, ಎಂಎಸ್ ಧೋನಿ, ಮೊಯಿನ್ ಅಲಿ ಮತ್ತು ರುತುರಾಜ್ ಗಾಯಕ್ವಾಡ್ ಈ ನಾಲ್ವರು ಆಟಗಾರರನ್ನು ಉಳಿಸಿಕೊಂಡು ಇದೇ ಮೊದಲ ಬಾರಿಗೆ ಸುರೇಶ್ ರೈನಾ ಅವರನ್ನು ತಂಡದಿಂದ ಕೈಬಿಟ್ಟಿದ್ದ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಮೆಗಾ ಹರಾಜಿನಲ್ಲಿ ಸುರೇಶ್ ರೈನಾರನ್ನು ಮತ್ತೆ ತಂಡಕ್ಕೆ ಸೇರಿಸಿಕೊಳ್ಳಲಿದೆ ಎಂಬ ದೊಡ್ಡ ಮಟ್ಟದ ನಂಬಿಕೆ ಬಹುತೇಕ ಎಲ್ಲಾ ಐಪಿಎಲ್ ಅಭಿಮಾನಿಗಳಲ್ಲಿಯೂ ಇತ್ತು. ಆದರೆ ಕ್ರಿಕೆಟ್ ಅಭಿಮಾನಿಗಳ ಈ ನಿರೀಕ್ಷೆಯನ್ನು ಹುಸಿಗೊಳಿಸಿದ ಚೆನ್ನೈ ಸೂಪರ್ ಕಿಂಗ್ಸ್ 2 ಕೋಟಿ ಮೂಲ ಬೆಲೆಯನ್ನು ಹೊಂದಿದ್ದ ಸುರೇಶ್ ರೈನಾರನ್ನು ಖರೀದಿಸಲು ಮುಂದಾಗಲಿಲ್ಲ. ಚೆನ್ನೈ ಸೂಪರ್ ಕಿಂಗ್ಸ್ ಮಾತ್ರವಲ್ಲದೇ ಮೆಗಾ ಹರಾಜಿನಲ್ಲಿ ಭಾಗವಹಿಸಿದ್ದ ಉಳಿದ 9 ಫ್ರಾಂಚೈಸಿಗಳು ಕೂಡ ಸುರೇಶ್ ರೈನಾರನ್ನು ಖರೀದಿಸುವ ಪ್ರಯತ್ನ ಮಾಡದೇ ಇದ್ದದ್ದು ಮೆಗಾ ಹರಾಜು ವೀಕ್ಷಿಸುತ್ತಿದ್ದ ಪ್ರತಿಯೊಬ್ಬರಲ್ಲಿಯೂ ಆಶ್ಚರ್ಯವನ್ನು ಉಂಟುಮಾಡಿತ್ತು. ಹೀಗೆ ಸುರೇಶ್ ರೈನಾ ಹರಾಜಾಗದೇ ಉಳಿದಿರುವುದರ ಕುರಿತು ಹಲವಾರು ಮಾಜಿ ಕ್ರಿಕೆಟಿಗರು ಪ್ರತಿಕ್ರಿಯಿಸಿದ್ದು, ಇರ್ಫಾನ್ ಪಠಾಣ್ ಕೂಡ ಈ ಕೆಳಕಂಡಂತೆ ಅಸಮಾಧಾನ ಹೊರಹಾಕಿದ್ದಾರೆ.

40 ವರ್ಷದವರೆಗೂ ಐಪಿಎಲ್ ಆಡಿದವರಿದ್ದಾರೆ
ಸುರೇಶ್ ರೈನಾಗೆ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿನಲ್ಲಿ ಯಾವುದೇ ತಂಡ ಮಣೆ ಹಾಕದೆ ಇರುವುದರ ಕುರಿತಾಗಿ ಅಸಮಾಧಾನ ಹೊರಹಾಕಿರುವ ಇರ್ಫಾನ್ ಪಠಾಣ್ ಕೆಲ ವಿದೇಶಿ ಆಟಗಾರರು 40 ವರ್ಷದವರೆಗೂ ಕೂಡ ಐಪಿಎಲ್ ಟೂರ್ನಿಗಳಲ್ಲಿ ಭಾಗವಹಿಸಿದ್ದಾರೆ ಆದರೆ 35 ವರ್ಷದ ಮಿಸ್ಟರ್ ಐಪಿಎಲ್ ಸುರೇಶ್ ರೈನಾಗೆ ಮಾತ್ರ ಅವಕಾಶ ಸಿಗದೇ ಇರುವುದು ಆಶ್ಚರ್ಯಕರವಾಗಿದೆ ಎಂದು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ರೈನಾಗೆ ಅವಕಾಶ ಸಿಗಬೇಕಿತ್ತು
ಹೀಗೆ ಸುರೇಶ್ ರೈನಾಗೆ ಅವಕಾಶ ಸಿಗದೇ ಇರುವುದರ ಕುರಿತು ಟ್ವೀಟ್ ಮಾಡಿ ಬೇಸರ ಹೊರಹಾಕಿರುವ ಇರ್ಫಾನ್ ಪಠಾಣ್ ಈ ಬಾರಿಯ ಮೆಗಾ ಹರಾಜಿನಲ್ಲಿ ಸುರೇಶ್ ರೈನಾಗೆ ಅವಕಾಶ ಸಿಗಬೇಕಿತ್ತು ಎಂದಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಅಲ್ಲದೆ ಇದ್ದರೂ ಉಳಿದ ಯಾವುದಾದರೂ ಫ್ರಾಂಚೈಸಿ ಸುರೇಶ್ ರೈನಾಗೆ ಅವಕಾಶ ನೀಡಬಹುದಿತ್ತು, ಆದರೆ ಯಾವುದೇ ಫ್ರಾಂಚೈಸಿ ಕೂಡ ಸುರೇಶ್ ರೈನಾರನ್ನು ಖರೀದಿ ಮಾಡಲು ಮುಂದೆ ಬರದೇ ಇದ್ದದ್ದು ದೊಡ್ಡ ಮಟ್ಟದ ಆಶ್ಚರ್ಯಕ್ಕೆ ಕಾರಣವಾಗಿದೆ.

ಹರಾಜಿನ ಅಂತಿಮ ಸುತ್ತಿನಲ್ಲಿ ಸುರೇಶ್ ರೈನಾ ಹೆಸರು ಬರಲೇ ಇಲ್ಲ!
ಇನ್ನು ಮೆಗಾ ಹರಾಜಿನ ಆರಂಭದ ಸುತ್ತುಗಳಲ್ಲಿ ಹರಾಜಾಗದೇ ಉಳಿದ ಆಟಗಾರರನ್ನು ಅಂತಿಮ ಸುತ್ತಿನಲ್ಲಿ ಮತ್ತೊಮ್ಮೆ ಹರಾಜು ಮಾಡಲಾಗುತ್ತದೆ. ಹೀಗೆ ಆರಂಭದಲ್ಲಿ ಹರಾಜಾಗದೇ ಉಳಿದಿದ್ದ ಸುರೇಶ್ ರೈನಾ ಅಂತಿಮ ಸುತ್ತಿನಲ್ಲಿ ಒಳ್ಳೆಯ ಮೊತ್ತಕ್ಕೆ ಯಾವುದಾದರೊಂದು ತಂಡ ಸೇರಲಿದ್ದಾರೆ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಶಾಕ್ ಎದುರಾಗಿತ್ತು. ಹೌದು, ಆರಂಭದಲ್ಲಿ ಬಿಕರಿಯಾಗದೇ ಇದ್ದ ಸುರೇಶ್ ರೈನಾ ಹೆಸರು ಅಂತಿಮ ಸುತ್ತಿನ ಹರಾಜಿನಲ್ಲಿ ಇರಲೇ ಇಲ್ಲ. ಸುರೇಶ್ ರೈನಾ ವಿಷಯದಲ್ಲಿ ಹೀಗೇಕೆ ಆಗುತ್ತಿದೆ, ಅಸಲಿಗೆ ಅಂತಿಮ ಸುತ್ತಿನಲ್ಲಿ ಸುರೇಶ್ ರೈನಾ ಹೆಸರು ಬರದೇ ಇರಲು ಕಾರಣವೇನು ಹಾಗೂ ಸುರೇಶ್ ರೈನಾರನ್ನು ಖರೀದಿಸಲು ಯಾವುದೇ ಫ್ರಾಂಚೈಸಿ ಮುಂದೆ ಬರದೇ ಇರಲು ಕಾರಣವೇನು ಎಂಬ ಎಲ್ಲಾ ಪ್ರಶ್ನೆಗಳಿಗೆ ನಿಖರವಾದ ಉತ್ತರ ಮಾತ್ರ ಲಭಿಸಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications