ಐಪಿಎಲ್ 2022: ನೂತನ ನಾಯಕನನ್ನು ಘೋಷಿಸಿದ ಸಿಎಸ್‌ಕೆ; ಎಲ್ಲಾ 10 ತಂಡಗಳ ನಾಯಕರ ಪಟ್ಟಿ ಇಲ್ಲಿದೆ

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಮಾರ್ಚ್ 26ರಿಂದ ಆರಂಭವಾಗಲಿದ್ದು, ಈ ಟೂರ್ನಿಯ ಚೊಚ್ಚಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕಳೆದ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿದ ಕೋಲ್ಕತ್ತ ನೈಟ್ ರೈಡರ್ಸ್ ತಂಡಗಳು ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ಸೆಣಸಾಟ ನಡೆಸಲಿವೆ. ಟೂರ್ನಿಯ ಮೊದಲನೇ ದಿನ ಕೇವಲ ಒಂದು ಪಂದ್ಯ ಮಾತ್ರ ನಡೆಯಲಿದ್ದು ಎರಡನೇ ದಿನ ಡಬಲ್ ಹೆಡರ್ ಪಂದ್ಯಗಳು ನಡೆಯಲಿವೆ. ಹೌದು, ಮಾರ್ಚ್ 27ರ ಭಾನುವಾರದಂದು ಡೆಲ್ಲಿ ಕ್ಯಾಪಿಟಲ್ಸ್ vs ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯ ಮಧ್ಯಾಹ್ನ 3.30ಕ್ಕೆ ನಡೆದರೆ, ಅದೇ ದಿನ ಸಂಜೆ 7.30ಕ್ಕೆ ಪಂಜಾಬ್ ಕಿಂಗ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವಿನ ಪಂದ್ಯ ನಡೆಯಲಿದೆ. ಇನ್ನು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಒಟ್ಟು 12 ಡಬಲ್ ಹೆಡರ್ ಪಂದ್ಯಗಳು ನಡೆಯಲಿದ್ದು, ಲೀಗ್ ಹಂತದ ಒಟ್ಟು 70 ಪಂದ್ಯಗಳು 58 ದಿನಗಳಲ್ಲಿ ನಡೆಯಲಿವೆ.
ಇನ್ನು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಗುಜರಾತ್ ಟೈಟಾನ್ಸ್ ಈ ಎರಡು ನೂತನ ತಂಡಗಳು ಕಣಕ್ಕಿಳಿಯುತ್ತಿದ್ದು, ಟ್ರೋಫಿಗಾಗಿ ಒಟ್ಟು 10 ತಂಡಗಳ ನಡುವೆ ಸೆಣಸಾಟ ಏರ್ಪಡಲಿದೆ. ಹಾಗೂ ಈ ಬಾರಿ ಮೆಗಾ ಹರಾಜು ಪ್ರಕ್ರಿಯೆ ಕೂಡ ನಡೆದಿದ್ದು, ನೂತನ ತಂಡಗಳಿಗೆ ಹಾಗೂ ಅಸ್ತಿತ್ವದಲ್ಲಿದ್ದ ಕೆಲ ಐಪಿಎಲ್ ತಂಡಗಳಿಗೆ ನೂತನ ನಾಯಕರ ನೇಮಕವಾಗಿದೆ. ಇನ್ನು ಕೆಲ ಐಪಿಎಲ್ ತಂಡಗಳನ್ನು ಕಳೆದ ಆವೃತ್ತಿಗಳಲ್ಲಿ ಮುನ್ನಡೆಸಿದ್ದ ನಾಯಕರೇ ಈ ಬಾರಿಯೂ ಕೂಡ ಮುನ್ನಡೆಸುತ್ತಿದ್ದಾರೆ.
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಒಟ್ಟು 10 ತಂಡಗಳು ಭಾಗವಹಿಸುತ್ತಿದ್ದು, ಈ 10 ತಂಡಗಳನ್ನು ಎರಡು ಗುಂಪುಗಳನ್ನಾಗಿ ವಿಭಜಿಸಲಾಗಿದೆ. ಗ್ರೂಪ್ 'ಎ'ನಲ್ಲಿ ಕೋಲ್ಕತಾ ನೈಟ್ ರೈಡರ್ಸ್, ಮುಂಬೈ ಇಂಡಿಯನ್ಸ್, ರಾಜಸ್ತಾನ್ ರಾಯಲ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಹೊಸ ಫ್ರಾಂಚೈಸಿ ಲಕ್ನೋ ಸೂಪರ್ ಜೈಂಟ್ಸ್ ತಂಡಗಳಿದ್ದರೆ, ಗ್ರೂಪ್ 'ಬಿ'ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಚೆನ್ನೈ ಸೂಪರ್ ಕಿಂಗ್ಸ್, ಪಂಜಾಬ್ ಕಿಂಗ್ಸ್, ಸನ್ ರೈಸರ್ಸ್ ಹೈದರಾಬಾದ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳಿವೆ. ಇನ್ನು ಇಂದು ( ಮಾರ್ಚ್ 24 ) ಎಂ ಎಸ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವದಿಂದ ಕೆಳಗಿಳಿದಿದ್ದು, ರವೀಂದ್ರ ಜಡೇಜಾ ನೂತನ ನಾಯಕನಾಗಿ ನೇಮಕಗೊಂಡಿದ್ದಾರೆ.

ಫಾಫ್ ಡು ಪ್ಲೆಸಿಸ್ ಹೆಗಲಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕತ್ವ
ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಮಾರ್ಚ್ 12ರಂದು ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನ ಮ್ಯೂಸಿಯಂ ಕ್ರಾಸ್ ರಸ್ತೆಯಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿ ತನ್ನ ಮುಂದಿನ ನಾಯಕ ಯಾರೆಂಬುದನ್ನು ಬಹಿರಂಗಪಡಿಸಿತ್ತು. ಹೌದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿಯ ಮೆಗಾ ಹರಾಜಿನಲ್ಲಿ 7 ಕೋಟಿಗೆ ಖರೀದಿಸಿದ ಫಾಫ್ ಡು ಪ್ಲೆಸಿಸ್ ಹೆಗಲಿಗೆ ನಾಯಕತ್ವದ ಜವಾಬ್ದಾರಿಯನ್ನು ಹೊರಿಸಿದೆ. ಇತ್ತ ಚೆನ್ನೈ ಸೂಪರ್ ಕಿಂಗ್ಸ್ ಇಂದು ( ಮಾರ್ಚ್ 24 ) ರವೀಂದ್ರ ಜಡೇಜಾಗೆ ನಾಯಕತ್ವದ ಜವಾಬ್ದಾರಿಯನ್ನು ನೀಡಿದ್ದು, ಎಂ ಎಸ್ ಧೋನಿ ನಾಯಕ ಸ್ಥಾನದಿಂದ ಕೆಳಗಿಳಿದಿದ್ದಾರೆ.

ಎಲ್ಲಾ 10 ತಂಡಗಳ ನಾಯಕರ ಪಟ್ಟಿ
ಚೆನ್ನೈ ಸೂಪರ್ ಕಿಂಗ್ಸ್ -ರವೀಂದ್ರ ಜಡೇಜಾ
ಮುಂಬೈ ಇಂಡಿಯನ್ಸ್ - ರೋಹಿತ್ ಶರ್ಮಾ
ಡೆಲ್ಲಿ ಕ್ಯಾಪಿಟಲ್ಸ್ - ರಿಷಭ್ ಪಂತ್
ಕೋಲ್ಕತಾ ನೈಟ್ ರೈಡರ್ಸ್ - ಶ್ರೇಯಸ್ ಅಯ್ಯರ್
ರಾಜಸ್ಥಾನ್ ರಾಯಲ್ - ಸಂಜು ಸ್ಯಾಮ್ಸನ್
ಸನ್ ರೈಸರ್ಸ್ ಹೈದರಾಬಾದ್ - ಕೇನ್ ವಿಲಿಯಮ್ಸನ್
ಲಕ್ನೋ ಸೂಪರ್ ಜೈಂಟ್ಸ್ - ಕೆಎಲ್ ರಾಹುಲ್
ಗುಜರಾತ್ ಟೈಟಾನ್ಸ್ - ಹಾರ್ದಿಕ್ ಪಾಂಡ್ಯ
ಪಂಜಾಬ್ ಕಿಂಗ್ಸ್ - ಮಯಾಂಕ್ ಅಗರ್ವಾಲ್
ರಾಯಲ್ ಚಾಲೆಂಜರ್ಸ್ ಬೆಂಗಳೂರು - ಫಾಫ್ ಡು ಪ್ಲೆಸಿಸ್

ಈ ಇಬ್ಬರ ಹೆಸರೂ ಕೂಡ ಆರ್‌ಸಿಬಿ ನಾಯಕತ್ವಕ್ಕೆ ಕೇಳಿ ಬಂದಿತ್ತು
ಕ್ರಿಕೆಟ್ ಚರ್ಚೆಗಳಲ್ಲಿ ಇತ್ತೀಚೆಗಷ್ಟೇ ಹೆಚ್ಚಾಗಿ ಚರ್ಚಿಸಲ್ಪಟ್ಟ ವಿಷಯವೆಂದರೆ ಅದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಂದಿನ ನಾಯಕ ಯಾರು ಎಂಬುದು. ಈ ವೇಳೆ ಫಾಫ್ ಡು ಪ್ಲೆಸಿಸ್ ಜತೆಗೆ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ದಿನೇಶ್ ಕಾರ್ತಿಕ್ ಅವರ ಹೆಸರು ಕೂಡಾ ಕೇಳಿ ಬಂದಿದ್ದವು. ಅದರಲ್ಲಿಯೂ ಗ್ಲೆನ್ ಮ್ಯಾಕ್ಸ್‌ವೆಲ್ ನಾಯಕತ್ವ ವಹಿಸಿಕೊಳ್ಳುವುದು ಬಹುತೇಕ ಖಚಿತ ಎಂದು ಕೂಡ ಸುದ್ದಿಗಳು ಹರಿದಾಡುತ್ತಿದ್ದವು. ಸದ್ಯ ಈ ಎಲ್ಲ ಚರ್ಚೆಗಳಿಗೆ ಬ್ರೇಕ್ ಹಾಕಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಫಾಫ್ ಡು ಪ್ಲೆಸಿಸ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನೂತನ ಸಾರಥಿ ಎಂದು ಘೋಷಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications