ಟಿ20 ವಿಶ್ವಕಪ್ ಬಿಡಿ, ನಿಮ್ಮ ಐಪಿಎಲ್ ತಂಡಕ್ಕೆ ಮೊದಲು ಆಸರೆಯಾಗಿ; ಆಟಗಾರರಿಗೆ ಲಾರಾ ಬುದ್ಧಿಮಾತು

ಕಳೆದ ಏಪ್ರಿಲ್ ತಿಂಗಳಿನಲ್ಲಿ ಭಾರತದ ನೆಲದಲ್ಲಿ ಆರಂಭವಾಗಿದ್ದ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಕೊರೋನಾವೈರಸ್ ಕಾರಣದಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿತು ಮುಂದೂಡಲ್ಪಟ್ಟಿತ್ತು. ಹೀಗೆ ಮುಂದೂಡಲ್ಪಟ್ಟಿದ್ದ ಐಪಿಎಲ್ ಟೂರ್ನಿಯ ದ್ವಿತೀಯ ಭಾಗ ಇದೀಗ ಯುಎಇಯಲ್ಲಿ ಮುಂದುವರಿಯುತ್ತಿದ್ದು ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅತ್ಯದ್ಭುತ ಪ್ರದರ್ಶನ ನೀಡುವುದರ ಮೂಲಕ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದ್ದರೆ, ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ದ್ವಿತೀಯ ಮತ್ತು ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತೃತೀಯ ಸ್ಥಾನವನ್ನು ಪಡೆದುಕೊಂಡಿವೆ.
ಇನ್ನುಳಿದಂತೆ ಕೊಲ್ಕತ್ತಾ ನೈಟ್ ರೈಡರ್ಸ್, ಮುಂಬೈ ಇಂಡಿಯನ್ಸ್ ತಂಡಗಳು ನಾಲ್ಕನೇ ಮತ್ತು ಐದನೇ ಸ್ಥಾನಗಳನ್ನು ಕ್ರಮವಾಗಿ ಸದ್ಯ ಅಂಕಪಟ್ಟಿಯಲ್ಲಿ ಪಡೆದುಕೊಂಡಿದ್ದು, ತಮ್ಮ ಮುಂದಿನ ಪಂದ್ಯಗಳಲ್ಲಿ ಗೆಲ್ಲುವುದರ ಮೂಲಕ ಪ್ಲೇ ಆಫ್ ಸುತ್ತಿಗೆ ಅರ್ಹತೆಯನ್ನು ಪಡೆದುಕೊಳ್ಳುವ ತವಕದಲ್ಲಿವೆ.
ಅದರಲ್ಲಿಯೂ ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡ ನೀರಸ ಪ್ರದರ್ಶನವನ್ನು ತೋರಿದ್ದು ಟೂರ್ನಿಯಲ್ಲಿ ಇದುವರೆಗೂ ಒಟ್ಟು 11 ಪಂದ್ಯಗಳನ್ನಾಡಿ 5 ಪಂದ್ಯಗಳಲ್ಲಿ ಜಯಗಳಿಸಿ, 6 ಪಂದ್ಯಗಳಲ್ಲಿ ಸೋಲನ್ನು ಅನುಭವಿಸುವುದರ ಮೂಲಕ 10 ಅಂಕಗಳನ್ನು ಪಡೆದುಕೊಂಡು ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಯುಎಇ ಚರಣದಲ್ಲಿ ಹ್ಯಾಟ್ರಿಕ್ ಸೋಲನ್ನು ಕಂಡಿದ್ದ ಮುಂಬೈ ಇಂಡಿಯನ್ಸ್ ತಂಡ ತನ್ನ ಕಳೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಜಯ ಗಳಿಸುವುದರ ಮೂಲಕ ಗೆಲುವಿನ ಹಾದಿಗೆ ಮರಳಿ ಪ್ಲೇ ಆಫ್ ಹಂತ ಪ್ರವೇಶಿಸುವ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಇನ್ನು ಮುಂಬೈ ಇಂಡಿಯನ್ಸ್ ತಂಡ ಯುಎಇ ಚರಣದಲ್ಲಿ ಇಷ್ಟು ಮಟ್ಟಕ್ಕೆ ಮಂಕಾಗಲು ಕಾರಣ ತಂಡದ ಬ್ಯಾಟಿಂಗ್, ಅದರಲ್ಲಿಯೂ ಯುವ ಆಟಗಾರರಾದ ಇಶಾನ್ ಕಿಶಾನ್ ಮತ್ತು ಸೂರ್ಯಕುಮಾರ್ ಯಾದವ್ ಕಳಪೆ ಫಾರ್ಮ್ ತಂಡಕ್ಕೆ ದೊಡ್ಡ ಮಟ್ಟದ ಹಿನ್ನಡೆಯನ್ನುಂಟುಮಾಡಿದೆ ಎಂದರೆ ತಪ್ಪಾಗಲಾರದು.
ಹೀಗೆ ಸಾಲು ಸಾಲು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡುವುದರ ಮೂಲಕ ಕೆಟ್ಟ ಫಾರ್ಮ್‌ನಲ್ಲಿರುವ ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ ಯಾದವ್ ಇಬ್ಬರ ಕುರಿತಾಗಿಯೂ ಮಾತನಾಡಿರುವ ಕ್ರಿಕೆಟ್ ದಿಗ್ಗಜ ಬ್ರಿಯಾನ್ ಲಾರಾ ಈ ಕೆಳಕಂಡಂತೆ ಬುದ್ದಿಮಾತನ್ನು ಹೇಳಿದ್ದಾರೆ.

ಟಿ ಟ್ವೆಂಟಿ ವಿಶ್ವಕಪ್ ಮರೆತು ಮುಂಬೈ ಗೆಲುವಿಗಾಗಿ ಆಟವಾಡಬೇಕಿದೆ
'ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಶಾನ್ ಇಬ್ಬರೂ ಕೂಡ ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಕುರಿತು ಹೆಚ್ಚಿನ ಗಮನವನ್ನು ಹರಿಸದೇ ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ತಮ್ಮ ಮುಂಬೈ ಇಂಡಿಯನ್ಸ್ ತಂಡದ ಪರ ಉತ್ತಮ ಆಟವನ್ನಾಡಿ ತಂಡಕ್ಕೆ ಸಹಾಯ ಮಾಡಬೇಕಿದೆ. ಏಕೆಂದರೆ ಇಬ್ಬರಿಗೂ ಕೂಡ ಕ್ರಿಕೆಟ್ ಭವಿಷ್ಯವನ್ನು ಕಟ್ಟುಕೊಟ್ಟದ್ದು ಇದೇ ಮುಂಬೈ ಇಂಡಿಯನ್ಸ್ ತಂಡ, ಹೀಗಾಗಿ ತಮ್ಮ ತಂಡಕ್ಕೆ ಆಸರೆಯಾಗಬೇಕಾಗಿರುವುದು ಇಬ್ಬರ ಕರ್ತವ್ಯ ' ಎಂದು ಬ್ರಿಯಾನ್ ಲಾರಾ ಬುದ್ದಿಮಾತನ್ನು ಹೇಳಿದ್ದಾರೆ.
ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯನ್ಸ್ ತಂಡದ ಪರ ತಮ್ಮ ಕೊನೆಯ 4 ಪಂದ್ಯಗಳಲ್ಲಿ ಕ್ರಮವಾಗಿ 0,8,5 ಮತ್ತು 3 ರನ್ ಗಳಿಸಿದ್ದರೆ, ಇಶಾನ್ ಕಿಶನ್ ತಮ್ಮ ಕೊನೆಯ 3 ಪಂದ್ಯಗಳಲ್ಲಿ 11, 14 ಮತ್ತು 9 ರನ್ ಗಳಿಸಿ ಮಂಕಾಗಿದ್ದಾರೆ.

ಸೌರಭ್ ತಿವಾರಿ ಕುರಿತು ಪ್ರಶಂಸೆ ವ್ಯಕ್ತಪಡಿಸಿದ ಬ್ರಿಯಾನ್ ಲಾರಾ
ಇಶಾನ್ ಕಿಶನ್ ಸಾಲುಸಾಲು ಕಳಪೆ ಪ್ರದರ್ಶನ ನೀಡಿ ಮಂಕಾಗಿದ್ದ ಕಾರಣ ಕಳೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಆತನ ಬದಲು ಸೌರಭ್ ತಿವಾರಿಗೆ ಆಡುವ ಅವಕಾಶವನ್ನು ಮುಂಬೈ ಇಂಡಿಯನ್ಸ್ ತಂಡ ನೀಡಿತ್ತು. ಹೀಗೆ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡ ಸೌರಭ್ ತಿವಾರಿ ಆ ಪದ್ಯದಲ್ಲಿ 37 ಎಸೆತಗಳಲ್ಲಿ 45 ರನ್ ಬಾರಿಸುವುದರ ಮೂಲಕ ಮುಂಬೈ ಇಂಡಿಯನ್ಸ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹೀಗೆ ಸೌರಭ್ ತಿವಾರಿ ಆಡಿದ ಉತ್ತಮ ಆಟವನ್ನು ಪ್ರಶಂಸಿರುವ ಬ್ರಿಯಾನ್ ಲಾರಾ ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ ಯಾದವ್ ಇಬ್ಬರಲ್ಲಿಯೂ ಸೌರಭ್ ತಿವಾರಿ ರೀತಿ ಉತ್ತಮ ಆಟವನ್ನಾಡಬೇಕೆಂಬ ತುಡಿತ ಮತ್ತು ಆಸಕ್ತಿ ಕಾಣಿಸುತ್ತಿಲ್ಲ ಎಂದಿದ್ದಾರೆ.

ಕಳಪೆ ಫಾರ್ಮ್ ಕುರಿತಾಗಿ ಕಣ್ಣೀರಿಟ್ಟಿದ್ದ ಇಶಾನ್ ಕಿಶನ್
ಯುಎಇಯಲ್ಲಿ ಮುಂದುವರಿಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡುತ್ತಿರುವ ಕುರಿತಾಗಿ ಸ್ವತಃ ಇಶಾನ್ ಕಿಶಾನ್ ಅವರೇ ಬೇಸರಕ್ಕೊಳಗಾಗಿ ಕಣ್ಣೀರಿಟ್ಟಿದ್ದ ಘಟನೆ ಕಳೆದ ಭಾನುವಾರದಂದು ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ನಡೆದಿತ್ತು. ಪಂದ್ಯ ಮುಗಿದ ಬಳಿಕ ಕಣ್ಣೀರಿಡುತ್ತಾ ಕುಳಿತಿದ್ದ ಇಶಾನ್ ಕಿಶನ್ ಬಳಿ ಬಂದ ವಿರಾಟ್ ಕೊಹ್ಲಿ ಆತನನ್ನು ಸಮಾಧಾನಪಡಿಸಿ ಕೆಲ ಹೊತ್ತು ಮಾತನಾಡಿ ಧೈರ್ಯ ತುಂಬಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications